ಮೋದಿ ಸರ್ಕಾರವು ಕತ್ತಲೆಯಲ್ಲಿ ತಡಕಾಡುತ್ತಿರುವಾಗ ನ್ಯಾಯಾಲಯಗಳು ಕೋವಿಡ್ ಬಿಕ್ಕಟ್ಟಿನಲ್ಲಿ ನೆರವು ನೀಡುತ್ತಿವೆ

ಕೋವಿಡ್-19ರ ಎರಡನೇ ಮಾರಣಾಂತಿಕ ಅಲೆಯ ಸಮಯದಲ್ಲಿ ಕನಿಷ್ಟವೆಂದರೂ 14 ಹೈಕೋರ್ಟ್‍ಗಳು ಸ್ಫೋಟಗೊಳ್ಳುತ್ತಿರುವ ಅವ್ಯವಸ್ಥೆಯ ನಡುವೆ ಒಂದು ಮಟ್ಟಿನ ವ್ಯವಸ್ಥೆಯನ್ನು ತರುವ ಪ್ರಯತ್ನದಲ್ಲಿ ಸರಕಾರಗಳು ಮತ್ತು ಪ್ರಾಧಿಕಾರಗಳನ್ನು ತರಾಟೆಗೆ ತಗೊಂಡಿವೆ, ಅವುಗಳ ಕಟು ವಿಮರ್ಶೆಗಳನ್ನು ಮಾಡಿವೆ ಸುಪ್ರೀಂ ಕೋರ್ಟ್ ಇತ್ತೀಚಿನ ವರೆಗೂ ಸ್ಪಂದಿಸಲು ಸ್ವಲ್ಪ ಹಿಂಜರಿದಂತೆ, ವಿಳಂಬ ತೋರುವಂತೆ ಕಂಡು ಬಂದರೂ, ಈಗ ಅದು ಕೂಡ ಕಳೆದ ಕೆಲವು ವಾರಗಳಿಂದ ಮಾತ್ರ – ಮುಖ್ಯ ನ್ಯಾಯಾಧೀಶರಾಗಿದ್ದ ಬೋಬ್ಡೆ ರವರ ನಿವೃತ್ತಿಯ ನಂತರ ಎಂದು ಕೆಲವರು ಹೇಳುತ್ತಿದ್ದಾರೆ- ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಹಿಡಿತ ಹೊಂದಲು ಪ್ರಾರಂಭಿಸಿರುವಂತೆ ಕಾಣುತ್ತದೆ. ಮೋದಿ ಸರಕಾರ ಇನ್ನೂ ತಡಕಾಡುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ನ್ಯಾಯಾಂಗವು ತನ್ನ ಪಾತ್ರವನ್ನು ಇನ್ನಷ್ಟು ನಿರ್ಣಾಯಕ ರೀತಿಯಲ್ಲಿ ಮುಂದುವರೆಸುತ್ತದೆ ಎಂದು ಆಶಿಸಬೇಕಾಗಿದೆ.

ಸವೇರಾ

“ನೀವು ಜನರನ್ನು ಸಾವಿನ ದವಡೆಗೆ ದೂಡುತ್ತಿದ್ದೀರಿ.”
“ನೀವೊಂದು ವರ್ಣಮಯವಾದ, ನೆಲದ ವಾಸ್ತವತೆಯ ಸ್ಪರ್ಶವೇ ಇಲ್ಲದ, ಚಿತ್ರವನ್ನು ಕೊಡುತ್ತಿದ್ದೀರಿ”
“ಪ್ರಾಯಶಃ ನಿಮ್ಮ ಮೇಲೆ ಕೊಲೆಯ ಆಪಾದನೆ ಹೊರಿಸಬೇಕಾಗುತ್ತದೆ.”
“ಕಳೆದ 10-15 ತಿಂಗಳುಗಳಿಂದ ಏನು ಮಾಡುತ್ತಿದ್ದೀರಿ?”.
“ನೀವೇನು ಮಂಗಳ ಗ್ರಹದ ಮೇಲೆ ವಾಸಿಸುತ್ತಿದ್ದೀರಾ?”

ಇವೆಲ್ಲಾ ಭಾರತದ ವಿವಿಧ ಹೈಕೋರ್ಟ್‍ಗಳು ಕಳೆದ ಹಲವು ವಾರಗಳಲ್ಲಿ ಸರ್ಕಾರಗಳು ಮತ್ತು ಇತರ ಪ್ರಾಧಿಕಾರಗಳ ಮೇಲೆ ಮಾಡಿರುವ ಟಿಪ್ಪಣಿಗಳು. ಏಪ್ರಿಲ್ 1, 2021 ರಿಂದ ಸೋಂಕು ದೃಢಪಟ್ಟವರ ಸಂಖ್ಯೆ 1 ಕೋಟಿಯನ್ನು, ಮತ್ತು 86,000 ಕ್ಕೂ ಅಧಿಕ ಸಾವುಗಳನ್ನು ಕಂಡಿರುವ ಕೋವಿಡ್-19 ರ ಎರಡನೇ ಮಾರಣಾಂತಿಕ ಅಲೆಯ ಸಮಯದಲ್ಲಿ ಕನಿಷ್ಟವೆಂದರೂ 14 ಹೈಕೋರ್ಟ್‍ಗಳು ಇವುಗಳ ನಿರ್ವಹಣೆಯಲ್ಲಿ ಸಕ್ರಿಯವಾಗಿವೆ. ಮೇಲೆ ಹೇಳಿರುವ ಟಿಪ್ಪಣಿಗಳು, ಈ ನ್ಯಾಯಾಲಯಗಳು ಸರಕಾರಗಳು ಮತ್ತು ಪ್ರಾಧಿಕಾರಗಳೊಂದಿಗೆ ಸ್ಫೋಟಗೊಳ್ಳುತ್ತಿರುವ ಅವ್ಯವಸ್ಥೆಯ ನಡುವೆ ಒಂದು ಮಟ್ಟಿನ ವ್ಯವಸ್ಥೆಯನ್ನು ತರುವ ಪ್ರಯತ್ನದಲ್ಲಿ ನೀಡಿರುವ ಹಲವು ನಿರ್ದೇಶನಗಳು, ಅಭಿಪ್ರಾಯಗಳ ಭಾಗ

ದೇಶದ ಹಲವು ಹೈಕೋರ್ಟ್‍ಗಳು ಏನು ಹೇಳಿವೆ ಎನ್ನುವುದರ ಸ್ಫೂಲ ಸಾರಾಂಶವನ್ನು ಕೊಡುವ ಮುನ್ನ ಬಹಳ ಸ್ವಷ್ಟವಾಗಿ ಹೊರ ಹೊಮ್ಮಿರುವ ಕೆಲವು ಅಂಶಗಳನ್ನು ಗಮನಿಸುವುದು ಸೂಕ್ತ. ಮೊದಲನೆಯದಾಗಿ, ಕೋವಿಡ್‍ನ ಈ ಎರಡನೇ ದಾಳಿಯನ್ನು ಎದುರಿಸಲು ದೇಶವನ್ನು ಸಿದ್ಧಗೊಳಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಭಾರೀ ವಿಫಲತೆಯಿಂದಾಗಿ ನ್ಯಾಯಾಂಗ ವಿವಿಧ ಹಂತಗಳ ನ್ಯಾಯಾಂಗ ಇದರಲ್ಲಿ ಮಧ್ಯಪ್ರವೇಶಿಸಬೇಕಾಗಿ ಬಂದಿದೆ. ದೇಶಿ ಮತ್ತು ವಿದೇಶಿ ವಿಜ್ಞಾನಿಗಳು ಎರಡನೇ ಅಲೆ ಬಗ್ಗೆ ಮತ್ತೆ-ಮತ್ತೆ ಮುನ್ನೆಚ್ಚರಿಕೆ ನೀಡಿದ್ದರು. ಆದರೆ ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯಗಳಲ್ಲಿ ಸರಕಾರ ನಡೆಸುವ ಅವರ ಸಹಯೋಗಿಗಳು ತಮ್ಮದೇ ಅಬ್ಬರದ ಮಾತುಗಳು ಮತ್ತು ಪ್ರಚಾರ ಯಂತ್ರದ ಯಶಸ್ಸಿನ ಅಮಲಿನಲ್ಲಿ ಮುಳುಗಿದ್ದಂತೆÉ ಕಾಣುತ್ತದೆ. ಜನವರಿಯಲ್ಲಿ ದಾವೋಸ್‍ನಲ್ಲಿ ಮಾತನಾಡುತ್ತಾ ಪ್ರಧಾನ ಮಂತ್ರಿ ಮೋದಿಯವರು ಭಾರತವು ಇಡೀ ವಿಶ್ವಕ್ಕೆ ದಾರಿ ತೋರಿಸಿದೆ ಎಂದು ಕೊಚ್ಚಿಕೊಂಡಿದ್ದರು. ಆರೋಗ್ಯ ಮಂತ್ರಿ ಹರ್ಷವರ್ಧನ್‍ರವರು ಈ ಸಾಂಕ್ರಾಮಿಕದ ಕೊನೆಯ ಆಟ ಮುಗಿದಿದೆ ಎಂದಿದ್ದರು. ಹಲವು ಮುಖ್ಯ ಮಂತ್ರಿಗಳು ಮತ್ತು ಪ್ರಮುಖರು ಇನ್ನು ಮಾಸ್ಕುಗಳ ಅಗತ್ಯವಿಲ್ಲ, ಗಂಗಾ ನದಿ ಈ ವೈರಾಣುವನ್ನು ಕೊಚ್ಚಿ ಕೊಂಡು ಹೋಗುತ್ತದೆ ಇತ್ಯಾದಿ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಮುನ್ಸೂಚನೆಯಂತೆ ಎರಡನೇ ಅಲೆ ಭಾರತಕ್ಕೆ ಅಪ್ಪಳಿಸಿದಾಗ ಅದಾಗಲೇ ಜರ್ಜರಿತವಾಗಿದ್ದÀ ಆರೋಗ್ಯ ವ್ಯವಸ್ಥೆ ಬಿರುಕು ಬಿಟ್ಟಿತು. ಪೂರೈಕೆಯ ಚಾನೆಲ್‍ಗಳು ಒತ್ತಡಕ್ಕೊಳಗಾದವು, ಆಕ್ಸಿಜನ್ ಮತ್ತು ಜೀವರಕ್ಷಕ ಔಷಧಿಗಳು ಕಾಣೆಯಾದವು, ಆರೋಗ್ಯ ಸಿಬ್ಬಂದಿಗಳು ಮಾನವ ಮಿತಿಗಳನ್ನೂ ಮೀರಿ ಕೆಲಸ ಮಾಡಬೇಕಾಯಿತು-ಪರಿಣಾಮವೆಂದರೆ ಜನರು ಸಾವಿರ-ಸಾವಿರ ಸಂಖ್ಯೆಗಳಲ್ಲಿ ಸಾಯಲಾರಂಭಿಸಿದರು. ಇಂತಹ ಹತಾಶೆಯ ಸಮಯದಲ್ಲಿ ಹಲವು ಜನರು ಸುಪ್ರೀಂ ಕೋರ್ಟ್ ಮತ್ತು ಹಲವು ಹೈಕೋರ್ಟ್‍ಗಳಿಗೆ ಸಹಾಯಕ್ಕೆ ಮೊರೆ ಹೋದರು- ಕೆಲವರು ಕೇವಲ ಐಸಿಯು ನಲ್ಲಿ ಒಂದು ಹಾಸಿಗೆ ಕೇಳಿದರು, ಕೆಲವರು ಜೀವ ರಕ್ಷಕ ಔಷಧಿಗಳು ಸಾಮಾನ್ಯ ದರದಲ್ಲಿ ಸಿಗುವಂತಾಗಬೇಕು ಎಂದು ಕೇಳಿದರು. ಇನ್ನು ಕೆಲವರು ಸರ್ಕಾರದ ತಪ್ಪುಗಳನ್ನು ಸರಿಪಡಿಸಲು ಮಧ್ಯಪ್ರವೇಶಿಸುವಂತೆ ಕೇಳಿದರು.

ಎರಡನೆಯದಾಗಿ, ಹಿಂದೆಂದೂ ಕೇಳರಿಯದ ಇಂತಹ ಒಂದು ಅನಾಹುತಕ್ಕೆ ಹೈಕೋರ್ಟ್‍ಗಳೇ ಸುಪ್ರೀಂ ಕೋರ್ಟ್‍ಗಿಂತಲೂ ಹೆಚ್ಚು ಸಕ್ರಿಯವಾಗಿ ಸ್ಪಂದಿಸಿದವು ಎಂದು ಹೇಳದಿರಲು ಸಾಧ್ಯವಿಲ್ಲ. ಹೈಕೋರ್ಟ್‍ಗಳು ವ್ಯವಸ್ಥೆಯನ್ನು ಗಮನಿಸುತ್ತಿದ್ದವು ಮತ್ತು ಮುಂದೇನು ಎಂದೂ ನೋಡುತ್ತಿದ್ದವು. ಅವು ಕಾರ್ಯಾಂಗದಿಂದ ಹೊಣೆಗಾರಿಕೆ ಬಯಸುತ್ತಿದ್ದವು ಮತ್ತು ಹಾಗೆಯೇ ನರಳುತ್ತಿದ್ದ ಜನತೆಗೆ ತ್ವರಿತ ಪರಿಹಾರ ಸಿಗಬೇಕಾಗಿದೆ ಎಂದು ಬಯಸಿದವು. ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದೇನಿಲ್ಲ, ಆದರೂ ಒಟ್ಟಾರೆಯಾಗಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಿತು, ತೀವ್ರ ಘಾಸಿಗೊಂಡಿದ್ದ ಜನತೆಗೆ ಸ್ವಲವಾದರೂ ನೆರವು ನೀಡಿತು.

ಮೂರನೆಯದಾಗಿ, ಸುಪ್ರೀಂ ಕೋರ್ಟ್ ಸ್ಪಂದಿಸಲು ಸ್ವಲ್ಪ ಹಿಂಜರಿದಂತೆ, ವಿಳಂಬ ತೋರುವಂತೆ ಕಾಣಿಸಿತು. ಅದು ಎಪ್ರಿಲ್ 22, 2021 ರ ವೇಳೆಗಷ್ಟೇ ಕೋವಿಡ್ ಬಿಕ್ಕಟ್ಟಿನ ಕುರಿತ ವಿಚಾರಣೆಗಳನ್ನು ಕೈಗೆತ್ತಿಕೊಂಡಿತು; ಆಮ್ಲಜನಕ, ಅಗತ್ಯ ಔಷಧಿಗಳು, ಲಸಿಕೆ ಮತ್ತು ಲಾಕ್‍ಡೌನ್ ಘೋಷಿಸಲು ರಾಜ್ಯಗಳಿಗಿರುವ ಅಧಿಕಾರ, ಈ ನಾಲ್ಕು ವಿಷಯಗಳಲ್ಲಿ ಮಧ್ಯಪ್ರವೇಶವನ್ನು ಕೇಳಿತು. ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರವು ಒಂದು ರಾಷ್ಟ್ರೀಯ ಯೋಜನೆ ಈಗಾಗಲೇ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದ ಜಾರಿಕೆಯ ವಾದವನ್ನು ಒಪ್ಪಿದ್ದ ಸುಪ್ರೀಂ ಕೋರ್ಟ್ ತಾನೇ ಈಗ ಒಂದು “ರಾಷ್ಟ್ರೀಯ ಯೋಜನೆ”ಗೆ ಕರೆ ನೀಡಿದೆ. ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಯಾವುದೇ ವಲಸೆ ಬಿಕ್ಕಟ್ಟು ಇಲ್ಲ ಎಂದು ಹೇಳಿದ್ದ ಸುಳ್ಳು ಹೇಳಿಕೆಗಳಿಗೆ ಪೂರಕವಾಗಿ ಸುಪ್ರೀಂ ಕೋರ್ಟ್ ವರ್ತಿಸಿತ್ತು ಮತ್ತು ನಂತರ ವಾಸ್ತವತೆಯು ವಿಶ್ವದೆಲ್ಲೆಡೆ ಪ್ರಚಾರಗೊಂಡಾಗಿನಿಂದ ಮಿತವಾಗಿ ಪ್ರತಿಕ್ರಿಯಿಸುತ್ತ ಬಂತು. ಕಳೆದ ಕೆಲವು ವಾರಗಳಿಂದ ಮಾತ್ರ – ಮುಖ್ಯ ನ್ಯಾಯಾಧೀಶರಾಗಿದ್ದ ಬೋಬ್ಡೆ ರವರ ನಿವೃತ್ತಿಯ ನಂತರ ಎಂದು ಕೆಲವರು ಹೇಳುತ್ತಿದ್ದಾರೆ- ಸುಪ್ರೀಂ ಕೋರ್ಟ್ ಭಾರತದ ಚರಿತ್ರೆಯ ಅತ್ಯಂತ ದುರಂತ ಅಧ್ಯಾಯಗಳಲ್ಲಿ ಒಂದು ಎಂದು ಹೇಳಬಹುದಾದ ಪ್ರಸಕ್ತ ಪರಿಸ್ತಿತಿಯ ಬಗ್ಗೆ ಸ್ಪಷ್ಟ ಹಿಡಿತ ಹೊಂದಲು ಪ್ರಾರಂಭಿಸಿದೆ. ಆಕ್ಸಿಜನ್ ಪೂರೈಕೆ ಕುರಿತಂತೆ ಒಂದು `ಕಾರ್ಯಪಡೆ’ ರಚಿಸಬೇಕು, ಯಾವುದೇ ರೋಗಿಗೆ ಆಸ್ಪತ್ರೆಗಳಲ್ಲಿ ದಾಖಲಾತಿ ನಿರಾಕರಿಸಬಾರದು ಮತ್ತು ಉ. ಪ್ರದೇಶದಲ್ಲಿದಂತೆ ಸಹಾಯ ಕೇಳುವವರಿಗೆ ಪೊಲೀಸರು ಅಥವಾ ಆಡಳಿತವು ಹಿಂಸಿಸಬಾರದು ದೂರು ದಾಖಲಿಸಬಾರಾದು ಎಂಬ ಹಲವು ಸೂಚನೆಗಳನ್ನು ಸುಪ್ರೀಂ ಕೋರ್ಟ್ ನೀಡಿದೆ.

ಈ ನಡುವೆ ಹಲವು ಹೈಕೋರ್ಟ್‍ಗಳು ಕಳೆದ ಕೆಲವು ತಿಂಗಳುಗಳಿಂದ ಮಾಡುತ್ತಿದ್ದಂತೆ ವಿವಿಧ ರಾಜ್ಯಗಳಲ್ಲಿ ರೂಪುಗೊಳ್ಳುತ್ತಿರುವ ಸರ್ಕಾರದ ನೀತಿಗಳನ್ನು ವೀಕ್ಷಿಸುತ್ತಿವೆ. ಕೇಂದ್ರ ಸರ್ಕಾರ ಮತ್ತು ಇತರ ಪ್ರಾಧಿಕಾರಿಗಳ ಕುರಿತಾಗಿಯೂ ಇವು ತಮ್ಮ ಅಭಿಪ್ರಾಯ ನೀಡುತ್ತಿವೆ. ಈ ಎಲ್ಲವುಗಳ ಸಾರಾಂಶ ಕೆಳಕಂಡಂತಿದೆ.

ಗುಜರಾತ್: ನ್ಯಾಯಾಲಯದ ಮಧ್ಯಪ್ರವೇಶದ ಆರಂಭದ ನಿದರ್ಶನವಾಗಿ ಎಪ್ರಿಲ್ 11 ರಂದು ಗುಜರಾತ್ ಹೈಕೋರ್ಟ್ ಗುಜರಾತ್ ರಾಜ್ಯದ “ಹೌಹಾರುವಂತೆ ಮಾಡುವ ಕತೆಗಳು, ದುರದೃಷ್ಟಕರ ಹಾಗೂ ಊಹಾತೀತ ಕಷ್ಟಗಳು, ಮೂಲಭೂತ ಸೌಕರ್ಯಗಳ ಉಹಾತೀತ ಕೆಟ್ಟ ಸ್ಥಿತಿ, ಪರೀಕ್ಷೆ, ಹಾಸಿಗೆ, ಐಸಿಯು ಗಳ ನಿಭಾಯಿಸಲಾಗದ ಕೊರತೆಯಷ್ಟೇ ಅಲ್ಲದೇ ಆಕ್ಸಿಜನ್ ಪೂರೈಕೆ ಅಗತ್ಯ, ಔಷಧಿಗಳಾದ ರೆಮೆಡಿಸಿವರ್ ಇತ್ಯಾದಿಗಳ ಕೊರತೆ” ಎಲ್ಲದರ ಬಗ್ಗೆ ಟಿಪ್ಪಣಿ ಮಾಡಿತ್ತು. ಇದಕ್ಕೆ ಮುನ್ನ ಕೊರೊನಾ ವೈರಸ್ ಪ್ರಸರಣೆ ಮುರಿಯಲು ಅದು ರಾಜ್ಯ ಸರ್ಕಾರಕ್ಕೆ ಲಾಕ್‍ಡೌನ್ ಘೋಷಿಸುವ ಬಗ್ಗೆ ಗಮನಹರಿಸಲು ಹೇಳಿತ್ತು
ಕೋವಿಡ್ ಬಿಕ್ಕಟ್ಟಿಗೆ ಸರ್ಕಾರದ ಸ್ಪಂದನೆ ಕುರಿತ ನ್ಯಾಯಾಲಯದ ನಿಗಾವನ್ನು ಮುಂದುವರೆಸುತ್ತಾ, ನ್ಯಾಯಮೂರ್ತಿ ಕಾರಿಯ, “ರಾಜ್ಯದ ಅಫಿಡವಿಟ್ ವಾಸ್ತವದ ಸ್ಥಿತಿಗೆ ಸಂಬಂಧಪಟ್ಟ ಒಂದು ಸುಂದರವೆನಿಸುವ ಚಿತ್ರಣ ನೀಡುತ್ತಿದೆ. ಅದು ನೆಲಮಟ್ಟದ ವಾಸ್ತವತೆಯನ್ನು ಮುಟ್ಟುವುದಿಲ್ಲ. ನಾವು ದಂತದ ಗೋಪುರಗಳ ಮೇಲೆ ಕೂರುವ ಹಾಗಿಲ್ಲ. ವೈರಸ್ ಕೊಂಡಿ ಮುರಿಯಲು ಸರ್ಕಾರ ಕ್ರಮ ತೆಗೆದುಕೊಳ್ಳಲೇಬೇಕು” ಎಂದು ಎಪ್ರಿಲ್ 27 ರಂದು ಹೇಳಿದರು.
ಮುಖ್ಯ ನ್ಯಾಯಧೀಶರಾದ ವಿಕ್ರಮ್ ನಾಥ್ ರವರು, “ಯಾವುದೇ ರೋಗಿಯೂ ಸಹ ಚಿಕಿತ್ಸೆಯಿಂದ ವಂಚಿತರಾಗುವುದಿಲ್ಲ ಎಂಬ ಭರವಸೆಯನ್ನು ರಾಜ್ಯ ಸರ್ಕಾರ ನೀಡಲೇಬೇಕು……..”, ಎಂದು ಹೇಳಿದರು.

ಮದ್ರಾಸ್: ಏಪ್ರಿಲ್ 26 ರಂದು ಮದ್ರಾಸ್ ಹೈಕೋರ್ಟ್, ತಮಿಳುನಾಡು ಅಸೆಂಬ್ಲಿ ಚುನಾವಣಾ ಪೂರ್ವದಲ್ಲಿ ಅಗತ್ಯ ಮುನ್ನೆಚರಿಕೆ ಕ್ರಮಗಳಾದ ಮಾಸ್ಕ್‍ಗಳು, ಭೌತಿಕ ಅಂತರ ಮತ್ತು ಸ್ಯಾನಿಟೈಸರ್‍ಗಳನ್ನು ಚುನಾವಣಾ ರ್ಯಾಲಿಗಳಲ್ಲಿ ಇರುವಂತೆ ನೋಡಿಕೊಳ್ಳಲಿಲ್ಲ ಎಂದು ಭಾರತದÀ ಚುನಾವಣಾ ಆಯೋಗವನ್ನು ತೀವ್ರವಾಗಿ ಟೀಕಿಸಿತು. “ಚುನಾವಣಾ ಆಯೋಗವೇ ಕೋವಿಡ್-19 ರ ಎರಡನೇ ಅಲೆಗೆ ಏಕೈಕ ಕಾರಣ” ಎಂದು ಹೇಳಿದ ಹೈಕೋರ್ಟ್, `ಚುನಾವಣಾ ಅಧಿಕಾರಿಗಳ ಮೇಲೆ ಪ್ರಾಯಶಃ ಕೊಲೆ ಆಪಾದನೆ ಹೊರಿಸಬೇಕಾಗುತ್ತದೆ” ಎಂದು ಹೇಳಿತು. ಸುಪ್ರೀಂ ಕೋರ್ಟ್‍ಗೆ ಧಾವಿಸಿದ ಚುನಾವಣಾ ಆಯೋಗವು ಈ ಹೇಳಿಕೆಗಳನ್ನು ತೆಗೆದುಹಾಕಬೇಕು ಎಂದು ಕೇಳಿದ್ದಷ್ಟೇ ಅಲ್ಲದೆ ಕೋರ್ಟ್‍ಗಳು ನೀಡುವ ಮೌಖಿಕ ಹೇಳಿಕೆಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದೂ ಸಹ ಕೇಳಿತು. ಆದರೆ ಈ ಮನವಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್‍ನ ಹೇಳಿಕೆಗಳು `ಕಟು’ವಾಗಿದ್ದರೂ, ಅವು ಎಚ್ಚರಿಕೆಯ ಗಂಟೆಗಳಾಗಿವೆ ಎಂದು ಹೇಳಿತು. ಚುನಾವಣಾ ಆಯೋಗವು ಇತ್ತೀಚೆಗೆ ನಡೆದ ನಾಲ್ಕು ರಾಜ್ಯ ವಿಧಾನಸಭೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಗಳನ್ನು ನಡೆಸಿದ ವಿಧಾನಗಳು, ವೇಳಾಪಟ್ಟಿಗಳೂ ಒಳಗೊಂಡಂತೆ, ತೀವ್ರ ಟೀಕೆಗೊಳಗಾಗಿದೆ ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಹಲವು ಜಾಗಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಎದ್ದು ಕಾಣುವಂತೆ ಉಲ್ಲಂಘಿಸಲಾಯಿತು. ಪ್ರಮುಖವಾಗಿ ಅಸಾನ್ಸೋಲ್‍ನಲ್ಲಿ ಸ್ವತಃ ಪರಧಾನ ಮಂತ್ರಿಗಳೇ ತಮ್ಮ ಚುನಾವಣಾ ರ್ಯಾಲಿಗೆ ಬೃಹತ್ ಸಂಖ್ಯೆಯಲ್ಲಿ ಜನಸ್ತೋಮ ಬಂದಿದೆ ಎಂದು ಶ್ಲಾಘಿಸಿದರು.

ಕೆಲವು ದಿನಗಳ ನಂತರ, ಏಪ್ರೀಲ್ 30 ರಂದು ಒಂದು ಸ್ವಯಂಪ್ರೇರಣೆಯ ಅರ್ಜಿಯನ್ನು, ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್, ಉಲ್ಬಣಗೊಂಡ ಸಾಂಕ್ರಾಮಿಕಕ್ಕೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು ಮತ್ತು “ನೀವು ಕಳೆದ 10-15 ತಿಂಗಳುಗಳಿಂದ ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿತು. ಮುಂದುವರೆದು “ಒಂದು ಸಾಂಕ್ರಾಮಿಕವನ್ನು ಎದುರಿಸುವಾಗ ತಾತ್ಕಾಲಿಕತೆ ಎಂಬುದು ಇರಬಾರದು ಕೇಂದ್ರವು ತಜ್ಞರ ಸಲಹೆ ಪಡೆದು ಒಂದು ಯೋಜನಾಬದ್ಧ ವಿಧಾನದಲ್ಲಿ ವರ್ತಿಸಬೇಕಿತ್ತು……… … ಸುಮಾರು ಒಂದು ವರ್ಷದ ಲಾಕ್‍ಡೌನ್ ನಂತರವೂ ನಾವು ಈಗಿರುವ ಪರಿಸ್ಥಿತಿಯನ್ನು ನೋಡಿ.. ..” ಎಂದು ಅದು ಹೇಳಿತು.

ಅಲಹಾಬಾದ್: ಉತ್ತರ ಪ್ರದೇಶ ರಾಜ್ಯದಲ್ಲಿ ಕೋವಿಡ್-19 ಕೇಸ್‍ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಕ್ನೋ, ಕಾನ್ಪುರ್, ವಾರಣಾಸಿ, ಅಲಹಬಾದ್ ಮತ್ತು ಗೋರಖ್‍ಪುರ್ ನಗರಗಳಲ್ಲಿ ಲಾಕ್‍ಡೌನ್ ವಿಧಿಸುವಂತೆ ಅಲಹಾಬಾದ್ ಹೈಕೋರ್ಟ್ ಏಪ್ರಿಲ್ 19 ರಂದು ಬಿಜೆಪಿ ನೇತೃತ್ವದ ಉತ್ತರ ಪ್ರದೇಶಸರ್ಕಾರಕ್ಕೆ ಹೇಳಿತು. “ಅಗತ್ಯವಿದ್ದ ಔಷಧೀಯ ನೆರವಿನ ಕೊರತೆಯಿಂದ ಬೃಹತ್ ಪ್ರಮಾಣದಲ್ಲಿ ಈ ಸಾಂಕ್ರಾಮಿಕಕ್ಕೆ ಜನರು ಬಲಿಯಾಗಿ ಮಡಿದರೆ, ಒಂದು ಸುದೀರ್ಘ ವರ್ಷದ ಅನುಭವ ಮತ್ತು ತಿಳುವಳಿಕೆಯ ಹೊರತಾಗಿಯೂ ಈ ಸಾಂಕ್ರಾಮಿಕ ಎದುರಿಸಲು ವಿಫಲವಾದ ಸರ್ಕಾರಗಳೇ ಇದಕ್ಕೆ ಹೊಣೆಯಾಗುತ್ತವೆ” ಎಂದು ಹರಿತವಾಗಿ ಸರ್ಕಾರವನ್ನು ಟೀಕಿಸಿತು.

ರಾಜ್ಯದಲ್ಲಿ ನಡೆಯುತ್ತಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳನ್ನು ಉಲ್ಲೇಖಿಸುತ್ತಾ, ನ್ಯಾಯಾಲಯವು “ನಮ್ಮ ಬಳಿ ಚುನಾವಣೆಗಳನ್ನು ನಡೆಸಲು ಹಣ ಇದೆ, ಆದರೆ ಸಾರ್ವಜನಿಕ ಆರೋಗ್ಯಕ್ಕೆ ಬಳಸಲು ಹಣವಿಲ್ಲ ಎಂದು ಎಲ್ಲರೂ ನಮ್ಮನ್ನು ನೋಡಿ ಗೇಲಿ ಮಾಡುತ್ತಾರೆ” ಎಂದು ಉದ್ವೇಗದಿಂದ ಹೇಳಿತು.
ಮುಂದುವರೆದು, “ಎರಡನೇ ಅಲೆಯ ಪ್ರಮಾಣದ ಅರಿವಿದ್ದರೂ ಸರ್ಕಾರವು ಮೊದಲೇ ಯೋಜನೆ ಮಾಡದಿರುವುದು ನಾಚಿಕೆಗೇಡು” ಎಂದೂ ಹೇಳಿತು.
ಮರುದಿನ, ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿ ಈ ಆದೇಶದ ವಿರುದ್ಧ ತಡೆಯಾಜ್ಞೆ ಕೋರಿತು. ಮುಖ್ಯ ನ್ಯಾಯಾಧೀಶರಾದ ಬೋಬ್ಬೆ ನೇತೃತ್ವದ ಪೀಠ ಈ ಮನವಿಯನ್ನು ಪುರಸ್ಕರಿಸಿತು.
ಸ್ಥಳೀಯ ಸಂಸ್ಥೆಗಳ ಚುನಾವಣಾ ಕೆಲಸಗಳಲ್ಲಿ ಪಾಲ್ಗೊಂಡಿದ್ದ ಶಾಲಾ ಶಿಕ್ಷಕರಲ್ಲಿ 135 ಶಿಕ್ಷಕರು ಕೋವಿಡ್‍ನಿಂದಾಗಿ ಜೀವ ತೆತ್ತರು ಎಂದು ಮಾಧ್ಯಮಗಳಲ್ಲಿ ವರದಿಯಾದುದರ ಆಧಾರದ ಮೇಲೆ ಅಲಹಾಬಾದ್ ಹೈಕೋರ್ಟ್ ಏಪ್ರಿಲ್ 27 ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನೋಟೀಸು ಕಳಿಸಿತು. ನಾಲ್ಕು ಹಂತದ ಈ ಚುನಾವನಾ ಪ್ರಕ್ರಿಯೆ ಮುಕ್ತಾಯವಾಗುವ ವೇಳೆಗೆ ಸಾವಿಗೀಡಾದ ಶಿಕ್ಷಕರ ಸಂಖ್ಯೆ 800 ಮೀರಿತು ಎಂದು ನಂತರ ಶಿಕ್ಷಕರ ಸಂಘಟನೆ ಆರೋಪಿಸಿತು.

ಕೇರಳ: ಕೇರಳ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ವೆಚ್ಚಕ್ಕೆ ಮಿತಿ ಇಡುವಂತೆ ನೀಡಿದ ಆದೇಶವನ್ನು ಕೇರಳ ಹೈಕೋರ್ಟ್ ಮೇ 10 ರಂದು `ಅದ್ಭುತ’ ಎಂದು ಶ್ಲಾಘಿಸಿತು. ಕೇರಳದಲ್ಲಿ ಖಾಸಗಿ ಆಸ್ಪತ್ರೆಗಳು ದುಬಾರಿ ದರ ವಿಧಿಸುತ್ತಿವೆ ಎಂದು ದೂರಿ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಅನುಸರಿಸಿ ಇದು ಬಂದಿತ್ತು. ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ವಹಿಸಿಕೊಳ್ಳಬೇಕು ಎಂಬ ಹೈಕೋರ್ಟಿನ ಸೂಚನೆಯನ್ನು ಅನುಸರಿಸಿ ಎಲ್.ಡಿ.ಎಫ್. ಸರ್ಕಾರವು ಪಟ್ಟಿಯಲ್ಲಿ ಇಲ್ಲದ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಶೇ. 50 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲು ಸಹ ಇಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಶೇ. 50 ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಉತ್ತರಾಖಂಡ: ಏಪ್ರಿಲ್ 29 ರಂದು ಎಷ್ಟು ಸಾಧ್ಯವೋ ಅಷ್ಟು ಜನರ ಜೀವ ಉಳಿಸುವ ಸಲುವಾಗಿ ಔಷಧಿಗಳ ಲಭ್ಯತೆ ಮತ್ತಿತರ ಅಂಶಗಳ ಕುರಿತು ಹಲವು ಸೂಚನೆಗಳನ್ನು ನೀಡಿದ್ದ ಉತ್ತರಾಖಂಡ್ ಹೈಕೋರ್ಟ್, ಮೇ 10 ರಂದು, “ಜನವರಿ 2021 ರಲ್ಲಿ ವಿಜ್ಞಾನಿ ಸಮುದಾಯವು ಕೋವಿಡ್-19 ರ ಎರಡನೇ ಅಲೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರೂ, ರಾಜ್ಯ ಸರ್ಕಾರವು ಇದಕ್ಕೆ ಲಕ್ಷ್ಯ ಕೊಡಲಿಲ್ಲ” ಎಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಮುಂದುವರೆದು, “ದುರದೃಷ್ಟವಶಾತ್, ಆದ ಕೆಲವು ಪ್ರಮಾದಗಳಿಂದಾಗಿ, ತೋರಿದ ಕೆಲವು ನಿರ್ಲಕ್ಷ್ಯದಿಂದಾಗಿ ಕೋವಿಡ್-19 ಸಾಂಕ್ರಾಮಿಕವು ರಾಜ್ಯ ಮತ್ತು ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಹರಡುವಂತಾಯಿತು” ಎಂದು ಅದು ಹೇಳಿತು.
ರಾಜ್ಯ ಸರ್ಕಾರವು ತನ್ನ ಅಫಿಡವಿಟ್‍ನಲ್ಲಿ ಆಸ್ಪತ್ರೆಯ ಹಾಸಿಗೆಗಳು, ಆಕ್ಸಿಜನ್ ಪೂರೈಕೆ ಮತ್ತು ಔಷಧ ಲಭ್ಯತೆಗಳ ಬಗ್ಗೆ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶಗಳನ್ನು “ಬಹಳ ಬುದ್ಧಿವಂತಿಕೆ”ಯಿಂದ ಮೊಟಕುಗೊಳಿಸಲು ಪ್ರಯತ್ನಿಸಿತು ಎಂದು ಕೋರ್ಟ್ ಟಿಪ್ಪಣಿ ಮಾಡಿತು.

 

 

 

 

 

 

 

 

 

 

ಪಾಟ್ನಾ: ಪಾಟ್ನಾ ಹೈಕೋರ್ಟ್ ರಚಿಸಿದ್ದ ಮೂರು ಸದಸ್ಯರ ಸಮಿತಿಯು ಪಾಟ್ನಾದ ಮೂರು ದೊಡ್ಡ ಆಸ್ಪತ್ರೆಗಳಲ್ಲಿ 1000 ಹಾಸಿಗೆಗಳು ಆಕ್ಸಿಜನ್ ಪೂರೈಕೆ ಇಲ್ಲದಿರುವುದರಿಂದಾಗಿ ಖಾಲಿ ಇವೆ ಎಂದು ವರದಿ ನೀಡಿದ ನಂತರ ಏಪ್ರಿಲ್ 29 ರಂದು ರಾಜ್ಯ ಸರ್ಕಾರದ ಕಾರ್ಯಯೋಜನೆ “ತಪ್ಪು” ಎಂದು ಹೇಳಿತು ಮತ್ತು ಆಕ್ಸಿಜನ್ ಕೊರತೆ ಕುರಿತಂತೆ ತಿಳಿಸಲು ಒಂದು ಜನಗಳಿಗೆ ಒಂದು ಇ-ಮೇಲ್ ಗುರುತು ನೀಡಿತು. ಮೇಲ್ಕಾಣಿಸಿದ ಸಮಿತಿಯು ಆರೋಗ್ಯ ಸಹಾಯಕರ ಕೊರತೆಯೂ ಬಿಹಾರ ರಾಜ್ಯದಲ್ಲಿದೆ ಎಂದು ತಿಳಿಸಿತ್ತು. ಸಿಎಜಿ ವರದಿಯೊಂದರಲ್ಲೂ ಪ್ರಸ್ತಾಪಿಸಿದ್ದಂತೆ, ಆರೋಗ್ಯ ಸಿಬ್ಬಂದಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಇದನ್ನು ಓದಿ: ಲಸಿಕೆಗಳೆ ಲಭ್ಯವಿಲ್ಲ 2ನೇ ಡೋಸ್ ಹೇಗೆ ನೀಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?’: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ದೆಹಲಿ: ಹಲವಾರು ವಾರಗಳಿಂದ ದೆಹಲಿಯಲ್ಲಿನ ಸ್ಫೋಟಕ ಮತ್ತು ದಯನೀಯ ಕೋವಿಡ್ ಪರಿಸ್ಥಿತಿ ಕುರಿತಂತೆ ದೆಹಲಿ ಹೈಕೋರ್ಟ್ ದೂರುಗಳನ್ನು ಕೇಳುತ್ತಲೇ ಇದೆ. ಏಪ್ರೀಲ್ 24 ರಂದು ಈ ಸಾಂಕ್ರಾಮಿಕವನ್ನು “ಸುನಾಮಿ” ಎಂದು ಹೇಳಿದ ಹೈಕೋರ್ಟ್ ಮುಂಬರುವ ಶಿಖರ ಸ್ಥಿತಿಯನ್ನು ಎದುರಿಸಲು ಮೂಲಭೂತ ಸೌಕರ್ಯಗಳು, ಆಸ್ಪತ್ರೆಗಳು ವೈದ್ಯಕೀಯ ಸಿಬ್ಬಂದಿ, ಔಷಧಿಗಳು, ಲಸಿಕೆಗಳು ಮತ್ತು ಆಕ್ಸಿಜನ್ ಕುರಿತಂತೆ ಆ ದಿನಕ್ಕೆ ಆಗಿರುವ ಸಿದ್ಧತೆಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು. ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಯಾರೇ ಅಡ್ಡಿ ಮಾಡಿದರೂ ಅವರನ್ನು ನೇಣಿಗೇರಿಸುತ್ತೇವೆ ಎಂದು ಕೋರ್ಟ್ ಎಚ್ಚರಿಸಿತು. ಅಂತೆಯೇ ದೆಹಲಿ ಸರ್ಕಾರವೂ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಬೇಕು ಎಂದಿತು. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಏಕೆ ಅವು ಕೇಳಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ದ್ರವ ಆಕ್ಸಿಜನ್ ನೀಡಲಾಯಿತು, ಆದರೆ ದೆಹಲಿಗೆ ಅಗತ್ಯವಿದ್ದ ಪ್ರಮಾಣಕ್ಕಿಂತ ಅತೀ ಕಡಿಮೆ ಪೂರೈಕೆ ಏಕೆ ಆಯಿತು ಎಂದು ಕೋರ್ಟ್ ಏಪ್ರಿಲ್ 27 ರಂದು ಪ್ರಶ್ನೆ ಮಾಡಿತು.

ಬಾಂಬೆ: ಕೋವಿಡ್-19 ಕ್ಕೆ ಸಿಲುಕಿ ಮೃತರಾದವರ ಅಂತ್ಯಕ್ರಿಯೆ ನಡೆಸಲು ಇರುವ ತೊಡಕಿನ ದಾಖಲಾತಿ ಪ್ರಕ್ರಿಯೆಗಳು, ವೈರಾಣು ನಿಯಂತ್ರಣ ಔಷಧಿಯ ವ್ಯಾಪಕ ಕಾಳಸಂತೆ ವ್ಯಾಪಾರ, ರೆಮಿಡಿಸಿವರ್, ಆಕ್ಸಿಜನ್ ಪೂರೈಕೆ ಇತ್ಯಾದಿ ವಿಷಯಗಳ ಕುರಿತಂತೆ ಬಂದಿದ್ದ ಅಂಶಗಳನ್ನು ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್‍ನ ಮೂರು ಪೀಠಗಳು ಮುಂಬೈ, ಔರಂಗಬಾದ್ ಮತ್ತು ನಾಗ್ಪುರ್ ನಲ್ಲಿ ಇರುವ ಮಹಾರಾಷ್ಟ್ರದ ಕೋವಿಡ್ ಪಿಡುಗಿನ ನಿರ್ವಹಣೆ ಕುರಿತಂತೆ ಸೂಚನೆಗಳನ್ನು ನೀಡಿದವು.

ಕಲ್ಕತ್ತಾ: ಪ. ಬಂಗಾಳ ಸುದೀರ್ಘ ಅವಧಿಯ 8 ಹಂತಗಳ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವಂತೆ ಕಲ್ಕತ್ತಾ ಹೈಕೋರ್ಟ್ ಏಪ್ರಿಲ್ 20 ರಿಂದ ಹಲವು ದಿನಗಳು ನಿರಂತರ ಆದೇಶಗಳನ್ನು ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಹಾಗೂ ಜಿಲ್ಲಾ ಸರ್ಕಾರಿ ಅಧಿಕಾರಿಗಳಿಗೆ ನೀಡಿತು.
ಏಪ್ರಿಲ್ 22 ರಂದು ಅದು ಚುನಾವಣಾ ಅಧಿಕಾರಿಗಳನ್ನು ಕೇವಲ ಸುತ್ತೋಲೆ ಹೊರಡಿಸಿ ಅದರ ಜಾರಿಯನ್ನು ನೋಡಿಕೊಳ್ಳುತ್ತಿಲ್ಲ ಎಂದು ಟೀಕಿಸಿತು.
ತೃಣಮೂಲ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ರಚನೆಯಾದ ನಂತರ, ಮೇ 10 ರಂದು ರಾಜ್ಯ ಸರ್ಕಾರಕ್ಕೆ ಈಗಿರುವ ಪರಿಸ್ಥಿತಿ ಮತ್ತು ಸೌಲಭ್ಯಗಳು, ಔಷಧಿಗಳು, ಮೂಲಭೂತ ಸೌಕರ್ಯಗಳು ಮತ್ತು ಲಸಿಕೆ ಯೋಜನೆ ಕುರಿತಂತೆ ವಿವರವಾದ ವರದಿ  ನೀಡಲು ಹೇಳಿದೆ.

ಮಧ್ಯಪ್ರದೇಶ: ಏಪ್ರಿಲ್ 20 ರಂದು ಮಧ್ಯಪ್ರದೇಶ ಹೈಕೋರ್ಟ್ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸೂಚನೆಗಳ ಪಟ್ಟಿ ನೀಡಿ ನಾಗರಿಕರಿಗೆ ಜೀವ ರಕ್ಷಕ ಔಷಧಿಗಳು ಮತ್ತು ವೈದ್ಯಕೀಯ ಆಕ್ಸಿಜನ್ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿತು. ಹಾಗೆಯೇ ರೆಮಿಡಿಸಿವಿರ್ ನ ಉತ್ಪಾದನೆ ಜಾಸ್ತಿ ಮಾಡುವಂತೆ ಅಥವಾ ಅದನ್ನು ಆಮದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿತು.
ರಾಜ್ಯ ಸರ್ಕಾರಕ್ಕೆ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರ್ಟ್ ಸೂಚಿಸಿತು ಮತ್ತು ಪರೀಕ್ಷೆ ವರದಿಗಳು “ಸ್ಯಾಂಪಲ್ ಪಡೆದ 36 ಘಂಟೆಗಳೊಳಗೆ ವರದಿ ನೀಡುವಂತೆ” ನೋಡಿಕೊಳ್ಳಬೇಕು ಎಂದಿತು. ರಾಜ್ಯದಲ್ಲಿ ಉಲ್ಬಣ್ಣಗೊಂಡ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಔಷಧಿಗಳ ಕೊರತೆ, ಕಾಳಸಂತೆ ಮಾರಾಟ ಮತ್ತಿತರ ವಿಷಯಗಳ ಕುರಿತು ಹಾಕಿದ ಐದು ಪೆಟಿಷನ್‍ಗಳ ಆದಾರದಲ್ಲಿ ಈ ಸೂಚನೆಗಳನ್ನು ನೀಡಲಾಗಿತ್ತು. ಜೈಲುಗಳಲ್ಲಿ ತುಂಬಿ ತುಳುಕುತ್ತಿದ್ದ ಕೈದಿಗಳಿಂದಾಗಿ ಕೋವಿಡ್ ಪ್ರಸರಣ ಹೆಚ್ಚುವ ಅಪಾಯದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನಗಳ ಆಧಾರದಲ್ಲಿ, ರಾಜ್ಯ ಜೈಲುಗಳಲ್ಲಿ ಈ ಸ್ಥಿತಿಯನ್ನು ನಿವಾರಿಸಬೇಕು ಎಂದು ಹೈಕೋರ್ಟ್ ಮೇ 11 ರಂದು ಆದೇಶಿಸಿತು.

ರಾಜಸ್ಥಾನ್: ವಕೀಲರ ಸಂಘವು ಕೋವಿಡ್ ರೋಗಿಗಳು ಮತ್ತು ಸೌಕರ್ಯಗಳ ಕೊರತೆಯ ಬಗ್ಗೆ ಸಲ್ಲಿಸಿದ ಪತ್ರವನ್ನು ಕೈಗೆತ್ತಿಕೊಂಡ ರಾಜಸ್ಥಾನ್ ಹೈಕೋರ್ಟ್ ಪ್ರಮುಖ ವಕೀಲರ ಒಂದು ರಾಜ್ಯ ಮಟ್ಟದ ಮತ್ತು ಹಲವು ಜಿಲ್ಲಾ ಮಟ್ಟದ ಸಮಿತಿಗಳನ್ನು ಈ ಕೂಡಲೇ ರಚಿಸಿ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸುವಂತೆ ಏಪ್ರಿಲ್ 30 ರಂದು ಆದೇಶಿಸಿತು. ಈ ಎಲ್ಲಾ ಸಮಿತಿಗಳು ಹಗಲು-ರಾತ್ರಿ ಕೆಲಸ ಮಾಡುವ ಸೇವಾಕೇಂದ್ರ ಸ್ಥಾಪಿಸಬೇಕು ಮತ್ತು ಅರಿವು ಮಂಡಿಸುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿತು.

ಇದನ್ನು ಓದಿ: ನಿಮ್ಮ ವೈಫಲ್ಯವನ್ನು ಎತ್ತಿ ಹಿಡಿದಿದ್ದಕ್ಕೆ ಕೋರ್ಟ್‌ ಅನ್ನು ದೂಷಿಸಬೇಡಿ

ತೆಲಂಗಾಣ: ಗ್ರೇಟರ್ ವಾರಂಗಲ್ ಮತ್ತು ಖಮ್ಮಮ್ ನ ಮುನಿಸಿಪಲ್ ಕಾರ್ಪೋರೇಷನ್‍ಗಳು ಮತ್ತು ಐದು ಮುನಿಸಿಪಾಲಿಟಿಗಳಿಗೆ ಚುನಾವಣೆ ನಡೆಸಿದ್ದಕ್ಕೆ ತೆಲಂಗಾಣ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗವನ್ನು ಒಂದು ಪ್ರಸಿದ್ಧ ಕವನವಾದ “ಅhಚಿಡಿge oಜಿ ಣhe ಐighಣ ಃಡಿigಚಿಜe” ಅನ್ನು ಉಲ್ಲೇಖಿಸಿ ಕಟುವಾಗಿ ಟೀಕಿಸಿತು. ಈ ಸಮಯದಲ್ಲಿ ಚುನಾವಣೆ ನಡೆಸುವುದು ಎಂದರೆ ಜನರನ್ನು (ಮತ್ತು ಚುನಾವಣಾ ಕರ್ತವ್ಯದಲ್ಲಿ ಇರುವ ನೌಕರರನ್ನು) “ಸಾವಿನ ದವಡೆಗೆ ನೂಕಿದಂತೆ” ಎಂದು ಟೆನ್ಸಿsನ್ ನ ಕವನದಲ್ಲಿ ವರ್ಣೀಸಿದ್ದನ್ನು ಕೋರ್ಟ್ ಹೇಳಿತು.
ರಾಜ್ಯ ಚುನಾವಣಾ ಆಯುಕ್ತರು ಚುನಾವಣೆಗಳು ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿವೆ ಎಂದು ವಾದಿಸಲು ಹೋದಾಗ ಕೋರ್ಟ್ “ಇಡೀ ವಿಶ್ವ-ಕೇವಲ ದೇಶ ಮತ್ತು ರಾಜ್ಯವಲ್ಲ ಫೆಬ್ರವರಿ 2021 ರಿಂದ ಒಂದು ಸಮರ ರೀತಿಯ ಪರಿಸ್ಥಿತಿ ನಡೆಯುತ್ತಿದೆ ಎಂದು ತಿಳಿದಿದೆ. ರಾಜ್ಯ ಚುನಾವಣಾ ಆಯೋಗವು ಈ ಗ್ರಹಕ್ಕೆ ಸೇರಿಲ್ಲವೇ? ನೀವೇನಾದರೂ ಮಂಗಳ ಗ್ರಹದಲ್ಲಿದ್ದೀರಾ?” ಎಂದು ಟಿಪ್ಪಣಿ ಮಾಡಿತು.

ಕರ್ನಾಟಕ: ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಮತ್ತು ಔಷಧಿಗಳ ಕಾಳಸಂತೆ ಮಾರಾಟಗಳ ಕುರಿತು ಬಂದ ಪತ್ರಕ್ಕೆ ಸ್ಪಂದಿಸುತ್ತಾ ಏಪ್ರಿಲ್ 28 ರಂದು ಕರ್ನಾಟಕ ಹೈಕೋರ್ಟ್, ಪರಿಸ್ಥಿತಿ “ದಿಗಿಲು ಹುಟ್ಟಿಸುವಂತಿದೆ” ಎಂದಿತು ಮತ್ತು ಮುನಿಸಿಪಲ್ ಅಧಿಕಾರಿಗಳನ್ನು ಟೀಕಿಸಿತು. ಹಾಗೆಯೇ ವಿಶೇಷಚೇತನರಿಗೆ ಆದ್ಯತೆ ಆಧಾರದಲ್ಲಿ ಲಸಿಕೆ ನೀಡಬೇಕು ಎಂದು ಆದೇಶಿಸಿತು.
ಈ ಸಾಂಕ್ರಾಮಿಕವು ಭಾರತವನ್ನು ಈಗಲೂ ಹಾಳುಗೆಡವುತ್ತಿದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿರುವಂತೆ ಕಾಣುತ್ತಿದೆ. ಇವು ಸಾಮಾನ್ಯವಾಗಿ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಕಾಣುವುದಿಲ್ಲ. ಬೇಸರದ ಸಂಗತಿಯೆಂದರೆ, ಕೇಂದ್ರ ಸರ್ಕಾರವು ಒಂದು ತ್ವರಿತವಾದ ಮತ್ತು ಸಮಗ್ರ ಸ್ಪಂದನೆಯನ್ನು ವಿಕಾಸಗೊಳಿಸಲು ಇನ್ನೂ ತಡಕಾಡುತ್ತಿದೆ ಮತ್ತು ಎಡವುತ್ತಿದೆ. ಅತ್ಯಂತ ನಗಣ್ಯ ಆರ್ಥಿಕ ನೆರವನ್ನು ರಾಜ್ಯಗಳಿಗೆ ನೀಡುವ ಮೂಲಕ ಮತ್ತು ಸುಲಿಗೆಕೋರ ಉತ್ಪಾದಕರಿಂದ ಲಸಿಕೆಯನ್ನು ರಾಜ್ಯಗಳೇ ತಾವೇ ಖರೀದಿಸಬೇಕು ಎಂದು ಒತ್ತಾಯಿಸುವ ಮೂಲಕ ಕೇಂದ್ರ ಸರ್ಕಾರವು ಈ ಯುದ್ಧವನ್ನು ಮುಂದೊಯ್ಯುವ ರಾಜ್ಯ ಸರ್ಕಾರಗಳ ಸಾಮಥ್ರ್ಯವನ್ನು ನಿರ್ಬಂಧಿಸಿದಂತೆಯೇ ಆಗಿದೆ.
ಹೀಗಾಗಿ ನ್ಯಾಯಾಂಗವು ಮುಂದಿನ ದಿನಗಳಲ್ಲಿ ತನ್ನ ಪಾತ್ರವನ್ನು ಮುಂದುವರೆಸುವ ಸಾಧ್ಯತೆ ಇದೆ-ಇನ್ನಷ್ಟು ನಿರ್ಣಾಯಕ ರೀತಿಯಲ್ಲಿ ಇದನ್ನು ಮಾಡುತ್ತದೆ ಎಂದು ಆಶಿಸೋಣ.

ಅನುವಾದ: ಶೃ.ಶಂ.ನಾ.

Donate Janashakthi Media

Leave a Reply

Your email address will not be published. Required fields are marked *