ಮೋದಿ ಸರಕಾರ ನೇಪಾಳವನ್ನು ದಬಾಯಿಸುವುದನ್ನು ನಿಲ್ಲಿಸಬೇಕು

ಪಿ.ಡಿ. ಸಂಪಾದಕೀಯ-ಪ್ರಕಾಶ್ ಕಾರಟ್
ಸಂಪುಟ 9 ಸಂಚಿಕೆ 46, 15 ನವೆಂಬರ್ 2015

Nepal blockade2

ಅಘೋಷಿತ ದಿಗ್ಬಂಧನದ ಮೂಲಕ ನೇಪಾಳಿ ಸರಕಾರ ಮತ್ತು ಅಲ್ಲಿಯ ರಾಜಕೀಯ ವ್ಯವಸ್ಥೆಯನ್ನು ದಬಾಯಿಸುವ ಮೋದಿ ಸರಕಾರದ ಒರಟು ಪ್ರಯತ್ನ ಅಲ್ಲಿ ಎಲ್ಲರಲ್ಲಿಯೂ ಆಕ್ರೋಶವನ್ನು ಉಂಟು ಮಾಡಿದೆ. ನೇಪಾಳ ಪೆಟ್ರೋಲ್ ಪೂರೈಕೆಗೆ ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿ ಬಂದಿದೆ. ಇನ್ನೊಂದೆಡೆಯಲ್ಲಿ ನೇಪಾಳದ ವಿದೇಶಾಂಗ ಮಂತ್ರಿಗಳು ಭಾರತದ ವಿರುದ್ಧ ದೂರು ಕೊಡಲು ವಿಶ್ವಸಂಸ್ಥೆಯ ಬಳಿಗೆ ಹೋಗಿದ್ದಾರೆ. ನೇಪಾಳೀ ಜನತೆ ಎದುರಿಸುತ್ತಿರುವ ದಿಗ್ಭಂಧನದ ಬಗ್ಗೆ ಹೆಚ್ಚಿನ ಸಾರ್ಕ್ ದೇಶಗಳು ಆತಂಕ ವ್ಯಕ್ತಪಡಿಸಿವೆ. ಭಾರತ ಈ ಪ್ರದೇಶದಲ್ಲಿ ಒಂದು ದೊಡ್ಡ ಶಕ್ತಿ ಎಂದು ಪ್ರದರ್ಶಿಸ ಬಯಸುವ ಮೋದಿ ಸರಕಾರದ ಈ ರಾಷ್ಟ್ರೀಯ ಸಂಕುಚಿತವಾದದಿಂದಾಗಿ ಮತ್ತು ಬಿಹಾರ ಚುನಾವಣೆಗಳಲ್ಲಿ ಲಾಭ ಗಿಟ್ಟಿಸುವ ಸಂಕುಚಿತ ದೃಷ್ಟಿಯಿಂದಾಗಿ ಭಾರತದ ಪ್ರತಿಷ್ಠೆಗೆ ಆಗಿರುವ ಅನಾಹುತ ಗಮನಾರ್ಹ.

nepal blockade

ನೇಪಾಳ ಕುರಿತಂತೆ ಮೋದಿ ಸರಕಾರದ ಜಗಳಗಂಟ ಧೋರಣೆಯಿಂದಾಗಿ ಭಾರತ-ನೇಪಾಳ ಸಂಬಂಧಗಳಲ್ಲಿ ಹಿಂದೆಂದೂ ಕಾಣದಂತಹ ಒಡಕು ಉಂಟಾಗಿದೆ. ನೇಪಾಳ ಸಪ್ಟಂಬರ್ 20 ರಂದು ತನ್ನ ಜಾರಿಗೊಳಿಸಿದ ಸಂವಿಧಾನದ ಬಗ್ಗೆ ಒಂದು ನಕಾರಾತ್ಮಕ ನಿಲುವು ತಳೆದ ಮೇಲೆ ಬಿಜೆಪಿ ಸರಕಾರ ಅದನ್ನು ಇನ್ನಷ್ಟು ಉದ್ವಿಘ್ನಗೊಳಿಸುತ್ತಿದೆ.

ಎರಡು ತಿಂಗಳಿಂದ ನೇಪಾಳಕ್ಕೆ ಭಾರತದಿಂದ ಸಾಗುವ ಎಲ್ಲ ದಾರಿಗಳನ್ನು ಅಡ್ಡಗಟ್ಟಲಾಗಿದೆ. ಸುತ್ತಲೂ ನೆಲಾವೃತ್ತವಾದ ಈ ದೇಶ ಎಲ್ಲ ಆವಶ್ಯಕ ಸರಕುಗಳು ವ್ಯಾಪಾರಕ್ಕೆ ಭಾರತದ ಮೂಲಕ ಹಾದು ಹೋಗುವ ಭೂಮಾರ್ಗಗಳನ್ನೇ ಅವಲಂಬಿಸಿದೆ. ಮೋದಿ ಸರಕಾರ ಬೆಂಬಲಿಸಿರುವ ಮಾಧೇಸಿ ಚಳುವಳಿ ರಕ್ಸೌಲ್-ಬೀರ್‍ಗಂಜ್ ಕ್ರಾಸಿಂಗ್ ಮತ್ತಿತರ ಮಾರ್ಗಗಳನ್ನು ಅಡ್ಡಗಟ್ಟಿದೆ. ಇದರಿಂದಾಗಿ ಇಂಧನ ಮತ್ತು ಇತರ ಆವಶ್ಯಕ ಸರಕುಗಳ ತೀವ್ರ ಕೊರತೆ ಉಂಟಾಗಿದೆ. ಜನ ಬಹಳವಾಗಿ ಸಂಕಟ ಪಡುತ್ತಿದ್ದಾರೆ. ಏಕೆಂದರೆ ಆ ದೇಶವನ್ನು ನಡುಗಿಸಿಬಿಟ್ಟ ಭೂಕಂಪದ ನಂತರದ ಪುನರ್ರಚನೆಯ ಕೆಲಸಕ್ಕೆ ಅಡ್ಡಿಯುಂಟಾಗಿದೆ. ಚಳಿಗಾಲ ಆರಂಭವಾಗುವ ಮೊದಲು ವಸತಿ ವ್ಯವಸ್ಥೆ ನಿರ್ಮಿಸಲು ಬೇಕಾದ ಸಾಮಗ್ರಿಗಳನ್ನು ವಾಹನಗಳಲ್ಲ್ಲಿ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇಂಧನ ಕೊರತೆಯಿಂದಾಗಿ ಪರ್ವತ ಪ್ರದೇಶಗಳಿಗೆ ಸಾಮಗ್ರಿಗಳ ಪೂರೈಕೆಗೆ ಹೆಲಿಕಾಪ್ಟರುಗಳ ಬಳಕೆಗೆ ಬಾಧೆಯುಂಟಾಗಿದೆ. ಅಡುಗೆ ಇಂಧನ ಲಭ್ಯವಾಗದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ, ಇದರಿಂದ ಅರಣ್ಯನಾಶವಾಗುತ್ತಿದೆ.

ಈ ದಿಗ್ಬಂಧನಕ್ಕೂ ತನಗೂ ಏನೂ ಸಂಬಂಧವಿಲ್ಲ, ಇದು ಮಾಧೇಸಿ ಚಳುವಳಿ ಮತ್ತು ಭಾರತೀಯ ಸಾಗಾಣಿಕೆದಾರರು ಎದುರಿಸುತ್ತಿರುವ ಅಭದ್ರತೆಯ ಫಲಿತಾಂಶ ಎಂಬ ಭಾರತ ಸರಕಾರದ ನಿಲುವನ್ನು ಯಾರೂ ನಂಬುತ್ತಿಲ್ಲ. ಗಡಿಪ್ರದೇಶಗಳಲ್ಲಿ ವಾಹನಗಳ ಮುಕ್ತ ಸಂಚಾರಕ್ಕೆ ಸಾಧ್ಯವಾದುದನ್ನೆಲ್ಲ ಮಾಡಲಾಗುತ್ತದೆ ಎಂಬ ಒಂದಾದರೂ ಹೇಳಿಕೆಯನ್ನು ಭಾರತ ಸರಕಾರ ನೀಡಿಲ್ಲ. ವಾಹನ ಸಂಚಾರವನ್ನು ಸುಗಮಗೊಳಿಸುವಂತೆ ಮಾಡುವಂತೆ ಕಾಣುವ ಒಂದಾದರೂ ಕ್ರಮವನ್ನೂ ಕೂಡ ಅದು ಕೈಗೊಂಡಿಲ್ಲ. ಬದಲಿಗೆ ಭಾರತ ಸರಕಾರ ಪ್ರತಿಭಟನೆಗಳೇನೂ ಇಲ್ಲದ ಪೂರ್ವ ನೇಪಾಳದಲ್ಲೂ ಗಡಿಯನ್ನು ಅನಧಿಕೃತವಾಗಿ ಸೀಲ್ ಮಾಡಿದೆ ಎಂದು ವರದಿಯಾಗಿದೆ.

ಸಂವಿಧಾನ ಜಾರಿಗೆ ಬಂದ ಮೇಲೆ ನೇಪಾಳದಲ್ಲಿ ಒಂದು ಹೊಸ ಸರಕಾರ ಅಧಿಕಾರ ವಹಿಸಿಕೊಂಡಿದೆ, ಕೆ.ಪಿ.ಶರ್ಮ ಓಲಿ ಪ್ರಧಾನ ಮಂತ್ರಿಗಳಾಗಿದ್ದಾರೆ. ಆನಂತರ ನೇಪಾಳದ ಉಪಪ್ರಧಾನ ಮಂತ್ರಿ ದಿಲ್ಲಿಗೆ ಭೇಟಿ ನೀಡಿದ್ದಾರೆ. ಭಾರತದ ವಿದೇಶಾಂಗ ಮಂತ್ರಿಗಳೊಡನೆ ನಡೆಸಿದ ಮಾತುಕತೆಗಳಲ್ಲಿ ಅವರು ಪೂರ್ವ ಭಾಗದಲ್ಲಿನ ಕೆಲವಾದರೂ ಕ್ರಾಂಸಿಂಗ್‍ಗಳನ್ನು ವಾಹನ ಸಂಚಾರಕ್ಕೆ ತೆರೆಯುವಂತೆ ಕೋರಿದ್ದಾರೆ. ಅದಕ್ಕೂ ಭಾರತದಿಂದ ಏನೂ ಸ್ಪಂದನವಿಲ್ಲ.

ಭಾರತ ಸರಕಾರ ಮಾಧೇಸಿ ಚಳುವಳಿಗೆ ತನ್ನ ಬೆಂಬಲವನ್ನೇನೂ ಮುಚ್ಚಿಟ್ಟಿಲ್ಲ. ಮಾಧೇಸಿ ಗುಂಪುಗಳು ತಮಗೆ ನರೇಂದ್ರ ಮೋದಿ ಮತ್ತು ಭಾರತದ ಬೆಂಬಲವಿದೆ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಮಾಧೇಸಿ ಮುಖಂಡರ ಒಂದು ನಿಯೋಗ ಅಕ್ಟೋಬರ್ ಕೊನೇ ವಾರದಲ್ಲಿ ಸಮಾಲೋಚನೆ ನಡೆಸಲು ದಿಲ್ಲಿಗೆ ಭೇಟಿ ನೀಡಿದೆ. ಇದು ನೇಪಾಳದ ಆಂತರಿಕ ವಿಚಾರಗಳಲ್ಲಿ ಒಂದು ಅವಮಾನಕಾರೀ ಹಸ್ತಕ್ಷೇಪ.

ನೇಪಾಳೀ ಅಧಿಕಾರಿಗಳು ಬೀರ್‍ಗಂಜ್ ಕಡೆಯಿಂದ ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದಾಗ ಉಂಟಾದ ಪೋಲೀಸ್ ಗೋಳೀಬಾರಿನಲ್ಲಿ ಒಬ್ಬ ಭಾರತೀಯ ಹುಡುಗ ಸತ್ತಿದ್ದಾನೆ. ಪ್ರತಿಭಟನಾಕಾರರಲ್ಲಿ ಕೆಲವು ಭಾರತೀಯ ನಾಗರಿಕರನ್ನು ಬಂಧಿಸಿರುವುದಾಗಿ ನೇಪಾಳೀ ಅಧಿಕಾರಿಗಳು ಹೇಳಿದ್ದಾರೆ.

“ನೇಪಾಳ ಎದುರಿಸುತ್ತಿರುವ ಪ್ರಶ್ನೆಗಳು ರಾಜಕೀಯ ಸ್ವರೂಪದವು, ಅವನ್ನು ಬಲಪ್ರಯೋಗದಿಂದ ಪರಿಹರಿಸಲು ಸಾಧ್ಯವಿಲ್ಲ. ತಿಕ್ಕಾಟದ ಪ್ರಸಕ್ತ ಪರಿಸ್ಥಿತಿಯನ್ನು ನೇಪಾಳ ಸರಕಾರ ನಂಬಲರ್ಹ ರೀತಿಯಲ್ಲಿ, ಪರಿಣಾಮಕಾರಿಯಾಗಿ ಎದುರಿಸಬೇಕಾಗಿದೆ” ಎಂಬ ವಿದೇಶ ಮಂತ್ರಾಲಯದ ವಕ್ತಾರರ ಇತ್ತೀಚಿನ ಹೇಳಿಕೆ ಭಾರತ ಸರಕಾರದ ದುರಹಂಕಾರದ ನಿಲುವನ್ನು ಬಯಲು ಮಾಡಿದೆ. ಇದು ತಲೆಗೆ ಒಂದು ಬಂದೂಕು ಒತ್ತಿ ಹಿಡಿದು ಭಾರತೀಯ ಬೆಂಬಲಿತ ಮಾಧೇಸಿ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದಂತೆಯೇ.

ಭಾರತ ಸರಕಾರದಿಂದ ಅಘೋಷಿತ ದಿಗ್ಬಂಧನ ನೇಪಾಳದಲ್ಲಿ ಬಲವಾದ ಭಾವನೆಗಳನ್ನು ಎಬ್ಬಿಸಿದೆ. ಭಾರತದ ವಿರುದ್ಧ ಅಲ್ಲಿಯ ಜನತೆಯ ಕ್ರೋಧ ಏರುತ್ತಿದೆ. ನೇಪಾಳಿ ಸರಕಾರ ಮತ್ತು ಅಲ್ಲಿಯ ರಾಜಕೀಯ ವ್ಯವಸ್ಥೆಯನ್ನು ದಬಾಯಿಸುವ ಮೋದಿ ಸರಕಾರದ ಒರಟು ಪ್ರಯತ್ನ ಅಲ್ಲಿ ರಾಜಕೀಯ ಭೇದಬಾವವಿಲ್ಲದೆ ಎಲ್ಲರಲ್ಲಿಯೂ ಆಕ್ರೋಶವನ್ನು ಉಂಟು ಮಾಡಿದೆ. ನೇಪಾಳ ಪೆಟ್ರೋಲ್ ಪೂರೈಕೆಗೆ ಚೀನಾದೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿ ಬಂದಿದೆ. ಟಿಬೆಟ್ ಮೂಲಕ 1000 ಮೆಟ್ರಿಕ್‍ಟನ್ ಪೆಟ್ರೋಲ್ ಪೂರೈಕೆಯನ್ನು ಚೀನಾ ಮಾಡಲಿದೆ. ನೇಪಾಳದ ವಿದೇಶಾಂಗ ಮಂತ್ರಿಗಳು ಭಾರತ-ಪ್ರೇರಿತ ದಿಗ್ಬಂಧನದ ವಿರುದ್ಧ ದೂರು ಕೊಡಲು ವಿಶ್ವಸಂಸ್ಥೆ ಬಳಿಗೆ ಹೋಗಿದ್ದಾರೆ. ನೇಪಾಳೀ ಜನತೆ ಎದುರಿಸುತ್ತಿರುವ ದಿಗ್ಭಂಧನದ ಬಗ್ಗೆ ಹೆಚ್ಚಿನ ಸಾರ್ಕ್ ದೇಶಗಳು ಆತಂಕ ವ್ಯಕ್ತಪಡಿಸಿವೆ.

ನೇಪಾಳದ ಬಗ್ಗೆ ಮೋದಿ ಸರಕಾರದ ನಿಲುವು ಯಾವುದೇ ಅಪಕ್ವ ನಿಲುವಿನಿಂದ ಹೊಮ್ಮಿ ಬಂದದ್ದಲ್ಲ. ಭಾರತ ಈ ಪ್ರದೇಶದಲ್ಲಿ ಒಂದು ದೊಡ್ಡ ಶಕ್ತಿ ಎಂದು ಪ್ರದರ್ಶಿಸ ಬಯಸುವ ಮೋದಿ ಸರಕಾರದ ರಾಷ್ಟ್ರೀಯ ಸಂಕುಚಿತವಾದದ ಫಲಿತಾಂಶ ಇದು. ನೇಪಾಳ ಸಂವಿಧಾನ ಸಭೆ ತಮ್ಮದು ಒಂದು ಜಾತ್ಯಾತೀತ ಗಣತಂತ್ರ ಎಂದು ನಿರ್ಧರಿಸಿರುವುದು ತಮ್ಮ ಪ್ರತಿಷ್ಠೆಗೆ ಕುಂದು ಎಂದು ಆರೆಸ್ಸೆಸ್-ಬಿಜೆಪಿ ಕೂಟ ಭಾವಿಸಿದೆ. ಅಲ್ಲದೆ ನಮ್ಮ ಬಿಹಾರ ರಾಜ್ಯದ ಗಡಿಯೀಚೆಗೆ ಮಾಧೇಸಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದು ಈಗ ಅಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಅವರ ಬೆಂಬಲ ಗೆಲ್ಲುವುದರತ್ತವೂ ಅದು ಕಣ್ಣಿಟ್ಟಿದೆ.

ದಕ್ಷಿಣ ಏಶ್ಯದಲ್ಲಿ ಮೋದಿ ಸರಕಾರದ ವಿದೇಶಾಂಗ ಧೋರಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಅವರು ಮುಖ್ಯವಾಗಿ ಭಾರತ ಒಂದು ‘ರಾಷ್ಟ್ರೀಯ ಭದ್ರತಾ ಪ್ರಭುತ್ವ’ ಆಗಬೇಕು ಎಂದು ಬಯಸುವವರು. ಈ ಧೋರಣೆಯಿಂದಾಗಿ ಈಗಾಗಲೇ ಪಾಕಿಸ್ತಾನದೊಂದಿಗೆ ಸಂಬಂಧಗಳು ಕೆಡುತ್ತಿವೆ. ಈಗ, ಸಾಂಸ್ಕøತಿಕವಾಗಿ ಮತ್ತು ನಾಗರಿಕತೆಯ ಸಂಬಂಧಗಳ ದೃಷ್ಟಿಯಿಂದ ಭಾರತಕ್ಕೆ ಅತ್ಯಂತ ನಿಕಟವಾಗಿರುವ ನೇಪಾಳ ಭಾರತೀಯ ಲೂಟಿಯಿಂದ ರಕ್ಷಣೆ ಮತ್ತು ನ್ಯಾಯ ಕೇಳಲು ಅಂತರ್ರಾಷ್ಟ್ರೀಯ ವೇದಿಕೆಗಳಿಗೆ ಹೋಗುವಂತೆ ಮಾಡಲಾಗಿದೆ. ಇದರಿಂದ ಭಾರತದ ಪ್ರತಿಷ್ಠೆಗೆ ಆಗಿರುವ ಅನಾಹುತ ಗಮನಾರ್ಹ.

ಮೋದಿ ಸರಕಾರ ಈ ಬಾಯಿ ಬಡೆಯುವ ಧೋರಣೆಯನ್ನು ನಿಲ್ಲಿಸಬೇಕು. ಅದು ತಕ್ಷಣವೇ ನೇಪಾಳಿ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಗಡಿ ದಾಟುವ ಸ್ಥಳಗಳಲ್ಲಿ ಅಡೆ-ತಡೆಗಳನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಮಾಧೇಸಿಗಳು ಮತ್ತು ಜನಜಾತಿಗಳ ಸಮಸ್ಯೆಗಳನ್ನು ನೇಪಾಳದೊಳಗೇ ರಾಜಕೀಯ ಪ್ರಕ್ರಿಯೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಿ ಕೊಳ್ಳಬೇಕು, ಇದಕ್ಕೆ ಅನುವು ಮಾಡಿಕೊಡಲು ಭಾgತ ಸರಕಾರ ಮಾಧೇಸಿ ಗುಂಪುಗಳ ಮೇಲಿರುವ ತನ್ನ ಪ್ರಭಾವವನ್ನು ಬಳಸಿ ಈ ಉದ್ದೇಶದ ಮಾತುಕತೆಗಳು ಪುನರಾರಂಭವಾಗುವಂತೆ ಮಾಡಬೇಕು.

Donate Janashakthi Media

Leave a Reply

Your email address will not be published. Required fields are marked *