ನವದೆಹಲಿ : ಮೈಥಿಲಿ ಶಿವರಾಮನ್, ದೇಶದ ಮಹಿಳಾ ಆಂದೋಲನದ ಮತ್ತು ತಮಿಳುನಾಡು ಸಿಪಿಐ(ಎಂ)ನ ಹಿರಿಯ ಮುಖಂಡರು ಮೇ 30ರಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷವಾಗಿತ್ತು. ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ.
1970ರ ದಶಕದಲ್ಲಿ ಮೈಧಿಲಿಯವರು ಚೆನ್ನೈ ನಗರದಲ್ಲಿ ಕಾರ್ಮಿಕ ಸಂಘಟನೆ ಮತ್ತು ದುಡಿಯುವ ವರ್ಗದ ಚಳುವಳಿಯಲ್ಲಿ ಒಂದು ಸಕ್ರಿಯ ಪಾತ್ರವನ್ನು ವಹಿಸಿದರು. ಅಲ್ಲದೆ ತಮಿಳುನಾಡಿನಲ್ಲಿ ಅವರು ಜನವಾದಿ ಮಹಿಳಾ ಸಂಘಟನೆಯ ಸ್ಥಾಪಕರಲ್ಲಿ ಒಬ್ಬರು. ಮುಂದೆ ಅಖಿಲ ಭಾರತಮಟ್ಟದಲ್ಲಿ ಸ್ಥಾಪನೆಗೊಂಡ ಎ.ಐ.ಡಿ.ಡಬ್ಲ್ಯು.ಎ.ನ ಉಪಾಧ್ಯಕ್ಷರಾಗಿ ಅವರು ದುಡಿದರು.
ಜಾತಿ ಮತ್ತು ಲಿಂಗ ದಮನದ ವಿರುದ್ಧ ಅವರು ಹಲವು ಹೋರಾಟಗಳಿಗೆ ನೇತೃತ್ವ ನೀಡಿದರು. ಇವುಗಳಲ್ಲಿ ಗಮನಾರ್ಹವಾದದ್ದು ವಚಥಿ ಬುಡಕಟ್ಟು ಮಹಿಳೆಯರ ಹೋರಾಟ. ಇದಕ್ಕೆ ಮೊದಲು ಅವರು 1968ರಲ್ಲಿ ಕಿಲ್ವನ್ಮಣಿಯಲ್ಲಿ ದಲಿತ ಕೃಷಿಕೂಲಿಕಾರರ ಹತ್ಯಾಕಾಂಡದ ಒಂದು ಕಟು ತನಿಖೆಯನ್ನು ನಡೆಸಿದ್ದರು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದೆ.
ಒಬ್ಬ ಸಮರ್ಪಿತ ಮಾರ್ಕ್ಸ್ ವಾದಿಯಾಗಿದ್ದ ಮೈಥಿಲಿ ಎರಡು ದಶಕಗಳಿಗೂ ಹೆಚ್ಚು ಕಾಲ ತಮಿಳುನಾಡು ರಾಜ್ಯಸಮಿತಿಯ ಸದಸ್ಯರಾಗಿ ಕೆಲಸ ಮಾಡಿದರು. ಅವರು ವರ್ಗ ಮತ್ತು ಲಿಂಗ ಸಂಬಂಧಿ ವಿಷಯಗಳ ಮೇಲೆ ಹಲವಾರು ಮಹತ್ವದ ಲೇಖನಗಳು ಮತ್ತು ಕಿರುಪುಸ್ತಕಗಳನ್ನು ತಮಿಳು ಮತ್ತು ಇಂಗ್ಲೀಷಿನಲ್ಲಿ ಬರೆದಿದ್ದಾರೆ.
ಒಂದು ತೀವ್ರ ಕಾಯಿಲೆಯಿಂದಾಗಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅವರು ಓಡಾಡದಂತಾಗಿತ್ತು. ಅವರ ಅಮೂಲ್ಯ ಕೊಡುಗೆಗಳಿಗೆ ಶ್ರದ್ಧಾಂಜಲಿ ಅರ್ಪಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಅವರ ಪತಿ, ಮಗಳು ಮತ್ತು ಕುಟುಂಬದ ಇತರ ಸದಸ್ಯರಿಗೆ ಸಂತಾಪವನ್ನು ವ್ಯಕ್ತಪಡಿಸಿದೆ.