ರಾಣೆಬೇನ್ನೂರ: ತಾಲ್ಲೂಕಿನ ಗುಡಿಹೊನ್ನತಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ದೇವರಗುಡ್ಡ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಅರುಣ್ ಮಾಲತೇಶ ದೇವರಗುಡ್ಡ ಅವರ ಮನೆಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನಿಯೋಗ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಗುಡಿಹೊನ್ನತಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯದಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಕಳೆದ ತಿಂಗಳು ರಾಣೇಬೆನ್ನೂರಿನ ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ಹಾಸ್ಟೆಲ್ ವಿದ್ಯಾರ್ಥಿ ರವಿ ತಳವಾರ ಆತ್ಮಹತ್ಯೆ ಕಾರಣವೇ ತಿಳಿಯದೆ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿರುವುದು ವಿಷಾಧನೀಯ ಸಂಗತಿ ಇಂತಹ ಘಟನೆಗಳಿಂದ ಹಾಸ್ಟೆಲ್ ಗಳಲ್ಲಿ ತಮ್ಮ ಮಕ್ಕಳನ್ನು ಬಿಡಲು ಪಾಲಕರು ಹೆದರಿಕೊಳ್ಳವಂತಹ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯು ದಲಿತ ಸಮುದಾಯದ ಹಿತರಕ್ಷಣೆಗಾಗಿಯೇ ಇರುವ ಬದಲಿಗೆ ಬಲಿ ಪಡೆಯುವ ಬಲಿ ಪೀಠವಾಗುತ್ತಿವೆ. ಇಲಾಖೆಯ ನಿರ್ಲಕ್ಷ್ಯತನ ದಿಂದ ಮತ್ತು ರಾತ್ರಿ ಕಾವಲು ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ಸಿಬ್ಬಂದಿ ಇಲ್ಲದೇ ಇರುವುದೇ ಪ್ರಮುಖ ಕಾರಣವಾಗಿದೆ ಎಂದು ನಾಯಕರು ಆರೋಪಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ದಲಿತರ ಉದ್ಧಾರಕ್ಕಾಗಿ ಇರುವ ಹಣ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಬಾರಿ ಭ್ರಷ್ಟಾಚಾರ ಮಾಡುತ್ತಿರುವುದಕ್ಕೆ ಇದೆ ಹಾಸ್ಟೆಲ್ ನಲ್ಲಿ ಇರುವ ಸಿಸಿ ಕ್ಯಾಮರಾಗಳು ಸರಿ ಇಲ್ಲದೆ ಇರುವುದೆ ಸತ್ಯ ಸಾಕ್ಷಿಯಾಗಿದೆ. ಹಾಸ್ಟೆಲ್ ನಲ್ಲಿ ಇರುವ ಸಿಸಿ ಕ್ಯಾಮರಾದಲ್ಲಿ ವಿದ್ಯಾರ್ಥಿಯ ಚಲನಾ ವಲನಾ ಗಮನಸಿಯಾದರು ಸಾವಿನ ನಿಖರ ಕಾರಣ ತಿಳಿಯಬಹುದು ಎಂದರೆ ಅನೇಕ ತಿಂಗಳಾದರ ಕ್ಯಾಮರಾ ಸರಿಲ್ಲ ಎಂದು ಹೇಳುವ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಓದುವ ವಿಚಾರವಾಗಿ ಮೃತ ವಿದ್ಯಾರ್ಥಿಯನ್ನು ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದಾನೆ ಎಂದು ಸುಳ್ಳು ಅಪಪ್ರಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕನಿಷ್ಠಪಕ್ಷ ಮೃತ ವಿದ್ಯಾರ್ಥಿ ಮನೆಗೆ ಸಾಂತ್ವನ ಹೇಳಲು ಬರದೆ ಇರುವ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರು, ಜಿಲ್ಲಾಡಳಿತ, ತಹಶಿಲ್ದಾರರು, ಸ್ಥಳೀಯ ಶಾಸಕ ವಿರೂಪಾಕ್ಷ ಬಳ್ಳಾರಿ ನಡೆಯನ್ನು ಎಸ್‌ಎಫ್‌ಎ ಪ್ರಬಲವಾಗಿ ವಿರೋಧಿಸಿದೆ.
ಅನುಮಾನಸ್ಪಾದವಾಗಿ ಸಾವನ್ನಪ್ಪಿದ ದಲಿತ ವಿದ್ಯಾರ್ಥಿ ಅರುಣ್ ದೇವರಗುಡ್ಡ ಸಾವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಇಡೀ ಜಿಲ್ಲೆಯ ವಿದ್ಯಾರ್ಥಿಗಳನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿ ಮಾನಸಿಕ ಆರೋಗ್ಯ ಪರೀಕ್ಷಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಪ್ರತಿ ತಿಂಗಳು ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಕೇಳಲು ಪೋಷಕರು, ವಿದ್ಯಾರ್ಥಿಗಳು, ವಿದ್ಯಾರ್ಥ ಸಂಘಟನೆ ಮುಖಂಡರೊಂದಿಗೆ ಸಭೆ ಮಾಡಬೇಕು. ಹಾಸ್ಟೆಲ್ ಗಳಿಗೆ ರಾತ್ರಿ ಕಾವಲುಗಾರ ಸೇರಿದಂತೆ ಸಿಬ್ಬಂದಿ ವರ್ಗದ ನೇಮಕ ಹೆಚ್ಚಿಸಬೇಕು. ಶಾಲಾ ಕಾಲೇಜ್ ಹಾಸ್ಟೆಲ್ ಗಳಿಗೆ ಸೂಕ್ತ ಭದ್ರತೆ ನೀಡಬೇಕು. ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಬೇಕು ಹಾಗೂ ಸರಿಯಾಗಿ ನಿರ್ವಹಿಸಬೇಕು. ಮೃತ ವಿದ್ಯಾರ್ಥಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಎಸ್‌ಎಫ್‌ಎ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅರುಣೋದಯ ಶಿಕ್ಷಣ, ಆರೋಗ್ಯ ಸಂಸ್ಥೆಯ ಹೊನ್ನಮ್ಮ ಎನ್ ಎಸ್, ತಾಲ್ಲೂಕು ಅಧ್ಯಕ್ಷ ಶ್ರೀಧರ ಛಲವಾದಿ, ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಉಪಾಧ್ಯಕ್ಷೆ ವೀಣಾ ಘಂಟೆರ್, ಅರುಣೋದಯ ಸಂಸ್ಥೆಯ ಗಿರೀಶ್ ಎನ್ ಎಸ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ