ಮರು-ವಸಾಹತೀಕರಣವನ್ನು ಸಾಮ್ರಾಜ್ಯಶಾಹಿಯ ಒಂದು ಕಾರ್ಯತಂತ್ರವಾಗಿ ಮಾಡಬೇಕು ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಯುರೋಪಿಯನ್ ನಾಯಕರ ಗುಂಪು ನಂಬುವಂತೆ ಮಾಡಿದ್ದಾರೆ. ಆತನ ಪ್ರಕಾರ ಪಾಶ್ಚಿಮಾತ್ಯ ನಾಗರಿಕತೆಯು ಕಮ್ಯುನಿಸಂ ಮತ್ತು ಅದು ಬೆಂಬಲಿಸಿದ ವಸಾಹತುಶಾಹಿ-ವಿರೋಧಿ ಚಳುವಳಿಗಳಿಂದಾಗಿ ಅನುಭವಿಸಿದ ಹಿನ್ನಡೆಯನ್ನು, ಅಂದರೆ, ವಸಾಹತುಶಾಹಿ-ವಿರೋಧಿ ಹೋರಾಟಗಳ ಫಲವಾಗಿ ಮೂರನೇ ಜಗತ್ತು ಹೊಂದಿದ ಅಭ್ಯುದಯವನ್ನು ತಿರುಗು ಮುರುಗು ಮಾಡಬೇಕಾಗಿದೆ, “ವೈಭವಯುತವಾಗಿದ್ದ ಪಾಶ್ಚಿಮಾತ್ಯ ನಾಗರಿಕತೆ”ಯ ಪುನರುಜ್ಜೀವನವು ವಿಶ್ವದ ಮರು-ವಸಾಹತೀಕರಣದ ಮೇಲೆ ನಿಂತಿದೆ! ಮೂರನೇ ಜಗತ್ತನ್ನು ಸಾಮ್ರಾಜ್ಯಶಾಹಿ ನಿಯಂತ್ರಣಕ್ಕೆ ಒಳಪಡಿಸಬೇಕೆನ್ನುವ ನೇರವಾದ ಕರೆಯಿದು. ವೆನೆಜುವೆಲಾದ ಅಧ್ಯಕ್ಷರ ಅಪಹರಣ ಮತ್ತು ಇರಾನ್ ಮೇಲಿನ ದಾಳಿ, ಇವೆರಡೂ ಅದಕ್ಕೆ ಉದಾಹರಣೆಗಳು. ಹಾಗೆಯೇ ಅಮೇರಿಕದ ಸರಕುಗಳಿಗೆ ಬಂಧಿತ ಮಾರುಕಟ್ಟೆಗಳನ್ನು ಸೃಷ್ಟಿಸುವ ಭಾರತ-ಯುಎಸ್ ವ್ಯಾಪಾರ ಒಪ್ಪಂದದಂತಹ “ಅಸಮಾನ ಒಪ್ಪಂದ” ಗಳನ್ನು ಹೇರುವ ಪ್ರಯತ್ನ ಕೂಡ. ಮೂರನೆಯ ಜಗತ್ತಿನ ದೇಶಗಳನ್ನು ಮತ್ತೆ ವಸಾಹತುಗಳಾಗಿ ಮಾಡಲು ಎಲ್ಲ ಸಾಮ್ರಾಜ್ಯಶಾಹಿ ದೇಶಗಳ ಒಂದು ಸಂಯೋಜಿತ ಚಾಲನೆಯನ್ನು ಕಾಣುವ ಹೊಸ್ತಿಲಲ್ಲಿದ್ದೇವೆ ಎಂದು ತೋರುತ್ತದೆ.
– ಪ್ರೊ. ಪ್ರಭಾತ್ ಪಟ್ನಾಯಕ್
– ಅನು: ಕೆ ಎಂ ನಾಗರಾಜ್
ಮೂರನೇ ಜಗತ್ತಿನ ದೇಶಗಳ ಸಾರ್ವಭೌಮತ್ವದ ಪರಿಕಲ್ಪನೆಯನ್ನೇ ರದ್ದುಗೊಳಿಸಲು ಸಾಮ್ರಾಜ್ಯಶಾಹಿಯು ಈಗ ಎಲ್ಲ ಅಂತರರಾಷ್ಟ್ರೀಯ ಕಾನೂನು ಕಟ್ಟಳೆಗಳನ್ನೂ ಉಲ್ಲಂಘಿಸಿ ಪ್ರಯತ್ನಿಸುತ್ತಿದೆ ಎಂಬುದು ಅಮೆರಿಕ ಮತ್ತು ಇಸ್ರೇಲ್ “ಆಳ್ವಿಕೆಯ ಬದಲಾವಣೆ”ಯ ಉದ್ದೇಶದಿಂದ ಇರಾನ್ ಮೇಲೆ ನಡೆಸಿದ ಬಾಂಬ್ ದಾಳಿಯಿಂದ ಸ್ಪಷ್ಟವಾಗುತ್ತದೆ. ತನಗೆ ಒಗ್ಗದ ಆಳ್ವಿಕೆಯನ್ನು ಬದಲಾಯಿಸುವುದನ್ನೇ ಒಂದು ಸ್ಪಷ್ಟ ಉದ್ದೇಶವಾಗಿ ಹೊಂದಿದ್ದ ಸಾಮ್ರಾಜ್ಯಶಾಹಿಯು, ಇಲ್ಲಿಯವರೆಗೂ, ಅಂಥಹ ಆಳ್ವಿಕೆಗಳು “ಸಮೂಹ ವಿನಾಶದ ಆಯುಧ”ಗಳನ್ನು ಹೊಂದಿವೆ ಅಥವಾ ಮಾದಕವಸ್ತು ವ್ಯಾಪಾರದಲ್ಲಿ ತೊಡಗಿವೆ ಎಂಬಂತಹ ಕೆಲವು ನೆಪಗಳ ಅಡಿಯಲ್ಲಿ ಅವುಗಳ ಮೇಲೆ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ನಿಜ ಕಾರಣಗಳನ್ನು ಮರೆಮಾಚಿತ್ತು.
ಈಗ, ಇರಾನ್ ಪ್ರಕರಣದಲ್ಲಿ, ಸಾಮ್ರಾಜ್ಯಶಾಹಿ ಮಾನ ಮುಚ್ಚಿಕೊಳ್ಳುವ ಅಂತಹ ಸಬೂಬು ನೀಡಲೂ ಹೋಗಿಲ್ಲ. ವಿವಾದದ ವಿಷಯವಾದ ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳು ನಡೆಯುತ್ತಿರುವಾಗ ಮತ್ತು ಈ ಮಾತುಕತೆಗಳು ಪ್ರಗತಿ ಸಾಧಿಸುತ್ತಿರುವಾಗಲೂ ಇರಾನಿನ ಮೇಲೆ ಬಾಂಬ್ ದಾಳಿ ಮಾಡಲಾಗಿದೆ. ಆದ್ದರಿಂದ, ಯುಎಸ್ ತನ್ನ ಬಾಂಬ್ ದಾಳಿಯ ಮೂಲಕ, ವಸಾಹತುಶಾಹಿ ಯುಗ ಅಂತ್ಯವಾದ ನಂತರ ಮೊದಲ ಬಾರಿಗೆ, ಮೂರನೇ ಜಗತ್ತಿನ ಯಾವುದೇ ದೇಶದೊಳಗೆ “ಆಳ್ವಿಕೆಯ ಬದಲಾವಣೆ”ಯನ್ನು ತನಗೆ ಬೇಕಾದಾಗ ತರುವ ಹಕ್ಕನ್ನು ದಕ್ಕಿಸಿಕೊಂಡಿದೆ.
ಇದನ್ನೂ ಓದಿ: ಹಿಂದಿಯಲ್ಲಿ : ಕರವೇ ಪ್ರತಿಭಟನೆ, ರಾಜ್ಯದ ಹಲವು ನಗರಗಳಲ್ಲಿ ಆಕ್ರೋಶ
ಯುಎಸ್ ತನ್ನ ಬಾಂಬ್ ದಾಳಿಯ ಮೂಲಕ, ವಸಾಹತುಶಾಹಿ ಯುಗ ಅಂತ್ಯವಾದ ನಂತರ ಮೊದಲ ಬಾರಿಗೆ, ಮೂರನೇ ಜಗತ್ತಿನ ಯಾವುದೇ ದೇಶದೊಳಗೆ “ಆಳ್ವಿಕೆಯ ಬದಲಾವಣೆ”ಯನ್ನು ತನಗೆ ಬೇಕಾದಾಗ ತರುವ ಹಕ್ಕನ್ನು ದಕ್ಕಿಸಿಕೊಂಡಿದೆ.
ಇಸ್ಲಾಮಿಕ್ ಗಣರಾಜ್ಯವು ಇರಾನಿನ ಜನ ಸಮೂಹದ ಬೆಂಬಲ ಪಡೆದಿದೆಯೇ ಅಥವಾ ಅದು ದಮನಕಾರಿಯಾಗಿದೆಯೇ ಅಥವಾ ಅದು ಮುಕ್ತ ವಾಕ್ಸ್ವಾತಂತ್ರ್ಯಕ್ಕೆ ಅವಕಾಶ ಕೊಟ್ಟಿದೆಯೇ ಅಥವಾ ಅದು ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುತ್ತದೆಯೇ ಎಂಬುದು ಇಲ್ಲಿನ ವಿಷಯವಲ್ಲ. ಇಲ್ಲಿನ ವಿಷಯವೆಂದರೆ, ತಮ್ಮ ದೇಶದ “ಆಳ್ವಿಕೆ ಬದಲಾವಣೆ”ಯನ್ನು ನಿರ್ಧರಿಸುವ ಹಕ್ಕು ಮತ್ತು ಅದಕ್ಕಾಗಿ ಕೆಲಸ ಮಾಡುವ ಹಕ್ಕು ಇರುವುದು ಇರಾನ್ನ ಜನರಿಗೆ ಮಾತ್ರವೇ ಎಂಬುದು. “ಆಳ್ವಿಕೆ ಬದಲಾವಣೆ” ಯುಎಸ್ ಸಾಮ್ರಾಜ್ಯಶಾಹಿಯ ಕೆಲಸವಲ್ಲ. ಮತ್ತೊಂದು ದೇಶದ ವ್ಯವಹಾರಗಳಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಲು ಯುಎಸ್ ಸಾಮ್ರಾಜ್ಯಶಾಹಿಗೆ ಯಾವ ಅಧಿಕಾರವೂ ಇಲ್ಲ. ಒಂದು ದೇಶದ ಸಾರ್ವಭೌಮತ್ವ ಎಚಿದರೆ ಇದೇ. ಎರಡನೇ ಮಹಾಯುದ್ಧದ ನಂತರ ಮೂರನೇ ಜಗತ್ತಿನಾದ್ಯಂತ ವಸಾಹತುಶಾಹಿ ವಿರೋಧಿ ಹೋರಾಟಗಳು ತಮ್ಮ ತಮ್ಮ ದೇಶಗಳಿಗಾಗಿ ಸಾಧಿಸಿದ್ದು ಇದೇ ಈ ಸಾರ್ವಭೌಮತ್ವವನ್ನೇ. ಈ ಸಾರ್ವಭೌಮತ್ವವನ್ನು ಹಾಳುಗೆಡವಲು ಇಲ್ಲಿಯವರೆಗೂ ಅನೇಕ ಗುಟ್ಟಿನ ಕುಟಿಲ ತಂತ್ರಗಳಲ್ಲಿ ತೊಡಗಿದ್ದ ಸಾಮ್ರಾಜ್ಯಶಾಹಿಯು, ಈಗ ಅದನ್ನು ಬಹಿರಂಗವಾಗಿ ಮಿಲಿಟರಿ ಹಸ್ತಕ್ಷೇಪದ ಮೂಲಕ ಮಾಡುತ್ತಿದೆ. ಇದು ರಾಷ್ಟ್ರೀಯ ಸಾರ್ವಭೌಮತ್ವದ ಮೇಲೆ ನೆಡೆಸುವ ಒಂದು ನೇರ ದಾಳಿಯಾಗಿರುವುದರಿಂದ, ಇದು ವಸಾಹತೀಕರಣವನ್ನು ಕಳಚಿ ಹಾಕುವ ಪ್ರÀಕ್ರಿಯೆಯನ್ನು ಪರಿಣಾಮಕಾರಿಯಾಗಿ ತಿರುಗು ಮುರುಗು ಮಾಡಲು ದಾರಿ ಮಾಡಿಕೊಡುವ ಒಂದು ಹೊಸ ಅಧ್ಯಾಯವನ್ನು ಚರಿತ್ರೆಯಲ್ಲಿ ತೆರೆಯುತ್ತದೆ.

ಸಾಮ್ರಾಜ್ಯಶಾಹಿಗೆ ಧೈರ್ಯ ಬಂದದ್ದು ಹೇಗೆ?
ತಕ್ಷಣವೇ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ: ಈ ರೀತಿಯ ದಾಳಿಯನ್ನು ಕೈಗೊಳ್ಳುವ ಧೈರ್ಯ ಸಾಮ್ರಾಜ್ಯಶಾಹಿಗೆ ಬಂದದ್ದಾದರೂ ಹೇಗೆ? ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಅದು ಅನಿವಾರ್ಯ ಎಂಬ ಅನಿಸಿಕೆ ಸಾಮ್ರಾಜ್ಯಶಾಹಿಗೆ ಬಂದದ್ದಾರೂ ಹೇಗೆ? ಮೊದಲನೆಯ ಪ್ರಶ್ನೆಗೆ ಉತ್ತರ ಸರಳವಾಗಿದೆ: ಸೋವಿಯತ್ ಒಕ್ಕೂಟದ ಪತನವು ಮತ್ತು ಶೀತಲ ಸಮರದ ಅಂತ್ಯವು ಅದನ್ನು ಮೊದಲಿನಂತಹ ನಿರ್ಬಂಧಗಳಿಲ್ಲದ ಒಂದು ಸ್ಥಾನಕ್ಕೆ ಅದನ್ನು ತಂದಿದೆ. ಉದಾಹರಣೆಗೆ, ಸಾಮ್ರಾಜ್ಯಶಾಹಿಯು ಈಗ ಕ್ಯೂಬಾದಲ್ಲಿ ಆಳ್ವಿಕೆ ಬದಲಾವಣೆ”ಯ ಬಗ್ಗೆ ಮಾತನಾಡುತ್ತಿದೆ. ಆದರೆ, ಅದೇ ಕ್ಯೂಬಾದ 1962ರ ಕ್ಷಿಪಣಿ ಬಿಕ್ಕಟ್ಟಿನ ಸಮಯದಲ್ಲಿದ್ದ ಪರಿಸ್ಥಿತಿಯೊಂದಿಗೆ ಹೋಲಿಸಿದರೆ, ಅದರ ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ವ್ಯತಿರಿಕ್ತವಾಗಿರುವುದು ಗಮನಾರ್ಹವಾಗಿದೆ. ಆ ಸಮಯದಲ್ಲಿ ಸೋವಿಯತ್ ಒಕ್ಕೂಟವು ಕ್ಯೂಬಾದ ಮೇಲೆ ಅಮೆರಿಕ ವಿಧಿಸಿದ ದಿಗ್ಬಂಧನವನ್ನು ಧಿಕ್ಕರಿಸುವಂತೆ (ಅಂದರೆ, ಕ್ಯೂಬಾ ದ್ವೀಪವನ್ನು ಸುತ್ತುವರೆದಿದ್ದ ಅಮೆರಿಕದ ಯುದ್ಧ ನೌಕೆಗಳು ಸೋವಿಯತ್ ಒಕ್ಕೂಟದ ಹಡಗುಗಳಿಗೆ ಅಡ್ಡಿಪಡಿಸಿದರೆ) ಅವುಗಳನ್ನು ಹೊಡೆದುರುಳಿಸುವಂತೆ ಕ್ಯೂಬಾದ ಕಡೆಗೆ ಸಾಗುತ್ತಿದ್ದ ತನ್ನ ಹಡಗುಗಳಿಗೆ ಆದೇಶಿಸಿತ್ತು.
ಈ ಮುಖಾಮುಖಿಯು ಪರಮಾಣು ಯುದ್ಧದಲ್ಲಿ ಪರಿಣಮಿಸುವ ಅಪಾಯವಿತ್ತು. ಅಂತಹ ಒಂದು ಸಂಭವನೀಯತೆಯನ್ನು ತಪ್ಪಿಸಲು ಯುಎಸ್ ರಾಜಿ ಮಾಡಿಕೊಳ್ಳಬೇಕಾಯಿತು. ಈ ಪ್ರಕರಣದ ಒಂದು ಫಲಿತಾಂಶವೆಂದರೆ, ಕ್ಯೂಬಾದಲ್ಲಿ ಸಾಮ್ರಾಜ್ಯಶಾಹಿಯ ನೇರ ಮಿಲಿಟರಿ ಹಸ್ತಕ್ಷೇಪದ ನಿಲುಗಡೆ. ಸಾಮ್ರಾಜ್ಯಶಾಹಿಯ ಮೇಲೆ ಆ ರೀತಿಯ ಒತ್ತಡ ಈಗಿಲ್ಲ. ಬಹಳ ಸಮಯದಿಂದಲೂ ಈ ರೀತಿಯ ಒತ್ತಡ ಇಲ್ಲ ಎಂಬುದೇನೊ ನಿಜ. ಆದರೆ, ನಾನು ಕೆಳಗೆ ವಾದಿಸುವಂತೆ, ಸಾಮ್ರಾಜ್ಯಶಾಹಿಯು ಈಗ ಒಂದು ಬಿಕ್ಕಟ್ಟಿನಲ್ಲಿರುವುದರಿಂದ, ಅದು ಮೂರನೇ ಜಗತ್ತನ್ನು ಮತ್ತೆ ತನ್ನ ವಸಾಹತುವನ್ನಾಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಇದು ಎರಡನೆಯ ಪ್ರಶ್ನೆಗೆ ಉತ್ತರವಾಗುತ್ತದೆ.
ಸಾಮ್ರಾಜ್ಯಶಾಹಿಯ ಪ್ರಸ್ತುತ ಬಿಕ್ಕಟ್ಟು ವಿಭಿನ್ನವಾದ ಎರಡು ಅಂಶಗಳಿಂದ ಕೂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಅದರ ಸ್ವರೂಪವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಮೊದಲನೆಯದು, ಕಳೆದ ಮೂರು-ನಾಲ್ಕು ದಶಕಗಳಲ್ಲಿ, ರಾಷ್ಟ್ರೀಯ ವರಮಾನದಲ್ಲಿ, ಮುಂದುವರಿದ ಬಂಡವಾಳಶಾಹಿ ದೇಶಗಳ ಕಾರ್ಮಿಕರ ಪಾಲು ಮತ್ತು ಮೂರನೇ ಜಗತ್ತಿನ ದೇಶಗಳ ದುಡಿಯುವ ಜನರ ಪಾಲು ಒಂದು ತೀವ್ರವಾದ ಕುಸಿತಕ್ಕೆ ಒಳಗಾಗಿದೆ. ಮತ್ತು, ಒಂದು ಯೂನಿಟ್ ಆರ್ಥಿಕ ಮಿಗುತಾಯದಿಂದ ಆಗುವ ಬಳಕೆಯು ಕಾರ್ಮಿಕರ ಅಥವಾ ದುಡಿಯುವ ಜನರ ವರಮಾನದ ಒಂದು ಯೂನಿಟ್ನಿಂದ ಆಗುವ ಬಳಕೆಗಿಂತ ಕಡಿಮೆ ಇರುವುದರಿಂದ, ಆರ್ಥಿಕ ಮಿಗುತಾಯದ ಕಡೆಗೆ ಹೋಗುತ್ತಿರುವ ವರಮಾನದ ಈ ಪುನರ್ವಿತರಣೆಯು, ಒಟ್ಟು ಬೇಡಿಕೆಗೆ ಹೋಲಿಸಿದರೆ, ಒಂದು ಅತಿ-ಉತ್ಪಾದನಾ ಪ್ರವೃತ್ತಿಗೆ ಕಾರಣವಾಗುತ್ತದೆ ಮತ್ತು ಅದರಿಂದಾಗಿ ನಿರುದ್ಯೋಗದ ಏರಿಕೆಯಾಗುತ್ತದೆ (ಇದನ್ನು ಕೆಲಸದ ಭಾಗವಹಿಸುವಿಕೆಯ ದರದ ಕುಸಿತ ಎಂದು, ಯುಎಸ್£ಲ್ಲಿ ಮಾಡುತ್ತಿರುವಂತೆ ಮರೆಮಾಚಬಹುದು). ಇದು ದುಡಿಯುವ ಜನರ ಸಂಕಷ್ಟಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಹಣಕಾಸು ವ್ಯವಸ್ಥೆಯ ಸ್ಥಿರತೆಗೆ ಬೆದರಿಕೆ
ಸಾಮ್ರಾಜ್ಯಶಾಹಿಯ ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿರುವ ಎರಡನೆಯ ಅಂಶವೆಂದರೆ, ಮೊದಲನೆಯ ಮಹಾಯುದ್ಧದ ಹಿಂದಿನ ವಸಾಹತುಶಾಹಿಯು ತನ್ನ ಸಾಮ್ರಾಜ್ಯದ “ಮಿಗುತಾಯವನ್ನು ಬರಿದುಮಾಡುವ” ಮೂಲಕ ಅಥವಾ “ಅಪ-ಕೈಗಾರಿಕೀಕರಣ”ವನ್ನು ಹೇರುವ ಮೂಲಕ ತನ್ನ ಪಾವತಿ ಶೇಷದ ಕೊರತೆಯನ್ನು ನೀಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿತ್ತು. ಅಂಥಹ ಒಂದು ಅನುಕೂಲವನ್ನು ಇಂದಿನ ಪ್ರಮುಖ ಸಾಮ್ರಾಜ್ಯಶಾಹಿ ದೇಶವು ಹೊಂದಿಲ್ಲ ಎಂಬುದನ್ನು ಮತ್ತು ಒಂದು ಪ್ರಮುಖ ಸಾಮ್ರಾಜ್ಯಶಾಹಿ ದೇಶವು ಅನಿವಾರ್ಯವಾಗಿ ಪಾವತಿ ಶೇಷದ ಕೊರತೆಯನ್ನು ಸದಾ ಹೊಂದಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಪ್ರಸ್ತುತ ಪ್ರಕರಣದಲ್ಲಿ ಪಾವತಿ ಶೇಷದ ಕೊರತೆಗೆ ಮುಖ್ಯವಾದ ಕಾರಣವೆಂದರೆ, ಅಮೆರಿಕವು ತನ್ನ ಜಾಗತಿಕ ಪ್ರಾಬಲ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ವಿಶ್ವದ 80 ದೇಶಗಳಲ್ಲಿ 750ಕ್ಕೂ ಹೆಚ್ಚು ಮಿಲಿಟರಿ ನೆಲೆಗಳನ್ನು ಹೊಂದಿದೆ ಎಂಬುದು. ಮೊದಲನೆಯ ಮಹಾಯುದ್ಧಕ್ಕೂ ಮುಂಚಿನ ಅವಧಿಯಲ್ಲಿ ಪಾವತಿ ಶೇಷದ ಕೊರತೆಯನ್ನು ಆ ಕಾಲದ ಪ್ರಮುಖ ಸಾಮ್ರಾಜ್ಯಶಾಹಿ ಶಕ್ತಿಯಾಗಿದ್ದ ಬ್ರಿಟನ್ ತನ್ನ ವಸಾಹತುಗಳ ವೆಚ್ಚದಲ್ಲಿ ಸರಿದೂಗಿಸಿಕೊಂಡಿತ್ತು. ತನ್ನದೇ ಆದ ವಸಾಹತುಶಾಹಿ ಸಾಮ್ರಾಜ್ಯವನ್ನು ಹೊಂದಿರದ ಇಂದಿನ ಪ್ರಮುಖ ಸಾಮ್ರಾಜ್ಯಶಾಹಿ ಶಕ್ತಿಯಾದ ಯುಎಸ್ ಡಾಲರ್ಗಳನ್ನು ಮುದ್ರಿಸುವ ಮೂಲಕ ತನ್ನ ಪಾವತಿ ಶೇಷದ ಕೊರತೆಯನ್ನು ನೀಗಿಸಿಕೊಳ್ಳುತ್ತಿದೆ. ಹಾಗಾಗಿ, ಅಮೆರಿಕವು ಇಂದು ವಿಶ್ವದ ಅತಿ ದೊಡ್ಡ ಸಾಲಗಾರ ದೇಶವಾಗಿದೆ ಮತ್ತು ವಿಶ್ವವು ಡಾಲರ್ಗಳು ಅಥವಾ ಡಾಲರ್-ಮೌಲ್ಯದ ಸ್ವತ್ತುಗಳಿಂದ ತುಂಬಿ ಹೋಗಿದೆ. ಇದು ಅಮೇರಿಕದ ಬಾಧ್ಯತೆಯನ್ನು ನಿರೂಪಿಸುತ್ತದೆ. ಈ ಪರಿಸ್ಥಿತಿಯು ಬಂಡವಾಳಶಾಹಿ ಜಗತ್ತಿನ ಹಣಕಾಸು ವ್ಯವಸ್ಥೆಯ ಸ್ಥಿರತೆಗೆ ಒಂದು ಭಾರಿ ಬೆದರಿಕೆಯಾಗಿ ಪರಿಣಮಿಸಿದೆ.
ತನ್ನದೇ ಆದ ವಸಾಹತುಶಾಹಿ ಸಾಮ್ರಾಜ್ಯವನ್ನು ಹೊಂದಿರದ ಇಂದಿನ ಪ್ರಮುಖ ಸಾಮ್ರಾಜ್ಯಶಾಹಿ ಶಕ್ತಿಯಾದ ಯುಎಸ್ ಡಾಲರ್ಗಳನ್ನು ಮುದ್ರಿಸುವ ಮೂಲಕ ತನ್ನ ಪಾವತಿ ಶೇಷದ ಕೊರತೆಯನ್ನು ನೀಗಿಸಿಕೊಳ್ಳುತ್ತಿದೆ. ಹಾಗಾಗಿ, ಅಮೆರಿಕವು ಇಂದು ವಿಶ್ವದ ಅತಿ ದೊಡ್ಡ ಸಾಲಗಾರ ದೇಶವಾಗಿದೆ ಮತ್ತು ಈ ಪರಿಸ್ಥಿತಿಯು ಬಂಡವಾಳಶಾಹಿ ಜಗತ್ತಿನ ಹಣಕಾಸು ವ್ಯವಸ್ಥೆಯ ಸ್ಥಿರತೆಗೆ ಒಂದು ಭಾರಿ ಬೆದರಿಕೆಯಾಗಿ ಪರಿಣಮಿಸಿದೆ.
ಡಾಲರ್ನಷ್ಟು ಅತಿ ಹೆಚ್ಚು ಬಳಕೆಯಲ್ಲಿರುವ ಕರೆನ್ಸಿಯು ಬೇರೆ ಯಾವುದೂ ಇಲ್ಲದಿರುವುದರಿಂದ, ಡಾಲರ್ಗೆ ಯಾವ ಬೆದರಿಕೆಯೂ ಇಲ್ಲ ಎಂದು ಹೇಳಲಾಗುತ್ತದೆ. ಆದರೆ, ಈ ಅಭಿಪ್ರಾಯವು ತಪ್ಪಾಗಿದೆ: ಯಾವ ಕರೆನ್ಸಿಯಿಂದಲೂ ಒಂದು ಬಲವಾದ ಬೆದರಿಕೆ ಇಲ್ಲದೇ ಇದ್ದರೂ ಸಹ, ಡಾಲರ್ ರೂಪದಿಂದ ಸರಕುಗಳತ್ತ ಹಠಾತ್ತಾಗಿ ಹೊರಳುವ ಸಾಧ್ಯತೆಯಂತೂ ಇದ್ದೇ ಇರುತ್ತದೆ ಮತ್ತು ಈ ಬದಲಾವಣೆಯು ಒಂದು ಅಲ್ಪಾವಧಿಯವರೆಗೆ ಸಂಭವಿಸಿದರೂ, ಅದು ಬಂಡವಾಳಶಾಹಿ ಜಗತ್ತಿನಲ್ಲಿ ಭಾರಿ ಹಣದುಬ್ಬರವನ್ನು ಉಂಟುಮಾಡಲು ಕಾರಣವಾಗುತ್ತದೆ. 1970ರ ದಶಕದ ಆದಿ ಭಾಗದಲ್ಲಿ ನಿಖರವಾಗಿ ಸಂಭವಿಸಿದ್ದ ವಿದ್ಯಮಾನ ಇದುವೇ. ಈ ಹಣದುಬ್ಬರವೇ ಥ್ಯಾಚರಿಸಂ ಮತ್ತು ರೆಗನೋಮಿಕ್ಸ್ನ ಉದಯದ ಹಿನ್ನೆಲೆಯಾಗಿತ್ತು ಮತ್ತು ಅದನ್ನು ಎದುರಿಸುವಲ್ಲಿ ಅವರು ತಮ್ಮ ತಮ್ಮ ದೇಶಗಳಲ್ಲಿ ಭಾರಿ ನಿರುದ್ಯೋಗವನ್ನು ಸೃಷ್ಟಿಸಿದ್ದರು ಮತ್ತು ಕಾರ್ಮಿಕರ ಮೇಲಿನ ಈ ಹೇರಿಕೆಯು ಯುದ್ಧಾನಂತರದ ಅವಧಿಯಲ್ಲಿ ಒಂದು ಗಮನಾರ್ಹ ಮಟ್ಟದ ಆರ್ಥಿಕ ಉತ್ಕರ್ಷವನ್ನು ಅವರು ಅನುಭವಿಸಿದ ಪರಿಸ್ಥಿತಿಯಲ್ಲಿ ಬಂದಿತ್ತು. ಆದರೆ, ಪ್ರಸ್ತುತದಲ್ಲಿ ಕಾರ್ಮಿಕರು ಅದಾಗಲೇ ತೀವ್ರ ಸಂಕಷ್ಟಗಳಿಗೆ ಗುರಿಯಾಗಿದ್ದಾರೆ. ಆದ್ದರಿಂದ, ದುಡಿಯುವ ಜನರ ಪಾಲು ತೀವ್ರವಾಗಿ ಕುಸಿದಿರುವ ಪರಿಸ್ಥಿತಿಯಲ್ಲಿ ಹಣದುಬ್ಬರವನ್ನು ಎದುರಿಸುವ ಸಲುವಾಗಿ ನಿರುದ್ಯೋಗವನ್ನು ಹೆಚ್ಚಿಸುವ ಯಾವುದೇ ಕ್ರಮವು ವ್ಯವಸ್ಥೆಯ ಸಾಮಾಜಿಕ ಸ್ಥಿರತೆಯನ್ನು ಬಹಳವಾಗಿ ಅಸ್ತವ್ಯಸ್ತಗೊಳಿಸುತ್ತದೆ.
ಮರು-ವಸಾಹತೀಕರಣದ ಕಾರ್ಯತಂತ್ರ
ಈ ಸನ್ನಿವೇಶದಲ್ಲಿ ಅಂತಹ ಬೆದರಿಕೆಯನ್ನು ತಡೆಗಟ್ಟಲು ಸಾಮ್ರಾಜ್ಯಶಾಹಿಯ ಪ್ರತಿಕ್ರಿಯೆಯು ಎರಡು ಭಾಗಗಳನ್ನು ಹೊಂದಿದೆ: ಯುಎಸ್ ನಲ್ಲಿ ಟ್ರಂಪ್ ಆಡಳಿತದ ರೀತಿಯ ನವ-ಫ್ಯಾಸಿಸ್ಟ್ ಆಳ್ವಿಕೆಯನ್ನು ಸ್ಥಾಪಿಸುವುದು (ಮತ್ತು ಬೇರೆಡೆಗಳಲ್ಲಿ ಇದೇ ರೀತಿಯ ಆಡಳಿತಗಳನ್ನು ಅಥವಾ ಸದ್ಯೋ-ಭವಿಷ್ಯದಲ್ಲಿ ಇದೇ ರೀತಿಯ ಆಡಳಿತಗಳನ್ನು ಸ್ಥಾಪಿಸುವುದು) ಒಂದು ಭಾಗ. ವಿಧೇಯ ಆಡಳಿತಗಳನ್ನು ಸ್ಥಾಪಿಸುವ ಮೂಲಕ ವಿಶ್ವಾದ್ಯಂತ ವಸಾಹತುಶಾಹಿ ಶೈಲಿಯ ಪ್ರಾಬಲ್ಯವನ್ನು ಪುನಃಸ್ಥಾಪಿಸುವ ಪ್ರಯತ್ನಗಳು ಮತ್ತೊಂದು ಭಾಗ. ವೆನೆಜುವೆಲಾದ ನಿಕೋಲಸ್ ಮಡುರೊ ಅವರ ಕ್ರಿಮಿನಲ್ ಅಪಹರಣ ಮತ್ತು ಪಹ್ಲವಿ ರಾಜವಂಶದ ಸಂತತಿಯು ಅಧಿಕಾರ ವಹಿಸಿಕೊಳ್ಳಲು ಸಿದ್ಧವಾಗಿ ಕಾಯುತ್ತಿರುವ ಇರಾನ್ ಮೇಲಿನ ದಾಳಿ, ಇವೆರಡೂ ಅಂತಹ ಮರು-ವಸಾಹತೀಕರಣದ ಉದಾಹರಣೆಗಳಾಗುತ್ತವೆ. ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ ಮತ್ತು ಇರಾನ್, ಇವೆರಡೂ ತೈಲ-ಸಮೃದ್ಧ ದೇಶಗಳೇ. ಅವುಗಳ ತೈಲ ನಿಕ್ಷೇಪಗಳನ್ನು ಅಮೇರಿಕನ್ ಕಂಪನಿಗಳು ವಶಪಡಿಸಿಕೊಂಡಾಗ, ಅವುಗಳ ಮಿಗುತಾಯವನ್ನು ಬರಿದುಮಾಡಿ ಅದನ್ನು ಈ ಸಲ ಯುಎಸ್ಗೆ ಕೊಂಡೊಯ್ಯುವ ದಾರಿ ತೆರೆಯುತ್ತದೆ. ಇದು ಅಮೆರಿಕದ ಪಾವತಿ ಶೇಷದ ಸಮಸ್ಯೆಯನ್ನು ಹಗುರಗೊಳಿಸುತ್ತದೆ.
ಮರು-ವಸಾಹತೀಕರಣವು ತೈಲ-ಸಮೃದ್ಧ ದೇಶಗಳಿಂದ ಮಿಗುತಾಯವನ್ನು ಹೊರತೆಗೆಯುವುದಕ್ಕೆ ಮಾತ್ರವೇ ಸೀಮಿತವಾಗುವುದಿಲ್ಲ. ಅದು ವಸಾಹತುಶಾಹಿ ಕಾಲದಲ್ಲಿ ಇದ್ದ ಹಾಗೆ ಅಮೇರಿಕದ ಸರಕುಗಳಿಗೆ ಬಂಧಿತ ಮಾರುಕಟ್ಟೆಗಳನ್ನು ಸೃಷ್ಟಿಸುವ ಭಾರತ-ಯುಎಸ್ ವ್ಯಾಪಾರ ಒಪ್ಪಂದದಂತಹ “ಅಸಮಾನ ಒಪ್ಪಂದಗಳನ್ನು” ಹೇರಲು ಪ್ರಯತ್ನಿಸುವ ರೂಪವನ್ನು ತೆಗೆದುಕೊಳ್ಳುತ್ತದೆ. ಮರು-ವಸಾಹತೀಕರಣದ ಈ ಪ್ರಯತ್ನದೊಂದಿಗೆ ಸಾಮ್ರಾಜ್ಯಶಾಹಿಯು ತನ್ನ ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ವಿಷಯವಲ್ಲ; ಮರು-ವಸಾಹತೀಕರಣವು ಬಿಕ್ಕಟ್ಟಿನಿಂದ ಹೊರಬರುವ ಮಾರ್ಗ ಎಂದು ಅದು ನಂಬುತ್ತದೆ ಮತ್ತು ಅದುವೇ ಮುಖ್ಯವಾದ ವಿಷಯ.
ಮರು-ವಸಾಹತೀಕರಣವು ತೈಲ-ಸಮೃದ್ಧ ದೇಶಗಳಿಂದ ಮಿಗುತಾಯವನ್ನು ಹೊರತೆಗೆಯುವುದಕ್ಕೆ ಮಾತ್ರವೇ ಸೀಮಿತವಾಗುವುದಿಲ್ಲ. ಅದು ವಸಾಹತುಶಾಹಿ ಕಾಲದಲ್ಲಿ ಇದ್ದ ಹಾಗೆ ಅಮೇರಿಕದ ಸರಕುಗಳಿಗೆ ಬಂಧಿತ ಮಾರುಕಟ್ಟೆಗಳನ್ನು ಸೃಷ್ಟಿಸುವ ಭಾರತ-ಯುಎಸ್ ವ್ಯಾಪಾರ ಒಪ್ಪಂದದಂತಹ “ಅಸಮಾನ ಒಪ್ಪಂದಗಳನ್ನು” ಹೇರಲು ಪ್ರಯತ್ನಿಸುವ ರೂಪವನ್ನು ತೆಗೆದುಕೊಳ್ಳುತ್ತದೆ.
ಮರು-ವಸಾಹತೀಕರಣವನ್ನು ಸಾಮ್ರಾಜ್ಯಶಾಹಿಯ ಒಂದು ಕಾರ್ಯತಂತ್ರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಆರಂಭದಲ್ಲಿ ಈ ಬಗ್ಗೆ ಸಂದೇಹವಿದ್ದ ಯುರೋಪಿಯನ್ ನಾಯಕರ ಗುಂಪಿಗೆ ಇತ್ತೀಚೆಗೆ ಮಾರಾಟ ಮಾಡಿದ್ದಾರೆ. ವಿಷಯವನ್ನು ಸುತ್ತಿ ಬಳಸಿ ಹೇಳಿದರಾದರೂ ಅವರ ಇಂಗಿತ ಸ್ಪಷ್ಟವಾಗಿಯೇ ಇತ್ತು. ಖ್ಯಾತಿವೆತ್ತ ಪಾಶ್ಚಿಮಾತ್ಯ ನಾಗರಿಕತೆಯು ಇತ್ತೀಚಿನ ವರ್ಷಗಳಲ್ಲಿ ಕಮ್ಯುನಿಸಂನ ಉದಯ ಮತ್ತು ಕಮ್ಯುನಿಸಂ ಬೆಂಬಲಿಸಿದ ವಸಾಹತುಶಾಹಿ-ವಿರೋಧಿ ಚಳುವಳಿಗಳಿಂದಾಗಿ ಅನುಭವಿಸಿದ ಹಿನ್ನಡೆಯನ್ನು ಈಗ ತಿರುಗು ಮುರುಗು ಮಾಡಬೇಕಾಗಿದೆ ಎಂಬುದು ಅವರ ವಾದವಾಗಿತ್ತು.
ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media
ಇದರರ್ಥವೆಂದರೆ, ವಸಾಹತುಶಾಹಿ-ವಿರೋಧಿ ಹೋರಾಟಗಳ ಫಲವಾಗಿ ಮೂರನೇ ಜಗತ್ತು ಹೊಂದಿದ ಅಭ್ಯುದಯವನ್ನು ತಿರುಗು ಮುರುಗು ಮಾಡಬೇಕಾಗಿದೆ ಎಂಬುದು. ಅಂದರೆ, ವಿಶ್ವದ ಮರು-ವಸಾಹತೀಕರಣವೇ. ಸಂಕ್ಷಿಪ್ತವಾಗಿ ಹೇಳುವುದಾದರೆ, ವೈಭವಯುತವಾಗಿದ್ದ ‘ಪಾಶ್ಚಿಮಾತ್ಯ ನಾಗರಿಕತೆಯ’ ಪುನರುಜ್ಜೀವನವು ವಿಶ್ವದ ಮರು-ವಸಾಹತೀಕರಣದ ಮೇಲೆ ನಿಂತಿದೆ ಎಂದು ರುಬಿಯೊ ಹೇಳಿದ್ದಾರೆ. ಮೂರನೇ ಜಗತ್ತನ್ನು ಸಾಮ್ರಾಜ್ಯಶಾಹಿ ನಿಯಂತ್ರಣಕ್ಕೆ ಒಳಪಡಿಸಲು ಇದಕ್ಕಿಂತಲೂ ಹೆಚ್ಚು ನೇರವಾದ ಕರೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟವೇ ಸರಿ.
ವರದಿಗಳ ಪ್ರಕಾರ, ರುಬಿಯೊ ವಾದವು ಆರಂಭದಲ್ಲಿ ಈ ಬಗ್ಗೆ ಸಂದೇಹಿಸುತ್ತಿದ್ದ ಯುರೋಪಿಯನ್ ನಾಯಕರು ಅದನ್ನು ಒಪ್ಪುವಂತೆ ಮಾಡಿದೆ. ಇರಾನ್ ಮೇಲೆ ಇತ್ತೀಚೆಗೆ ಯುಎಸ್-ಇಸ್ರೇಲ್ ನಡೆಸಿದ ದೌರ್ಜನ್ಯಕ್ಕೆ, ಸ್ಪೇನ್ ಹೊರತುಪಡಿಸಿದರೆ, ಯುರೋಪಿನ ಯಾವುದೇ ದೇಶದಿಂದ ವಿರೋಧ ಬಂದಿಲ್ಲ. ಅದರಲ್ಲಿ ಆಶ್ಚರ್ಯವೇನಿಲ್ಲ. ಆದ್ದರಿಂದ, ಅಪ-ವಸಾಹತೀಕರಣದ ಫಲವಾಗಿ ಹೊಂದಿದ ಮೂರನೆಯ ಜಗತ್ತಿನ ಅಭ್ಯುದಯವನ್ನು ತಿರುಗು ಮುರುಗು ಮಾಡಲು ಎಲ್ಲ ಸಾಮ್ರಾಜ್ಯಶಾಹಿ ದೇಶಗಳ ಒಂದು ಸಂಯೋಜಿತ ಚಾಲನೆಯನ್ನು ಕಾಣುವ ಹೊಸ್ತಿಲಲ್ಲಿದ್ದೇವೆ ಎಂದು ತೋರುತ್ತದೆ.
ಶೀರ್ಷಿಕೆ ಚಿತ್ರಕೃಪೆ: GE-ಜಿಯೊಪೊಲಿಟಿಕಲ್ ಇಕಾನಮಿ
