ಮುಫ್ತಿ, ಪುತ್ರಿ ಗೃಹಬಂಧನ

ಶ್ರೀನಗರ:  ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಬಂಧಿತರಾಗಿರುವ ಪಿಡಿಪಿ ನಾಯಕ ವಹೀದ್ ಉರ್ ರೆಹಮಾನ್ ಪ‍ರ್ರ  ಅವರ ನಿವಾಸಕ್ಕೆ ಭೇಟಿ ನೀಡದಂತೆ ತಡೆಯಲು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಅವರ ಪುತ್ರಿ ಇಲ್ಟಿಜಾ ಅವರನ್ನು ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಆಡಳಿತ ಅವರ ನಿವಾಸದಲ್ಲೇ ‘ಗೃಹ ಬಂಧನ’ದಲ್ಲಿರಿಸಿದೆ.

‘ನಾನು ಮತ್ತೆ ಅಕ್ರಮ ಬಂಧನಕ್ಕೊಳಗಾಗಿದ್ದೇನೆ. ಎರಡು ದಿನಗಳಿಂದ ನನ್ನನ್ನು ಪುಲ್ವಾಮಾದ ವಹೀದ್‌ ಅವರ ಕುಟುಂಬದವರ ಭೇಟಿಗೆ ಜಮ್ಮು ಮತ್ತು ಕಾಶ್ಮೀರ ಆಡಳಿತ ಅವಕಾಶ ನೀಡುತ್ತಿಲ್ಲ. ಇಲ್ಲಿನ ಭದ್ರತಾ ಪಡೆಗಳು, ಬಿಜೆಪಿ ಸಚಿವರು ಮತ್ತು ಅವರ ಕೈಗೊಂಬೆಗಳಾಗಿರುವವರಿಗೆ ಮಾತ್ರ ಓಡಾಡಲು ಅವಕಾಶ ನೀಡುತ್ತವೆ. ಅವರುಗಳಿಂದ ಭದ್ರತಾ ವ್ಯವಸ್ಥೆ ಮೇಲೆ ಏನೂ ತೊಂದರೆಯಾಗುವುದಿಲ್ಲ. ಆದರೆ, ನನ್ನ ವಿಚಾರದಲ್ಲಿ ಮಾತ್ರ ಸಮಸ್ಯೆ ಉಂಟಾಗುತ್ತದೆ’ ಎಂದು ಮುಫ್ತಿ ಅವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.

ಮುಫ್ತಿ ಮತ್ತು ಅವರ ಪುತ್ರಿಯ ಗೃಹಬಂಧನ ಕುರಿತು ಪ್ರತಿಕ್ರಿಯಿಸಿರುವ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ‘ವೈಯಕ್ತಿಕ ಸ್ವಾತಂತ್ರ್ಯ‘ವನ್ನು ಈ ಸರ್ಕಾರ ತನ್ನ ಇಚ್ಛಾನುಸಾರ ಬಳಸುತ್ತಿದೆ ಎಂದು ದೂರಿದ್ದಾರೆ. ನ್ಯಾಯಾಂಗದ ಮಧ್ಯಪ್ರವೇಶವಿಲ್ಲದೇ, ತನ್ನ ಇಚ್ಛೆ ಬಂದಂತೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಬಳಸುತ್ತಿದೆ‘ ಎಂದು ಆರೋಪಿಸಿದ್ದಾರೆ

ಇತ್ತೀಚೆಗೆ ಈ ಸರ್ಕಾರ ನನ್ನ ತಂದೆಯವರು ಪ್ರಾರ್ಥನೆ ಮಾಡುವುದನ್ನು ತಡೆಯಲು ಇದೇ ವಿಧಾನವನ್ನು ಅನುಸರಿಸಿತ್ತು‘ ಎಂದು ಆರೋಪಿಸಿದ ಒಮರ್ ಅಬ್ದುಲ್ಲಾ, ‘ವೈಯಕ್ತಿಕ ಸ್ವಾತಂತ್ರ್ಯವನ್ನು ತನ್ನ ಮನಸ್ಸಿಗೆ ಬಂದಂತೆ ಬಳಸುತ್ತಿದೆ‘ ಎಂದು ಟೀಕಿಸಿದ್ದಾರೆ. ಒಮರ್ ತಂದೆ ಫಾರೂಕ್ ಅಬ್ದುಲ್ಲಾ ಅವರನ್ನ ಅ.30ರಂದು ಈದ್‌ ಮಿಲಾದ್‌ ದಿನ ಮಸೀದಿಗೆ ಪ್ರಾರ್ಥನೆಗೆ ಹೋಗದಂತೆ ತಡೆಯಲಾಗಿತ್ತು.

ಮೆಹಬೂಬಾ ಮುಫ್ತಿ ಗೃಹಬಂಧನದಲ್ಲಿಲ್ಲ:ಪೊಲೀಸರ ಸ್ಪಷ್ಟನೆ

ಶ್ರೀನಗರ:  ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಗೃಹ ಬಂಧನದಲ್ಲಿಲ್ಲ. ಆದರೆ, ಭದ್ರತಾ ಕಾರಣಗಳಿಂದಾಗಿ ಪುಲ್ವಾಮಾಗೆ ಭೇಟಿ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ನನ್ನನ್ನು ಮತ್ತೆ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಮುಫ್ತಿ ಅವರು ಹೇಳಿಕೆ ನೀಡಿದ ಹಿನ್ನೆಲೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *