ಮಾವೋವಾದಿ ಮತ್ತು ತೃಣಮೂಲ ಕಾಂಗ್ರೇಸ್ ನಂಟು

ಕನ್ನಡಾನುವಾದ: ತಡಗಳಲೆ ಸುರೇಂದ್ರ


ಸಿಪಿಐ(ಎಂ), ಎಡಪಕ್ಷಗಳನ್ನು ಹಣಿಯಲು ತೃಣಮೂಲ ಕಾಂಗ್ರೆಸ್ನ ಜೊತೆ ಮೈತ್ರಿ ಬೆಳೆಸಲು ಮಾವೋವಾದಿಗಳಿಗೆ ಸೈದ್ಧಾಂತಿಕವಾಗಿ ಯಾವುದೇ ತಕರಾರಿಲ್ಲ. ನಕ್ಸಲ್ವಾದ ದೇಶಕ್ಕೆ ಅತಿದೊಡ್ಡ ಆಂತರಿಕ ಬೆದರಿಕೆ ಎನ್ನುವ ಪ್ರಧಾನಿಗಳ ಸಂಪುಟದಲ್ಲಿ ಸಚಿವರಾಗಿರುವವರಿಗೆ  ನಕ್ಸಲ್ವಾದಿಗಳೊಂದಿಗೆ ಕೈಜೋಡಿಸಲು ನಾಚಿಕೆಯೇನೂ ಇಲ್ಲ. ಇದು ಮತ್ತೆ ಸಾಬೀತಾಗಿದೆ.
ತೃಣಮೂಲ ಕಾಂಗ್ರೆಸ್ ಮತ್ತು ಮಾವೋವಾದಿಗಳ ನಡುವಿನ ಗಳಸ್ಯ ಕಂಠಸ್ಯ ಸಂಬಂಧದ ಬಗ್ಗೆ ಇನ್ನೂ ಪುರಾವೆ ಬೇಕಿದ್ದರೆ ಆಗಸ್ಟ್ 9ರಂದು ಲಾಲ್ಘರ್ನಲ್ಲಿ ನಡೆದ ರ್ಯಾಲಿಯೇ ಸಾಕ್ಷಿ. ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಈ ಎರಡು ಗುಂಪುಗಳ ಕೂಟ ಕಳೆದ ಹಲವಾರು ತಿಂಗಳುಗಳಿಂದ ನಡೆಸುತ್ತಿರುವ ದುಷ್ಕೃತ್ಯಗಳು ಮತ್ತು ಅರಾಜಕ ಕೃತ್ಯಗಳು ಜನಸಾಮಾನ್ಯರನ್ನು ಕಂಗೆಡಿಸಿವೆ. ಅವರ ಅಟ್ಟಹಾಸ ಈಗಾಗಲೇ 255 ಸಿ.ಪಿ.ಐ(ಎಂ) ಕಾರ್ಯಕರ್ತರನ್ನು ಬಲಿತೆಗೆದುಕೊಂಡಿದೆ. ಅವರಲ್ಲಿ ಅನೇಕರು ತೀರ ಬಡವರು ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಯಾರ ಹಿತಾಸಕ್ತಿಗಾಗಿ ತಮ್ಮ ಹೋರಾಟ ಎಂದು ಈ ಕೂಟ ದಿನ ಬೆಳಗಾದರೆ ಬೊಬ್ಬೆ ಹಾಕುತ್ತಿದೆಯೋ ಆ ವಿಭಾಗದ ಅಮಾಯಕರನ್ನೇ ಈ ಸ್ವಯಂಘೋಷಿತ `ಪೋಷಕರು’ ಕೊಲ್ಲುತ್ತಿದ್ದಾರೆ. ತಾವೂ ಬಡವರ ಹಾಗೂ ಬುಡಕಟ್ಟು ಜನರ ಪರ ಇದ್ದೇವೆ ಎಂದು ಹೇಳಿಕೊಳ್ಳುವ ಕೆಲವು `ಬುಧ್ಧಿಜೀವಿಗಳು’ ಮತ್ತು `ಸಾಮಾಜಿಕ ಕಾರ್ಯಕರ್ತರು’  ಈ ಪುಂಡರ ಕೂಟಕ್ಕೆ ಕಣ್ಣುಮುಚ್ಚಿಕೊಂಡು ಬೆಂಬಲ ನೀಡುತ್ತಿವೆ.
ಮಾವೋವಾದಿಗಳ ಜತೆ ಬಹಿರಂಗ ಸಭೆಯಲ್ಲಿ ಶಾಮೀಲಾಗಿರುವ ತನ್ನ ಮಂತ್ರಿಮಂಡಲದ ಸಚಿವೆಯ ವರ್ತನೆಯಿಂದ ತೀವ್ರ ಮುಜುಗರಕ್ಕೊಳಗಾಗಿರುವ ಮನಮೋಹನ್ ಸಿಂಗ್ ಸರ್ಕಾರ ಆಪಾದನೆಯಿಂದ ತಪ್ಪಿಸಿಕೊಳ್ಳಲು ನಿಷ್ಪಲವಾಗಿ ಹೆಣಗಾಡುತ್ತಿದೆ. `ನಿಜ ಸಂಗತಿಯೇನು ಎಂದು ತಿಳಿದ ಮೇಲೆ’ ಸಂಸತ್ತಿನ ಎರಡೂ ಸದನಗಳಲ್ಲಿ ಹೇಳಿಕೆ ನೀಡುತ್ತೇವೆ ಎಂಬ ಸಬೂಬು ಕೊಡುತ್ತಾ ತಲೆಮರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಿಪರ್ಯಾಸವೆಂದರೆ, ಅದರ ಮರುದಿನವೇ ಅಂದರೆ ಆಗಸ್ಟ್ 11 ರಂದು ಗೃಹ ಖಾತೆಯ ರಾಜ್ಯ ಸಚಿವರೊಬ್ಬರು ರಾಜ್ಯ ಸಭೆಯಲ್ಲಿ ಸಂಸದರೊಬ್ಬರು ರೈಲು ಅಪಘಾತದಲ್ಲಿ ಮಾವೋವಾದಿಗಳ ಪಾತ್ರ ಕುರಿತು ಎತ್ತಿದ ಖಚಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ `ಮಾವೋವಾದಿಗಳ ಮತ್ತೊಂದು ಮುಖವಾಗಿರುವ ಪೊಲೀಸ್ ದಬ್ಬಾಳಿಕೆ ವಿರೋಧಿ ಜನಾಂದೋಲನ ಸಮಿತಿ (ಪಿ.ಎಸ್.ಬಿ.ಜೆ.ಸಿ/ಪಿ.ಸಿ.ಪಿ.ಎ)ಯು ರೈಲು ಹಳಿಗಳನ್ನು ಕಿತ್ತು ಹಾಕುವುದರ ಮೂಲಕ ರೈಲು ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ಸಾಬೀತಾಗಿದೆ? ಹೇಳಿದರು. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈಲು ಪ್ರಯಾಣಿಕರ ಜೀವವನ್ನು ರಕ್ಷಿಸುವುದಾಗಿಯೂ ಮತ್ತು ಅ ನಿಟ್ಟಿನಲ್ಲಿ ಸುರಕ್ಷಾ ಕ್ರಮಗಳನ್ನು ಉತ್ತಮಗೊಳಿಸುವುದಾಗಿಯೂ ಬೊಗಳೆ ಬಿಟ್ಟ ಇದೇ ರೈಲ್ವೇ ಸಚಿವರು, ಅದೇ ಮಾವೋವಾದಿಗಳ ಜತೆ ಸಖ್ಯ ಬೆಳೆಸಿದ್ದಾರೆ. ಮಾವೋವಾದಿಗಳ ಹಿಂಸಾಕೃತ್ಯದ ವಿರುದ್ಧ ನಿಯೋಜಿತರಾಗಿರುವ ರಕ್ಷಣಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಬಹಿರಂಗವಾಗಿ ಒತ್ತಾಯಿಸುತ್ತಿದ್ದಾರೆ. ನಿಜ ಹೇಳಬೆಕೆಂದರೆ, ರಕ್ಷಣಾ ಪಡೆಗಳು ಹೇಳುತ್ತಿರುವಂತೆ ಮಾವೋವಾದಿ ನಾಯಕ ಅಜಾದ್ ಎನ್ಕೌಂಟರ್ನಲ್ಲಿ ಸತ್ತಿಲ್ಲ, ಅವನನ್ನು ಕೊಲ್ಲಲಾಗಿದೆ ಎನ್ನುವ ಮಟ್ಟಕ್ಕೂ ಅವರು ಇಳಿದಿದ್ದಾರೆ.
ಮಾಧ್ಯಮಗಳ ಈ ಕೆಳಗಿನ ವರದಿ ತೃಣಮೂಲ ಮತ್ತು ಮಾವೋವಾದಿಗಳ ಸಖ್ಯತೆ ಎಷ್ಟು ಗಾಢವಾಗಿದೆ ಎಂಬುದನ್ನು ಹೊರಹಾಕಿದೆ: `ಅಜಾದ್ ವಿಷಯದಲ್ಲಿ ಮಾವೋವಾದಿ ಪೊಲಿಟ್ ಬ್ಯೂರೋ ಸದಸ್ಯ ಕೋಟೇಶ್ವರ ರಾವ್ ಅಲಿಯಾಸ್ ಕಿಷೆನ್ಜಿ ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿಯವರ ಸಹಾಯಕ್ಕೆ ಧಾವಿಸಿ `ನಮ್ಮ ಪೊಲಿಟ್ ಬ್ಯೂರೋ ಸದಸ್ಯ ಹಾಗೂ ಕೇಂದ್ರ ಸಮಿತಿ ಸದಸ್ಯ ಚರಕುರಿ ರಾಜಕುಮಾರ್ ಅಲಿಯಾಸ್ ಅಜಾದ್ನನ್ನು ಆಂಧ್ರ ಪ್ರದೇಶ ಪೋಲಿಸ್ ವಿಶೇಷ ಬೇಹುಗಾರರು ನಕಲಿ ಎನ್ಕೌಂಟರ್ ಮೂಲಕ ಮೋಸದಿಂದ ಕೊಂದಿದ್ದಾರೆ. ಮಮತಾ ಬ್ಯಾನರ್ಜಿ ಸತ್ಯವನ್ನೇ ಹೇಳಿದ್ದಾರೆ. ಆ ವಿಷಯದಲ್ಲಿ ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಲು ಕಾರಣವೇ ಇಲ್ಲ’ ಎಂದಿದ್ದಾರೆ. ಯಾವ ಮಾವೋವಾದಿ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಿರಂಗವಾಗಿ ತಿರಸ್ಕರಿಸುತ್ತಾನೋ ಮತ್ತು ಭಾರತದ ವಿರುದ್ಧ ಜನ ಸಮರವನ್ನು ಸಾರಿದ್ದಾನೋ ಅಂತಹ ವ್ಯಕ್ತಿಯ ಬಾಯಿಯಲ್ಲಿ ಇಂತಹ ಮಾತುಗಳು !
ತನ್ನ ಸಂಪುಟ ಸಹೋದ್ಯೋಗಿ ಹಾಗೂ ಒಂದು ಪ್ರಮುಖ ಮಿತ್ರಪಕ್ಷದ ನಾಯಕಿಯನ್ನು ಸಮರ್ಥಿಸಲು ವಿಫಲವಾದ ಯು.ಪಿ.ಎ 2 ಸರ್ಕಾರವು ತನ್ನ ಗೃಹ ಸಚಿವ ಪಿ.ಚಿದಂಬರಂರವರ ಮೂಲಕ ರಾಜ್ಯಸಭೆಯಲ್ಲಿ ಈ ರೀತಿ ಹೇಳಿಕೆ ಕೊಡಿಸಿದೆ: `ಯಾರೂ ಮಾವೋವಾದಿಗಳನ್ನು ಬೆಂಬಲಿಸಬಾರದು ಮತ್ತು ಹಾಗೆ ಬೆಂಲಿಸುವವರನ್ನು ಸರ್ಕಾರ ಖಂಡಿತಾ ಪ್ರೋತ್ಸಾಹಿಸುವುದಿಲ್ಲ.’ ತನ್ನ ಸರ್ಕಾರದ ಅಸ್ತಿತ್ವಕ್ಕಾಗಿ ಆ ಮಿತ್ರ ಪಕ್ಷದ ಬೆಂಬಲದ ಮೇಲೆ ಅವಲಂಬಿತವಾಗಿರುವ ಯು.ಪಿ.ಎ 2 ತೀರ ಅಸಹ್ಯಕರ ರೀತಿಯಲ್ಲಿ ನಾಚಿಕೆ ಬಿಟ್ಟು ತನ್ನ ಸಂದರ್ಭ ಸಾಧಕತನವನ್ನು ಪ್ರದರ್ಶಿಸಿದೆ. `ಮಾವೋವಾದಿಗಳಿಗೆ ಬೆಂಬಲ ನೀಡಿಕೆ’ಯನ್ನು ಸಹಿಸಿಕೊಳ್ಳುತ್ತಾ ಭಾರತದ ಆಂತರಿಕ ಭದ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿನ ತನ್ನ ಬದ್ಧತೆಯನ್ನು ತಾನೇ ಅಪಹಾಸ್ಯಕ್ಕೊಳಪಡಿಸಿದೆ.
ಗುಣಪಡಿಸಲಾರದ ಒಂದು ವಿರೋಧಾಭಾಸದ ಸಂಕಟದಲ್ಲಿ ಯು.ಪಿ.ಎ2 ಸರ್ಕಾರ ಬಿದ್ದು ನರಳುತ್ತಿರುವುದನ್ನು ನಮ್ಮ ಈ ಕಾಲಮ್ಮುಗಳ ಮೂಲಕ ಈಗಾಗಲೇ ನಿಮ್ಮ ಗಮನ ಸೆಳೆದಿದ್ದೇವೆ. `ಮಾವೋವಾದಿಗಳ ಹಿಂಸಾಕೃತ್ಯಗಳು ನಮ್ಮ ದೇಶದ ಆಂತರಿಕ ಭದ್ರತೆಗೆ ಗಂಭೀರ ಅಪಾಯ ಒಡ್ಡಿದೆ’ ಎಂದು ನಮ್ಮ ಪ್ರಧಾನ ಮಂತ್ರಿಗಳು ಪದೇ ಪದೇ ಹೇಳುತ್ತಲೇ ಇದ್ದಾರೆ. ಹೀಗಿದಾಗ್ಯೂ, ಅದೇ ಪ್ರಧಾನ ಮಂತ್ರಿಗಳ ಅಡಿಯಲ್ಲಿರುವ ಒಬ್ಬ ಸಚಿವೆ ಮಾವೋವಾದಿಗಳ ಹಿಂಸಾಕೃತ್ಯದೊಂದಿಗೆ ಬಹಿರಂಗವಾಗಿ ಶಾಮೀಲಾಗುತ್ತಿದ್ದಾರೆ ಮತ್ತು ಸಂಸದೀಯ ಪ್ರಜಾಸತ್ತೆಯನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಸಮರ್ಥಿಸುತ್ತಿದ್ದಾರೆ.
ಲಾಲ್ಘರ್ನಲ್ಲಿ ಸೇರಿದ್ದ ಜನರ ಮೇಳವನ್ನು ನೋಡಿದ ಯಾರಿಗಾದರೂ ಆ ಪ್ರತಿಭಟನೆಯನ್ನು ಸಂಘಟಿಸಿದ ಉದ್ದೇಶವೇನು ಎಂಬುದು ಅರ್ಥವಾಗುತ್ತದೆ. ಅದರಲ್ಲಿನ ಬಹುಪಾಲು ಜನರನ್ನು ಲಾಲ್ಘರ್ನ ಹೊರಗಡೆಯಿಂದ ವಾಹನಗಳಲ್ಲಿ ಕರೆತರಲಾಗಿತ್ತು. ಆ ಪ್ರದೇಶದ ಬಹುಪಾಲು ಜನರು ಆ ರ್ಯಾಲಿಯಲ್ಲಿ ಪಾಲ್ಗೊಳ್ಳದಿರುವುದೇ ತೋರಿಸುತ್ತದೆ, ತೃಣಮೂಲ ಕಾಂಗ್ರೆಸ್ ಮಿತ್ರಕೂಟವು ಜನಸಾಮಾನ್ಯರಿಂದ ಎಷ್ಟು ದೂರ ಸರಿಯುತ್ತಿದೆ ಎಂಬುದನ್ನು. ಆ ಪ್ರದೇಶದ ಜನರಲ್ಲಿ ಭೀತಿಯನ್ನುಂಟುಮಾಡಿ ಬಲವಂತವಾಗಿ ತಮಗೆ ಬೆಂಬಲ ನೀಡುವಂತೆ ಮಾಡುವುದೇ ಆ ಪ್ರತಿಭಟನೆಯ ಬಹು ಮುಖ್ಯ ಉದ್ದೇಶವಾಗಿತ್ತು.
ಮುಂಬರಲಿರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಏನಕೇನ ಪ್ರಕಾರೇಣ ಪ್ರಯೋಜನ ಪಡೆಯಲು ಎಂತಹ ಕೀಳು ಮಟ್ಟಕ್ಕೂ ಇಳಿಯುವ ತೃಣಮೂಲ ಕಾಂಗ್ರೆಸ್ನ ಹವಣಿಕೆಯನ್ನು ಇದು ನಗ್ನಗೊಳಿಸಿದೆ. ಈ ಪೈಪೋಟಿಯಲ್ಲಿ, ಅಮಾಯಕ ಜನರ  ರಕ್ಷಣೆ ಮಾಡುವ ಅಥವಾ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಗೊಳಿಸುವ ಕಾರ್ಯವನ್ನು ಗಾಳಿಗೆ ತೂರಲಾಗುತ್ತಿದೆ. ಯು.ಪಿ.ಎ 2 ಸರ್ಕಾರ ಹಾಗೂ ಮನಮೋಹನ್ ಸಿಂಗ್ರವರು ಈ ಅಪಾಯವನ್ನು ಮನಗಾಣದೆ ಇದ್ದರೆ, ಇಡೀ ದೇಶ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂಬ ಆತುರದಲ್ಲಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಆಂತರಿಕ ಭದ್ರತೆಯನ್ನು ಬಲಿಕೊಡುವುದು ಸರ್ವಥಾ ಒಳ್ಳೆಯದಲ್ಲ. ಅರವತ್ತರ ದಶಕದಲ್ಲಿ ಮತ್ತು ಎಪ್ಪತ್ತರ ದಶಕದ ಪ್ರಾರಂಭದಲ್ಲಿ ನಕ್ಸಲರು ಹುಟ್ಟುಹಾಕಿದ ತಲೆಬುಡವಿಲ್ಲದ ಬುದ್ಧಿಗೇಡಿ ಉಗ್ರವಾದವನ್ನು ಸಿ.ಪಿ.ಐ(ಎಂ) ರಾಜಕೀಯವಾಗಿ ಎದುರಿಸಿದ ಹಾಗೆ ಈಗಲೂ ಅದರ ಹೊಸ ಅವತಾರವಾದ ಮಾವೋವಾದಿಗಳನ್ನು ಅಷ್ಟೇ ದೃಢವಾಗಿ ಎದುರಿಸುತ್ತದೆ.
ಕ್ಷುಲ್ಲಕ ಚುನಾವಣೆಯನ್ನು ಬೆಂಬತ್ತಿ ಮತ್ತು ಕೀಳು ರಾಜಕೀಯ ಸಂದರ್ಭಸಾಧಕತನ ಮಾಡುವುದಕ್ಕಿಂತ ದೇಶದ ಐಕ್ಯತೆ, ಸಮಗ್ರತೆ ಮತ್ತು ಆಂತರಿಕ ಭದ್ರತೆಯನ್ನು ಎತ್ತಿ ಹಿಡಿಯುವುದು ಬಹಳ ಮುಖ್ಯ.  0

Donate Janashakthi Media

Leave a Reply

Your email address will not be published. Required fields are marked *