ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಮಾನವ ಡಿಎನ್ಎ ವಿವರಗಳನ್ನು ಶೇಖರಿಸುವ ಮಸೂದೆ’ಯನ್ನು ಜಾರಿಗೆ ತರಲು ಪ್ರಯತ್ನ ನಡೆಸಿದೆ. ಸಾಮಾನ್ಯವಾಗಿ ಕ್ರಿಮಿನಲ್ ಅಪರಾಧ ಎಸಗಿರದ ವ್ಯಕ್ತಿಯೊಬ್ಬರ ಡಿಎನ್ಎ ಮಾದರಿಗಳನ್ನು ಅವರ ಒಪ್ಪಿಗೆ ಪಡೆದೇ ಪೊಲೀಸರು ಸಂಗ್ರಹಿಸಬೇಕು. ವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಈ ಹೊಸ ಮಸೂದೆಯನ್ನು ಜಾರಿಗೆ ತಂದಲ್ಲಿ ಕ್ರಿಮಿನಲ್ ಅಪರಾಧಗಳಲ್ಲದೇ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯಂಥಹ ಸಿವಿಲ್ ವ್ಯಾಜ್ಯ/ ಪ್ರಕರಣಗಳಲ್ಲೂ ಸಹ ಅಪರಾಧ ಎಸಗದಿದ್ದರೂ ಸಂಶಯಾಸ್ಪದ/ ಸಾಕ್ಷಿ ಎಂಬ ಕಾರಣಕ್ಕೆ ಅಂತಹ ವ್ಯಕ್ತಿಯ ಒಪ್ಪಿಗೆ ಪಡೆಯದೆ ಡಿಎನ್ಎ ಮಾದರಿ ಸಂಗ್ರಹಿಸುವ ಅಧಿಕಾರ ಪೊಲೀಸರಿಗೆ ಬರುತ್ತದೆ.
ಹಲವಾರು ಸಂದರ್ಭಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನೂ ಸಹ ಸರ್ಕಾರಗಳು ಕಾನೂನುಬಾಹಿರ ಎಂದು ಘೋಷಿಸುವುದನ್ನು ನೋಡಿದ್ದೇವೆ. ಅಂತಹ ಸಂದರ್ಭಗಳಲ್ಲಿ ರಾಜಕೀಯ ಕಾರ್ಯಕರ್ತರನ್ನು ಬಂಧಿಸಿದಾಗ ಅವರ ಡಿಎನ್ಎ ಮಾದರಿಯನ್ನು ಶೇಖರಿಸಿಡಬಹುದು. ಹೀಗೆ ಬೃಹತ್ ದತ್ತಾಂಶ ಯೋಜನೆಯನ್ನು ಸರ್ಕಾರವು ಹಮ್ಮಿಕೊಳ್ಳಲು ಹವಣಿಸಿದೆ. ‘ರಾಷ್ಟ್ರೀಯ ಡಿಎನ್ಎ ದತ್ತಾಂಶ ಬ್ಯಾಂಕ್’ ಎಂದು ಕರೆಯಲಾಗುವ ದತ್ತಾಂಶ ಕೋಶದಲ್ಲಿ ಭಾರತೀಯ ಪ್ರಜೆಗಳ ಡಿಎನ್ಎ ಮಾಹಿತಿಯನ್ನು ಶೇಖರಿಸುವುದಿದ್ದು, ಇದು ಅಪರಾಧ ಎಸಗುವವರನ್ನು ಗುರುತಿಸಲು ಸಹಾಯಕವಾಗುತ್ತದೆಂದು ಸರ್ಕಾರ ಹೇಳಿಕೊಳ್ಳುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಮಸೂದೆ ಜಾರಿಗೆ ಬಂದಲ್ಲಿ ಭಾರತವೂ ಕೂಡ ಪ್ರಜೆಗಳ ಮೇಲೆ ಬೇಹುಗಾರಿಕೆ ನಡೆಸುವಂತಹ ಅಮೇರಿಕಾ ಮತ್ತು ಬ್ರಿಟನ್ ದೇಶಗಳ ಸಾಲಿಗೆ ಸೇರುತ್ತದೆ.
ಕೋಟ್ಯಾಂತರ ವ್ಯಕ್ತಿಗಳ ಕುರಿತಾದ ಮಾಹಿತಿಯನ್ನು ನಿರಂತರವಾಗಿ ಅಮೇರಿಕಾ ಸರ್ಕಾರವು ಹೇಗೆ ಕಲೆಹಾಕುತ್ತಿದ್ದೆಂಬುದನ್ನು ಪ್ರಸಿದ್ದ ಮಾಹಿತಿ ಸೋರಿಕೆದಾರ ಎಡ್ವರ್ಡ್ ಸ್ನೋಡನ್ 2013ರಲ್ಲಿ ಬಹಿರಂಗಪಡಿಸಿದ್ದರು. ಮೊಬೈಲ್ ಪೋನ್ ಬಳಕೆಯಿಂದ ಆರಂಭಿಸಿ ಬಳಕೆದಾರರ ಇಂಟರ್ನೆಟ್ ಛಾಟ್ ಗಳನ್ನು ಆಧರಿಸಿ ಅವರ ನೆಲೆ ಗುರುತಿಸಿ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಂದು ಮಾಹಿತಿ ಮತ್ತು ಕಾರ್ಯದ ನಿಗಾ ಇಟ್ಟು ಅನುಸರಣೆ ಮಾಡುವಂಥಹ ಅತ್ಯಂತ ಶಕ್ತಿಯುತ ತಂತ್ರಜ್ಞಾನಗಳನ್ನು ಅಮೇರಿಕಾ ಮತ್ತು ಬ್ರಿಟನ್ ಸರ್ಕಾರಗಳು ಬಳಸುತ್ತಿರುವುದನ್ನು ಸ್ನೋಡನ್ ಜಗತ್ತಿಗೇ ಬಹಿರಂಗ ಪಡಿಸಿ ಎಚ್ಚರಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಯ ಡಿಎನ್ಎ ವಿವರ ಕಲೆಹಾಕುವ ಕಾರ್ಯವು ಇದಕ್ಕಿಂತಲೂ ಆಘಾತಕಾರಿಯಾಗಿದೆ. ವ್ಯಕ್ತಿಯ ಡಿಎನ್ಎ ಅಂಶವು ಸಾಯುವ ತನಕ ಅಥವಾ ಸತ್ತ ನಂತರವೂ ಆ ವ್ಯಕ್ತಿಯಲ್ಲಿಯೇ ಉಳಿದಿರುತ್ತದೆ. ಡಿಎನ್ಎ ಒಂದು ಶಾಶ್ವತ ಜೈವಿಕ ಅಂಶವಾಗಿರುವುದರಿಂದ ಒಂದೇ ಒಂದು ಸಲ ವ್ಯಕ್ತಿಯೊಬ್ಬರ ಮಾದರಿ ಸಂಗ್ರಹಿಸಿ ಬೇಹುಗಾರಿಕೆ ಡಾಟಾಬೇಸ್ ನಲ್ಲಿ ಶೇಖರಿಸಿದರೆ ಸಾಕು ಜೀವನಪರ್ಯಂತ ಆ ವ್ಯಕ್ತಿ ಡಾಟಾಬೇಸ್ ಗುರುತಿನಲ್ಲಿರುವಂತಾಗುತ್ತದೆ. ಸರ್ಕಾರದ ಬಳಿ ನಮ್ಮ ವಿಳಾಸ ಸಹಿತ ವ್ಯವಹಾರಿಕ ವಿವರಗಳೆಲ್ಲ ಇರುವಂತೆಯೇ ಶರೀರದ ಒಳಗಿನ ವಿವರಗಳೂ ಸರ್ಕಾರದ ಕೈಸೇರುತ್ತವೆ. ಈ ಕಾಯಿದೆಯ ಕರಡನ್ನು 2012ರಲ್ಲಿ ಯುಪಿಎ ಸರ್ಕಾರವು ಸಿದ್ದಪಡಿಸಿದ್ದರೆ, ಇದನ್ನು ಜಾರಿಗೆ ತರಲು ಪ್ರಸಕ್ತ ಎನ್ಡಿಎ ಸರ್ಕಾರವು ವಿಶೇಷ ಆಸ್ಥೆ ವಹಿಸುತ್ತಿದೆ. ಬೃಹತ್ ಮಟ್ಟದಲ್ಲಿ ನಾಗರೀಕರ ಕುರಿತಾದ ಮಾಹಿತಿ ದತ್ತಾಂಶ ಕಲೆಹಾಕಲು ಸರ್ಕಾರಗಳು ವಿಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಳ್ಳುತ್ತಿವೆ.
ಡಿಎನ್ಎ ವಿಜ್ಞಾನ :
ನಮ್ಮ ದೇಹದ ಎಲ್ಲ ಜೀವಕೋಶಗಳಲ್ಲೂ ಅಡಕವಾಗಿರುವ ಮೂಲ ಜೈವಿಕ ಮಾಹಿತಿಯ ಇಟ್ಟಿಗೆಯೇ ಡಿಎನ್ಎ ಅರ್ಥಾತ್ ಡಿ ಆಕ್ಸಿ ರೈಬೋ ನ್ಯೂಕ್ಲಿಯಿಕ್ ಆಸಿಡ್ ಎನ್ನಬಹುದು. ಇವು ಪೀಳಿಗೆಯಿಂದ ಪೀಳಿಗೆಗೆ ಗುಣಲಕ್ಷಣಗಳನ್ನು ವರ್ಗಾಯಿಸುವ ವಂಶವಾಹಿ ಜೀವತಂತುಗಳು. ಪ್ರತಿಯೊಬ್ಬ ಮನುಷ್ಯನಲ್ಲಿ ತನ್ನದೇ ವಿಭಿನ್ನ ಗುಣಲಕ್ಷಣಗಳುಳ್ಳ ಡಿಎನ್ಎ ಇರುತ್ತದೆ. ಡಿಎನ್ಎ ಅಣುಗಳು ನ್ಯೂಕ್ಲಿಯೋಟೈಡ್ ಎಂಬ ರಾಸಾಯನಿಕಗಳಿಂದಾಗಿದ್ದು ನಿರ್ದಿಷ್ಟ ವ್ಯಕ್ತಿಯ ಗುಣಲಕ್ಷಣಗಳನ್ನು ನಿರ್ಧರಿಸುತ್ತವೆ. ಡಿಎನ್ಎ ಮಾಹಿತಿಯು ವ್ಯಕ್ತಿಯಿಂದ ವ್ಯಕ್ತಿಗೆ ಸಣ್ಣ ಬದಲಾವಣೆ ಹೊಂದಿರುತ್ತದೆಯಾದ್ದರಿಂದ ಪ್ರತಿ ವ್ಯಕ್ತಿಯಲ್ಲೂ ವಿಭಿನ್ನ ಡಿಎನ್ಎ ಮಾಹಿತಿಯಿರುತ್ತದೆ. ಇದರಿಂದಾಗಿಯೇ ಡಿಎನ್ಎ ವಿವರವನ್ನು ಡಿಎನ್ಎ ಫಿಂಗರ್ ಪ್ರಿಂಟ್ ಎಂದೂ ಕರೆಯುತ್ತಾರೆ. ನ್ಯೂಕ್ಲಿಯೋಟೈಡ್ ಎಂಬ ರಾಸಾಯನಿಕಗಳ ಸರಳ ಸರಣಿಗಳನ್ನು ದಾಖಲು ಮಾಡುವ ಮೂಲಕ ವ್ಯಕ್ತಿಯೊಬ್ಬರ ಡಿಎನ್ಎ ಪ್ರೊಫೈಲ್ ಸಿದ್ದಪಡಿಸಲಾಗುತ್ತದೆ.
ಇತ್ತೀಚಿನ ವಿಧಾನದಲ್ಲಿ ವ್ಯಕ್ತಿಯೊಬ್ಬರ ಡಿಎನ್ಎ ನಲ್ಲಿ 17 ನಿರ್ದಿಷ್ಟ ನೆಲೆಗಳನ್ನು ಗುರುತಿಸಿ, ಪ್ರತಿಯೊಂದು ಭಾಗದಲ್ಲೂ ನ್ಯೂಕ್ಲಿಯೋಟೈಡ್ ಸರಣಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇವಿಷ್ಟೂ ನೆಲೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಸಂಪೂರ್ಣ ಭಿನ್ನವಿರುವುದರಿಂದ ಇಬ್ಬರು ವ್ಯಕ್ತಿಗಳ ಒಂದೇ ಸರಣಿಯನ್ನು ಹೊಂದಿರುವ ಸಾ ಧ್ಯತೆ ಒಂದು ಲಕ್ಷ ಕೋಟಿಯಲ್ಲಿ ಒಂದು ಪ್ರಕರಣ ಮಾತ್ರ! ಅಪರಾಧ ನಡೆದ ಸ್ಥಳದಲ್ಲಿ ಅಪರಾಧಿಗಳು ಬಿಟ್ಟು ಹೋಗಿರಬಹುದಾದ ಚರ್ಮ, ರಕ್ತದ ಕಲೆ, ಕೂದಲು, ಜೊಲ್ಲು, ವೀರ್ಯ, ಇತ್ಯಾದಿ ಮಾದರಿಗಳಲ್ಲಿನ ಡಿಎನ್ಎ ಯನ್ನು ಅಪರಾಧಿಗಳ ಡಿಎನ್ಎ ಜೊತೆ ಹೋಲಿಸಿ ಅಪರಾಧಿಗಳ ಪತ್ತೆ ಹಚ್ಚಲು ಡಿಎನ್ಎ ಪ್ರೊಫೈಲಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತು.
ಈ ತಂತ್ರಜ್ಞಾನದ ದುರ್ಬಳಕೆ ಮತ್ತು ದೋಷಗಳು:
ಡಿಎನ್ಎ ಪ್ರೊಫೈಲಿಂಗ್ ತಂತ್ರಜ್ಞಾನದಲ್ಲಿ ದೋಷವಿಲ್ಲದಿದ್ದರೂ, ಈ ತಂತ್ರಜ್ಞಾನವನ್ನು ಬಳಸುವಾಗ ದೋಷಗಳು ಸಂಭವಿಸುವ ಸಾಧ್ಯತೆಗಳಿವೆ. ಮೊದಲಿಗೆ ಡಿಎನ್ಎ ಮಾದರಿ ಕಲೆಹಾಕುವಾಗ ಅಪರಾಧಿಗಳ ಡಿಎನ್ಎ ಮಾದರಿಗಳು ಮಾತ್ರವೇ ಇರುತ್ತವೆಂದು ಹೇಳಲಾಗದು. ಏಕೆಂದರೆ, ಪ್ರತಿಯೊಂದು ಚಟುವಟಿಕೆಯಲ್ಲೂ ನಾವು ಕೂದಲು, ಉಗುಳು, ಗಾಯದಿಂದಾಗಿ ರಕ್ತ, ಇತ್ಯಾದಿಗಳನ್ನು ಹೊರಚೆಲ್ಲಿತ್ತಿರುತ್ತೇವೆ. ಇದು ನಮ್ಮ ಅರಿವಿಗೇ ಬಾರದೆ ನಡೆಯುತ್ತಿರುತ್ತದೆ. ಅಪರಾಧ ಸ್ಥಳದಲ್ಲಿ ಸಂಶಯ ಪಡುವವರ ಡಿಎನ್ಎ ಮಾದರಿಯೂ ಇರಬಹುದು, ಜೊತೆಗೆ ಈ ಘಟನೆಗೆ ಸಂಬಂಧಿಸದೇ ಇರುವವರ ಮಾದರಿಯೂ ಕೂಡ ಇರಬಹುದು. ಹೀಗಾಗಿ ಮಾದರಿ ಕಲೆಹಾಕುವ ಹಂತದಲ್ಲೇ ಮಾದರಿಯು ದೋಷ ಪೂರಿತ ವಾಗಿರುತ್ತದೆ.
ಡಿಎನ್ಎ ಸಾಕ್ಷ್ಯವು ದೋಷಪೂರಿತ ಮಾದರಿಯಿಂದಾಗಿ ಹಳಿತಪ್ಪುವ ಸಂಭವವೂ ಇರುವುದನ್ನು ಕೆಲಪ್ರಕರಣಗಳು ತೋರಿಸಿವೆ. ಕಳ್ಳತನ ಮತ್ತು ಕೊಲೆಯಂಥಹ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆನ್ನಬಹುದಾದ ಡಿಎನ್ಎ ಪರಿಶೀಲಿಸಿದಾಗ ಸಂಶಯಾಸ್ಪದ ಅಪರಾಧಿಗಳು ಮತ್ತೊಂದು ದೇಶದಲ್ಲಿ ಇರುವುದರ ಕುರಿತು ಆಸ್ಟ್ರಿಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳ ಪತ್ತೆದಾರಿಗಳು ಒಂದೊಮ್ಮೆ ತಲೆಕೆಡಿಸಿಕೊಂಡಿದ್ದರು. ಆದರೆ ನಂತರ ತಿಳಿದದ್ದು, ಫ್ರಾನ್ಸ್ ದೇಶದ ಹತ್ತಿ ತಯಾರಿಕಾ ಕಾರ್ಖಾನೆಯಿಂದ ಕಾರ್ಮಿಕನ ಡಿಎನ್ಎ ಮಾದರಿಯು ಹತ್ತಿಯೊಂದಿಗೆ ಕಲೆತು ಆಸ್ಟ್ರಿಯಾದಲ್ಲಿ ಅಪರಾಧ ನಡೆದ ಸ್ಥಳದಲ್ಲಿ ದೊರೆತು ತನಿಖೆಯನ್ನು ನಿಗೂಢಗೊಳಿಸಿತ್ತು!
ಡಿಎನ್ಎ ಮಾದರಿ ಶೇಖರಿಸುವ ಕಾರ್ಯವನ್ನು ಕೇವಲ ಸೀಮಿತ ಪ್ರಕರಣಗಳಲ್ಲಿ ಮಾತ್ರವೇ ಮಾಡದೇ ಇಡೀ ದೇಶದ ಕೋಟ್ಯಾಂತರ ಜನರಿಗೆಲ್ಲ ಅನ್ವಯಿಸಿದಾಗ ತಪ್ಪುಗಳು/ ದೋಷಗಳು ಅಗಾಧ ಸಂಖ್ಯೆಯಲ್ಲಿ ದ್ವಿಗುಣಗೊಳ್ಳುತ್ತವೆ.
ಡಿಎನ್ಎ ಮಾದರಿ ಸಂಗ್ರಹಣೆಯ ಉಪಯೋಗ:
ಹೊಸ ಕಾಯಿಲೆಗಳನ್ನು ಕಂಡುಹಿಡಿಯಲು ಡಿಎನ್ಎ ಮಾದರಿಗಳ ವಿಶ್ಲೇಷಣೆ ಸಹಾಯಕವಾಗುತ್ತದೆ ನಿಜ. ಉದಾಹರಣೆಗೆ, ಕೆಲವು ಕ್ಯಾನ್ಸರ್ಗಳು ಏಕೆ ಬರುತ್ತವೆಂದು ಇನ್ನು ತಿಳಿಯಲಾಗಿಲ್ಲ. ಇದನ್ನು ಪತ್ತೆ ಹಚ್ಚಲು ರೋಗಿಗಳ ಮತ್ತು ಸಂಬಂಧಿಕರ ಡಿಎನ್ಎ ವಿಶ್ಲೇಷಣೆ ಮತ್ತು ಸಂಶೋಧನೆ ಅತ್ಯವಶ್ಯ. ಆದರೆ ಪ್ರಸ್ತುತ ಮಸೂದೆಯನ್ನು ಆರೋಗ್ಯ ಸಂಶೋಧನೆಗಾಗಿ ಬಳಸುತ್ತಿಲ್ಲವೆಂಬುದನ್ನು ಗಮನಿಸಬೇಕು.
ಬೇಹುಗಾರಿಕೆ ನಡೆಸಲು ಡಿಎನ್ಎ ಪ್ರೊಫೈಲಿಂಗ್ ದುರ್ಬಳಕೆ :
ಡಿಎನ್ಎ ಪ್ರೊಫೈಲಿಂಗ್ ತಂತ್ರಜ್ಞಾನವು ವ್ಯಕ್ತಿ ಅಥವಾ ಗುಂಪಿನ ವಿರುದ್ದ ತಾರತಮ್ಯ ಎಸಗಲು ಆಸ್ಪದ ನೀಡದ್ದರಿಂದ ಅದು ತಟಸ್ಥ ವಿಧಾನವೆನಿಸಿದೆ. ಆದರೆ, ಡಿಎನ್ಎ ಮಾದರಿಗಳನ್ನು ಸಂಗ್ರಹಿಸುವ ಏಜೆನ್ಸಿಗಳು ಮತ್ತು ಡಿಎನ್ಎ ಡಾಟಾಬೇಸ್ ಬಳಸುವವರು ನಿಷ್ಪಕ್ಷಪಾತಿಗಳೇನಲ್ಲ. ಅಪರಾಧ ನಿಯಂತ್ರಿಸುವ ಏಜೆನ್ಸಿಗಳು ಸಾಮಾನ್ಯವಾಗಿ ಪ್ರಭುತ್ವದ ಅಂಗಗಳೇ ಆಗಿವೆ. ಇವು ವರ್ಗ, ಜಾತಿ, ಲಿಂಗ, ಲೈಂಗಿಕತೆ, ಬುಡಕಟ್ಟು, ಇತ್ಯಾದಿ ಆಧಾರದಲ್ಲಿ ಜನತೆಯ ವಿವಿಧ ವಿಭಾಗಗಳ ಮೇಲೆ ಪ್ರಭುತ್ವದ ಪಕ್ಷಪಾತವನ್ನೇ ಅನುಸರಿಸುತ್ತವೆ. ಹೀಗಾಗಿ ಶ್ರೀಮಂತ ಸ್ತರಕ್ಕೆ ಸೇರದ ಸಾಮಾನ್ಯರು ಮತ್ತು ಅತಿಬಡವರ ಮೇಲೆ ಇದನ್ನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಇದರ ಜೊತೆಗೆ ವಿಧಾನದಲ್ಲಿನ ತಪ್ಪುಗಳೂ ಸೇರಿಕೊಂಡರೇ ಅಮಾಯಕರಿಗೆ ಬದುಕು ಸವೆಸುವುದು ಕತ್ತಿಯಂಚಿನ ದಾರಿಯಾಗುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರವು ಜಾರಿತರಲು ಉದ್ದೇಶಿಸಿರುವ ಮಸೂದೆಯಲ್ಲಿ ಧರ್ಮ ಮತ್ತು ಜಾತಿಯ ಹಿನ್ನೆಲೆಯನ್ನೂ ಕೂಡ ಕಲೆಹಾಕುವ ಪ್ರಸ್ತಾಪವಿದೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಡಿಎನ್ಎ ಮಾದರಿಗಳು ಮಾತ್ರ ಸಾಕಲ್ಲವೇ? ಕೆಲ ಧರ್ಮ ಮತ್ತು ಜಾತಿಯ ಜನತೆ ಅಪರಾಧಿ ಕೃತ್ಯಗಳಲ್ಲಿ ಹೆಚ್ಚು ಭಾಗಿಯಾಗುತ್ತಾರೆಂದು ಸರ್ಕಾರ ಆಲೋಚಿಸುತ್ತಿದೆಯೇ? ಎಂಬ ಪ್ರಶ್ನೆಗಳು ಮೂಡುವುದು ಸಹಜವೇ.
ಅಲ್ಲದೇ, ಅಪರಾಧ ಸ್ಥಳಗಳಲ್ಲಿ ದೊರೆತ ಡಿಎನ್ಎ ಮಾದರಿಗೆ ಹೋಲಿಕೆಯಾಗುವ ಡಿಎನ್ಎ ಹೊಂದಿರುವ ವ್ಯಕ್ತಿ ಡಾಟಾಬೇಸ್ ನಲ್ಲಿ ಸಿಗದಿದ್ದಲ್ಲಿ ಅದಕ್ಕೆ ಹತ್ತಿರವಿರುವ ಡಿಎನ್ಎ ಹೊಂದಿರುವ ವ್ಯಕ್ತಿಗಳನ್ನು ಅಂದರೆ ಸಂಬಂಧಿಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಇದಕ್ಕೆ ಮುಂದುವರೆದ ದೇಶಗಳಲ್ಲಿ ‘ಕೌಟುಂಬಿಕ ಡಿಎನ್ಎ ಶೋಧನೆ’ ಎನ್ನುತ್ತಾರೆ. ಅಪರಾಧ ಘಟನೆಗೆ ಸಂಬಂಧಪಡದೇ ಇದ್ದರೂ ಪೊಲೀಸರು ವಿಚಾರಣೆ ನಡೆಸುವ, ಕಿರುಕುಳ ನೀಡುವ ಸನ್ನಿವೇಶ ನಿರ್ಮಾಣ ಮಾಡುವುದರಿಂದ ಇದು ಬಡವರು ಮತ್ತು ದಮನಿತರನ್ನು ಹಿಂಸಿಸಲು ಸಹಜವಾಗಿ ಹಾದಿ ಮಾಡಿಕೊಡುತ್ತದೆ.
ಡಾಟಾಬೇಸ್ ನಲ್ಲಿ ಎಲ್ಲರನ್ನೂ ಒಳಗೊಳ್ಳಲು ವ್ಯಾಪಕ ಬಲೆ:
ಈ ಕಾಯಿದೆಯ ವ್ಯಾಪ್ತಿಯು ಕೇವಲ ಅಪರಾಧ ಕಾಯಿದೆಗಳಲ್ಲಿ ಬಂಧಿತರಾಗಿರುವವರ ಡಿಎನ್ಎ ಮಾದರಿಗಳನ್ನು ಮಾತ್ರವೇ ಕಲೆಹಾಕಲು ಸೀಮಿತವಾಗಿಲ್ಲ. ಇಡೀ ಜನತೆಯ ಮೇಲೆ ಇದನ್ನು ಪ್ರಯೋಗಿಸಲು ಉದ್ದೇಶಿಸಿರುವುದನ್ನು ಕಾಣಬಹುದಾಗಿದೆ. ಮೊದಲಿಗೆ ಐಪಿಸಿ ದಂಡ ಸಂಹಿತೆ ಮತ್ತು ಕೆಲವು ವಿಶೇಷ ಕಾಯಿದೆಗಳ ಉಲ್ಲಂಘನೆಗಳಿಗೆ ಅನ್ವಯಿಸುತ್ತದೆಂದು ಹೇಳಲಾಗು ತ್ತದೆಯಾದರೂ ಅಂತಿಮವಾಗಿ ವಿಶಾಲ ಜನಸಮೂಹವನ್ನು ಒಳಗೊಳ್ಳುವ ಉದ್ದೇಶವನ್ನು ಈ ಪಟ್ಟಿಯೇ ಹೇಳುತ್ತದೆ: ಅ) ಅನೈತಿಕ ಸಾಗಣೆ (ತಡೆಯುವುದು) ಕಾಯಿದೆ, 1956 ಆ) ಗರ್ಭಿಣಿಯ ವೈದ್ಯಕೀಯ ಕಾಯಿದೆ, 1971 ಇ) ಪ್ರಸವ-ಪೂರ್ವ ಮತ್ತು ಗರ್ಭ ತಪಾಸಣೆ ವಿಧಾನಗಳು (ಲಿಂಗ ನಿರ್ಧರಣೆ ನಿಷೇಧ) ಕಾಯಿದೆ, 1994 ಈ) ಕೌಟುಂಬಿಕ ಹಿಂಸೆಯಿಂದ ಮಹಿಳೆಯರಿಗೆ ರಕ್ಷಣೆ ಕಾಯಿದೆ, 2005 ಉ) ನಾಗರೀಕ ಹಕ್ಕುಗಳ ರಕ್ಷಣೆ ಕಾಯಿದೆ, 1955 ಊ) ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳನ್ನು ತಡೆಯುವುದು) ಕಾಯಿದೆ, 1989 ಎ) ಮೋಟಾರು ವಾಹನಗಳ ಕಾಯಿದೆ, 1988 ಏ) ಮಂಡಳಿಯು ಸೂಚಿಸಬಹುದಾದ ಇನ್ನಾವುದೇ ಇತರೆ ಕಾಯಿದೆಗಳನ್ನು ಇದರಡಿ ತರಬಹುದಾಗಿದೆ.
ಮಾನವ ಹಕ್ಕುಗಳ ಮೇಲೆ ಧಾಳಿ:
ಇತ್ತೀಚೆಗೆ ಆಧಾರ್ ಕಾರ್ಡ್ನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಕುರಿತು ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ‘ಖಾಸಗಿ ಸ್ವಾತಂತ್ರ್ಯವು ಪ್ರಜೆಗಳ ಮೂಲಭೂತ ಹಕ್ಕಲ್ಲ’ ಎಂದು ಕೇಂದ್ರ ಸರ್ಕಾರ ತಿಳಿಸಿರುವುದನ್ನು ನೆನಪಿಸಿಕೊಳ್ಳಬಹುದು. ಡಿಎನ್ಎ ಮಾದರಿಗಳು ಸೆಕ್ಯುರಿಟಿ ಏಜೆನ್ಸಿಗಳ ಕೈತಲುಪುವುದರಿಂದ, ಇದು ಸೋರಿಕೆಯಾಗಿ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಅಪರಾಧ ಶೋಧನೆಯಲ್ಲದೆ ಇದರ ವ್ಯಾಪ್ತಿ ವಿಶಾಲವಾಗಿದೆ: ಅಪಘಾತ ಅಥವಾ ದುರ್ಘಟನೆಗೀಡಾದ ಗಾಯಾಳುಗಳನ್ನು ಕಂಡುಹಿಡಿಯಲು, ಕಾಣೆಯಾದ ವ್ಯಕ್ತಿಗಳನ್ನು ಗುರುತಿಸಲು, ಮತ್ತು ಸಿವಿಲ್ ವ್ಯಾಜ್ಯ ಮತ್ತು ಇತರೆ ಉಲ್ಲಂಘನೆಗಳು. ಡಿಎನ್ಎ ಮಾಹಿತಿಯನ್ನು ಜನತೆಯ ಅಂಕಿಅಂಶಗಳನ್ನು ಸಿದ್ದಪಡಿಸಲು, ಸಂಶೋಧನೆ, ತಂದೆತಾಯಿ ವ್ಯಾಜ್ಯ, ಪುನರ್-ಉತ್ಪಾದನಾ ತಂತ್ರಜ್ಞಾನ ಮತ್ತು ವಲಸೆ, ಇತ್ಯಾದಿಗಳಲ್ಲಿ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಉದ್ದೇಶಿತ ಡಾಟಾಬೇಸ್ ಕೇವಲ ಅಪರಾಧವನ್ನು ಹತ್ತಿಕ್ಕಲು ಬಳಸುವ ಮುಗ್ಧ ಸಾಧನವೇನು ಅಲ್ಲ. ಇದು ನಾಗರೀಕರ ಮಾನವ ಹಕ್ಕುಗಳು ಮತ್ತು ಖಾಸಗಿ ಸ್ವಾತಂತ್ರ್ಯವನ್ನು ದಮನ ಮಾಡುವ ಬೇಹುಗಾರಿಕೆ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ.
ಬೇಹುಗಾರಿಕೆಗಾಗಿ ಪರಿಣಾಮಕಾರಿ ಅಸ್ತ್ರ:
ಇತ್ತೀಚಿನ ವರ್ಷಗಳಲ್ಲಿ ಜನತೆಯ ಮೇಲೆ ಬೇಹುಗಾರಿಕೆ ನಡೆಸಲು ಭಾರತ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ದೊರೆತರೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗೀತನದ ಹಕ್ಕನ್ನು ದಮನ ಮಾಡಲು ಸರ್ಕಾರದ ಬತ್ತಳಿಕೆಯಲ್ಲಿ ಈ ಕಾಯಿದೆಯು ಪರಿಣಾಮಕಾರಿ ಅಸ್ತ್ರವಾಗಲಿದೆ. ಈ ಕುರಿತು ಅಮೇರಿಕಾದ ಜವಾಬ್ದಾರಿಯುತ ತಳಿಶಾಸ್ತ್ರ ಪರಿಷತ್ತು ಸಂಸ್ಥೆಯ ಅಧ್ಯಕ್ಷರಾದ ಜೆರೆಮಿ ಗ್ರುಬರ್ ಹೇಳುತ್ತಾರೆ: “ಭಾರತ ಹೊರತುಪಡಿಸಿದರೆ, ಯಾವುದೇ ದೇಶವು ಮುಗ್ಧ ಪ್ರಜೆಗಳ ಡಿಎನ್ಎ ದತ್ತಾಂಶವನ್ನು ಇತರೆ ಕಾನೂನುಗಳ ಪಾಲನೆ ಜೊತೆಗೆ ಮಿಶ್ರಣಗೊಳಿಸ ಹೊರಟಿಲ್ಲ. ಕೇವಲ ಕೆಲವೇ ಸಂಖ್ಯೆಯ ಅಪರಾಧಗಳಲ್ಲಿ ಡಿಎನ್ಎ ತಪಾಸಣೆ ಅವಶ್ಯವಿರುವುದರಿಂದ, ಅವಶ್ಯವಿಲ್ಲದ ಅಪರಾಧ ಪ್ರಕರಣಗಳಲ್ಲೂ ಭಾರತ ಸರ್ಕಾರ ಡಿಎನ್ಎ ಸಾಕ್ಷ್ಯ ಸಂಗ್ರಹಿಸಿದರೆ ಜನತೆಗೆ ಸುರಕ್ಷತೆ ಇರುವುದಿಲ್ಲ – ಅದರ ಪ್ರಮುಖ ಉದ್ದೇಶ ಬೇಹುಗಾರಿಕೆ ನಡೆಸುವುದಾಗಿದೆ.”
ತಜ್ಞರ ಸಮಿತಿಯ ಸದಸ್ಯರಿಂದಲೇ ಮಸೂದೆ ವಿರೋಧ :
ಮಾನವ ಡಿಎನ್ಎ ಪ್ರೊಪೈಲಿಂಗ್ ಮಸೂದೆ ಯನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯಲ್ಲಿ ಕಾನೂನು ತಜ್ಞರಾದ ಉಷಾ ರಾಮನಾಥನ್ ರವರು ಇನ್ನು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ; “ಡಿಎನ್ಎ ಪ್ರೊಫೈಲಿಂಗ್ ಮಂಡಳಿ ರಚನೆಯಲ್ಲಿ ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಡಾಟಾಬೇಸ್ ಬಳಸುವ ಸಂಸ್ಥೆಗಳ ಪ್ರತಿನಿಧಿಗಳೇ ತುಂಬಿ ಹೋಗಿದ್ದಾರೆ. ಇದರಿಂದಾಚೆಗೆ ಬೇರೆಯವರಿಗೆ ಪ್ರಾತಿನಿಧ್ಯವೇ ಇಲ್ಲ. ಅಲ್ಲದೇ, ಹೈದರಾಬಾದಿನ ಫಿಂಗರ್ಪ್ರಿಂಟಿಂಗ್ ಮತ್ತು ತಪಾಸಣಾ ಕೇಂದ್ರವನ್ನು ಈ ಕಾಯಿದೆಯಡಿ ನಿಯಂತ್ರಣ ಸಂಸ್ಥೆಯೆಂದು ಗುರುತಿಸಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಿದೆ” ಎನ್ನುತ್ತಾರೆ.