ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಉದ್ಧವ್ ಸರ್ಕಾರಕ್ಕೆ ನೋಟಿಸು ಜಾರಿ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಪ್ರಶ್ನೆ ಈಗ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಿದೆ. ಈ ಸಂಬಂಧ ಇಂದು(ಜೂನ್‌ 27)ವಿಚಾರಣೆ ನಡೆಸಿದೆ. ವಿಧಾನಸಭೆ ಉಪ ಸಭಾಧ್ಯಕ್ಷ ನೀಡಿದ ಅನರ್ಹತೆಗೆ ಸಂಬಂಧಿಸಿದ ನೊಟೀಸು ಪ್ರಶ್ನಿಸಿ ಬಂಡಾಯ ಎದ್ದಿರುವ ಏಕನಾಥ್ ಶಿಂಧೆ ನೇತೃತ್ವದ ಗುಂಪು ಸುಪ್ರೀಂ ಕೋರ್ಟ್​​ ನಲ್ಲಿ ಪ್ರಶ್ನಿಸಿತು.

ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರ ವಿರುದ್ಧ ಉಪ ಸಭಾಧ್ಯಕ್ಷ ನರಹರಿ ಝಿರ್ವಾಲ್ ಅನರ್ಹತೆ ನೋಟಿಸ್ ನೀಡಿದ್ದರ ವಿರುದ್ಧ ಬಂಡಾಯ ಶಾಸಕರು ಸಲ್ಲಿಸಿದ ಮನವಿಯ ಮೇರೆಗೆ ಉಪ ಸಭಾಧ್ಯಕ್ಷ, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ, ಕೇಂದ್ರ ಮತ್ತು ಇತರರಿಗೆ ನ್ಯಾಯಾಲಯ ನೋಟಿಸು ಜಾರಿ ಮಾಡಿದೆ. ಶಿವಸೇನಾ ಮುಖಂಡ ಅಜಯ್ ಚೌಧರಿ, ಸುನೀಲ್ ಪ್ರಭು ಅವರಿಗೆ ಸುಪ್ರೀಂ ಕೋರ್ಟ್ ನೋಟಿಸು ಜಾರಿ ಮಾಡಿದ್ದು, ಐದು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಜುಲೈ 11 ರಂದು ಸುಪ್ರೀಂಕೋರ್ಟ್ ಮುಂದಿನ ವಿಚಾರಣೆ ನಡೆಸಲಿದೆ.

ಶಿವಸೇನೆಯ ಅಲ್ಪಸಂಖ್ಯಾತ ಬಣಕ್ಕೆ ಸೇರಿದ ಅಜಯ್ ಚೌಧರಿ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಿರುವ ಉಪಸಭಾಧ್ಯಕ್ಷರ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದರೊಂದಿಗೆ, ಭಿನ್ನಮತೀಯ ಶಾಸಕರ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಬೇಕು ಎನ್ನಲಾಗಿದೆ.

ಏಕನಾಥ್ ಶಿಂಧೆ ಪರ ವಾದ ಮಾಡಿದ ವಕೀಲರು ”ನಾನು ಪಕ್ಷದ ಬಹುಮತದ 39 ಶಾಸಕರನ್ನು ನಾನು  ಪ್ರತಿನಿಧಿಸುತ್ತೇನೆ. ನಮಗೆ ದೈಹಿಕವಾಗಿ ಬೆದರಿಕೆ ಹಾಕಲಾಗುತ್ತಿದೆ, ಮನೆಗಳನ್ನು ಸುಟ್ಟುಹಾಕಲಾಗಿದೆ. ಅವರ ವಕ್ತಾರರು ನಮ್ಮನ್ನು ಮೃತ ದೇಹಗಳು ಎಂದು ಉಲ್ಲೇಖಿಸಿದ್ದಾರೆ. ವಾತಾವರಣವು ನಮಗೆ ಅನುಕೂಲಕರವಾಗಿಲ್ಲ. ಮುಂಬೈನಲ್ಲಿ ನಮ್ಮ ಕಾನೂನು ಹಕ್ಕುಗಳನ್ನು ಮುಂದುವರಿಸಿ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಉದ್ಧವ್ ಠಾಕ್ರೆ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಸಭಾಧ್ಯಕ್ಷರು ಈ ವಿಷಯವನ್ನು ನಿರ್ಧರಿಸುವಾಗ ಸಂವಿಧಾನದ 212 ನೇ ವಿಧಿಯು ನ್ಯಾಯಾಲಯದ ಪರಿಶೀಲನೆಯನ್ನು ತಡೆಯುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಅವರು, ಎಲ್ಲಾ ಆಂತರಿಕ ನಿರ್ವಹಣೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉಪಸಭಾಧ್ಯಕ್ಷರು ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದರು. ನಾನು ದೂರುದಾರ, ನಾನು ನೊಂದವರ ಪಕ್ಷದಲ್ಲಿದ್ದೇನೆ ಎಂದು ಸಿಂಘ್ವಿ ಹೇಳಿದ್ದಾರೆ.

ಬಂಡಾಯ ಶಾಸಕರ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಏಕೆ ಮೊದಲು ಬಾಂಬೆ ಹೈಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಲಿಲ್ಲ ಎಂದು ವಿಚಾರಿಸಿತು. ಇದಕ್ಕೆ ಉತ್ತರಿಸಿದ ವಕೀಲ ಎನ್.ಕೆ.ಕೌಲ್  ಬಂಡಾಯ ಶಾಸಕರ ಮನೆ ಹಾಗೂ  ಆಸ್ತಿಗಳಿಗೆ ಬೆದರಿಕೆಯೊಡ್ಡಲಾಗುತ್ತಿದ್ದು, ಮುಂಬೈ ಯಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಅವರಿಗೆ ಪರಿಸ್ಥಿತಿ ಪೂರಕವಾಗಿಲ್ಲ ಎಂದರು.

ಉಪಸಭಾಪತಿ ಪರ ಹಿರಿಯ ವಕೀಲ ರಾಜೀವ್‌ ಧವನ್‌ ಅವರು ನೋಟಿಸು ಬಂದಿದೆ. ಜಿಲ್ಲಾಧಿಕಾರಿ ನೋಟಿಸಿಗೆ ಉತ್ತರವನ್ನೂ ನೀಡಿದ್ದಾರೆ. ಇದು ದಾಖಲೆಯಲ್ಲಿಲ್ಲ, ಅದನ್ನು ನಾನು ದಾಖಲೆಯಲ್ಲಿ ಇಡುತ್ತೇನೆ. 34 ಶಾಸಕರು ಉಪಸಭಾಪತಿಗೆ ಕಳುಹಿಸಿರುವ ನೋಟಿಸ್ಸಿನ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಕಾಂತ್ ಸಭಾಧ್ಯಕ್ಷರು ಈ ಸೂಚನೆಯನ್ನು ಸದನದ ಮುಂದೆ ಹಾಕಲು 14 ದಿನಗಳ ಸಮಯವಿದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *