ಮಹಾಮಾರಿಯಿಂದ ಕೆಲವು ಮೂಲಪಾಠಗಳು

ಈ ಮಹಾಮಾರಿ ಒಂದು ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯುದ್ಧದ ಸಮಯದಲ್ಲಿ ಆಗುವಂತೆ ಈಗಲೂ ಕೊರತೆಗಳು ಉಂಟಾಗುತ್ತವೆ. ಅ/ ಅಲ್ಲ ಅದನ್ನು ಕೃತಕವಾಗಿ ಸೃಷ್ಟಿಸಲಾಗುತ್ತದೆ. ಒಂದು ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಸಾರ್ವತ್ರಿಕ ವಿತರಣಾ ವ್ಯವಸ್ಥೆ ಇವೆರಡೂ ಇಂದು ತುಂಬಾ ಅವಶ್ಯಕ ಅನ್ನುವುದು ಸ್ಪಷ್ಟ. ನವ-ಉದಾರವಾದೀ ವ್ಯವಸ್ಥೆ ಎರಡನ್ನೂ ನಾಶ ಮಾಡಿದೆ. ಪ್ರಸ್ತುತ ಮಹಾಮಾರಿಯಿಂದ ನಾವು ಕಲಿಯಬೇಕಾದ ಒಟ್ಟಾರೆ ಪಾಠವೆಂದರೆ ನವ-ಉದಾರವಾದ ಯಾವ ದಾರಿ ಹಿಡಿಯುವಂತೆ ನಮ್ಮನ್ನು ಬಲವಂತ ಪಡಿಸಿದೆಯೋ ಅದರಿಂದ ಹಿಂದಕ್ಕೆ ಹೋಗಿ ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಗೂ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತೆ ಪರಿಚಯಿಸಬೇಕು. ಇಲ್ಲದೇ ಹೋದರೆ ಹಲವು ಪ್ರಶಸ್ತ ಜೀವಗಳನ್ನು ಅನಾವಶ್ಯಕವಾಗಿ ಕಳೆದುಕೊಳ್ಳಬೇಕಾಗುತ್ತದೆ.

ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೂ ಬಲಿತೆಗೆದುಕೊಂಡವ ಸಂಖ್ಯೆಗೆ ಹೋಲಿಸಿದರೆ ಈಗ ಕೊರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಇದುವರೆಗೆ ಬಹಳ ಕಡಿಮೆಯೇ.. ಆಗ ಅದು ಜಗತ್ತಿನಾದ್ಯಂತ ೫೦ ಕೋಟಿ ಜನರನ್ನು ಬಾಧಿಸಿತ್ತು. ಅಂದರೆ ಆಗಿನ ಜಗತ್ತಿನ ಜನಸಂಖ್ಯೆಯ ಶೇಕಡ ೨೭ರಷ್ಟು ಜನ ಅದರಿಂದ ತೊಂದರೆಗೊಳಗಾಗಿದ್ದರು. ಅವರಲ್ಲಿ ಸುಮಾರು ಶೇಕಡ ೧೦ರಷ್ಟು ಜನ ಸತ್ತಿದ್ದರು (ಈ ಸಂಖ್ಯೆಯ ಬಗ್ಗೆ ವಿಭಿನ್ನ ಅಂದಾಜುಗಳಿವೆ. ಇದು ಒಂದು ಸರಾಸರಿ). ಭಾರತದಲ್ಲೇ ಅಂದಾಜು ೧.೭ ಕೋಟಿ ಜನ ಇದರಿಂದ ಪ್ರಾಣಕಳೆದುಕೊಂಡಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕೊರೋನ ವೈರಾಣುವಿನಿಂದ ಜಗತ್ತಿನಾದ್ಯಂತ ಪೀಡಿತರಾದವರ ಸಂಖ್ಯೆ ಸಧ್ಯಕ್ಕೆ ಎರಡು ಲಕ್ಷ ಮೀರಿಲ್ಲ. ಸೋಂಕಿತರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು ಶೇಕಡ ೩.

ಈ ಮಹಾಮಾರಿ ಮುಂದೆ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಈ ಸಾಂಕ್ರಮಿಕ ಖಾಯಿಲೆಗಳೇ ಹಾಗೆ, ವಿಚಿತ್ರವಾಗಿ ನಡೆದುಕೊಳ್ಳುತ್ತವೆ. ೧೯೧೮ರಲ್ಲಿ ಬಂದಿದ್ದ ಸ್ಪಾನಿಷ್ ಜ್ವರ ಹೋಯಿತು ಅಂದುಕೊಳ್ಳುತ್ತಿದ್ದ ಹಾಗೆ, ಮತ್ತೆ ಎರಡನೇ ಬಾರಿ ತೀರಾ ತೀವ್ರವಾಗಿ ಎರಗಿತು. ಕೆಲವೇ ದಿನಗಳಲ್ಲಿ ಮತ್ತೆ ಹೊರಟು ಹೋಯಿತು. ಈಗಿನ ಕೊರೋನ ಕೂಡ ಹಾಗೆ. ಊಹಿಸುವುದಕ್ಕೆ ಸಾಧ್ಯವಿಲ್ಲ.

ಆದರೆ ಅದರಿಂದ ನಾವು ಕಲಿಯಬೇಕಾದ ಮೂಲಭೂತ ಪಾಠ ಈಗಾಗಲೇ ಸ್ಪಷ್ಟವಾಗಿದೆ. ಅದು ಬೇಗ ಹೋಗಿಬಿಟ್ಟರೆ ಪರವಾಗಿಲ್ಲ. ನಾವು ತೆರಬೇಕಾದ ಬೆಲೆ ಕಡಿಮೆಯಾಗಬಹುದು. ಆದರೆ ದೀರ್ಘಕಾಲ ಉಳಿದುಬಿಟ್ಟರೆ ಅದರ ಪರಿಣಾಮ ಘೋರವಾಗಿರಬಹುದು. ಹಿಂದೆಯೇ ನಾವು ಪಾಠ ಕಲಿತಿದ್ದರೆ ಹೀಗಾಗುತ್ತಿರಲಿಲ್ಲ. ವಿಶೇಷವಾಗಿ ಅದು ನಮಗೆ ಎರಡು ಬಹು ಮುಖ್ಯ ಪಾಠಗಳನ್ನು ಕಲಿಸಿದೆ.

ಮೊದಲನೆಯದು ದೇಶದಲ್ಲಿ ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬೇಕು. ಅದು ಇಡೀ ದೇಶದ ಜನರಿಗೆ ದೊರಕುವಂತಿರಬೇಕು. ಭಾರತದಲ್ಲಿ ಇಲ್ಲಿಯವರೆಗೆ ಕಾನಿಸಿಕೊಂಡಿರುವ ಪ್ರಕರಣಗಳಲ್ಲಿ ಇರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲೇ ಒಂದಿಷ್ಟು ವಿಶೇಷ ವ್ಯವಸ್ಥೆಯನ್ನು ಮಾಡಿಕೊಂಡು ಚಿಕಿತ್ಸೆ ಮಾಡಬಹುದು. ಹಾಗೆಯೇ ಸೋಂಕಿನ ತಪಾಸಣೆ ಮಾಡಿರುವ ಸಂಖ್ಯೆಯೂ ಕಡಿಮೆ ಇರುವುದರಿಂದ ಲಭ್ಯವಿರುವ ಸಾರ್ವಜನಿಕ ವ್ಯವಸ್ಥೆಯಲ್ಲಿ ಹೆಚ್ಚೇನೂ ಕಷ್ಟವಿಲ್ಲದೆ ತಪಾಸಣೆ ಮಾಡಲು ಸಾಧ್ಯವಾಗಿದೆ. ಆದರೆ ಹೀಗೆ ತಪಾಸಣೆ ಮಾಡಬೇಕಾದವರ ಹಾಗು ಸೊಂಕಿಗೆ ಒಳಗಾದವರ ಸಂಖ್ಯೆ ಹೆಚ್ಚಾದರೆ ಈಗಿರುವ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಸಾಲುವುದಿಲ್ಲ. ಖಾಸಗೀ ಆಸ್ಪತ್ರೆಗಳು ದುಬಾರಿ ಹಣ ಪಡೆಯದೆ ತಪಾಸಣೆಯನ್ನಾಗಲಿ, ಚಿಕಿತ್ಸೆಯನ್ನಾಗಲಿ ಮಾಡುವುದಿಲ್ಲ. ಹಾಗಾಗಿ ಹೆಚ್ಚಿನ ರೋಗಿಗಳು ನರಳಬೇಕಾಗುತ್ತದೆ. ಬಡವರನ್ನು ಇದು ತೀವ್ರವಾಗಿ ಬಾಧಿಸುತ್ತದೆ.

ಸುಮಾರು ೫ ಕೋಟಿ ಜನರನ್ನು ಬಲಿ ತೆಗೆದುಕೊಂಡ ಸ್ಪಾನಿಷ್ ವಿಷಮಜ್ವರ- ಎರಡು ದೃಶ್ಯಗಳು

ಸರ್ಕಾರ ಈಗಿನ ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ರೋಗಿಗಳನ್ನು ಪರೀಕ್ಷಿಸಲು ಹಾಗೂ ಚಿಕಿತ್ಸೆ ನೀಡಲು ಖಾಸಗೀ ಆಸ್ಪತ್ರೆಗಳನ್ನು ಒತ್ತಾಯಿಸಿದರೆ ಪರಿಸ್ಥಿತಿ ಬೇರೆಯಾಗಬಹುದು. ಆದರೆ ಅದರ ಸಾಧ್ಯತೆ ಬಹಳ ಕಡಿಮೆ. ಈ ತನಕದ ಭಾರತದ ಪರಿಸ್ಥಿತಿಯನ್ನು ನೋಡಿದರೆ ಖಾಸಗಿ ಆಸ್ಪತ್ರೆಗಳು ತುರ್ತಾಗಿ ಸೇರಿಸಿಕೊಳ್ಳಲೇಬೇಕಾಗಿ ಬರುವ ಪ್ರಕರಣಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಸಾಧ್ಯತೆ ಇಲ್ಲ. ಏಕೆಂದರೆ, ದಿಢೀರನೆ ಹೃದಯಾಘಾತ ಆದವರು, ಅಪಘಾತಕ್ಕೆ ಒಳಗಾದವರು ಮುಂತಾದ  ಆಯ್ಕೆಯಿಲ್ಲದೆ ಖಾಸಗಿ ಆಸ್ಪತ್ರೆಗೆ ಬಂದವರನ್ನು ಹಣ ಕಟ್ಟದೆ ಸೇರಿಸಿಕೊಳ್ಳುವ ಯಾವುದೇ ಅವಕಾಶ ಕೂಡ ಭಾರತದಲ್ಲಿ ಇಲ್ಲ. ಸಂಪೂರ್ಣವಾಗಿ ಮಾರುಕಟ್ಟೆಯ ಆರ್ಥಿಕತೆಯನ್ನು ಅನುಸರಿಸುವ ಅಮೇರಿಕೆಯ ಹಲವು ರಾಜ್ಯಗಳಲ್ಲಿ ಅಂತಹ ಅವಕಾಶಗಳು ಇವೆ. ತುರ್ತುಚಿಕಿತ್ಸೆ ಬೇಕಾದಾಗ ಪ್ರಮುಖ ಶಸ್ತ್ರಚಿಕಿತ್ಸೆಯೂ ಸೇರಿದಂತೆ ಚಿಕಿತ್ಸೆ ಮಾಡಲಾಗುತ್ತದೆ. ವಿಮಾ ಸೌಲಭ್ಯವಿಲ್ಲದಿದ್ದಾಗಲೂ ಪುಕ್ಕಟೆಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಅಂತಹ ಆಕಸ್ಮಿಕ ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕಾದ ಯಾವ ಒತ್ತಾಯವೂ ಖಾಸಗೀ ಆಸ್ಪತ್ರೆಗಳಿಗಿಲ್ಲ. ಅವುಗಳು ರಿಯಾಯತಿ ದರದಲ್ಲಿ ಭೂಮಿ ಹಾಗೂ ಇತರ ಹಲವು ಅನುಕೂಲಗಳನ್ನು ಸರ್ಕಾರದಿಂದ ಪಡೆದುಕೊಂಡಿರುತ್ತವೆ. ಆದರೂ ಅಲ್ಲಿ ಅಂತಹ ಪ್ರಕರಣಗಳಲ್ಲಿ ಪುಕ್ಕಟೆಯಾಗಿ ಚಿಕಿತ್ಸೆ ನೀಡುವುದಿಲ್ಲ.

ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಖಾಸಗೀ ಕ್ಷೇತ್ರದ ಮೇಲೆ ಅವಲಂಬನೆ ಹೆಚ್ಚುತ್ತಿದೆ. ಹಾಗಾಗಿ ಇಂತಹ ಸಾಂಕ್ರಾಮಿಕ ಖಾಯಿಲೆಗಳು ವ್ಯಾಪಕವಾದಾಗ ಅವನ್ನು ನಿಭಾಯಿಸುವುದರಲ್ಲಿ ನಾವು ಖಂಡಿತಾ ಅಸಮರ್ಥರಾಗುತ್ತೇವೆ. ಜಾಗತೀಕರಣದಿಂದಾಗಿ ಇಂತಹ ಸಾಂಕ್ರಾಮಿಕಗಳು ಆಗಾಗ ಸಂಭವಿಸುತ್ತಿವೆ. ನಿಜ, ಅವು ಯಾವವೂ  ೧೯೧೮ರ ಇನ್‌ಫ್ಲುಯೆಂಜಾ ಸಾಂಕ್ರಾಮಿಕದಷ್ಟು ತೀವ್ರವಾಗಿಲ್ಲದೇ ಇರಬಹುದು. ಆದರೆ ಜನ ಅವುಗಳಿಂದ ನರಳುವುದನ್ನು ತಪ್ಪಿಸಬೇಕಾದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ತುಂಬಾ ಅವಶ್ಯಕ.

ಈ ಸಂದರ್ಭದಲ್ಲಿ ಇನ್ನೊಂದು ಪಾಠವನ್ನು ನಾವು ಕಲಿಯಬೇಕು. ಅವಶ್ಯಕ ವಸ್ತುಗಳ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಅವಶ್ಯಕವಾಗಿ ಬೇಕು. ಈ ಸಾಂಕ್ರಾಮಿಕ ಮಹಾಪಿಡುಗು, ಜಾಗತಿಕ ಆರ್ಥಿಕ ಹಿನ್ನಡೆಯ ಮೇಲೆ ಮಾಡುತ್ತಿರುವ ಪರಿಣಾಮವನ್ನು ಕುರಿತಂತೆ ಹಲವು ಬರಹಗಳು ಬಂದಿವೆ. ಈವರೆಗೂ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಯಾಗಿದ್ದ ಚೀನಾ ಇಂದು ಈ ಮಹಾಮಾರಿಯ ಕೇಂದ್ರವಾಗಿದೆ. ಅಲ್ಲಿ ಉತ್ಪನ್ನ ಕಡಿಮೆಯಾಗಿರುವುದರಿಂದ ಜಗತ್ತಿನ ಒಟ್ಟಾರೆ ಬೇಡಿಕೆಯಲ್ಲೇ ಕುಸಿತವಾಗುತ್ತದೆ. ಅಲ್ಲಿಂದ ಜಗತ್ತಿಗೆ ಸರಬರಾಜಾಗುತ್ತಿದ್ದ ಸರಕುಗಳು ಪೂರೈಕೆ ಆಗುತ್ತಿಲ್ಲ. ಅದರಿಂದ ಜಗತ್ತಿನ ಉತ್ಪನ್ನದ ಮೇಲೂ ಪ್ರತಿಕೂಲ ಪರಿಣಾಮವಾಗಿದೆ. ಜೊತೆಗೆ ಪ್ರವಾಸಿಗರ ಹಾಗೂ ಪ್ರಯಾಣಿಕರ ಸಂಖ್ಯೆ ಪೂರ್ಣವಾಗಿ ಕುಸಿದಿದೆ. ಇದರಿಂದ ವಿಮಾನ, ಹೋಟೆಲ್ ಕೈಗಾರಿಕೆ, ಇತ್ಯಾದಿ ಉದ್ದಿಮೆಗಳಿಗೂ ಹಾನಿಯಾಗಿದೆ. ಅದರ ಪರಿಣಾಮವಾಗಿ ಉಳಿದ ಉದ್ದಿಮೆಗಳೂ ಕುಸಿದಿವೆ. ಈ ಸಾಂಕ್ರ್ರಾಮಿಕದಿಂದ ಜಾಗತಿಕ ಆರ್ಥಿಕತೆ ಸಂಕುಚನಗೊಳ್ಳಲಿದೆ.

ಆದರೆ ಇದಕ್ಕೆ ಇನ್ನೊಂದು ಆಯಾಮವಿದೆ. ಅದನ್ನು ಅಷ್ಟಾಗಿ ಗಮನಿಸಿಲ್ಲ. ಕೋಟಿಗಟ್ಟಲೆ ಜನ ಸಂಪೂರ್ಣವಾಗಿ ಮನೆಯಲ್ಲೇ ಉಳಿದಿರುವುದರಿಂದ ಹೆಚ್ಚಿನ ಅವಶ್ಯಕ ಸರಕುಗಳಿಗೆ ಬೇಡಿಕೆ ಏರುತ್ತದೆ. ಅವರು ಅದನ್ನು ಬಳಕೆಗಾಗಿ ಮಾತ್ರ ಶೇಖರಿಸಿಕೊಳ್ಳುವುದಿಲ್ಲ. ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಎಲ್ಲರೂ ಶೇಖರಿಸಿಕೊಳ್ಳುತ್ತಿದ್ದಾರೆ, ಇದರಿಂದ ಮುಂದೆ ಕೊರತೆ ಉಂಟಾಗಬಹುದು ಎನ್ನುವ ಭಯದಿಂದಲೂ, ಹತಾಶೆಯಿಂದ ಜನ ತುಂಬಿಟ್ಟುಕೊಳ್ಳುತ್ತಿದ್ದಾರೆ. ಜನ ಮನೆ ಬಿಟ್ಟು ಆಚೆ ಹೋಗಲಾಗದ ಪರಿಸ್ಥಿತಿ ಬಂದಾಗ, ಅದೂ ದೀರ್ಘಕಾಲ ಪರಿಸ್ಥಿತಿ ಮುಂದುವರಿಯಬಹುದು ಎಂಬ ಆತಂಕ ಆವರಿಸಿಕೊಂಡಾಗ ತಮ್ಮ ಅವಶ್ಯಕತೆಗಿಂತ ಹೆಚ್ಚಾಗಿ ಸೇರಿಸಿಟ್ಟುಕೊಳ್ಳುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಜೊತೆಗೆ ಹಾಗೆ ಅತಿಯಾಗಿ ಸ್ಟಾಕ್ ಮಾಡಿಕೊಳ್ಳುವುದರಿಂದ ಕೊರತೆ ಬೀಳಬಹುದೆಂಬ ಲೆಕ್ಕಾಚಾರದಿಂದ ಕಾಳಸಂತೆಕೋರರು ದಾಸ್ತಾನುಗಳನ್ನು ಕೂಡಿಡುವುದು ಹೆಚ್ಚಾಗುತ್ತದೆ. ಅದರಿಂದ ಸರಕುಗಳ ಬೆಲೆ ಮತ್ತಷ್ಟು ಹೆಚ್ಚುತ್ತದೆ. ಹೀಗೆ ಈ ಮಹಾಮಾರಿಯಿಂದ ವಿವಿಧ ಅವಶ್ಯಕ ವಸ್ತುಗಳ ತೀವ್ರ ಕೊರತೆಯುಂಟಾಗುತ್ತದೆ.

ನಿಜ ಹೇಳಬೇಕೆಂದರೆ, ಈ ಪ್ರಕ್ರಿಯೆ ಭಾರತದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಮಹಾಮಾರಿ  ತೀವ್ರವಾದಂತೆ ಬರುವ ದಿನಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಬಹುದು. ಅದು ದುಡಿಯವ ಜನತೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಅವರೆಲ್ಲಾ ಸಾರ್ವಜನಿಕ ಪಡಿತರ ಪದ್ಧತಿಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಬಗ್ಗೆ ಯೋಚಿಸಬೇಕಾಗಿಲ್ಲ ಅನ್ನಬಹುದು. ಆದರೆ ಈ ವಾದ ಎರಡು ಕಾರಣಕ್ಕೆ ಸರಿಯಿಲ್ಲ. ಒಂದು ಸಾರ್ವಜನಿಕ ಪಡಿತರ ಪದ್ಧತಿಯಲ್ಲಿ ಎಲ್ಲಾ ಅವಶ್ಯಕ ವಸ್ತುಗಳನ್ನು ವಿತರಿಸುವುದಿಲ್ಲ. ಎರಡನೆಯದಾಗಿ ಎಲ್ಲಾ ಕಾರ್ಮಿಕರು ಸಾರ್ವಜನಿಕ ವಿತರಣ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಬರವುದಿಲ್ಲ. ಎಪಿಎಲ್ ಮತ್ತು ಬಿಪಿಎಲ್ ನಡುವೆ ವ್ಯತ್ಯಾಸ ಕಲ್ಪಿಸಿದ ನಂತರ ಸಾರ್ವಜನಿಕ ವಿತರಣ ವ್ಯವಸ್ಥೆ ಕೇವಲ ಬಿಪಿಎಲ್ ಇರುವವರಿಗೆ ಮಾತ್ರ ಸೀಮಿತವಾಯಿತು. ದೊಡ್ಡ ಸಂಖ್ಯೆಯ ಜನ ಅದರ ವ್ಯಾಪ್ತಿಯಿಂದ ಹೊರಗುಳಿದರು. ಹಾಗಾಗಿ ಮುಂದೆ ಜನ ಅತಿಯಾಗಿ ಸ್ಟಾಕ್ ಮಾಡಿಕೊಳ್ಳುವುದರಿಂದ ಹಾಗು ಕಾಳಸಂತೆಕೋರರ ಹಾವಳಿಯಿಂದ ಸರಕುಗಳು ಮಾಯವಾಗತೊಡಗಿದಾಗ ಈ ಜನ ತೊಂದರೆಗೆ ಒಳಗಾಗುತ್ತಾರೆ. ಇದೇ ಕಾರಣಕ್ಕೆ ಕೇವಲ ಆಹಾರಧಾನ್ಯಗಳು ಮಾತ್ರವಲ್ಲದೆ ಬಹುತೇಕ ಎಲ್ಲಾ ಅವಶ್ಯಕ ಪದಾರ್ಥಗಳನ್ನು ಮಾರುವ ಒಂದು ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆ ಅವಶ್ಯಕ.

ಈ ಕಷ್ಟ ಕಾಲದಲ್ಲಿ ಇಂತಹ ವ್ಯವಸ್ಥೆಯ ಅವಶ್ಯಕತೆ ನಮಗೆ ಗೋಚರವಾಗುತ್ತದೆ. ಆದರೆ ಇಂತಹ ಸಂದರ್ಭಗಳು ಅಪರೂಪವೇನಲ್ಲ. ಹಾಗಾಗಿ ವಿಭಿನ್ನ ಅವಶ್ಯಕ ವಸ್ತುಗಳನ್ನು ಮಾರುವ ವ್ಯವಸ್ಥೆ ಆರ್ಥಿಕತೆಯ ಒಂದು ಶಾಶ್ವತ ಲಕ್ಷಣವಾಗಬೇಕು.

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಮಹಾಮಾರಿ ಒಂದು ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಯುದ್ಧದ ಸಮಯದಲ್ಲಿ ಆಗುವಂತೆ ಈಗಲೂ ಕೊರತೆಗಳು ಉಂಟಾಗುತ್ತದೆ. ಅಷ್ಟೇ ಅಲ್ಲ ಅದನ್ನು ಕೃತಕವಾಗಿ ಸೃಷ್ಟಿಸಲಾಗುತ್ತದೆ. ಅದಕ್ಕೆ ಸಾರ್ವತ್ರಿಕ ವಿತರಣಾ ವ್ಯವಸ್ಥೆ ಒಂದು ಅವಶ್ಯಕ ಪರಿಹಾರ. ಸಧ್ಯಕ್ಕೆ ಮಾತ್ರವಲ್ಲ ಅದು ಆರ್ಥಿಕತೆಯ ಒಂದು ಶಾಶ್ವತ ಭಾಗವಾಗಿಬಿಡಬೇಕು.

ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಒಂದು ಸಾರ್ವತ್ರಿಕ ವಿತರಣಾ ವ್ಯವಸ್ಥೆ ಇವೆರಡೂ ಇಂದು ತುಂಬಾ ಅವಶ್ಯಕ ಅನ್ನುವುದು ಸ್ಪಷ್ಟ. ನವಉದಾರವಾದೀ ವ್ಯವಸ್ಥೆ ಎರಡನ್ನೂ ನಾಶ ಮಾಡಿದೆ. ಅದು ಶಿಕ್ಷಣ ಹಾಗೂ ಆರೋಗ್ಯ ಸೇವೆಯಂತಹ ಅವಶ್ಯಕ ಸೇವೆಗಳ ಖಾಸಗೀಕರಣವನ್ನು ಪ್ರೋತ್ಸಾಹಿಸಿದೆ. ಅದು ಎಂಎನ್‌ಸಿಗಳು ಸೇರಿದಂತೆ ಖಾಸಗೀ ವ್ಯಾಪಾರಿಗಳನ್ನು ಆಹಾರಧಾನ್ಯಗಳ ಮಾರುಕಟ್ಟೆಗೆ ಕರೆತಂದಿದೆ. ಶ್ರೀಮಂತ ರಾಷ್ಟ್ರಗಳು ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯ ಮಾತುಕತೆಯ ಸಂದರ್ಭದಲ್ಲಿ ಭಾರತವು ಪಡಿತರ ಪದ್ಧತಿಯನ್ನು ನಿಲ್ಲಿಸಬೇಕೆಂದು ಬಯಸಿದವು. ಧಾನ್ಯಗಳನ್ನು ರೈತರಿಂದ ಕೊಂಡುಕೊಳ್ಳುವ ವ್ಯವಸ್ಥೆಯನ್ನು ನಿಲ್ಲಿಸಲು ಒತ್ತಾಯಿಸಿದವು. ಆದರೆ ಯಾವುದೇ ಭಾರತೀಯ ಸರ್ಕಾರವೂ ಇದಕ್ಕೆ ಧೈರ್ಯ ಮಾಡಲಿಲ್ಲ. ಹಾಗಾಗಿ ಇಂದಿಗೂ ನಮ್ಮಲ್ಲಿ ಭಾಗಶಃವಾದರೂ ಪಡಿತರ ಪದ್ಧತಿ ಉಳಿದುಕೊಂಡಿದೆ. ಅದು ಬಿಪಿಎಲ್ ರೂಪದಲ್ಲಿ ಅಸ್ತಿತ್ವದಲ್ಲಿದೆ. ಈ ಬದಲಾವಣೆಯನ್ನು ತಂದ ನವಉದಾರವಾದೀ ವ್ಯವಸ್ಥೆ ನಮ್ಮ ದೇಶವನ್ನು ಇಂತಹ ಮಹಾಮಾರಿಯ ಉಪಟಳಕ್ಕೂ ಪದೇ ಪದೇ ಒಡ್ಡುತ್ತಲೇ ಇದೆ. ಇದರಿಂದಾಗಿಯೂ ಈ ಬದಲಾವಣೆಗಳನ್ನು ತಪ್ಪಿಸಿ ಮತ್ತೆ ಹಳೆಯ ವ್ಯವಸ್ಥೆಯನ್ನು ತರಬೇಕಾಗಿದೆ.

ಪ್ರಸ್ತುತ ಮಹಾಮಾರಿಯಿಂದ ನಾವು ಕಲಿಯಬೇಕಾದ ಒಟ್ಟಾರೆ ಪಾಠವೆಂದರೆ ನವ-ಉದಾರವಾದ ಯಾವ ದಾರಿ ಹಿಡಿಯುವಂತೆ ನಮ್ಮನ್ನು ಬಲವಂತ ಪಡಿಸಿದೆಯೋ ಅದರಿಂದ ಹಿಂದಕ್ಕೆ ಹೋಗಿ ಸಮಗ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಗೂ ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತೆ ಪರಿಚಯಿಸಬೇಕು. ಇಲ್ಲದೇ ಹೋದರೆ ಹಲವು ಪ್ರಶಸ್ತ ಜೀವಗಳನ್ನು ಅನಾವಶ್ಯಕವಾಗಿ ಕಳೆದುಕೊಳ್ಳಬೇಕಾಗುತ್ತದೆ.

ಅನು: ಟಿ.ಎಸ್.ವೇಣುಗೋಪಾಲ್ ಕೃಪೆ: ಅರ್ಥ-

Donate Janashakthi Media

Leave a Reply

Your email address will not be published. Required fields are marked *