ಉತ್ತರಪ್ರದೇಶ: ಐವರು ಮಲದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಆಗ್ರಾದ ಫತೇಹಾಬಾದ್‌ನಲ್ಲಿ ಮಂಗಳವಾರ ನಡೆದಿದೆ. ಮೂವರು ಅಪ್ರ್ರಾಪ್ತ ಸಹೋದರರು ಹಾಗೂ ನೆರೆಮನೆಯ ಇನ್ನಿಬ್ಬರು ಮುಳುಗಿ ಮತಪಟ್ಟಿದ್ದಾರೆ. ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಓರ್ವ ನೆರೆಮನೆಯವನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. “ಫತೇಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ್‌ಪುರ ಗ್ರಾಮದಲ್ಲಿ 10 ವರ್ಷದ ಅನುರಾಗ್ ಆಟ ಆಡುವಾಗ 15 ಅಡಿ ಆಳದ ಮಲದ ಗುಂಡಿಗೆ ಬಿದ್ದಿದ್ದಾನೆ. ಸೋನು(25), ರಾಮ್ ಖಿಲಾಡಿ, ಹರಿಮೋಹನ್(16) ಹಾಗೂ ಅವಿನಾಶ್(12) ಎಂದು ಗುರುತಿಸಲ್ಪಟ್ಟ ಇತರರು ಅನುರಾಗ್ ನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾಗ ಮುಳುಗಿದ್ದಾರೆ” ಎಂದು ತಿಳಿದುಬಂದಿದೆ.
ಹರಿಮೋಹನ್, ಅವಿನಾಶ್ ಹಾಗೂ ಅನುರಾಗ್ ಸಹೋದರರಾಗಿದ್ದಾರೆ. ಸೋನು ಇವರ ಸಂಬಂಧಿಯಾಗಿದ್ದ. ರಾಮ್ ಖಿಲಾಡಿ ನೆರೆಮನೆಯವನಾಗಿದ್ದ. ಇವರೆಲ್ಲರೂ ಬಾಲಕನನ್ನು ರಕ್ಷಿಸಲು ಶೌಚಗುಂಡಿಗೆ ಇಳಿದಿದ್ದು, ಎಲ್ಲರೂ ಪ್ರಜ್ಞಾಹೀನರಾಗಿದ್ದರು ಎಂದು ವರದಿಯಾಗಿದೆ.
ಇವರನ್ನು ಗ್ರಾಮಸ್ಥರು ಗುಂಡಿಯಿಂದ ಹೊರಗೆ ತೆಗೆದಿದ್ದಾರೆ. ನಂತರ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಬಾಲಕ ಅಲ್ಲಿಯೇ ಮೃತಪಟ್ಟಿದ್ದರೆ, ಉಳಿದ ನಾಲ್ವರು ಎಸ್ ಎನ್ ಮೆಡಿಕಲ್ ಕಾಲೇಜಿಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.