ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಡಬಲ್ ಪದಕ ವಿಜೇತ ಶೂಟರ್ ಮನು ಬಾಕರ್ ಹಿಂದೆ ಸುಮಾರು 40 ಜಾಹಿರಾತು ಕಂಪನಿಗಳು ಹಿಂದೆ ಬಿದ್ದಿದೆ.
ಒಂದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆ ಬರೆದಿರುವ ಮನು ಬಾಕರ್ ಮೂರನೇ ಪದಕದತ್ತ ಕಣ್ಣಿಟ್ಟಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಲಿದ ಮೊದಲ ಎರಡೂ ಪದಕಗಳನ್ನು ತಂದುಕೊಟ್ಟಿರುವ ಮನು ಭಾಕರ್ ಹಿಂದೆ ಇದೀಗ ಜಾಹಿರಾತು ಕಂಪನಿಗಳು ಮುಗಿಬಿದ್ದಿವೆ.
ಮನು ಭಾಕರ್ 10 ಮೀ. ಏರ್ ಪಿಸ್ತೂಲು ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದರೆ, 10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ನಲ್ಲಿ ಸರ್ಬಜಿತ್ ಸಿಂಗ್ ಜೊತೆ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಇದೀಗ 25 ಮೀ. ಏರ್ ಪಿಸ್ತೂಲ್ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿದ್ದಾರೆ.
ಸುಮಾರು 40 ಜಾಹಿರಾತು ಕಂಪನಿಗಳು ಮನು ಬಾಕರ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಗಿಬಿದ್ದಿದ್ದು, ಆರಂಭದಲ್ಲಿ 20 ಲಕ್ಷ ರೂ. ಪಡೆಯುತ್ತಿದ್ದ ಮನುಗೆ ಈಗ ಕಂಪನಿಗಳು ಕೋಟ್ಯಂತರ ರೂಪಾಯಿ ನೀಡಲು ಮುಂದೆ ಬಂದಿವೆ.
ಮನು ಭಾಕರ್ ಜಾಹಿರಾತಿಗಾಗಿ ಆರಂಭದಲ್ಲಿ 20ರಿಂದ 25 ಲಕ್ಷ ರೂ. ಶುಲ್ಕ ವಿಧಿಸುತ್ತಿದ್ದರು. ಆದರೆ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ತಮ್ಮ ಶುಲ್ಕವನ್ನು 6ರಿಂದ 7 ಪಟ್ಟು ಹೆಚ್ಚಿಸಿದ್ದು, 1.5 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಜಾಹಿರಾತು ಕಂಪನಿಗಳು ಈ ಮೊತ್ತವನ್ನು ಕೊಡಲು ಹಿಂದೆ ಮುಂದೆ ನೋಡುತ್ತಿಲ್ಲ ಎಂಬುದು ವಿಶೇಷ.
ಮನು ಭಾಕರ್ ಒಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಕೇವಲ 2ರಿಂದ 3 ದಿನಗಳ ಅಂತರದಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ನಾವು ದೀರ್ಘಕಾಲದ ಒಪ್ಪಂದಗಳನ್ನು ಎದುರು ನೋಡುತ್ತಿದ್ದು ಕೆಲವು ಜಾಹಿರಾತುಗಳಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಐಓಎಸ್ ಸ್ಫೋರ್ಟ್ಸ್ ಅಂಡ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಸಿಇಒ ನೀರವ್ ಥೋಮರ್ ತಿಳಿಸಿದ್ದಾರೆ.
ಬಹುತೇಕ ಜಾಹಿರಾತುಗಳು ಒಂದು ವರ್ಷದ ಒಪ್ಪಂದದ್ದಾಗಿವೆ. ನಾವು ದೀರ್ಘಕಾಲದ ಒಡಂಬಡಿಕೆಗೆ ಒತ್ತು ನೀಡಿದ್ದೇವೆ. ಕೆಲವು 1 ತಿಂಗಳು, 3 ತಿಂಗಳು ಮತ್ತು 6 ತಿಂಗಳ ಅವಧಿಯ ಸಾಮಾಜಿಕ ಜಾಲತಾಣದ ಜಾಹಿರಾತುಗಳಿಗೂ ಬೇಡಿಕೆ ಬಂದಿವೆ ಎಂದು ಥೋಮರ್ ಹೇಳಿದರು.