ಬೆಂಗಳೂರು :ರಾಜ್ಯದ ಮದರಸಾಗಳಲ್ಲಿ ವಾರಕ್ಕೆ ಎರಡು ದಿನ ಕನ್ನಡ ಕಲಿಸುವ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಪ್ರಾಯೋಗಿಕವಾಗಿ ರಾಜ್ಯದ ಬೆಂಗಳೂರು, ವಿಜಯಪುರ, ರಾಯಚೂರು ಹಾಗೂ ಕಲಬುರಗಿಯ ಕೆಲ ಆಯ್ದ ಮದರಸಾಗಳಲ್ಲಿ ಶುರು ಮಾಡಲಾಗುವುದು. ಅದರ ಸಾಧಕ–ಬಾಧಕ ನೋಡಿಕೊಂಡು ರಾಜ್ಯದ ಇತರೆ ಕಡೆಗಳಲ್ಲಿಯೂ ವಿಸ್ತರಿಸುವ ಯೋಚನೆ ಇದೆ. ಭಾಷೆಯ ಅಂತರ ದೂರ ಮಾಡುವುದು ಇದರ ಮುಖ್ಯ ಉದ್ದೇಶ. ಅಲ್ಪಸಂಖ್ಯಾತ ಮುಸ್ಲಿಮರಿಂದಲೂ ಇದಕ್ಕಾಗಿ ಬೇಡಿಕೆ ಬಂದಿತ್ತು ಎಂದು ನಗರದಲ್ಲಿ ಸೋಮವಾರ ವಿವಿಧ ಇಲಾಖೆಗಳ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಈ ಸಂಬಂಧ ಮದರಸಾಗಳನ್ನು ನಡೆಸುತ್ತಿರುವ ಕೆಲ ವಿದ್ವಾಂಸರೊಂದಿಗೆ ಚರ್ಚಿಸಿದ್ದೇನೆ. ಯಾವ ವಿಷಯ ಕಲಿಸಬೇಕೆಂಬ ಗೊಂದಲ ಇಲ್ಲ. ಏಕೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಪಠ್ಯ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಅವರ ಮಾತೃಭಾಷೆಯಲ್ಲಿ ಓದಿದವರಿಗೆ ಶಿಕ್ಷಣದಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅದೇ ನೀತಿ ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕು. ಕಲ್ಯಾಣ ಕರ್ನಾಟಕದ ಗಡಿಭಾಗದಲ್ಲಿರುವವರಿಗೆ ಸಂವಿಧಾನದ ಕಲಂ 371(ಜೆ) ವಿಶೇಷ ಸ್ಥಾನಮಾನದ ಸೌಲಭ್ಯ ಕಲ್ಪಿಸಬೇಕು. ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 80ರಷ್ಟು ಉದ್ಯೋಗಗಳು ಕನ್ನಡಿಗರಿಗೆ ಮೀಸಲಿಡಬೇಕು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಬೀದರ ಜಿಲ್ಲೆಯಲ್ಲಿ ಕನ್ನಡ ಪರೀಣಾಮಕಾರಿಯಾಗಿ ಅನುಷ್ಠಾನವಾಗದೆ ಎನಾದರು ಲೋಪ ದೋಷಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ನಾಳೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು. ಕನ್ನಡವನ್ನು ಪರೀಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಹಾಗಾಗಿ ಎಲ್ಲಾ ಕಡೆ ಹೋಗಿ ಕನ್ನಡದ ಕುರಿತು ವಿಚಾರ ವಿನಿಮಯ ಮಾಡಲಾಗುತ್ತಿದೆ ಎಂದು ಹೇಳಿದರು.
ನಾವು ಬೇರೆ ಬೇರೆ ವಿಷಯಗಳ ಕುರಿತು ಮಾತನಾಡುತ್ತೆವೆ ಆದರೆ ಕನ್ನಡೀಕರಣಕ್ಕಾಗಿ ಏಕೆ ಮಾತನಾಡುವುದಿಲ್ಲ. 27 ಕಡೆ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದು ಗೂಡಿಸಲು ಹಲವಾರು ಜನರು ಹೋರಾಟಮಾಡಿ ನಮ್ಮನ್ನು ಒಂದು ಗೂಡಿಸಿದ್ದಾರೆ. ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ ಹಲವಾರು ಜನರು ಕನ್ನಡ ಉಳಿವಿಗಾಗಿ ಹೋರಾಡಿದ್ದಾರೆ ಅದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಜರಿದ್ದರು.