ಮತಾಂಧನೊಬ್ಬನನ್ನು ಪೂಜನೀಯಗೊಳಿಸುವ ಈ ಬಗೆ

ಪ್ರಕಾಶ ಕಾರಟ್

ಆರಂಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಬ್ಬ ಕ್ರಾಂತಿಕಾರಿಯಾಗಿದ್ದರೂ, ಅಂಡಮಾನ್ ಜೈಲಿಗೆ ಕಳಿಸಿದ ನಂತರ ಬ್ರಿಟಿಶರಿಗೆ ಶರಣಾಗತರಾಗಿ ತನ್ನ ಉಳಿದ ಜೀವನವನ್ನು ಹಿಂದೂ-ಮುಸ್ಲಿಂ ವೈಷಮ್ಯವನ್ನು ಪ್ರಚೋದಿಸುವಲ್ಲಿ ಕಳೆದ ಸಾವರ್ಕರ್‍ರನ್ನು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವುದು, ಸತ್ಯಕ್ಕೆ ಬಗೆಯುವ ಅಪಚಾರ ಎಂದೇ ಹೇಳಬೇಕಾಗುತ್ತದೆ. ಮೋದಿ ಸರಕಾರ ಅಧಿಕೃತವಾಗಿ ಮಹಾತ್ಮ ಗಾಂಧಿಯ 150ನೇ ಜನ್ಮ ವಾರ್ಷಿಕವನ್ನು ಆಚರಿಸುತ್ತಿರುವ ಸಮಯದಲ್ಲೇ ಬಿಜೆಪಿ ಸರಕಾರ ದೇಶದ ಅತ್ಯುನ್ನತ ಬಿರುದನ್ನು ಸಾವರ್ಕರ್‍ಗೆ ಪ್ರದಾನ ಮಾಡ ಬಯಸುತ್ತಿರುವುದು ಅರ್ಥಪೂರ್ಣವೇ ಆಗಿದೆ. ಸಂಕೇತ ಸ್ಪಷ್ಟವಾಗಿದೆ -ಸಾವರ್ಕರ್ ರನ್ನು ಗಾಂಧೀಜಿಗೆ ಸಮನಾದ ಸ್ಥಾನದಲ್ಲಿ ಇಡಲಾಗುತ್ತಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಿಜೆಪಿ ಚುನಾವಣಾ ಪ್ರಣಾಳಿಕೆ ಹಿಂದುತ್ವ ಪರಿಕಲ್ಪನೆಯ ಪಿತನಾದ ವಿನಾಯಕ ದಾಮೋದರ ಸಾವರ್ಕರ್‍ಗೆ ‘ಭಾರತ ರತ್ನ’ದ ಬಿರುದು ಕೊಡಬೇಕೆಂಬ ಪ್ರಸ್ತಾವವನ್ನು ಮುಂದಿಟ್ಟಿದೆ. ಇದು ಹಿಂದುತ್ವ ತತ್ವಕ್ಕೆ ಯುಕ್ತತೆಯನ್ನು ಕೊಡಿಸಲು ಮತ್ತು ಸಾವರ್ಕರ್‍ರಂತಹ ಪಕ್ಕಾ ಕೋಮುವಾದಿ ವ್ಯಕ್ತಿಗಳಿಂದ ಪೂಜನೀಯ ಮೂರ್ತಿಗಳನ್ನು ಸೃಷ್ಟಿಸಲು ಬಿಜೆಪಿ-ಆರೆಸ್ಸೆಸ್ ನಡೆಸಿರುವ ಕಾರ್ಯತಂತ್ರದ ಒಂದು ಭಾಗವಾಗಿದೆ. ಅದನ್ನು ಮಾಡಲು ಸಾವರ್ಕರ್ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಪ್ರತಿಮ ರಾಷ್ಟ್ರವಾದಿ ಎಂಬ ಪುರಾಣ ಸೃಷ್ಟಿಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಮಗ್ನವಾಗಿವೆ.

ಈ ಪುರಾಣ ಸೃಷ್ಟಿಯ ನಿಜಸ್ವರೂಪವನ್ನು ಮತ್ತು ಇದಕ್ಕೆ ಸಂಬಂಧಪಟ್ಟಂತೆ ಹಿಂದುತ್ವ ಪಡೆಗಳ ಹುನ್ನಾರಗಳನ್ನು ಬಯಲಿಗೆಳೆಯುವುದು ಅಗತ್ಯವಾಗಿದೆ.

ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಬ್ಬ ಕ್ರಾಂತಿಕಾರಿಯೆಂದೇ ಬದುಕು ಆರಂಭಿಸಿದವರು. ಆದರೆ ಅವರ ಬದುಕಿನ ಈ ಘಟ್ಟ ಅವರನ್ನು ಎರಡು ಬಾರಿ ಜೀವಾವಧಿ ಗಡೀಪಾರು ಶಿಕ್ಷೆಗೆ ಗುರಿಪಡಿಸಿ 1911ರಲ್ಲಿ ಅಂಡಮಾನ್ ಸೆಲ್ಯುಲರ್ ಜೈಲಿಗೆ ಕಳಿಸಿದಾಗ ಕೊನೆಗೊಂಡಿತು. ಮೊದಲ ವರ್ಷದಲ್ಲೇ(1911) ಅವರು ಬ್ರಿಟಿಶ್ ಅಧಿಕಾರಿಗಳಿಗೆ ಕ್ಷಮಾದಾನದ ಒಂದು ಅರ್ಜಿಯನ್ನು ಕಳಿಸಿದರು. ಮತ್ತೆ 1913, 1917 ಮತ್ತು 1920ರಲ್ಲೂ ಅವರು ಅದನ್ನೇ ಮಾಡಿದರು. ಈ ಅರ್ಜಿಗಳಲ್ಲಿ ಅವರು ಬ್ರಿಟಿಶ್ ಸರಕಾರದ ವಿರುದ್ಧ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸುವ ಆಶ್ವಾಸನೆ ನೀಡಿದರು; ಬ್ರಿಟಿಶ್ ಸರಕಾರಕ್ಕಾಗಿ “ಅದು ಬಯಸುವ ಯಾವುದೇ ಸ್ಥಾನದಿಂದ” ಕೆಲಸ ಮಾಡುವುದಾಗಿಯೂ (1913ರ ಅರ್ಜಿಯಲ್ಲಿ) ಹೇಳಿದರು.

ನೈತಿಕ ಹೇಡಿತನದ ಈ ಪ್ರದರ್ಶನ ಅಂಡಮಾನ್ ಜೈಲಿನಲ್ಲಿ ಇರಿಸಿದ್ದ ಇತರ ನೂರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ತದ್ವಿರುದ್ಧವಾಗಿತ್ತು. ಇಂತಹ ಹೋರಾಟಗಾರರಲ್ಲಿ ಮುಂದೆ ಕಮ್ಯುನಿಸ್ಟರಾದ ಗಣೇಶ್ ಘೋಷ್, ಸತೀಶ್ ಪರ್ಕಾಶಿ, ಹರೇಕೃಷ್ಣ ಕೋನಾರ್ ಮತ್ತು ಸುಬೋಧ್ ರಾಯ್ ಸೇರಿದ್ದಾರೆ.

1923ರಲ್ಲಿ ಜೈಲಿನಿಂದ ಹೊರಬಂದ ಮೇಲೆ, ಸಾವರ್ಕರ್ ತಮ್ಮ ಆಶ್ವಾಸನೆಯಂತೆಯೇ ನಡೆದುಕೊಂಡರು, ಬ್ರಿಟಿಶ್ ಆಳರಸರ ವಿರುದ್ಧ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲಿಲ್ಲ. ಬದಲಿಗೆ, ಅವರು ಮುಸ್ಲಿಮರ ವಿರುದ್ಧ ತನ್ನ ಪ್ರಯತ್ನಗಳನ್ನು ಕೇಂದ್ರೀಕರಿಸಲು ಮತ್ತು ಹಿಂದೂ-ಮುಸ್ಲಿಂ ಐಕ್ಯತೆಯನ್ನು ತಡೆಯುವುದಕ್ಕಾಗಿ ಹಿಂದೂ ಮಹಾಸಭಾದ ನೇತೃತ್ವವನ್ನು ವಹಿಸಿಕೊಂಡರು. ಸಾವರ್ಕರ್ ತನ್ನ ಕಿರುಪುಸ್ತಕ “ಹಿಂದುತ್ವ”ವನ್ನು 1923ರಲ್ಲಿ ಪ್ರಕಟಿಸಿದರು.

ಇದರಲ್ಲಿ ಎರಡು-ರಾಷ್ಟ್ರಗಳ ಸಿದ್ಧಾಂತವನ್ನು ಮುಂದಿಟ್ಟವರಲ್ಲಿ ಅವರು ಮೊದಲಿಗರಾದರು. ಹಿಂದೂಗಳು ಎಂದರೆ ಭಾರತದ ಪ್ರದೇಶದೊಳಗೆ ‘ಪಿತೃಭೂಮಿ’ ಮತ್ತು ‘ಪುಣ್ಯಭೂಮಿ’ ಎರಡನ್ನೂ ಹೊಂದಿರುವವರು ಎಂದು ಈ ಪುಸ್ತಕದಲ್ಲಿ ಅವರು ನಿರೂಪಿಸಿದರು. ಭಾರತದ ಹೊರಗೆ ಬೇರುಗಳನ್ನು ಹೊಂದಿರುವ ಧರ್ಮಗಳನ್ನು ಅನುಸರಿಸುವವರನ್ನು ಹಿಂದೂ ರಾಷ್ಟ್ರದ ಸದಸ್ಯರೆಂದು ಹೇಳಲು ಸಾಧ್ಯವಿಲ್ಲ. ಈ ಮತಾಂಧ ಕಣ್ಣೊಟವೇ ಹಿಂದುತ್ವದಲ್ಲಿ ಅಡಗಿದೆ. ಇದನ್ನೇ ನಂತರ ಆರೆಸ್ಸೆಸ್ ತನ್ನ ಎರಡನೇ ಮುಖ್ಯಸ್ಥರಾದ ಗೋಲ್ವಾಲ್ಕರ್ ಅಡಿಯಲ್ಲಿ ಅಂಗೀಕರಿಸಿತು.

ಹೀಗೆ, ವಾಸ್ತವವಾಗಿ ಬ್ರಿಟಿಶರಿಗೆ ಶರಣಾಗತರಾಗಿ ತನ್ನ ಉಳಿದ ಜೀವನವನ್ನು ಹಿಂದೂ-ಮುಸ್ಲಿಂ ವೈಷಮ್ಯವನ್ನು ಪ್ರಚೋದಿಸುವಲ್ಲಿ ಕಳೆದ ಸಾವರ್ಕರ್‍ರನ್ನು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವುದು, ಏನಿಲ್ಲೆಂದರೂ, ಸತ್ಯಕ್ಕೆ ಬಗೆಯುವ ಒಂದು ಅಪಚಾರ ಎಂದಾದರೂ ಹೇಳಬೇಕಾಗುತ್ತದೆ.

ಹಿಂದೂ ಮಹಾಸಭಾದ ಮುಖ್ಯಸ್ಥರಾಗಿ ಸಾವರ್ಕರ್ ವಹಿಸಿದ ಪಾತ್ರವಂತೂ ಇನ್ನಷ್ಟು ಅನಿಷ್ಟಕಾರಿ. ಅವರ ಮುಸ್ಲಿಂ-ವಿರೋಧಿ ವಿಷ ಗಾಂಧೀಜಿಯ ವರೆಗೂ ವಿಸ್ತರಣೆಗೊಂಡಿತ್ತು. ಹಿಂದೂ-ಮುಸ್ಲಿಂ ಸಾಮರಸ್ಯದ ಗಾಂಧೀಜಿಯ ಪ್ರಯತ್ನಗಳಿಗೆ, ತನ್ನ ಬದುಕಿನ ಕೊನೆಯ ದಿನಗಳಲ್ಲಿ ಕೋಮುವಾದಿ ಹಿಂಸಾಚಾರದ ಅಲೆಯನ್ನು ತಡೆಯಲು ಅವರು ಪಟ್ಟ ಉನ್ನತ ಶ್ರಮಕ್ಕೆ ಸಾವರ್ಕರ್ ಕಡುವಿರೋಧಿಯಾಗಿದ್ದರು. ಜನವರಿ 30. 1948ರಂದು ನಾಥುರಾಮ್ ಗೋಡ್ಸೆ ಗಾಂಧೀಜಿಯ ಹತ್ಯೆ ಮಾಡಿದಾಗ, ಪೋಲೀಸರು ಒಂದು ಗುಂಪಿನ ಪಿತೂರಿಯನ್ನು ಪತ್ತೆ ಹಚ್ಚಿದರು.

ಈ ಗುಂಪಿನಲ್ಲಿ ವಿ.ಡಿ. ಸಾವರ್ಕರ್, ಮಾಧವ ಆಪ್ಟೆ, ವಿ.ಆರ್.ಕರ್ಕರೆ ಮತ್ತಿತರರು ಇದ್ದರು. ಇತರರೊಂದಿಗೆ ಸಾವರ್ಕರ್‍ರನ್ನೂ ಗಾಂಧೀಜಿಯ ಹತ್ಯೆ ಆರೋಪದ ಮೇಲೆ ವಿಚಾರಣೆಗೆ ಗುರಿಪಡಿಸಲಾಗಿತ್ತು. ಮಾಫಿ ಸಾಕ್ಷಿ ಅವರ ಪಾತ್ರದ ಬಗ್ಗೆ ನೀಡಿದ್ದ ಸಾಕ್ಷ್ಯವನ್ನು ಸ್ವತಂತ್ರವಾಗಿ ರುಜುವಾತು ಪಡಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣದಿಂದಾಗಿಯಷ್ಟೇ ವಿಚಾರಣಾ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಸಾವರ್ಕರ್‍ರನ್ನು ಖುಲಾಸೆ ಮಾಡಿದರು.

1966ರಲ್ಲಿ ಗಾಂಧೀಜಿಯ ಹತ್ಯೆಯ ಪಿತೂರಿಯ ತನಿಖೆ ನಡೆಸಲು ನ್ಯಾಯಮೂರ್ತಿ ಜೀವನ್‍ಲಾಲ್ ಕಪೂರ್ ಅಡಿಯಲ್ಲಿ ಒಂದು ತನಿಖಾ ಆಯೋಗವನ್ನು ರಚಿಸಲಾಯಿತು. ಗಾಂಧೀಜಿಯನ್ನು ಹತ್ಯೆಗೈಯುವ ಯೋಜನೆ ಕೆಲವು ವ್ಯಕ್ತಿಗಳಿಗೆ ಗೊತ್ತಿತ್ತು ಎಂಬ ವರದಿಗಳು ಮತ್ತು ದಾವೆಗಳ ಹಿನ್ನೆಲೆಯಲ್ಲಿ ಇದು ಬಂತು. ನ್ಯಾಯಮೂರ್ತಿ ಕಪೂರ್ 1948ರಲ್ಲಿ ವಿಚಾರಣಾ ನ್ಯಾಯಾಲಯ ಸಾವರ್ಕರ್ ಪಾತ್ರವನ್ನು ಕುರಿತಂತೆ ಕೇಳಿಸಿಕೊಂಡದ್ದಕ್ಕಿಂತ ಹೆಚ್ಚಿನ ಸಾಕ್ಷ್ಯವನ್ನು ಕೇಳಿಸಿಕೊಂಡರು. ಅದರ ಆಧಾರದಲ್ಲಿ ಅವರು “ಇವೆಲ್ಲಾ ಸಂಗತಿಗಳು ಒಟ್ಟಾಗಿ ಸಾವರ್ಕರ್ ಮತ್ತು ಅವರ ಗುಂಪು ಹತ್ಯೆಯ ಪಿತೂರಿ ನಡೆಸಿತು ಎಂದಲ್ಲದೆ ಬೇರಾವ ಸಿದ್ಧಾಂತವನ್ನೂ ಉಳಿಸುವುದಿಲ್ಲ” ಎಂಬ ತೀರ್ಮಾನಕ್ಕೆ ಬಂದರು.

ಇಂತಹ ಒಬ್ಬ ವ್ಯಕ್ತಿಗೆ ಬಿಜೆಪಿ ಸರಕಾರ ದೇಶದ ಅತ್ಯುನ್ನತ ಬಿರುದನ್ನು ಪ್ರದಾನ ಮಾಡಬಯಸುತ್ತದೆ. ಮೋದಿ ಸರಕಾರ ಅಧಿಕೃತವಾಗಿ ಮಹಾತ್ಮ ಗಾಂಧಿಯ 150ನೇ ಜನ್ಮ ವಾರ್ಷಿಕವನ್ನು ಆಚರಿಸುತ್ತಿರುವ ಸಮಯದಲ್ಲೇ ಬಿಜೆಪಿ ಈ ಪ್ರಯತ್ನ ನಡೆಸುತ್ತಿರುವುದು ಅರ್ಥಪೂರ್ಣವೇ ಆಗಿದೆ. ಸಂಕೇತ ಸ್ಪಷ್ಟವಾಗಿದೆ- ವಿ.ಡಿ.ಸಾವರ್ಕರ್‍ರವರನ್ನು ಗಾಂಧೀಜಿಗೆ ಸಮನಾದ ಸ್ಥಾನದಲ್ಲಿ ಇಡಲಾಗುತ್ತಿದೆ.

ಸಂಘ ಕೂಟ ಸಾವರ್ಕರ್‍ರಂತಹ ಮತಾಂಧರನ್ನು ವೈಭವೀಕರಿಸಲು ಆಕ್ರಾಮಕ ರೀತಿಯಲ್ಲಿ ಪ್ರಯತ್ನಿಸುತ್ತಿರುವಾಗ ಕಾಂಗ್ರೆಸ್ ಮುಖಂಡತ್ವ ಈ ದಾಳಿಗೆ ಎದುರಾಗಿ ಕುಸಿದು ಕುಳಿತಿದೆ. ಮನಮೋಹನ್ ಸಿಂಗ್ ಸಾಕಷ್ಟು ದುರ್ಬಲವಾಗಿಯೇ “ನಾವು ಸಾವರ್ಕರ್‍ಜೀ ವಿರುದ್ಧವಾಗಿ ಇಲ್ಲ, ಹಿಂದುತ್ವ ತತ್ವಸಿದ್ಧಾಂತದ ಪರವಾಗಿ ಇಲ್ಲವಷ್ಟೇ” ಎಂದು ಹೇಳಿದರು.

‘ಭಾರತ ರತ್ನ’ ಬಿರುದು ಕೊಡಲು ಸರಕಾರ ರಚಿಸುವ ಸಮಿತಿ ನಿರ್ಧರಿಸಬೇಕಾಗಿದೆ ಎನ್ನುತ್ತ ಅವರು ‘ಭಾರತ ರತ್ನ’ ಪ್ರಸ್ತಾವದ ಬಗ್ಗೆ ಟಿಪ್ಪಣಿ ಮಾಡದೆ ತಪ್ಪಿಸಿಕೊಂಡರು. ಕಾಂಗ್ರೆಸ್‍ನ ಅಧಿಕೃತ ವಕ್ತಾರ ಅಭಿಷೇಕ್ ಸಿಂಗ್ವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಅವರು ಸಾವರ್ಕರ್ “ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ” ಮತ್ತು “ಜೈಲಿಗೆ ಹೋದ” ಒಬ್ಬ ಸಾಧಕ ಎಂದು ಕರೆದರು. ಒಬ್ಬ ಕೋಮುವಾದಿ ತತ್ವಸಿದ್ಧಾಂತಿಯ ಬಗ್ಗೆ ಇಂತಹ ಒಂದು ಹಿಂಜರಿಕೆಯ ನಿಲುವು ಇನ್ನಷ್ಟು ಜಾತ್ಯತೀತ-ರಾಷ್ಟ್ರವಾದಿ ಅವಕಾಶವನ್ನು ಆಕ್ರಮಿಸಿಕೊಳ್ಳಲು ಹಿಂದುತ್ವ ಪಡೆಗಳಿಗೆ ಮತ್ತಷ್ಟು ಧೈರ್ಯ ತುಂಬತ್ತದಷ್ಟೇ ಸಾವರ್ಕರ್‍ರನ್ನು “ಭಾರತ ರತ್ನ”ದಿಂದ ಗೌರವಿಸುವುದು ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ನಿಷ್ಕಾರಣವಾಗಿ ಮಾಡುವ ಅವಮಾನವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *