ಬಾಗಲಕೋಟೆ: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲಿಗೆ ತಲುಪಿದೆಯೆಂದರೆ ಮಠಗಳಿಗೆ ಸರಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲೂ ಶೇಕಡ 30ರಷ್ಟು ಕಮಿಷನ್ ನೀಡಬೇಕಿದೆ ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ಭಾನುವಾರ(ಏಪ್ರಿಲ್ 17) ಆಯೋಜಿಸಿದ್ದ ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಎಸ್.ಆರ್.ಪಾಟೀಲ್ ನೇತೃತ್ವದ ಕೃಷ್ಣಾ–ಮಹಾದಾಯಿ–ನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇದನ್ನು ಓದಿ: ಭ್ರಷ್ಟಾಚಾರ ಮುಚ್ಚಿಹಾಕಲು ಕೋಮುವಾದ ಮುನ್ನಲೆಗೆ: ಸಿದ್ಧರಾಮಯ್ಯ
ಕರ್ನಾಟಕ ಸರ್ಕಾರವು ಕೇವಲ ಗುತ್ತಿಗೆದಾರರಿಂದ ಮಾತ್ರವಲ್ಲ, ಮಠಾಧೀಶರಿಂದಲೂ ಪರ್ಸೆಂಟೇಜ್ ಕೇಳುತ್ತಿದೆ. ಮಠಗಳು ಶೇಕಡ 30ರ ಪರ್ಸೆಂಟೇಜ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ’ ಎಂದರು.
ಈಗಂತೂ ಬುದ್ಧಿಗೇಡಿ ಸರಕಾರಗಳು ಬರುತ್ತಿವೆ. ಉತ್ತರ ಭಾರತದಲ್ಲಿ ಒಂದು ವರ್ಷ ಕಾಲ ಸಾವು–ನೋವಿಗೂ ಅಂಜದೇ ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿಭಟನೆಗೆ ರಾಜ್ಯದ ರೈತರು ಸಿದ್ಧರಾದರೆ ಮಾತ್ರ ಅನ್ನ ಸಿಕ್ಕೀತು. ಇಲ್ಲದಿದ್ದರೆ ಏನೂ ಸಿಗಲಾರದು. ಬಹಳ ಜಾಣರಾಗಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ರೈತರಿಗೆ ಕಿವಿಮಾತು ಹೇಳಿದರು.
30 ಪರ್ಸೆಂಟ್ ಹಣ ಕೊಟ್ಟರೆ ಮಾತ್ರ ಮಠಗಳ ಕಟ್ಟಡ ಶುರುವಾಗುತ್ತವೆ. ಕಮಿಷನ್ ಬಗ್ಗೆ ಅಧಿಕಾರಿಗಳೇ ಬಂದು ಹೇಳುತ್ತಾರೆ. ನವದೆಹಲಿ ಅಥವಾ ಬೆಂಗಳೂರಿನಲ್ಲಿ ಐಸ್ ಕ್ರೀಂ ಬಿಡುಗಡೆಯಾದರೆ ಉತ್ತರ ಕರ್ನಾಟಕಕ್ಕೆ ಬರುವುದು ಬರೀ ಕಡ್ಡಿ ಮಾತ್ರ ಎಂದು ಐಸ್ ಕ್ರೀಂ ಕಥೆಯ ಮೂಲಕ ಭ್ರಷ್ಟಾಚಾರದ ಮುಖ ಬಚ್ಚಿಟ್ಟರು.
ಸ್ವಾಮೀಜಿ ನೀಡಿದ ಮಠಗಳ ಪರ್ಸೆಂಟೇಜ್ ವ್ಯವಹಾರದ ಹೇಳಿಕೆಗೆ ರಾಜ್ಯದ ಹಲವು ರಾಜಕಾರಿಣಿಗಳು ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ”ಬಿಜೆಪಿಗೆ ಧರ್ಮ ಎಂದರೆ ಮತ ಪಡೆಯುವ ಹಾಗೂ ಹಣ ಲೂಟಿ ಮಾಡುವ ಟೂಲ್ ಕಿಟ್ ಮಾತ್ರವೇ ಹೊರತು ಅಸಲಿ ಧಾರ್ಮಿಕ ಪ್ರೇಮವಲ್ಲ. ಗೋಮಾತೆಯ ಮೇವಿನಲ್ಲೂ ಶೇ 40 ತಿಂದವರು, ಈಗ ಮಠಗಳ ಅನುದಾನದಲ್ಲೂ 30% ತಿನ್ನಲು ಕುಳಿತಿದ್ದಾರೆ!” ಎಂದಿದೆ.
ಇದನ್ನು ಓದಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ
‘ಬಿಜೆಪಿಗರಿಗೆ, ಸರಕಾರದ ವಿರುದ್ಧ ಆರೋಪ ಮಾಡಿರುವ ಈ ಸ್ವಾಮಿಗಳಿಗೆ ಹಿಂದೂ ವಿರೋಧಿ ಎಂದು ಪಟ್ಟ ಕಟ್ಟದೆ ಆರೋಪಕ್ಕೆ ಉತ್ತರಿಸುವ ಧೈರ್ಯವಿದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸ್ವಾಮಿಜಿಗೂ ಭ್ರಷ್ಟಾಚಾರದ ಬಿಸಿ: ಸತೀಶ್ ಜಾರಕಿಹೊಳಿ
ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಮಿಷನ್ ಪಿಡುಗು ಸ್ವಾಮೀಜಿಗಳನ್ನು ಸಹ ಬಿಟ್ಟಿಲ್ಲ ಎನ್ನುವುದು ವಿಷಾದನೀಯ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದರು.
ಅಕ್ಷಮ್ಯ ಅಪರಾಧ: ಈಶ್ವರ ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ದೇವಾಲಯ, ಆಶ್ರಮ, ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಕಮಿಷನ್ ಕೇಳುತ್ತಿರುವ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇಂಥ ಅಕ್ಷಮ್ಯ ಅಪರಾಧಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಭ್ರಷ್ಟರಿಗೆ ಯಾವುದೇ ಜಾತಿ, ಧರ್ಮವಿಲ್ಲ. ಅವರು ಜಾತಿ, ಧರ್ಮವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬಣ್ಣ ಬದಲಿಸುವ ದಿಂಗಾಲೇಶ್ವರ: ಬಿ.ಸಿ.ಪಾಟೀಲ್
ಚಿತ್ರದುರ್ಗದಲ್ಲಿ ಮಾತನಾಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಲಂಚ ನೀಡುವ ಮೊದಲು ಶ್ರೀಗಳು ಪ್ರತಿಭಟನೆ ನಡೆಸಬೇಕಿತ್ತು. ಈಗ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿ ಅವರಂತೆ ಮಾತಾಡಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಯಂತೆ ಕಾಂಗ್ರೆಸ್ ಭಕ್ತರನ್ನು ಮೆಚ್ಚಿಸುವ ಉದ್ದೇಶದಿಂದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದ್ದಾರೆ. ಈ ಹಿಂದೆ ಇದೇ ಸ್ವಾಮೀಜಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಊಸರವಳ್ಳಿಯಂತೆ ಕಾಲಕ್ಕೆ ಒಂದೊಂದು ಬಣ್ಣ ಬದಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದೆಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದರು. ಇವರು ಯಾವಾಗ ಯಾರ ಬಗ್ಗೆ ಆರೋಪ ಮಾಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.