ಮಂಡ್ಯ ಜಿಲ್ಲೆಯಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಮಂಡ್ಯ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಬೆಳಿಗ್ಗೆಯಿಂದಲೇ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಿವಿಧೆಡೆ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಾಗಿಲು ಮುಚ್ಚಿದರು. ನಗರದ ಪೇಟೆ ಬೀದಿ, ಆರ್‌ ಪಿ ರಸ್ತೆ, ವಿವಿ ರಸ್ತೆಯಲ್ಲಿ ಅಂಗಡಿಗಳು, ಹೋಟೆಲ್‍ಗಳು, ಅರ್ಧ ಬಾಗಿಲು ತೆರೆದಿದ್ದವು. ಸಂಘಟನೆಗಳ ಮುಖಂಡರು ಬೈಕ್ ರ‍್ಯಾಲಿ ಮೂಲಕ ತೆರಳಿ ಅಂಗಡಿಗಳ ಬಾಗಿಲು ಮುಚ್ಚಿಸಿದರು

.

ಸಿಐಟಿಯು, ದಲಿತ ಸಂಘರ್ಷ ಸಮಿತಿ, ಕನ್ನಡ ಸೇನೆ ಸೇರಿ ಇನ್ನಿತರ ಪ್ರಗತಿಪರ ಸಂಘಟನೆಗಳ ಸದಸ್ಯರು ಬೈಕ್ ರ‍್ಯಾಲಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಎಪಿಎಂಸಿಯಲ್ಲಿ ಮಳಿಗೆ-ಅಂಗಡಿಗಳನ್ನು ಬಂದ್ ಮಾಡುವ ಮೂಲಕ ವರ್ತಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ಎಪಿಎಂಸಿ ಪ್ರಾಂಗಣ ಬಿಕೋ ಎನ್ನುತಿತ್ತು.

ನಗರದ ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಬಂದ್ ಕಾರಣದಿಂದ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ನಗರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳಿಗೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.

ಹೆದ್ದಾರಿ ಬಂದ್ ಮಾಡಿ ಆಕ್ರೋಶ: ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಜಯಚಾಮರಾಜ ವೃತ್ತದಲ್ಲಿ ಜಮಾಯಿಸಿದರು. ಮಾನವ ಸರಪಳಿ ರಚಿಸುವ ಮೂಲಕ ಬೆಂಗಳೂರು– ಮೈಸೂರು ಹೆದ್ದಾರಿ ಬಂದ್ ಮಾಡಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಉತ್ತಮ ಸಮಾಜ ನಿರ್ಮಾಣ ಮಾಡುವ ಬದಲು ಸಮಾಜ ನಿರ್ನಾಮ ಮಾಡುತ್ತಿದೆ. ಸರ್ಕಾರದ ನೀತಿಗಳಿಂದ ರೈತರ ಬದುಕು ಬೀದಿಗೆ ಬೀಳುತ್ತಿದೆ. ಕೂಡಲೇ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಹೆದ್ದಾರಿ ತಡೆಯಿಂದಾಗಿ ಕೆಲಹೊತ್ತು ಕಿಲೋಮೀಟರ್‌ಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಗರದ ಒಳಗೆ ಬದಲಿ ಮಾರ್ಗದ ಮೂಲಕ ವಾಹನಗಳು ಸಂಚರಿಸಿದವು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ಮೈಸೂರು-ಬೆಂಗಳೂರು ಹೆದ್ದಾರಿಗೆ ಎತ್ತಿನಗಾಡಿ, ಎತ್ತುಗಳನ್ನು ಅಡ್ಡಲಾಗಿ ನಿಲ್ಲಿಸಿ ಹೆದ್ದಾರಿ ಬಂದ್ ಮಾಡಲಾಗಿತ್ತು. ಈ ವೇಳೆ ಅರ್ಧಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ್, ರೈತಸಂಘ (ರೈತಬಣ)ದ ಹೆಮ್ಮಿಗೆ ಚಂದ್ರಶೇಖರ್, ಪ್ರಾಂತಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು, ಕೃಷ್ಣೇಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು, ಕಲಾವಿದ ಸಂಘಟನೆ ಮಂಜುಳಾ, ಹುರುಗಲವಾಡಿರಾಮಯ್ಯ, ಆರ್ಗ್ಯಾನಿಕ್‌ ಮಂಡ್ಯದ ಎಸ್‌.ಸಿ.ಮಧುಚಂದನ್ , ಕನ್ನಡ ಸೇನೆ ಮುಖಂಡ ಮಂಜು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *