ಬೆಂಗಳೂರು : ರಾಜ್ಯ ಸರಕಾರ ದೇಶ ಮತ್ತು ರಾಜ್ಯದಲ್ಲಿ ಕಾರ್ಪೋರೇಟ್ ಕೃಷಿ ನೀತಿಯ ವಿರುದ್ದ ತೀವ್ರ ತರವಾದ ಪ್ರತಿರೋಧವನ್ನು ಒಡ್ಡಿ ಭಾರತ್ ಬಂದ್ ನಡೆಸುತ್ತಿರುವ ದಿನದಂದೇ, ಜನತೆಯ ಅಭಿಪ್ರಾಯಕ್ಕೆ ಕಿಂಚಿತ್ತು ಮನ್ನಣೆ ನೀಡದೇ, ಸರ್ವಾಧಿಕಾರಿಯಂತೆ, ಕಾರ್ಪೋರೇಟ್ ಕಂಪನಿಗಳ ಪರವಾಗಿ, ವಿಧಾನ ಪರಿಷತ್ತಿನಲ್ಲಿ ಭೂ ಸುಧಾರಣೆ ತಿದ್ದುಪಡಿ ಮಸೂದೆ – 2020 ನ್ನು ಮಂಡಿಸಿ ಅಂಗೀಕಾರ ಪಡೆದಿರುವ ಕಾರ್ಪೋರೇಟ್ ಕಂಪನಿಗಳ ನಿರ್ಲಜ್ಜ ಗುಲಾಮಿತನವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬಲವಾಗಿ ಖಂಡಿಸುತ್ತದೆ. ಇಂತಹ ಜನ ವಿರೋಧಿ ಕೃತ್ಯದಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ತನ್ನ ನಿಜ ಮುಖವನ್ನು ಜೆಡಿಎಸ್ ಬಯಲುಗೊಳಿಸಿಕೊಂಡಿದೆ. ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.
ಈ ತಿದ್ದುಪಡಿ ಕಾಯ್ದೆಯು ಕೃಷಿಯನ್ನು ರೈತರ ಕೈಯಿಂದ ಕಾರ್ಪೋರೇಟ್ ಕಂಪನಿಗಳ ಕೈಗೆ ವರ್ಗಾಯಿಸಲು ನೆರವಾಗುವ ಸಾಧನವಾಗಿದೆ. ಮಾತ್ರವಲ್ಲ, ಭ್ರಷ್ಠತೆಯ ಮೂಲಕ ಸಂಗ್ರಹಿಸಲಾದ ಕಪ್ಪು ಹಣವನ್ನು ಬಿಳಿಯಾಗಿಸಲು ಸಹಕಾರಿಯಾಗುತ್ತದೆ. ಪರಂಪರೆಯಿಂದ ರೈತರ ಜೀವನ ನಿರ್ವಹಣೆಗೆ ನೆರವಾಗುತ್ತಿದ್ದ ಮೂಲ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅವರ ಉದ್ಯೋಗ ಭದ್ರತೆಯನ್ನು ಈ ಮೂಲಕ ದುರ್ಬಲ ಗೊಳಿಸಲಾಗಿದೆ.
ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾದ ಕಾಯ್ದೆಯಾಗಲಿದ್ದು, ರಾಜ್ಯದೊಳಗೆ ಆರ್ಥಿಕ ಅಸಮಾನತೆಯನ್ನು ತೀವ್ರವಾಗಿ ಹೆಚ್ಚಿಸುವುದಲ್ಲದೇ, ಹಸಿವಿನ ಹಾಗೂ ಅಪೌಷ್ಠಿಕತೆಯ ಸಾವುಗಳ ಪ್ರಮಾಣವನ್ನು ಹೆಚ್ಚಿಸಲಿದೆ ತಕ್ಷಣವೇ ಈ ತಿದ್ದುಪಡಿ ಮಸೂದೆಯನ್ನು ಪ್ರಕಟಿಸದೇ ವಾಪಾಸು ಪಡೆಯಬೇಕೆಂದು, ಹಾಗೂ ತಿದ್ದುಪಡಿ ಮಸೂದೆಯ ಪ್ರತಿಯನ್ನು ಸುಟ್ಟು ಇಂದು ರಾಜ್ಯಾಧ್ಯಾಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.