ಭಾರತವನ್ನು ಅಮೆರಿಕದ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸಬೇಕೇ?

ಸಂಪುಟ 10 ಸಂಚಿಕೆ 2 ಜನವರಿ 10-2016 ಪಿ ಡಿ ಸಂಪಾದಕೀಯ – ಪ್ರಕಾಶ ಕಾರಟ್

ಅಮೆರಿಕಾದ ಸಶಸ್ತ್ರ ಪಡೆಗಳಿಗೆ ನಮ್ಮ ನೌಕಾ ಬಂದರುಗಳನ್ನು, ವಾಯುನೆಲೆಗಳನ್ನು ಬಳಸಿಕೊಳ್ಳಲು ಅವಕಾಶ ಕೊಡುವ ಒಪ್ಪಂದ ಮತ್ತು ನಮ್ಮೆರಡು ದೇಶಗಳ ಸಶಸ್ತ್ರ ಪಡೆಗಳ ಸಂಪರ್ಕ ವ್ಯವಸ್ಥೆಗಳನ್ನು ಸಮಗ್ರೀಕರಿಸುವ ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕಾ ಒತ್ತಡ ಹಾಕುತ್ತಿದೆ, ಅಮೆರಿಕಾದೊಂದಿಗೆ ರಕ್ಷಣಾ ಉಪಕರಣಗಳ ಜಂಟಿ ಉತ್ಪಾದನೆಗೆ ಕಾತುರವಾಗಿರುವ ಮೋದಿ ಸರಕಾರವನ್ನು ರಾಷ್ಟ್ರೀಯ ಸಾರ್ವಭೌಮತೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಸಮಗ್ರತೆಯನ್ನು ಬಿಟ್ಟುಕೊಡುವಂತೆ ಪುಸಲಾಯಿಸಲಾಯಿಸುತ್ತಿದೆ. ಬಿಜೆಪಿ ಸರಕಾರ ಈ ಒಪ್ಪಂದಗಳಿಗೆ ಸಹಿ ಹಾಕಿದರೆ ಭಾರತದ ಸಾರ್ವಭೌಮತೆಯನ್ನು ಬಲಿಗೊಟ್ಟು ಅದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಬ್ಬ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸಿದಂತಾಗುತ್ತದೆ.

ರಕ್ಷಣಾ ಮಂತ್ರಿ ಮನೋಹರ ಪರ್ರಿಕರ್‍ರವರ ಮೊದಲ ವಾಶಿಂಗ್ಟನ್ ಭೇಟಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳೊಂದಿಗೆ ರಕ್ಷಣಾ ಸಹಕಾರದಲ್ಲಿ ವಿವಿಧ ಹೆಜ್ಜೆಗಳಿಗೆ ದಾರಿ ಮಾಡಿ ಕೊಟ್ಟಿದೆ. ಅವುಗಳಲ್ಲಿ ಅತ್ಯಂತ ಗಂಭಿರ ಮತ್ತು ಆತಂಕಕಾರಿಯಾಗಿರುವಂತದ್ದು ಈ ಮಂತ್ರಿ ಭಾರತೀಯ ಮಿಲಿಟರಿ ನೆಲೆಗಳು ಮತ್ತು ಬಂದರುಗಳನ್ನು ಅಮೆರಿಕಾಕ್ಕೆ ಲಭ್ಯಗೊಳಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿರುವುದು. ‘ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್’ (ಎಲ್‍ಎಸ್‍ಎ-ಮಿಲಿಟರಿ ಸರಬರಾಜು ಬೆಂಬಲ ಒಪ್ಪಂದ)ದ ವಿಷಯದಲ್ಲಿ ಭಾರತದ ಸರಕಾರ ತೆರೆದ ಮನಸ್ಸು ಹೊಂದಿದೆ ಎಂದು ಪರ್ರಿಕರ್ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್‍ಗೆ ತಿಳಿಸಿರುವುದಾಗಿ ಮಾಧ್ಯಮ ವರದಿಗಳಿಂದ ತಿಳಿದು ಬರುತ್ತಿದೆ.

ಜೂನ್ 2005ರಲ್ಲಿ ‘ಭಾರತ-ಅಮೆರಿಕ ರಕ್ಷಣಾ ಚೌಕಟ್ಟು ಒಪ್ಪಂದ’ಕ್ಕೆ ಸಹಿ ಹಾಕಿದ ಮೇಲೆ ಅಮೆರಿಕಾ ಈ ಎಲ್‍ಎಸ್‍ಎ ಒಪ್ಪಂದ ಮತ್ತು ‘ಕಮ್ಯುನಿಕೇಶನ್ ಅಂಡ್ ಇನ್‍ಫಾರ್ಮೇಶನ್ ಸೆಕ್ಯುರಿಟಿ ಮೆಮೊರಂಡಂ ಅಗ್ರಿಮೆಂಟ್’(ಸಿಐಎಸ್‍ಎಂವೊಎ-ಸಂವಹನ ಮತ್ತು ಮಾಹಿತಿ ಭದ್ರತೆ ಕರಾರು ಒಪ್ಪಂದ) ಇವೆರಡಕ್ಕೆ ಭಾರತ ಸಹಿ ಹಾಕಬೇಕೆಂದು ಬೆನ್ನು ಬಿದ್ದಿತ್ತು. ಎಡಪಕ್ಷಗಳು ಮೇಲೆ ಹೇಳಿದ ಚೌಕಟ್ಟು ಒಪ್ಪಂದ ಮತ್ತು ಇವೆರಡೂ ಒಪ್ಪಂದಗಳಿಗೆ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದವು. ಎಲ್‍ಎಸ್‍ಎ ಒಪ್ಪಂದವಾದರೆ ಅಮೆರಿಕನ್ ಮಿಲಿಟರಿ ಪಡೆಗಳು ಭಾರತೀಯ ವಾಯುನೆಲೆಗಳು ಮತ್ತು ನೌಕಾಪಡೆಯ ಬಂದರುಗಳನ್ನು ತಮ್ಮ ಮಿಲಿಟರಿ ಕಾರ್ಯಾಚರಣೆಗಳಿಗೆ ಬಳಸಲು ಅವಕಾಶವಾಗುತ್ತಿತ್ತು. ಎರಡು ಸಶಸ್ತ್ರ ಪಡೆಗಳ ಸಂಪರ್ಕ ಜಾಲಗಳನ್ನು ಪರಸ್ಪರ ಹೊಂದಿಸಿ ಸಮಗ್ರೀಕರಿಸುವುದು ಇನ್ನೊಂದು ಒಪ್ಪಂದದ ಆಶಯ. ಈ ಎರಡು ಒಪ್ಪಂದಗಳು ಆಗಿದ್ದರೆ, ನಮ್ಮ ದೇಶ ಅಮೆರಿಕಾದ ಪೂರ್ಣ ಪ್ರಮಾಣದ ಮಿಲಿಟರಿ ಮಿತ್ರನಾಗಿ ಬಿಡುತ್ತಿತ್ತು. ರಕ್ಷಣಾ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿದ ಯುಪಿಎ ಸರಕಾರ ಅಂತಿಮವಾಗಿ ಈ ಎರಡು ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾಗಲಿಲ್ಲ. ಆಗಿನ ರಕ್ಷಣಾ ಮಂತ್ರಿ ಎ.ಕೆ.ಆಂಟನಿ ಈ ವಿಷಯದಲ್ಲಿ ಒಂದು ಸ್ಪಷ್ಟ ನಿಲುವು ತಳೆದರು.

ಆದರೆ ಈಗ ಬಿಜೆಪಿ ಸರಕಾರ ಅಮೆರಿಕಾದ ಮಿಲಿಟರಿ ಕೂಟ ಸೇರಲು ಕಾತುರವಾಗಿರುವಂತೆ ಕಾಣುತ್ತದೆ. ಈ ದಿಕ್ಕಿನಲ್ಲಿ ಸ್ಪಷ್ಟ ಸಂಕೇತಗಳು ಕಾಣ ಬಂದಿವೆ. ಜನವರಿ 2015ರಲ್ಲಿ ಅಧ್ಯಕ್ಷ ಒಬಾಮ ಅವರ ಭಾರತ ಭೇಟಿ ಕಾಲದಲ್ಲಿ ಸಹಿ ಹಾಕಿದ ‘ಜಾಯಿಂಟ್ ವಿಶನ್ ಸ್ಟೇಟ್‍ಮೆಂಟ್’(ಜಂಟಿ ಕಣ್ಣೋಟ ಹೇಳಿಕೆ)ಭಾರತವನ್ನು ಏಶ್ಯ-ಶಾಂತಸಾಗರ ಪ್ರದೇಶದಲ್ಲಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಮೆರಿಕನ್ ಸಮರ ತಂತ್ರದೊಂದಿಗೆ ಹೊಂದಿಸಿಕೊಂಡಿದೆ. ಸಾಗರಯಾನ ಭದ್ರತೆಯ ಹೆಸರಿನಲ್ಲಿ ಭಾರತ ಹಿಂದೂ ಮಹಾಸಾಗರದಲ್ಲಿ ತನ್ನ ಕ್ರಿಯೆಗಳನ್ನು ಅಮೆರಿಕನ್ ನೌಕಾ ಪಡೆಯೊಂದಿಗೆ ಸಂಯೋಜಿಸುತ್ತಿದೆ. ರಕ್ಷಣಾ ಮಂತ್ರಿ ಪರ್ರಿಕರ್ ಹವಾಯಿಯಲ್ಲಿ ಅಮೆರಿಕನ್ ಶಾಂತಸಾಗರ ನೌಕಾ ಕಮಾಂಡ್‍ಗೆ ಭೇಟಿ ನೀಡಿದ ಮೊದಲ ಭಾರತೀಯ ರಕ್ಷಣಾ ಮಂತ್ರಿಗಳಾದರು. ಅಮೆರಿಕಾ ರಕ್ಷಣಾ ಸಾಮಗ್ರಿಗಳ ಅತಿ ದೊಡ್ಡ ಪೂರೈಕೆದಾರನಾಯಿತು.

‘ಭಾರತ-ಅಮೆರಿಕ ರಕ್ಷಣಾ ಚೌಕಟ್ಟು ಒಪ್ಪಂದ’ವನ್ನು ಈ ಜೂನ್ 2015ರಲ್ಲಿ ಇನ್ನೂ ಹತ್ತು ವರ್ಷಕ್ಕೆ ನವೀಕರಿಸಲಾಯಿತು. ಈ ಒಪ್ಪಂದದ ಅಡಿಯಲ್ಲೇ ಅಮೆರಿಕಾ ಮತ್ತೆ ಉಳಿದೆರಡು ಒಪ್ಪಂದಗಳಿಗೆ, ಜತೆಗೆ ‘ಬೇಸಿಕ್ ಎಕ್ಸ್‍ಚೇಂಜ್ ಅಂಡ್ ಕೋಪರೇಷನ್ ಅಗ್ರಿಮೆಂಟ್’(ಬಿಇಸಿಎ-ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ)ಗೆ ಸಹಿ ಹಾಕಬೇಕೆಂದು ಒತ್ತಡ ಹಾಕಲಾರಂಭಿಸಿದೆ. ರಕ್ಷಣಾ ಮಂತ್ರಿ ಈ ಪ್ರಶ್ನೆಯನ್ನು ಚರ್ಚಿಸಲು, ಒಂದು ತೆರೆದ ಮನಸ್ಸು ಹೊಂದಿರಲು ಒಪ್ಪಿರುವುದು ಮೋದಿ ಸರಕಾರ ಅಮೆರಿಕನ್ ಒತ್ತಡಕ್ಕೆ ಮಣಿಯುತ್ತಿದೆ ಎಂಬುದರ ಒಂದು ಅಪಾಯಕಾರಿ ಸಂಕೇತ.

ಈ ಎರಡು ಒಪ್ಪಂದಗಳಿಗೆ ಸಹಿ ಮಾಡದೆ ಉನ್ನತ ತಂತ್ರಜ್ಞಾನದ ವಿವಿಧ ಅಂಗಭಾಗಗಳನ್ನು ಭಾರತಕ್ಕೆ ಕೊಡಲು ಆಗುವುದಿಲ್ಲ ಎಂಬುದು ಅಮೆರಿಕನ್ನರ ನಿಲುವು. ಅಮೆರಿಕಾದೊಂದಿಗೆ ರಕ್ಷಣಾ ಉಪಕರಣಗಳ ಜಂಟಿ ಉತ್ಪಾದನೆಗೆ ಕಾತುರವಾಗಿರುವ ಮೋದಿ ಸರಕಾರವನ್ನು ರಾಷ್ಟ್ರೀಯ ಸಾರ್ವಭೌಮತೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಸಮಗ್ರತೆಯನ್ನು ಬಿಟ್ಟುಕೊಡುವಂತೆ ಪುಸಲಾಯಿಸಲಾಗುತ್ತಿದೆ.

ಅಮೆರಿಕಾದ ಸಶಸ್ತ್ರ ಪಡೆಗಳಿಗೆ ನಮ್ಮ ನೌಕಾ ಬಂದರುಗಳನ್ನು, ವಾಯುನೆಲೆಗಳನ್ನು ಯುದ್ಧ ವಿಮಾನ, ಯುದ್ಧನೌಕೆಗಳ ಸರ್ವಿಸಿಂಗ್‍ಗೆ, ಇಂಧನ ತುಂಬಿಸಿಕೊಳ್ಳಲಿಕ್ಕೆ ಮತ್ತು ಮಿಲಿಟರಿ ಉಪಕರಣಗಳ ದುರಸ್ತಿಗೆ ಬಳಸಿಕೊಳ್ಳಲು ಅವಕಾಶ ಕೊಡುವುದೆಂದರೆ ನಮ್ಮ ದೇಶ ಯಾವುದೇ ಮಿಲಿಟರಿ ಕೂಟದ ಭಾಗವಾಗುವುದಿಲ್ಲ ಎಂಬ ಇದುವರೆಗಿನ ಸ್ವತಂತ್ರ ಸ್ಥಾನಮಾನವನ್ನು ತೀವ್ರವಾಗಿ ಬದಲಿಸಿದಂತಾಗುತ್ತದೆ. ಎರಡ ಸಶಸ್ತ್ರ ಪಡೆಗಳ ಸಂಪರ್ಕ ವ್ಯವಸ್ಥೆಗಳನ್ನು ಸಮಗ್ರೀಕರಿಸುವ ಪ್ರಯತ್ನಗಳು ಭಾರತೀಯ ಸಶಸ್ತ್ರ ಪಡೆಗಳನ್ನು ಅಮೆರಿಕನ್ ರಕ್ಷಣಾ ರಚನೆಗಳಿಗೆ ಬಿಗಿದು ಕಟ್ಟಿದಂತಾಗುತ್ತದೆ.

ಇದು ಭಾರತದ ಸಾರ್ವಭೌಮತೆಯನ್ನು ಸೀಮೀತಗೊಳಿಸುತ್ತದೆ, ನಮ್ಮ ಸಾಮರಿಕ ಸ್ವಾಯತ್ತೆಯನ್ನು ಕೆಡಿಸುತ್ತದೆ ಮತ್ತು ಭಾರತವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಬ್ಬ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸುತ್ತದೆ. ಇಂತಹ ಒಪ್ಪಂದಗಳಿಗೆ ಬಿಜೆಪಿ ಸಹಿ ಮಾಡಬಾರದು.

Donate Janashakthi Media

Leave a Reply

Your email address will not be published. Required fields are marked *