ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ 97 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಆದರೆ ಕೊರೊನಾ ರೀತಿಯಲ್ಲಿಯೇ ಬ್ಲ್ಯಾಕ್ ಫಂಗಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂಬುದು ಸುಳ್ಳು. ಇದು ಮುಚ್ಚಿಡುವಂತಹ ಕಾಯಿಲೆಯಲ್ಲ. ಬ್ಲ್ಯಾಕ್ ಫಂಗಸ್ ಬಂದರೆ ಅದು ಎಲ್ಲರಿಗೂ ಗೊತ್ತಾಗುತ್ತದೆ. ಆರಂಭದಲ್ಲಿ ಕಣ್ಣಿಗೆ ಅಟ್ಯಾಕ್ ಆಗುತ್ತದೆ. ಕಣ್ಣಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತದೆ. ಬಳಿಕ ಮೂಗು, ಬಳಿಕ ಮೆದುಳಿಗೆ ಅಟ್ಯಾಕ್ ಆಗುತ್ತದೆ. ಕಣ್ಣಿಗೆ ತೊಂದರೆಯಾದಾಗಲೇ ಆಸ್ಪತ್ರೆಗೆ ದಾಖಲಾಗುತ್ತಾರೆ. ಹಾಗಾಗಿ ಬ್ಲ್ಯಾಕ್ ಫಂಗಸ್ ಲಕ್ಷಣ ಕಂಡುಬಂದರೆ ಮುಚ್ಚಿಡಲಾಗದು ಎಂದರು.
ಮಧುಮೇಹವಿರುವವರು ಅಧಿಕ ಸ್ಟಿರಾಯ್ಡ್ ಬಳಕೆ ಮಾಡಿದಲ್ಲಿ ಈ ಅಪಾಯ ಹೆಚ್ಚು. ಕೊರೊನಾ ಸೋಂಕು ಬಂದವರು ಸ್ಟಿರಾಯ್ಡ್ ಬಳಸಿದರೆ ಅಂತವರಲ್ಲಿ ಶುಗರ್ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಇಂತವರು ಶುಗರ್ ನಿಯಂತ್ರಣದಲ್ಲಿಟ್ಟುಕೊಂಡಿರಬೇಕು. ಮಧುಮೇಹಿಗಳು, ಕ್ಯಾನ್ಸರ್ ಪೇಷಂಟ್ ಗಳು, ಹೆಚ್ ಐ ವಿ ಸೋಂಕಿತರು, ಅಂಗಾಂಗ ಕಸಿ ಮಾಡಿಸಿಕೊಂಡವರು ಹಾಗೂ ಇತರ ಯಾವುದೇ ಕಾಯಿಲೆಯಿಂದ ಬಳಲುತ್ತಿರುವರು ಬ್ಲ್ಯಾಕ್ ಫಂಗಸ್ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಇಂತಹವರಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಗೆ ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ.? :ಬ್ಲ್ಯಾಕ್ ಫಂಗಸ್ ಗೆ ಇಂದಿನಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಚಿಕಿತ್ಸೆ ಆರಂಭಿಸಲಾಗಿದೆ. ಗುರುವಾರದಿಂದ ಮೈಸೂರು ಮೆಡಿಕಲ್ ಕಾಲೇಜು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯ ಕಿಮ್ಸ್, ಕಲಬುರ್ಗಿಯ ಜಿಮ್ಸ್, ಉಡುಪಿಯ ಕೆಎಂಸಿ, ಮಂಗಳೂರಿನ ವೆನಲಾಕ್ ನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.