ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಸಿಎಂ ಮಾಧ್ಯಮ ಕಚೇರಿಯಿಂದ ಸೋಮವಾರ ಪ್ರಕಟಿಸಲಾದ ಪ್ರಕಟಣೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ದೊರೆಯುತ್ತಿರುವ ಫೋಟೊ ಮತ್ತು ವೀಡಿಯೋಗಳು ಬಹಿರಂಗಗೊಂಡು ಸರ್ಕಾರಕ್ಕೆ ಮುಜುಗುರ ಉಂಟಾಗಿತ್ತು.
ದರ್ಶನ್ ಚೇರ್ ನಲ್ಲಿ ಕೂತು ಕಾಫಿ ಕುಡಿಯುತ್ತ, ಕೈಯಲ್ಲಿ ಸಿಗರೇಟ್ ಕೈಯಲ್ಲಿ ಹಿಡಿದಿರುವ ಫೋಟೊ ಬಹಿರಂಗಗೊಂಡಿತ್ತು. ಇದರಿಂದ ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ಸಿಗದ ವಿಶೇಷ ಉಪಚಾರ, ಸೌಲಭ್ಯ ಸಿಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವ ವೀಡಿಯೋ ಬಹಿರಂಗವಾಗಿದೆ.
ಸ್ಪೆಷಲ್ ಬ್ಯಾರಕ್ನಲ್ಲಿ ಇರುವ ದರ್ಶನ್ ಅವರಿಗೆ ವಿಡಿಯೋ ಕಾಲ್ ಸೌಲಭ್ಯವನ್ನೂ ನೀಡಲಾಗಿದೆ. ಹಳದಿ ಟೀ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬನ ಜೊತೆ ದರ್ಶನ್ ವೀಡಿಯೊ ಕಾಲ್ ನಲ್ಲಿ ಮಾತನಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೆಡ್ಡಿ ಎಂಬಾತನ ಸ್ಟೇಟಸ್ನಲ್ಲಿ ವಿಡಿಯೋ ಮೊದಲ ಬಾರಿ ಪತ್ತೆಯಾಗಿದ್ದು, ‘ಊಟ ಆಯ್ತಾ? ನಾನು ಆರಾಮಾಗಿದ್ದೀನಿ’ ಎಂದು ಆತನಿಗೆ ಹೇಳಿದ ವೀಡಿಯೋ ತುಣುಕು ಇದಾಗಿದೆ. ಜೈಲಿನಲ್ಲಿ ಇರುವ ಬೇರೊಬ್ಬ ಖೈದಿಯ ಮೊಬೈಲ್ ಬಳಸಿ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದೆ.