ಬೆಂಗಳೂರು | VB-G RAM G ಮಸೂದೆ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಜನವಾದಿ ಮಹಿಳಾ ಸಂಘಟನೆ ಖಂಡನೆ

ಬೆಂಗಳೂರು : ಗ್ರಾಮೀಣ ಮಹಿಳೆಯರಿಗಾಗಿ ಕಠಿಣ ಹೋರಾಟದಿಂದ ಗಳಿಸಲಾದ ಹಕ್ಕು ಆಧಾರಿತ ಉದ್ಯೋಗ ಭರವಸೆ ಕಾನೂನಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಯನ್ನು ರದ್ದುಪಡಿಸಿ, ಅದರ ಬದಲಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) – VB-G RAM G ಮಸೂದೆ, 2025 ಅನ್ನು ಪರಿಚಯಿಸಿರುವುದನ್ನು  ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ  ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ನೀಡಿದ್ದಾರೆ.

ಈ ಮಸೂದೆ ಗ್ರಾಮೀಣ ಮಹಿಳೆಯರ ಸಮಾನ ಉದ್ಯೋಗ ಹಕ್ಕು ಹಾಗೂ ಮೂಲ ಜೀವನೋಪಾಯ ಅಗತ್ಯಗಳನ್ನು ಪೂರೈಸುವ ಅವಕಾಶಗಳನ್ನು ಕುಂಠಿತಗೊಳಿಸುವ ಅಪಾಯವನ್ನು ಹೊತ್ತು ತರುತ್ತದೆ. ಮಸೂದೆಗೆ ನೀಡಿರುವ ಹೆಸರಿನ ಬದಲಾವಣೆ ಮತ್ತು ಮಹಾತ್ಮ ಗಾಂಧಿಯ ಹೆಸರನ್ನು ತೆಗೆದುಹಾಕುವುದು ಕೇವಲ ರಾಜಕೀಯ ಉದ್ದೇಶಿತ ಕ್ರಮ ಮಾತ್ರವಲ್ಲ; ಇದರ ಮೂಲಕ ಮಹಿಳೆಯರ ಮೇಲೆ ಬೀರುವ ಗಂಭೀರ ರಚನಾತ್ಮಕ ಪರಿಣಾಮಗಳನ್ನು ಮರೆಮಾಚುವ ಪ್ರಯತ್ನವಾಗಿದೆ ದೂರಿದರು.

ಎಡಪಂಥೀಯ ಹಾಗೂ ಪ್ರಗತಿಪರ ಶಕ್ತಿಗಳ ದೀರ್ಘ ಹೋರಾಟಗಳ ಫಲವಾಗಿ, ಎಲ್ಲ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಅಂಗೀಕಾರಗೊಂಡ MGNREGA ಜಗತ್ತಿನ ಅತಿದೊಡ್ಡ ಉದ್ಯೋಗ ಭರವಸೆ ಯೋಜನೆಯಾಗಿದೆ. ಈ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ವೇತನದ ಉದ್ಯೋಗ ಒದಗಿಸುವುದಾಗಿ ರಾಜ್ಯವನ್ನು ಕಾನೂನಾತ್ಮಕವಾಗಿ ಬಾಧ್ಯಗೊಳಿಸಿತು ಎಂದು ತಿಳಿಸಿದರು.

ಇದನ್ನೂ ಓದಿ : ಮಂಡ್ಯ | ಗ್ರಾಮೀಣ ಪ್ರದೇಶದ ಜನರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಕುರಿತು ಜಾಗೃತಿ ಮೂಡಿಸಿ

ಬೇಡಿಕೆ ಆಧಾರಿತ ವ್ಯವಸ್ಥೆಯ ಮೂಲಕ ಸರ್ಕಾರದ ಜವಾಬ್ದಾರಿಯನ್ನು ಖಚಿತಪಡಿಸಿದ ಈ ಕಾಯ್ದೆಯಡಿಯಲ್ಲಿ 2016 ರಿಂದ ಇದುವರೆಗೆ 31 ಬಿಲಿಯನ್‌ಗಿಂತ ಹೆಚ್ಚು ಮಾನವ-ದಿನಗಳ ಉದ್ಯೋಗ ಸೃಷ್ಟಿಯಾಗಿದೆ. 2024–25 ಹಣಕಾಸು ವರ್ಷದಲ್ಲೇ 196.30 ಕೋಟಿ ಮಾನವ-ದಿನಗಳ ಗ್ರಾಮೀಣ ಉದ್ಯೋಗ ಒದಗಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ (ಜುಲೈ 2025) ಪತ್ರಿಕಾ ಪ್ರಕಟಣೆಯ ಪ್ರಕಾರ, ಕಳೆದ ಐದು ಹಣಕಾಸು ವರ್ಷಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ.50ಕ್ಕಿಂತ ಹೆಚ್ಚಿದ್ದು, 2013–14ರಲ್ಲಿ ಶೇ.48 ಇದ್ದದ್ದು 2024–25ರಲ್ಲಿ ಶೇ.58.1ಕ್ಕೆ ಏರಿಕೆಯಾಗಿದೆ ಎಂದರು.

ಹೊಸ ಮಸೂದೆ ಉದ್ಯೋಗ ದಿನಗಳನ್ನು 125ಕ್ಕೆ ಹೆಚ್ಚಿಸುವುದಾಗಿ ಹೇಳಿಕೊಂಡರೂ, ಅದನ್ನು ರೂಪಿಸಿರುವ ವಿಧಾನವೇ ಈಗಿರುವ MGNREGAಯ ಖಚಿತ ದಿನಗಳನ್ನೂ ಕುಂದಿಸುವ ಅಪಾಯವನ್ನು ಒಳಗೊಂಡಿದೆ. ಬೇಡಿಕೆ ಆಧಾರಿತ ಕಾರ್ಮಿಕ ಬಜೆಟ್‌ನಿಂದ ಹಿಂದೆ ಸರಿದು, ಕೇಂದ್ರ ಸರ್ಕಾರವೇ ಏಕಪಕ್ಷೀಯವಾಗಿ ನಿರ್ಧರಿಸುವ ರಾಜ್ಯವಾರು ಮಾನದಂಡ ಹಂಚಿಕೆಗೆ ಹೋಗಿರುವುದು ಅತ್ಯಂತ ಪ್ರತಿಗಾಮಿ ಬದಲಾವಣೆ. ಇದರಿಂದ ನೈಜ ಉದ್ಯೋಗ ಬೇಡಿಕೆ ಅಥವಾ ನಿಧಿಗಳ ಬಳಕೆಯ ಬದಲಿಗೆ, ಚುನಾವಣಾ ಅಥವಾ ರಾಜಕೀಯ ಲೆಕ್ಕಾಚಾರಗಳ ಆಧಾರದಲ್ಲಿ ರಾಜ್ಯಗಳಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚುತ್ತದೆ. ಪೂರೈಕೆ ಆಧಾರಿತ ಉದ್ಯೋಗ ವ್ಯವಸ್ಥೆ ಮಹಿಳೆಯರಿಗೆ ಅನುಕೂಲಕರವಾಗಿರುವ ಮನೆ ಸಮೀಪದ, ಸುರಕ್ಷಿತ ಹಾಗೂ ಸುಲಭವಾಗಿ ತಲುಪಬಹುದಾದ ಕೆಲಸದ ಸ್ಥಳಗಳನ್ನು ಕಡೆಗಣಿಸುವ ಭೀತಿ ಉಂಟುಮಾಡುತ್ತದೆ. ಜೊತೆಗೆ, ಯೋಜನೆಯ ವೆಚ್ಚದ ಶೇ.40ನ್ನು ರಾಜ್ಯಗಳೇ ಭರಿಸಬೇಕೆಂಬ ನಿಯಮವು ಬಡ ಮತ್ತು ಹಿಂದುಳಿದ ರಾಜ್ಯಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ; ಅಲ್ಲಿ ಸಾರ್ವಜನಿಕ ಉದ್ಯೋಗದ ಮೇಲೆ ಮಹಿಳೆಯರ ಅವಲಂಬನೆ ಅತ್ಯಧಿಕವಾಗಿದೆ ಎಂದು ಹೇಳಿದರು.

ಕೃಷಿಯ ಉಚ್ಚ ಕಾಲಘಟ್ಟಗಳಲ್ಲಿ ಉದ್ಯೋಗವನ್ನು ನಿರ್ಬಂಧಿಸುವ ಮಸೂದೆ ಪ್ರಸ್ತಾವನೆ ಕೃಷಿ ಕಾರ್ಮಿಕರ ಲಿಂಗಾಧಾರಿತ ವಾಸ್ತವ್ಯವನ್ನು ಅರ್ಥಮಾಡಿಕೊಳ್ಳದ ಸ್ಪಷ್ಟ ಉದಾಹರಣೆಯಾಗಿದೆ. ಬಿತ್ತನೆ ಹಾಗೂ ಕೊಯ್ಲು ಅವಧಿಯಲ್ಲಿ NREGA ಕೆಲಸವನ್ನು ನಿಷೇಧಿಸುವುದು, ಕಡಿಮೆ ವೇತನ ಮತ್ತು ಕಡಿಮೆ ಕೂಲಿ ಇರುವ ಕೆಲಸದಲ್ಲಿ ತೊಡಗಿರುವ ಮಹಿಳಾ ಕೃಷಿ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. MGNREGA ಮಹಿಳೆಯರ ವೇತನ ಹೆಚ್ಚಿಸಲು ಮತ್ತು ಸ್ಥಳೀಯ ಕಾರ್ಮಿಕ ಮಾರುಕಟ್ಟೆಯಲ್ಲಿ ಅವರ ಸಂಧಾನ ಶಕ್ತಿಯನ್ನು ಬಲಪಡಿಸಲು ಪ್ರಮುಖ ಪಾತ್ರ ವಹಿಸಿತ್ತು. ಈ ನಿರ್ಬಂಧವು ಆ ಸಾಧನೆಗಳನ್ನು ಹಿಮ್ಮೆಟ್ಟಿಸುವುದರ ಜೊತೆಗೆ ಮಹಿಳೆಯರನ್ನು ಮತ್ತಷ್ಟು ಶೋಷಣೆ ಮತ್ತು ವೇತನ ದಮನಕ್ಕೆ ಒಳಪಡಿಸುತ್ತದೆ.

ಪ್ರಸ್ತುತ ವ್ಯವಸ್ಥೆಯಲ್ಲಿ ಲೀಕೆಜ್ ಮತ್ತು ಭ್ರಷ್ಟಾಚಾರದ ಬಗ್ಗೆ ಚಿಂತೆಗಳಿದ್ದರೂ, ಸರ್ಕಾರದ ಅತಿರೇಕದ ಡಿಜಿಟಲೀಕರಣ ಕ್ರಮಗಳು ಗ್ರಾಮೀಣ ವಾಸ್ತವ್ಯವನ್ನು ನಿರ್ಲಕ್ಷಿಸುತ್ತವೆ. ಸಮರ್ಪಕ ಮೂಲಸೌಕರ್ಯ ಮತ್ತು ಸ್ಪಂದನಶೀಲ ಆಡಳಿತವಿಲ್ಲದೆ ಜಾರಿಗೆ ತಂದಾಗ, ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿ ಮತ್ತು ಹೆಚ್ಚುವರಿ ಡಿಜಿಟಲ್ ಮೇಲ್ವಿಚಾರಣೆ ಹೊರಗುಳಿಸುವಿಕೆಗೆ ಕಾರಣವಾಗುತ್ತವೆ. ಈ ವ್ಯವಸ್ಥೆಗಳನ್ನು ನಿಭಾಯಿಸುವಲ್ಲಿ ಮಹಿಳೆಯರಿಗೆ ಹೆಚ್ಚಿನ ಅಡೆತಡೆಗಳು ಎದುರಾಗುತ್ತಿದ್ದು, ಕೆಲಸ ನಿರಾಕರಣೆ, ವೇತನ ವಿಳಂಬ ಮತ್ತು ಮಧ್ಯವರ್ತಿಗಳ ಮೇಲೆ ಅವಲಂಬನೆ ಹೆಚ್ಚುತ್ತದೆ ಎಂದರು.

ಕಳೆದ ದಶಕದಲ್ಲಿ MGNREGAಯನ್ನು ಕ್ರಮಬದ್ಧವಾಗಿ ದುರ್ಬಲಗೊಳಿಸಲಾಗಿದ್ದು, ಹೆಚ್ಚಿನ ಅನುದಾನ, ಉತ್ತಮ ಜಾರಿಗೊಳಿಕೆ ಮತ್ತು ಲೀಕೆಜ್ ಕಡಿಮೆ ಮಾಡುವ ಜವಾಬ್ದಾರಿಗಾಗಿ ಜನವಾದಿ ಮಹಿಳಾ ಸಂಘಟನೆ ಸದಾ ಹೋರಾಟದ ಮುಂಚೂಣಿಯಲ್ಲಿದೆ. ಆದರೆ ಯಾವುದೇ ಸಾರ್ವಜನಿಕ ಚರ್ಚೆ ಅಥವಾ ಈ ಕಾಯ್ದೆಯನ್ನು ಸಾಧಿಸಿದ ವಿಶಾಲ ಜನಾಂದೋಲನದ ಮಾನ್ಯತೆ ಇಲ್ಲದೆ VB-G RAM G ಮಸೂದೆಯನ್ನು ತರುವ ಸರ್ಕಾರದ ನಡೆ ಅದರ ಉದ್ದೇಶವನ್ನು ಬಹಿರಂಗಪಡಿಸುತ್ತದೆ. ಹಕ್ಕು ಆಧಾರಿತ ಯೋಜನೆಯನ್ನು ಜಾಹೀರಾತು ಮತ್ತು ಬ್ರ್ಯಾಂಡಿಂಗ್ ಆಧಾರಿತ ಯೋಜನೆಯಾಗಿ ಬದಲಿಸುವ ಮೂಲಕ, ಪಾರದರ್ಶಕತೆ, ಜವಾಬ್ದಾರಿ ಮತ್ತು ಜಾರಿಗೊಳಿಸಬಹುದಾದ ಹಕ್ಕುಗಳನ್ನು—ವಿಶೇಷವಾಗಿ ಮಹಿಳೆಯರ ಹಕ್ಕುಗಳನ್ನು—ಕುಂದುಮಾಡುವ ಅಪಾಯಕಾರಿ ದಿಕ್ಕಿನತ್ತ ಇದು ಸಾಗುತ್ತಿದೆ ಎಂದು ತಿಳಿಸಿದರು.

ಜನವಾದಿ ಮಹಿಳಾ ಸಂಘಟನೆ VB-G RAM G ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ MGNREGAಯನ್ನು ಬಲಪಡಿಸಲು ಅಗತ್ಯವಾದ ಹೆಚ್ಚಿನ ಅನುದಾನವನ್ನು ಒದಗಿಸಬೇಕು ಎಂದು ಆಗ್ರಹಿಸುತ್ತದೆ. MNREGA ಮೇಲೆ ನಡೆದಿರುವ ಈ ದಾಳಿಯ ವಿರುದ್ಧ ದೇಶಾದ್ಯಂತ ಮಹಿಳೆಯರನ್ನು ಸಂಘಟಿಸಿ, ಪ್ರತಿಭಟನೆಗಳನ್ನು ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಸೇರಿಸಿದ್ದಾರೆ.

ಇದನ್ನೂ ನೋಡಿ : ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ಭಯ ಬಿಡಿ ಸತ್ಯ ತಿಳಿಯಿರಿ Janashakthi Media

 

Donate Janashakthi Media