ಬೆಂಗಳೂರು: ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದೆ. ಬೆಂಗಳೂರು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಜನರು ಸಂಚಾರಕ್ಕೆ ಖಾಸಗಿ ಬಸ್, ಆಟೋ ಸೇರಿದಂತೆ ಖಾಸಗಿ ವಾಹನ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪರದಾಡುತ್ತಿದ್ದಾರೆ. ಮುಷ್ಕರ
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ಸೋಮವಾರದ ಸಭೆ ವಿಫಲಗೊಂಡ ಬಳಿಕ ಸಮಿತಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ಪ್ರಾರಂಭಿಸಿದೆ. ಹಲವು ಜಿಲ್ಲೆಗಳಲ್ಲಿ ಮುಷ್ಕರ ಬಿಸಿ ಜನರಿಗೆ ತಟ್ಟಿದ್ದು, ಅವರು ಪರದಾಡುತ್ತಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಮುಷ್ಕರ
ರಾಯಚೂರು ಅಪ್‌ಡೇಟ್: ಸಾರಿಗೆ ನೌಕರರ ಅನಿರ್ಧಿಷ್ಟ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳವಾರ ನಗರ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಪ್ರಯಾಣಿಕರು ಪರಾದಾಡುತ್ತಿದ್ದಾರೆ.
11.30ಕ್ಕೆ ಮಹತ್ವದ ಸಭೆ: ಕರ್ನಾಟಕ ಹೈಕೋರ್ಟ್ ಆದೇಶ, ಸರ್ಕಾರದ ಮಾತುಕತೆಯ ಆಹ್ವಾನದ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮಹತ್ವದ ಸಭೆ 11.30ಕ್ಕೆ ಬೆಂಗಳೂರು ನಗರದಲ್ಲಿ ನಡೆಯಲಿದೆ.
ದಾವಣಗೆರೆ: ಮುಷ್ಕರದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಜನರು ಪರದಾಡುತ್ತಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಜನರು ಬರುತ್ತಿದ್ದಾರೆ. ಆದರೆ ಸರ್ಕಾರಿ ಬಸ್‌ಗಳಿಲ್ಲ, ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಖಾಸಗಿ ಬಸ್ ವ್ಯವಸ್ಥೆ ಮಾಡಿದೆ. ಆದರೆ ಗ್ರಾಮೀಣ ಭಾಗದ ಜನರು ನಗರಕ್ಕೆ ಬರಲು ಬಸ್‌ಗಳಿಲ್ಲ.
ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತವಾಗಿದೆ. ಬೇಂದ್ರೆ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ದೂರ ಮಾರ್ಗ, ನಗರ ಸಾರಿಗೆ, ಬಿಆರ್‌ಟಿಎಸ್ ಬಸ್ ಸೇರಿದಂತೆ ಯಾವ ಬಸ್‌ಗಳ ಸಂಚಾರವೂ ಇಲ್ಲ. ಡ್ರೈವರ್ ಮತ್ತು ಕಂಡಕ್ಟರ್ ಡಿಪೋದಿಂದ ಹೊಸೂರು ಬಸ್ ನಿಲ್ದಾಣ, ಗೋಕುಲ ಬಸ್ ನಿಲ್ದಾಣಕ್ಕೆ ಬಸ್‌ಗಳನ್ನು ತಂದು ನಿಲ್ಲಿಸಿದ್ದಾರೆ. ಆದರೆ ನಿಲ್ದಾಣದಿಂದ ಮಾತ್ರ ಯಾವುದೇ ಬಸ್ ಹೊರಗೆ ಬರುತ್ತಿಲ್ಲ.
ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ಕಡಿಮೆ ಇದೆ. ಬೆಳಗ್ಗೆ 6 ಗಂಟೆಯಿಂದ 1050 ಬಸ್‌ಗಳ ಪೈಕಿ ಕೇವಲ 880 ಬಸ್‌ಗಳು ಸಂಚಾರ ನಡೆಸಿವೆ. ಜನರು ನಮ್ಮ ಮೆಟ್ರೋ, ಖಾಸಗಿ ವಾಹನದ ಮೂಲಕ ಕಚೇರಿಗೆ ಹೊರಟಿದ್ದಾರೆ.
ಬಾಗಲಕೋಟೆ: ಬಾಗಲಕೋಟೆಯಲ್ಲಿಯೂ ಕೆಲವು ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ. ರಬಕವಿ-ಬನಹಟ್ಟಿ, ತೇರದಾಳ ಹಾಗೂ ಮಹಾಲಿಂಗಪೂರ ಸೇರಿ ತಾಲೂಕಿನಾದ್ಯಂತ ಎಲ್ಲ ಬಸ್ ನಿಲ್ದಾಣಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಆಟೋ ಚಾಲಕರ ಸುಲಿಗೆ: ಬಸ್ ಇಲ್ಲದಿರುವುದನ್ನು ಆಟೋ ಚಾಲಕರು ಬಂಡವಾಳ ಮಾಡಿಕೊಂಡು ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಬಾಯಿಗೆ ಬಂದಷ್ಟು ದರವನ್ನು ಆಟೋ ಚಾಲಕರು ಹೇಳುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಷ್ಕರ ವಾಪಸ್‌ಗೆ ಕರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಮುಷ್ಕರವನ್ನು ವಾಪಾಸು ಪಡೆಯಬೇಕು ಎಂದು ಕರೆ ನೀಡಿದ್ದಾರೆ.
ರೋಗಿಗಳ ಪರದಾಟ: ಹುಬ್ಬಳ್ಳಿ ನಗರಕ್ಕೆ ಕಿಮ್ಸ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಜನರು ಪರದಾಡಿದರು. ಹಳ್ಳಿಯಿಂದ ರಾತ್ರಿ ಬಸ್‌ನಲ್ಲಿ ಬೆಳಗ್ಗೆ ನಗರಕ್ಕೆ ಆಗಮಿಸಿದರು. ಆದರೆ ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ಹೋಗಲು ನಗರ ಸಾರಿಗೆ ಬಸ್‌ಗಳಿಲ್ಲ. ಆದ್ದರಿಂದ ಆಟೋಗಳಿಗೆ ದುಪ್ಪಟ್ಟು ಬೆಲೆ ತೆರಬೇಕಾಯಿತು. ಹೊಸೂರು ಬಸ್ ನಿಲ್ದಾಣದಿಂದ ಕಿಮ್ಸ್ ಅಸ್ಪತ್ರೆಗೆ ಒಬ್ಬರಿಗೆ 25 ರೂ. ದರ ಫಿಕ್ಸ್ ಮಾಡಿ ಆಟೋ ಚಾಲಕರು ಸಂಚಾರ ನಡೆಸುತ್ತಿದ್ದಾರೆ.
ಕುಷ್ಟಗಿಯ ಅಪ್‌ಡೇಟ್: ಮುಷ್ಕರದ ಹಿನ್ನಲೆಯಲ್ಲಿ ಕುಷ್ಟಗಿ ಸಂಪೂರ್ಣವಾಗಿ ಬಂದಾಗಿದ್ದು ಕುಷ್ಟಗಿ ಬಸ್ ನಿಲ್ದಾಣದಿಂದ ಜನರನ್ನು ಕರೆದುಕೊಂಡು ಹೋಗಲು ಖಾಸಗಿ ವಾಹನಗಳು ಸಜ್ಜಾಗಿವೆ. ಆದರೆ ಪ್ರಯಾಣಕರನ್ನು ತಮ್ಮ ಊರಿಗೆ ತಲುಪಿಸಲು ಎರಡು ಪಟ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ.
