ಜಿಲ್ಲಾಧಿಕಾರಿ ಆಪ್ತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 1.70 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಜಿಲ್ಲಾಧಿಕಾರಿ ಕೆ.ದಯಾನಂದ್ ಆಪ್ತ ಎಂದು ಹೇಳಿಕೊಂಡ ಮಹೇಶ್ ಎಂಬಾತ ಜಮೀನು ಮಂಜೂರಾತಿ ಮಾಡಿಸಿಕೊಡುತ್ತೇನೆ ಎಂದು 1.70 ಲಕ್ಷ ರೂ. ಪಡೆದು ವಂಚಿಸಿದ್ದಾನೆ/
ಜಮೀನು ಮಂಜೂರಾತಿಗಾಗಿ ಓಡಾಡುತ್ತಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ವಿಶ್ವನಾಥ್ ಅವರನ್ನು ಹಿಂಬಾಲಿಸುತ್ತಿದ್ದ ಮಹೇಶ್ ಜಿಲ್ಲಾಧಿಕಾರಿಯನ್ನು ನೋಡಲು ಬಂದ ದಿನ ಡಿಸಿ ಚೇಂಬರ್ ನಿಂದ ಹೊರಗೆ ಬಂದಂತೆ ನಟಿಸಿ ಪರಿಚಯ ಮಾಡಿಕೊಂಡಿದ್ದಾನೆ.
ಡಿಸಿ ನನಗೆ ಆತ್ಮೀಯರು. ನಾನು ಹೇಳಿದರೆ ಕೆಲಸ ಮಾಡಿಕೊಡುತ್ತಾರೆ ಎಂದು ವಿಶ್ವನಾಥ್ ಅವರನ್ನು ನಂಬಿಸಿದ ಮಹೇಶ್, ಕೆಲಸ ಮಾಡಿಕೊಡಲು ಡಿಸಿ 1.30 ಲಕ್ಷ ಹಣ ಕೇಳುತ್ತಿದ್ದಾರೆ. ನನ್ನ ಕಮಿಷನ್ ಸೇರಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.
ವಿಶ್ವನಾಥ್ ಕಷ್ಟಪಟ್ಟು ಹಣ ಹೊಂದಿಸಿ ತಂದುಕೊಟ್ಟ ನಂತರ ಮಹೇಶ್ ನಾಪತ್ತೆಯಾಗಿದ್ದು, ಫೋನ್ ಸ್ವಿಚಾಫ್ ಮಾಡಿಕೊಂಡಿದ್ದಾನೆ.
ವಿಶ್ವನಾಥ್ ಅವರು ಡಿಸಿ ದಯಾನಂದ್ ಬಳಿ ಬಂದು ಘಟನೆಯನ್ನು ವಿವರಿಸಿ ಜಮೀನು ಮಂಜೂರಾತಿ ಮಾಡಿಸಿಕೊಡಿ ಎಂದು ಕೇಳಿದಾಗ ಸ್ವತಃ ದಯಾನಂದ್ ಅವರೇ ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೆ ಅವರು ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿ ನನ್ನ ಹೆಸರಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ವಿಶ್ವನಾಥ್ ಮತ್ತು ಡಿಸಿ ದೂರಿನ ಮೇರೆಗೆ ಮಹೇಶ್ ನನ್ನು ಬಂಧಿಸಿದ ಪೊಲೀಸರು 80 ಸಾವಿರ ರೂ. ವಾಪಸ್ ಕೊಡಿಸಿದ್ದಾರೆ. ಅಲ್ಲದೇ ಬಾಕಿ ಹಣ ಭರ್ತಿ ಮಾಡಿಕೊಡುವಂತೆ ಮಹೇಶ್ ಗೆ ಸೂಚಿಸಿದ್ದಾರೆ.
ಘಟನೆ ಬೆನ್ನಲ್ಲೇ ಡಿಸಿ ದಯಾನಂದ್, ತನ್ನ ಹೆಸರೇಳಿಕೊಂಡು ಯಾರೇ ಬಂದ್ರೂ ನಂಬಬೇಡಿ, ದಲ್ಲಾಳಿಗಳ ಖೆಡ್ಡಾಕ್ಕೆ ಬೀಳಬೇಡಿ. ನೇರವಾಗಿ ನನ್ನ ಬಳಿಯೇ ಬನ್ನಿ. ಬೆಳಗ್ಗೆಯಿಂದ್ಲೇ ನಿಮ್ಮ ಸೇವೆಗೆ ನಾನಿರುತ್ತೇನೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.