ಬೆಂಗಳೂರು ಗಲಭೆ ಪ್ರಕರಣ ಉನ್ನತ ತನಿಖೆಯಾಗಲಿ: ಹೆಚ್ಡಿಡಿ

  • ಕಾಯ್ದೆ ತಿದ್ದುಪಡಿ ವಿರುದ್ಧ ತವರಿಂದಲೇ ಹೋರಾಟ ಆರಂಭ

 

ಹಾಸನ: ಬೆಂಗಳೂರಿನ ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿ ನಡೆದಿರುವ ಗಲಭೆ ಪ್ರಕರಣದ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ಸಾಲದು ಬದಲಾಗಿ ಹಾಲಿ ಹೈಕೋರ್ಟ್ ನ್ಯಾಯಾಧೀಶರು ಇಲ್ಲವೇ ಸಿಸಿಬಿಯಿಂದ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಲಹೆ ನೀಡಿದರು.
ನಗರದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಲಿ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಸಿಬಿಯಿಂದ ತನಿಖೆಯಾಗಲಿ ಎಂದರು.
ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಈಗಾಗಲೇ 280ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಆದರೆ ಬಂಧಿತರೆಲ್ಲಾ ಅಪರಾಧಿಗಳು ಎಂದು ಹೇಳಲಾಗದು, ಅವರು ತಪ್ಪು ಮಾಡಿದ್ದಾರೆಯೇ? ಇಲ್ಲವೇ ಎಂಬುದನ್ನು ಪರಾಮರ್ಶಿಸಬೇಕು ಎಂದು ಆಗ್ರಹಿಸಿದ ಗೌಡರು. ಹಿಂದುವಾಗಲಿ, ಬೇರೆ ಯಾರೇ ಆಗಲಿ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದರು.
ಜಿಲ್ಲಾಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗೌಡರು, ಈ ಬಗ್ಗೆ ಸರಿಯಾದ ಸಂಸ್ಥೆಗೆ ವಹಿಸಿ ದೊಡ್ಡಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಬಿಜೆಪಿ ವಿರುದ್ಧ ಗರಂ
 ಇದೇ ವೇಳೆ ಇದು ಒಂದು ರಾಜಕೀಯ ಪಕ್ಷದ ಆಂತಕರಿಕ ಭಿನ್ನಾಭಿಪ್ರಾಯ ಎನ್ನೋದು ಹೊರ ಬರುತ್ತಿದೆ.ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರೇ ಒಂದು ಹೆಸರು ಹೇಳಿ ಆರೋಪ ಮಾಡಿದ್ದಾರೆ. ಇದೊಂದು ದುರ್ದೈವ. ಬಿಜೆಪಿ ನಡವಳಿಕೆ ಈ ದೇಶದಲ್ಲಿ ಜಗಜ್ಜಾಹೀರಾಗಿದೆ. ಕಾಂಗ್ರೆಸ್ ನ ಒಳಗೂ ಆಂತರಿಕ ಕಲಹ ಇರುವುದು ಬಯಲಾಗಿದೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಂರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಯಾರೇ ಆಗಲಿ ಅನವಶ್ಯಕವಾಗಿ ಯಾವುದೇ ಒಂದು ಕೋಮನ್ನು ಗುರಿ ಮಾಡಬಾರದು. ಆರ್‍ಎಸ್‍ಎಸ್ ಇರಲಿ ಮುಸ್ಲಿಂ ಸಂಘಟನೆಗಳಿರಲಿ ಕ್ರಮ ಆಗಬೇಕು.

ತೀವ್ರತರವಾದ ದಾಳಿ. ಮನೆಗೆ ಬೆಂಕಿ ಹಚ್ಚಿದ್ದಾರೆ, ಮನೆ ಲೂಟಿ ಮಾಡಿದ್ದಾರೆ. ದೇಶದಲ್ಲೂ ಬಿಜೆಪಿ ಬಂದಾಗಿನಿಂದಲೂ ಮುಸ್ಲಿಂರನ್ನು ಐದನೇ ದರ್ಜೆ ನಾಗರಿಕರಂತೆ ನಡೆಸಿಕೊಂಡಿದೆ. ಇದಕ್ಕೆ ಉತ್ತರ ಪ್ರದೇಶ ಸೇರಿ ಹಲವು ಉದಾಹರಣೆ ಕೊಡಬಹುದು ಎಂದು ಅಸಮಾಧಾನ ಹೊರ ಹಾಕಿದರು. ಬೆಂಗಳೂರು ಗಲಭೆ ವಿಚಾರದಲ್ಲಿ ಎರಡು ರಾಜಕೀಯ ಪಕ್ಷಗಳಲ್ಲೇ ಪರಸ್ಪರ ಕಿತ್ತಾಟ ಪ್ರಾರಂಭವಾಗಿದೆ. ಬಿಜೆಪಿಯವರು ಕೆಲ ಮುಸ್ಲಿಂ ಸಂಘಟನೆಗಳಿಗೆ ನಿರ್ಬಂಧ ಹೇರಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟ ನಿಲ್ಲದು
ಇದಕ್ಕೂ ಡಿಸಿ ಕಚೇರಿ ಆವರಣದಲ್ಲಿ ನಡೆದ ಜೆಡಿಎಸ್ ಪ್ರತಿಭಟನೆಯಲ್ಲಿ ಮಳೆಯ ನಡುವೆಯೇ ಭಾಗವಹಿಸಿ ಮಾತನಾಡಿದ ಗೌಡರು, ಈ ಪಕ್ಷ ಹುಟ್ಟಿರೋದೆ ರೈತರ ಪರವಾಗಿ ಹೋರಾಟ ಮಾಡೋಕೆ. ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಕೆಲ ಕಾನೂನು ತಿದ್ದುಪಡಿ ಪರಿಣಾಮಗಳ ಬಗ್ಗೆ ಚರ್ಚೆಯಾಗಬೇಕಿದೆ.  ಈ ಅಪಾಯದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನರಿಗೆ ತಿಳಿಸಬೇಕಿದೆ.  ಮೈಸೂರು, ಮಂಡ್ಯ, ತುಮಕುರು, ಚಿಕ್ಕಬಳ್ಳಾಪುರ ಕೋಲಾರದಲ್ಲಿ ನಮ್ಮ ಶಾಸಕರಿದ್ದು ಅಲ್ಲಿ ಪರಿಣಾಮಕಾರಿ ಹೋರಾಟ ನಡೆಸಬೇಕು ಎಂದರು.
ನಮ್ಮದು ಅಧಿಕೃತ ವಿರೋಧ ಪಕ್ಷ ಅಲ್ಲ. ಆದರೂ ನಾವು ಹೋರಾಟ ಮಾಡಬೇಕಿದೆ. ರಾಜ್ಯಸಭೆ ಚುನಾವಣೆ ಇಷ್ಟವಿರಲಿಲ್ಲ. ಆದರೂ ಆಕಸ್ಮಿಕವಾಗಿ ರಾಜ್ಯಸಭೆ ಸದಸ್ಯ ನಾಗಿದ್ದೇನೆ. ಅಲ್ಲೂ ಎಷ್ಟು ಸಾಧ್ಯವೊ ಅಷ್ಟು ಹೋರಾಟ ಮಾಡುತ್ತೇನೆ. ಇದು ದ್ವೇಷದಿಂದ ಮಾಡುತ್ತಿರೋ ಹೋರಾಟವಲ್ಲ. ನಮ್ಮ ರೈತರ ಸಂಕಷ್ಟಕ್ಕೆ ನಾವು ನೆರವಾಗಬೇಕು. ರಾಜ್ಯದ 30 ಜಿಲ್ಲೆಗೂ ನಾನು ಹೋಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಈ ಮೂಲಕ ತಿದ್ದುಪಡಿ ಕಾಯ್ದೆ ಎಷ್ಟು ಅಪಾಯಕಾರಿ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿದೆ ಎಂದರು.
ನಾನು ಕೂತುಕೊಳ್ಳೋದಿಲ್ಲ, ಈ ಹೋರಾಟ ಹಾಸನದಿಂದಲೇ ಆರಂಭಗೊಂಡಿದ್ದು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ನಡೆಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ಕೊರೊನಾದಿಂದ ನನಗೇನಾದ್ರೂ ತೊಂದರೆ ಆಗುತ್ತೆ ಎಂದು ಕೆಲವರು ಹೆದರುತ್ತಾರೆ. ಆದ್ರೆ ನಾನು ಧೃತಿಗೆಡೋದಿಲ್ಲ, ಸಾವು ಯಾವಾಗ ಹೇಗೆ ಬರುತ್ತೋ ಗೊತ್ತಿಲ್ಲ ಎಂದರು. ಒಂದೆರಡು ತಿಂಗಳಲ್ಲಿ ಕೊರೊನಾ ಅಬ್ಬರ ಕಡಿಮೆಯಾಗಬಹುದು ಎಂದರು. ನನಗೀಗ ವಯಸ್ಸು 88. ಆದರೂ ಇನ್ಮುಂದೆ ನಾನು ಕೂರೋದಿಲ್ಲ ಈ ತಿಂಗಳ ಕೊನೆಯವರೆಗೆ ಎಲ್ಲಾ ಜಿಲ್ಲೆಯ ಪ್ರವಾಸ ಮುಗಿಸುತ್ತೇನೆ ನಮ್ಮ ರಾಜಕಾರಣಿಗಳಿಗೆ ಸ್ವಾರ್ಥ ಹೆಚ್ಚಿದೆ. ಹಣ ಮಾಡುವ ಆಸೆ ಹೆಚ್ಚಾಗಿದೆ ಹತ್ತು ಜನ ಇರಲಿ, ಅವರಿಗೇ ವಿಷಯ ಹೇಳುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *