ಬೆಂಗಳೂರು ಗಲಭೆ: ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮನವಿ

  • ಗಲಭೆ ಸಂಬಂಧ 65ಕ್ಕೂ ಹೆಚ್ಚು ಪ್ರಕರಣಗಳ ದಾಖಲು
  • ಅಪಾರ ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿ ಹಾನಿ

ಬೆಂಗಳೂರು: ಆಗಸ್ಟ್ 11 ರಂದು ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಉಂಟಾಗಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟದ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್’ಗೆ ಮನವಿ ಸಲ್ಲಿಸಿದೆ.

ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಬುಧವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸರ್ಕಾರದ ಪರ ತ್ವರಿತ ಅರ್ಜಿಸಲ್ಲಿಸಿ ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಮನವಿ ಮಾಡಿದರು.

ವಿಚಾರಣೆ ನಡೆಸಿದ ನ್ಯಾಯಪೀಠ, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿದ್ದ ಬಂದ್ ವೇಳೆ ಹಾಗೂಮಾಜಿ ಸಚಿವ ಡಿಕೆ.ಶಿವಕುಮಾರ್ ಬಂಧನ ಖಂಡಿಸಿ ನಡೆಸಲಾದ ಬಂದ್ ಸಂದರ್ಭದಲ್ಲಿ ಉಂಟಾದ ನಷ್ಟದ ಅಂದಾಜಿಗೆ ಕ್ಲೇಮ್ ಕಮಿಷನರ್ ನೇಮಕ ಮಾಡಿದ್ದ ಆದೇಶವನ್ನು ಹಾಜರುಪಡಿಸಲು ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಗಲಭೆಯಲ್ಲಿ 80 ಪೊಲೀಸರು ಗಾಯಗೊಂಡಿದ್ದಾರೆ. ಎರಡು ಪೊಲೀಸ್ ಠಾಣೆಗಳು ಸಹಿತ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಮಾಡಲಾಗಿದೆ. ಪೊಲೀಸ್‌ ವಾಹನಗಳೂ ಸೇರಿ ನೂರಾರು ವಾಹನಗಳನ್ನು ಸುಟ್ಟು ಹಾಕಲಾಗಿದೆ. ಈ ಸಂಬಂಧ ಈವರೆಗೂ 65ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ನಷ್ಟದ ಅಂದಾಜು ಮಾಡಿ , ಹೊಣೆಗಾರಿಕೆ ನಿಗದಿಪಡಿಸಿ, ನಷ್ಟ ಅನುಭವಿಸಿದವರಿಗೆ ಪರಿಹಾರ ದೊರಕಿಸಲು ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 

ಮೂವರು ಎಸ್ಪಿಪಿಗಳ ನೇಮಕ:
ಈ ಮಧ್ಯೆ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಸರಕಾರ ಹಾಗೂ ಗೃಹ ಇಲಾಖೆ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ವಕೀಲರಾದ ಪಿ. ಪ್ರಸನ್ನಕುಮಾರ್‌, ಪಿ. ತೇಜಸ್‌ ಹಾಗೂ ಬಿ.ಓ. ಚಂದ್ರಶೇಖರ್‌ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ (ಎಸ್ಪಿಪಿ) ನೇಮಿಸಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Donate Janashakthi Media

Leave a Reply

Your email address will not be published. Required fields are marked *