ಬೆಂಗಳೂರು: ಕೃಷಿ ಮೇಳಕ್ಕೆ ಭಾನುವಾರ 17.97 ಲಕ್ಷ ಜನ ಬಂದಿದ್ದರು. ಕೃಷಿಯಲ್ಲಿನ ತಾಂತ್ರಿಕತೆಯ ಅನಾವರಣ, ಹೊಸ ತಳಿಗಳು ಮತ್ತು ಆಧುನಿಕ ತಂತ್ರಜ್ಞಾನದ ಉಪಕರಣಗಳ ಪ್ರದರ್ಶನ ಒಳಗೊಂಡಿದ್ದ ಮುಖ್ಯ ಗೇಟ್‌ನಿಂದ ಕೃಷಿ ಮೇಳ ನಡೆಯುವ ಪ್ರದೇಶದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೇಳಕ್ಕೆ ನಗರವಾಸಿಗಳು, ರೈತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.
ಇದನ್ನೂ ಓದಿ : ಕೇರಳ | ಸ್ಥಳೀಯ ಸಂಸ್ಥೆ ಚುನಾವಣೆ : ಕುಟುಂಬದ ಮೂರು ಸಹೋದರಿಯರು ಸ್ಪರ್ದೆ
ನಾಲ್ಕು ದಿನಗಳಿಂದ ನಡೆಯುತ್ತಿದ್ದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಈ ಮೇಳದಲ್ಲಿ ರೈತರು, ಯುವಕರು, ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರು ಪ್ರಾತ್ಯಕ್ಷಿಕೆ ತಾಕುಗಳು, ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಮೇಳದ ಕೊನೆಯ ದಿನವೂ ಜನಸಾಗರ ಹರಿದು ಬಂತು. ಅದರಲ್ಲೂ ರೈತರಿಗಿಂತಲೂ ನಗರದ ಜನತೆ ಕುಟುಂಬದ ಸದಸ್ಯರೊಂದಿಗೆ ಬಂದಿದ್ದರು. ಪೋಷಕರು ಮಕ್ಕಳಿಗೆ ವಿವಿಧ ಬೆಳೆಗಳನ್ನು ಪರಿಚಯಿಸಿದರು. ಸಾಂಪ್ರದಾಯಿಕ ಕೃಷಿ ಪರಿಕರಗಳನ್ನು ನಗರದ ಜನ ಕುತೂಹಲದಿಂದ ವೀಕ್ಷಿಸಿದರು.
ಪ್ರಾಣಿ ಪ್ರಪಂಚಕ್ಕೆ ಲಗ್ಗೆ ಇಟ್ಟ ಜನ: ಮೇಳದಲ್ಲಿ ಪಶುಸಂಗೋಪನೆಗೆ ಸಂಬಂಧಿಸಿದ ಮಳಿಗೆಗಳಲ್ಲಿ ವಿವಿಧ ತಳಿಗಳ ಕುರಿ, ಕೋಳಿ ಮತ್ತು ಆಲಂಕಾರಿಕ ಮೀನು , ಹಸು, ದನ, ಎಮ್ಮೆಗಳನ್ನು ನೋಡಲು ಸಾರ್ವಜನಿಕರು ಲಗ್ಗೆ ಇಟ್ಟಿದ್ದರು. ಹಳ್ಳಿಕಾರ್ ತಳಿ ಎತ್ತುಗಳ ಮುಂಭಾಗದಲ್ಲಿ ನಿಂತು ಸಾರ್ವಜನಿಕರು ಫೋಟೊ ತೆಗೆಸಿಕೊಂಡರು.
ಸೂರ್ಯಕಾಂತಿ ತಾಕುಗಳ ಮುಂಭಾಗದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಂಡರು. ಕೃಷಿ ಯಂತ್ರೋಪಕರಣಗಳ ವಿಭಾಗ, ಸಾವಯವ ಹಾಗೂ ಸಿರಿಧಾನ್ಯ ವಿಭಾಗಗಳಲ್ಲಿ ಹೆಚ್ಚು ಜನ ಕಂಡುಬಂದರು. ಕೃಷಿ ಪ್ರವಾಸೋದ್ಯಮದ ಮಾದರಿಯ ಬಳಿ ಮಂಡ್ಯದ ತಾಜಾ ಬೆಲ್ಲವನ್ನು ನಗರವಾಸಿಗಳು ಸವಿದರು. ಇಲ್ಲಿರುವ ಕೆರೆಯಲ್ಲಿ ಸಾರ್ವಜನಿಕರು ಮೀನು ಹಿಡಿದು ಸಂಭ್ರಮಿಸಿದರು.
ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೆ? ಯಾವ ಬೆಳೆ ಬೆಳೆದರೆ ಲಾಭದಾಯಕ? ರೋಗ ಹಾಗೂ ಕೀಟಗಳ ನಿವಾರಣೆಗೆ ಯಾವ ಔಷಧ ಸಿಂಪಡಿಸಬೇಕು? ಲಾಭದಾಯಕ ಕೃಷಿಗಾಗಿ ಯಾವೆಲ್ಲ ಪದ್ಧತಿ ಅನುಸರಿಸಬೇಕು? ಸಾವಯವ ಗೊಬ್ಬರ ತಯಾರಿಕೆ ಹೇಗೆ? ಕೃಷಿ ಜೊತೆಯಲ್ಲೇ ಜೇನು ಸಾಕಿದರೆ ಹಾಗೂ ಕಿರು ಅರಣ್ಯ ಸೃಷ್ಟಿಸಿದರೆ ಲಾಭವೇ? ಈ ರೀತಿಯ ನೂರಾರು ಪ್ರಶ್ನೆಗಳಿಗೆ ಕೃಷಿ ತಜ್ಞರಿಂದ ರೈತರು ಉತ್ತರ ಪಡೆಯಲು ‘ಕೃಷಿ ಮೇಳ’ ವೇದಿಕೆಯಾಯಿತು. ಕೃಷಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಉಚಿತವಾಗಿ ಸಲಹೆ ನೀಡಲು ಮೇಳದಲ್ಲಿ ‘ಕೃಷಿ ಸಲಹಾ ಕೇಂದ್ರ’ ತೆರೆಯಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಹಾವು ಕಡಿತದ ಕುರಿತು ಜಾಗೃತಿ: ಹಾವು ಕಡಿತದಿಂದ ದೇಶದಲ್ಲಿ 50 ಸಾವಿರದಿಂದ 60 ಸಾವಿರ ಮಂದಿ ಮೃತಪಡುತ್ತಿದ್ದಾರೆ. ಹಾವು ಕಡಿದಾಗ ಅವೈಜ್ಞಾನಿಕವಾಗಿ ಆ ಭಾಗವನ್ನು ಕತ್ತರಿಸಲಾಗುತ್ತದೆ. ಇಂತಹ ಅವೈಜ್ಞಾನಿಕ ಕ್ರಮಗಳಿಂದ ಹಲವರು ಮೃತಪಡುತ್ತಿದ್ದಾರೆ. ಮಾನವ ವನ್ಯ ಜೀವಿ ಸಂಘರ್ಷವನ್ನು ತಡೆಯುವುದು ನಮ್ಮ ಉದ್ದೇಶವಾಗಿದೆ. ಅದರ ಭಾಗವಾಗಿ ರಾಜ್ಯದಾದ್ಯಂತ ಉಚಿತವಾಗಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ವೈಲ್ಡ್ ವರ್ಲ್ಡ್ ಕನ್ಸರ್ವೇಷನ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ರಾಜೇಶ್ ಮಾಧ್ಯಮಗಳಿ ಗೆ ತಿಳಿಸಿದರು.
ಇದನ್ನೂ ನೋಡಿ : ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ
