ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಗಂಗಾವತಿ ನಗರದ ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗೆ ರಸ್ತೆ ಮಧ್ಯೆ ಹಾಕಿದ್ದ ಬಿಲ್ಲು-ಬಾಣ ಮಾದರಿಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಹೊರಡಿಸಿದ್ದ ಆದೇಶವನ್ನು ಗಂಗಾವತಿ ತಹಶೀಲ್ದಾರ್ ವಾಪಸ್ ಪಡೆದಿದ್ದಾರೆ.
ಬಿಲ್ಲು-ಬಾಣ ಮಾದರಿಯ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಗಸ್ಟ್ 28ರಂದು ಕಂಬಗಳನ್ನು ತೆರವುಗಳಿಸಲು ಆದೇಶ ನೀಡಲಾಗಿತ್ತು. ಆದರೆ ಎರಡು ದಿನದಲ್ಲೇ ಆದೇಶ ವಾಪಸ್ ಪಡೆದಿರುವ ತಹಸೀಲ್ದಾರ್, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ ವಿರುದ್ಧ ಕೂಡ ಪ್ರಕರಣ ದಾಖಲಿಸದಂತೆ ಸೂಚಿಸಿದ್ದಾರೆ.
ಅಗಸ್ಟ್ 28ರ ಸಂಜೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ತಹಸೀಲ್ದಾರ್ ನಾಗರಾಜ್ ಅವರು ಈ ಬಗ್ಗೆ ಸಂಬಂಧಿತ ಸಂಕ್ಷಮ ಪ್ರಾಧಿಕಾರದಲ್ಲಿ ಜನಾಭಿಪ್ರಾಯ ಪಡೆದು ಮುಂದುವರೆಯಲಾಗುವುದು. ಧಾರ್ಮಿಕ, ಮತೀಯ ಭಾವನೆಯಂತ ಸೂಕ್ಷ್ಮ ವಿಚಾರ ಉಂಟಾದಲ್ಲಿ ಕಾನೂನನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಷಯ ನಗರಸಭೆಯ ವ್ಯಾಪ್ತಿಗೆ ಬರುವ ಕಾರಣ ಸಾಮಾನ್ಯ ಸಭೆಯಲ್ಲಿ ಇದೇ ವಿಚಾರದ ಅಂಗವಾಗಿ ಪ್ರಸ್ತಾಪ ಮಾಡಿ ವಿಷಯ ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡಿರುವುದು ನನ್ನ ಗಮನಕ್ಕೆ ಬಾರದ ಹಿನ್ನೆಲೆ ಆದೇಶ ಮಾಡಲಾಗಿತ್ತು ಎಂದು ಈ ಬಗ್ಗೆ ನಾಗರಾಜ್ ತಿಳಿಸಿದ್ದಾರೆ.