– ಬಿಜೆಪಿ ಮುಖಂಡರ ವಿರುದ್ಧ ಎಫ್ ಐ ಆರ್ ಹಾಕಬೇಕೆಂಬ ಅರ್ಜಿ ವಜಾ ಒಂದು ನ್ಯಾಯಯುತವಲ್ಲದ ನ್ಯಾಯಾಂಗ ಪ್ರಕ್ರಿಯೆ: ಬೃಂದಾ ಕಾರಟ್
ನವದೆಹಲಿ: ದೆಹಲಿ ಗಲಭೆಗೂ ಮುನ್ನಾ ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ಶರ್ಮ ಅವರ ಮೇಲೆ ಪ್ರಕರಣ ದಾಖಲಿಸಲು ತಾಂತ್ರಿಕ ಕಾರಣ ನೀಡಿ ನಿರಾಕರಿಸಿರುವುದು ನ್ಯಾಯಯುತವಲ್ಲದ ನ್ಯಾಯಾಂಗ ಕ್ರಮ ಎಂದು ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಪ್ರತಿಕ್ರಿಯಿಸಿದ್ದಾರೆ.
ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ಶರ್ಮಾ ಅವರು ಪ್ರಚೋದನಾಕಾರಿ, ದ್ವೇಷ ಭಾಷಣ ಮಾಡಿದ್ದರು. ಈ ಸಂಬಂಧ ಸೆಕ್ಷನ್ 153ರ ಅಡಿಯಲ್ಲಿ ಎಫ್ಐತಆರ್ ದಾಖಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ದಿಲ್ಲಿ ಪೊಲೀಸ್ಗೆ ದೂರನ್ನು ಸಲ್ಲಿಸಿದ್ದರು. ಆದರೆ ದಿಲ್ಲಿ ಪೊಲೀಸರು ಈ ಸಂಬಂಧ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲವಾದ್ದರಿಂದ ಕಾನೂನು ಪ್ರಕಾರ ಸೂಕ್ತ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅರ್ಜಿ ದಾಖಲಿಸಿದ್ದರು.
ನ್ಯಾಯಾಲಯ ದೂರುದಾರರಾಗಿದ್ದ ಬೃಂದಾ ಅವರ ವಕೀಲರ ಪೂರ್ಣ ವಾದಗಳನ್ನು ಆಲಿಸಿತು. ಆದರೆ ದಿಲ್ಲಿ ಪೊಲೀಸರು ಬಿಜೆಪಿ ಮುಖಂಡರು ದಂಡನಾರ್ಹ ಅಪರಾಧ ಮಾಡಿದ್ದಾರೆ ಎಂಬುದು ಸಾಬೀತಾಗಿಲ್ಲ ಎಂದು ವಾದಿಸಿದರು. ತೀರ್ಪನ್ನು ಕಾದಿರಿಸಲಾಯಿತು. ಆದರೆ ಇತರರು ಹೈಕೋರ್ಟಿಗೆ ಹೋಗಿದ್ದರಿಂದ ಇದು ವಿಳಂಬವಾಯಿತು. ಹೈಕೋರ್ಟ್ ಈ ಅರ್ಜಿಯನ್ನು ಇತ್ಯರ್ಥ ಮಾಡುವಂತೆ ಮ್ಯಾಜಿಸ್ಟ್ರೇಟ್ ರಿಗೆ ನಿರ್ದೇಶನ ನೀಡಿತ್ತು. ಆದರೆ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಅರ್ಜಿಯನ್ನು ಸಲ್ಲಿಸಲೂ ಕೂಡ ಅಪರಾಧ ಸಂಹಿತೆಯ ವಿಭಾಗ 196 ಅಡಿಯಲ್ಲಿ ಪೂರ್ವಾನುಮತಿ ಬೇಕು ಎಂದು ತೀರ್ಪು ನೀಡಿದೆ.
ದಿಲ್ಲಿ ಪೊಲೀಸರೂ ಕೂಡ ಈ ಆಕ್ಷೇಪವನ್ನು ಈ ಹಿಂದೆ ಎತ್ತಿರಲಿಲ್ಲ. ಈ ಅನುಮತಿ ನಿಜವಾಗಿಯೂ ಬೇಕಿದ್ದರೆ ಕೇಸಿನ ವಿಚಾರಣೆಯ ಆರಂಭದಲ್ಲೇ ಇದನ್ನು ಹೇಳದೆ, ಪೂರ್ಣ ವಿಚಾರಣೆಯನ್ನು ನಡೆಸಿದ್ದಾರೂ ಏಕೆ? ಎಂದು ಪ್ರಶ್ನಿಸಿರುವ ಬೃಂದಾ ಕಾರಟ್ ಇದೊಂದು ಅನ್ಯಾಯಯುತ ನ್ಯಾಯಾಂಗ ಪ್ರಕ್ರಿಯೆ, ಇದರಿಂದಾಗಿ ದ್ವೇಷ ಭಾಷಣ ಮಾಡಿದ್ದು ಮೇಲ್ನೋಟಕ್ಕೇ ಸಾಬೀತಾಗಿದ್ದರೂ ಅವರ ಅಪರಾಧವನ್ನು ಮನ್ನಿಸಲಾಗಿದೆ ಎಂದು ಹೇಳಿದ್ದಾರೆ.