ಬೆಂಗಳೂರು: ಬಿಜೆಪಿಯ ದುರಾಡಳಿತವೇ ಕಾಂಗ್ರೆಸ್ ಪಕ್ಷಕ್ಕೆ 140 ಸ್ಥಾನ ಸಿಗುವಂತೆ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.
ಈಜಿಪುರ ವಾರ್ಡ್‌ನಿಂದ ಗುರುವಾರ ಕಾಂಗ್ರೆಸ್ ವರಿಷ್ಠ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ, ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಲು ದ್ವಿಚಕ್ರ ವಾಹನದಲ್ಲಿ ತೆರಳಿದರು.
ಈ ವೇಳೆ ಕಾರ್ಯಕರ್ತರು ರಾಮಲಿಂಗಾ ರೆಡ್ಡಿಯವರನ್ನು ಹೂಮಾಲೆ ಹಾಕುವ ಮೂಲಕ ಸ್ವಾಗತಿಸಿದರು, ಬಳಿಕ ರಾಮಲಿಂಗಾ ರೆಡ್ಡಿಯವರು, ಇಂದಿರಾ ಕಾಲೋನಿ, ರಾಜೇಂದ್ರ ನಗರ ಮತ್ತು ಅಂಬೇಡ್ಕರ್ ನಗರ ನಿವಾಸಿಗಳನ್ನು ಭೇಟಿಯಾದರು. ಇದೇ ವೇಳೆ ಕೆಲ ಮತದಾರರ ಮನೆಗಳಿಗೂ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿಯವರು, ಬಿಜೆಪಿಯ ಪರಿಸ್ಥಿತಿ ಹದಗೆಟ್ಟಿದೆ. ಅವರ ದುರಾಡಳಿತದಿಂದ ಕಾಂಗ್ರೆಸ್‌ಗೆ 140ಕ್ಕೂ ಹೆಚ್ಚು ಸ್ಥಾನ ಸಿಗಲಿದೆ. ರಾಜ್ಯದಲ್ಲಿನ ಹಣದುಬ್ಬರ, ಮೂಲಸೌಕರ್ಯ ಮತ್ತು ಭ್ರಷ್ಟಾಚಾರದ ಬಗ್ಗೆ ಮತದಾರರಿಗೆ ಅರಿವು ಮೂಡಿಸುತ್ತಿದ್ದೇವ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಿಸಿದ ಐದನೇ ಭರವಸೆ ಸೇರಿದಂತೆ ಕಾಂಗ್ರೆಸ್‌ನ ಚುನಾವಣಾ ಪೂರ್ವ ಗ್ಯಾರಂಟಿಗಳ ಬಗ್ಗೆಯೂ ಮತದಾರರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಅಧಿಕಾರಕ್ಕೆ ಬಂದಿದ್ದೇ ಆದರೆ, ಜನತೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ, ತಲಾ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000 ರೂ ಸಹಾಯ ಮತ್ತು ಪದವೀಧರರಿಗೆ ಸಹಾಯ ಮಾಡುತ್ತೇವೆ ಭರವಸೆ ನೀಡಿದರು.
ಬಳಿಕ ಅಪೂರ್ಣಗೊಂಡಿರುವ ಈಜಿಪುರ ಮೇಲ್ಸೇತುವೆ ವಿಚಾರವನ್ನು ಪ್ರಸ್ತಾಪಿಸಿದ ಅವರು, ಮೇಲ್ಸೇತುವೆ ಪೂರ್ಣಗೊಳಿಸಲು ಹೊರ ಮತ್ತು ಒಳವರ್ತುಲ ರಸ್ತೆಯಲ್ಲಿ ಜಮೀನು ಪಡೆಯಲು ರಕ್ಷಣಾ ಅನುಮತಿ ಪಡೆಯಲು ಬಿಜೆಪಿ ವಿಳಂಬ ಮಾಡುತ್ತಿದೆ ಎಂದು ಕಿಡಿಕಾರಿದರು.