ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಅಣ್ಣಾ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಅವರ ಹೇಳಿಕೆಯನ್ನು ವಿರೋಧಿಸಿರುವ ಎಐಎಡಿಎಂಕೆ ನಾಯಕ ಡಿ. ಜಯಕುಮಾರ್, “ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ಮೈತ್ರಿ ಮುರಿದಿದ್ದೇವೆ” ಎಂದು ಸೋಮವಾರ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜಯಕುಮಾರ್ ಅವರು, “ಈ ಬಗ್ಗೆ ಮುಂದಿನ ವರ್ಷದ ಚುನಾವಣೆಯ ಸಮಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾನು ನಮ್ಮ ಪಕ್ಷದೊಳಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಭಾವನೆಗಳನ್ನು ಮಾತ್ರ ಪ್ರತಿಬಿಂಬಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. ಪಕ್ಷದ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದ ನಂತರವೇ ಜಯಕುಮಾರ್ ತಮ್ಮ ಘೋಷಣೆ ಮಾಡಿದ್ದಾರೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ತೆಲಂಗಾಣ ಚುನಾವಣೆ ಆರು ಗ್ಯಾರೆಂಟಿ ಘೋಷಿಸಿದ ಕಾಂಗ್ರೆಸ್
ತಮಿಳುನಾಡು BJP ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಮತ್ತು ಎಐಎಡಿಎಂಕೆಯ ಕೆಲವು ನಾಯಕರ ನಡುವೆ ಇತ್ತೀಚೆಗೆ ವಾಗ್ವಾದ ನಡೆದಿದ್ದು, ಇದೀಗ ಅದು ಸ್ಫೋಟಕ್ಕೆ ಕಾರಣವಾಗಿದೆ. ಅಣ್ಣಾಮಲೈ ಅವರ ಪುನರಾವರ್ತಿತ ಗೇಲಿಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಜಯಕುಮಾರ್, ಮೈತ್ರಿ ಇಲ್ಲದೆ ಸ್ಪರ್ಧಿಸಿದರೆ ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ನೋಟಾವನ್ನು ಕೂಡಾ ಹಿಂದಿಕ್ಕಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಸೇರಿದಂತೆ ದ್ರಾವಿಡ ಚಳವಳಿಯ ನಾಯಕರನ್ನು ಟೀಕೆ ಮಾಡಿರುವ ಬಗ್ಗೆ ನೆನಪಿಸಿಕೊಂಡ ಜಯಕುಮಾರ್, “ಅಣ್ಣಾಮಲೈ ಅವರು ಎಐಎಡಿಎಂಕೆಯೊಂದಿಗೆ ಮೈತ್ರಿ ಬಯಸುತ್ತಿಲ್ಲ. ಆದರೆ ಇತರ BJP ಕಾರ್ಯಕರ್ತರು ಅದನ್ನು ಬಯಸುತ್ತಿದ್ದಾರೆ. ನಮ್ಮ ನಾಯಕರ ಬಗ್ಗೆ ಮಾಡುತ್ತಿರುವ ಟೀಕೆಗಳನ್ನೆಲ್ಲ ನಾವು ಸಹಿಸಬೇಕೇ? ನಾವು ಅವರೊಂದಿಗಿಲ್ಲದಿದ್ದರೆ BJP ತಮಿಳುನಾಡಿನಲ್ಲಿ ಕಾಲಿಡಲೂ ಸಾಧ್ಯವಿಲ್ಲ. ಸಧ್ಯದ ಮಟ್ಟಿಗೆ BJP ಜೊತೆಗೆ ಎಐಎಡಿಎಂಕೆ ಮೈತ್ರಿ ಮುರಿದಿದೆ. ಆದರೆ ಎಲ್ಲವನ್ನೂ ಚುನಾವಣೆಯ ವೇಳೆ ನಿರ್ಧರಿಸಲಿದ್ದೇವೆ. ಇದು ಪಕ್ಷದ ನಿಲುವು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ದ್ವೇಷ ರಾಜಕಾರಣ ಮುಂದುವರೆಸಿದ ಕಾಂಗ್ರೆಸ್ ಸರ್ಕಾರ | ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ
1950ರ ದಶಕದಲ್ಲಿ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರು ಹಿಂದೂ ಧರ್ಮದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು ಹಾಗೂ ಅವರ ಹೇಳಿಕೆಗೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಪಸುಂಪೊನ್ ಮುತ್ತುರಾಮಲಿಂಗ ಥೇವರ್ ಅವರು ತಕ್ಷಣವೇ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಅಣ್ಣಾ ಮಲೈ ಅವರು ಹೇಳಿದ್ದರು. ಸೆಪ್ಟೆಂಬರ್ 11ರಂದು ಚೆನ್ನೈನಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ನೀಡಿದ್ದ ಅಣ್ಣಾಮಲೈ ಅವರ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ ಎಂದು ಬಗ್ಗೆ ಎಐಎಡಿಎಂಕೆ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಸಚಿವ ಸೆಲ್ಲೂರ್ ಕೆ. ರಾಜು, “ದಿವಂಗತ ಮುಖ್ಯಮಂತ್ರಿ ಅಣ್ಣಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವವರ ನಾಲಿಗೆಯನ್ನು ಕತ್ತರಿಸಬಲ್ಲ ಅವರ ಕಟ್ಟಾ ಅನುಯಾಯಿಗಳೂ ಇದ್ದಾರೆ. ತಮಿಳು ಸಂಸ್ಕೃತಿಯಲ್ಲಿ, ಹಿರಿಯ ರಾಜಕೀಯ ನಾಯಕರು ಸೇರಿದಂತೆ ಅಗಲಿದ ಜನರ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡುವುದಿಲ್ಲ. ಎಂ. ಕರುಣಾನಿಧಿ ಅವರು ಬದುಕಿದ್ದಾಗ ಅವರನ್ನು ತೀವ್ರವಾಗಿ ಟೀಕಿಸಿದ ಎಐಎಡಿಎಂಕೆ ನಾಯಕರು ಈಗ ಅವರ ಬಗ್ಗೆ ಗೌರವದಿಂದ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: “ಹೈದರಾಬಾದ್ ವಿಮೋಚನಾ ದಿನ” ಮರೆಮಾಚಿದ ಸತ್ಯಗಳೇನು? ಜಿ.ಎನ್. ನಾಗರಾಜ್ ವಿಶ್ಲೇಷಣೆಯಲ್ಲಿ | Janashakthi Media