ಬಿಜೆಪಿಯ ಹೊಸ ಮುಖವಾಡ ಜಾತ್ಯಾತೀತತೆಯ ಕಪಟ ನಾಟಕ ಪ್ರದರ್ಶನ

ಸೀತಾರಾಂ ಯೆಚೂರಿ

ಸಂಪುಟ – 06, ಸಂಚಿಕೆ 42, ಅಕ್ಟೋಬರ್ 14, 2012

babri-masjid-demolition

ಬಿಜೆಪಿಯ ಹಳೆಯ ಹುಲಿ ಈಗ ಜಾತ್ಯಾತೀತತೆಯನ್ನು ಎತ್ತಿ ಹಿಡಿಯುವ ಮಾತಾಡುತ್ತಿರುವುದು ನಿಜಕ್ಕೂ ಒಂದು ವಿಪಯರ್ಾಸ. ಆದರೆ ಬಿಜೆಪಿಯ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ತಮ್ಮ ಲಿಖಿತ ಭಾಷಣದಲ್ಲಿನ ಇದಕ್ಕೆ ಸಂಬಂಧಪಟ್ಟ ಭಾಗಗಳನ್ನು ಏಕೆ ಅವರು ಓದದೇ ಬಿಟ್ಟರು ಎಂಬ ಬಗ್ಗೆ ಬಿಜೆಪಿಯಿಂದ ಅಧಿಕೃತ ವಿವರಣೆಯಂತೂ ಬಂದಿಲ್ಲ. ಜಾತ್ಯಾತೀತತೆಯ ಸೋಗು ಹಾಕುವ ಬಿಜೆಪಿಯ ಇಂತಹ ಪ್ರಯತ್ನಗಳ ಉದ್ದೇಶ ಆರೆಸ್ಸೆಸ್ನ ಸೈದ್ಧಾಂತಿಕ ಯೋಜನೆಯನ್ನು ಮುಂದೊಯ್ಯಲು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಳ್ಳಲಿಕ್ಕಾಗಿಯೇ ಎಂಬುದು ಸುಸ್ಪಷ್ಟ. ಇಂತಹ ಪ್ರಯತ್ನಗಳನ್ನು ಬಯಲಿಗೆಳೆಯಬೇಕು ಮತ್ತು ಸೋಲಿಸಲೂ ಬೇಕು.

ಕಳೆದ ವಾರ ಬಿಜೆಪಿಯ ರಾಷ್ಟ್ರೀಯ ಮಂಡಳಿಯ ಸಭೆಯ ಕಾಲದಲ್ಲಿ ಎನ್ಡಿಎ ಯನ್ನು ಬಾಧಿಸುತ್ತಿರುವ ವೈರುಧ್ಯ ಮತ್ತೆ ಎಲ್ಲರ ಗಮನ ಸೆಳೆದಿದೆ. ಪರಿಹರಿಸಲಾಗದ ಈ ವೈರುಧ್ಯ ಹೀಗಿದೆ: ಬಿಜೆಪಿಗೆ ಹೆಚ್ಚಿನ ಚುನಾವಣಾ ಬೆಂಬಲ ಗಿಟ್ಟಿಸಲು ಸಾಧ್ಯವಾಗುವುದು ಜನಗಳ ನಡುವೆ ಕೋಮು ದ್ರ್ರುವೀಕರಣವನ್ನು ತೀಕ್ಷ್ಣಗೊಳಿಸಿದರೆ ಮಾತ್ರ. ಆದರೆ ಇದು ಅತ್ತ ಅದರ ಹಲವಾರು ಮಿತ್ರರನ್ನು ದೂರ ಸರಿಸುತ್ತದೆ. ಏಕೆಂದರೆ ಈ ಪ್ರಾದೇಶಿಕ ಪಕ್ಷಗಳು ಧಾಮರ್ಿಕ ಅಲ್ಪಸಂಖ್ಯಾತರನ್ನು, ಅದರಲ್ಲಿಯೂ ಮುಸ್ಲಿಮರನ್ನು ದೂರಮಾಡಿಕೊಳ್ಳಲಾರವು. ಈಗಾಗಲೇ ಇಂತಹ ಸದ್ದು ಎನ್ಡಿಎ ಒಳಗಿಂದ ಕೇಳಬಂದಿದೆ- ಜೆಡಿ(ಯು)ನ ಬಿಹಾರ ಮುಖ್ಯಮಂತ್ರಿಗಳು ನರೇಂದ್ರ ಮೋದಿಯವರನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯಥರ್ಿಯಾಗಿ ಬಿಂಬಿಸುವ ವಿಚಾರದಲ್ಲಿ ಗುಡುಗಿದ್ದಾರೆ.

ಈ ವೈರುಧ್ಯವನ್ನು ಮೀರಿ ನಿಲ್ಲಲು ಬಿಜೆಪಿಯ ಹಳೆಯ ಹುಲಿ ಎಲ್.ಕೆ.ಅಡ್ವಾಣಿ ಯವರು ಹೊಸದೊಂದು ಮುಖವಾಡ ಧರಿಸುವ ಪ್ರಯತ್ನ ಮಾಡಿದ್ದಾರೆ, ಅಂದರೆ ಬಿಜೆಪಿಯಿಂದ ಜಾತ್ಯಾತೀತತೆಯ ಪ್ರತಿಪಾದನೆ. ಯಾರ ನೇತೃತ್ವದ ರಥಯಾತ್ರೆ ತಾನು ಸಾಗಿದ ದಾರಿಯುದ್ದಕ್ಕೂ ಸಾವು-ನೋವಿನ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿ ಅಂತಿಮವಾಗಿ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾಯಿತೋ ಅದೇ ಶ್ರೀಯುತ ಅಡ್ವಾಣಿ ಈಗ ಜಾತ್ಯಾತೀತತೆಯನ್ನು ಎತ್ತಿ ಹಿಡಿಯುವ ಮಾತಾಡುತ್ತಿರುವುದು ನಿಜಕ್ಕೂ ವಿಪಯರ್ಾಸ. ಶ್ರೀಯುತ ಅಡ್ವಾಣಿಯವರು ತಮ್ಮ ಲಿಖಿತ ಭಾಷಣದಲ್ಲಿನ ಇದಕ್ಕೆ ಸಂಬಂಧಪಟ್ಟ ವಾಕ್ಯಗಳನ್ನು ಓದದಿದ್ದುದು ಅದಕ್ಕೆ ಅನುರೂಪವಾದದ್ದೇ ಸರಿ. ಈ ಮೂಲಕ ಅವರು ತಮ್ಮನ್ನು ಬಿಜೆಪಿ ಭೂತಕಾಲದಿಂದ ಪ್ರತ್ಯೇಕಿಸಿ ಕೊಳ್ಳಲು ಸಾಧ್ಯವಿಲ್ಲ ಎಂಬ ಸೂಚನೆಯಂತೂ ಸ್ಪಷ್ಟವಾಗಿ ಸಿಗುತ್ತದೆ. ಸಂಬಂಧಪಟ್ಟ ಪರಿಚ್ಛೇದಗಳನ್ನು ಓದದಿರುವ ಮೂಲಕ ಅವರು ಭೀತರಾದರು ಎಂಬುದರ ಸೂಚನೆ ಮಾತ್ರವಲ್ಲ, ಬಿಜೆಪಿ ತನ್ನ ಕಟ್ಟಾ ಹಿಂದುತ್ವ ಅಜೆಂಡಾದಿಂದ ದೂರ ಸರಿಯಲು ಅಸಮರ್ಥವಾಗಿದೆ ಎಂಬುದರ ಸೂಚನೆಯನ್ನೂ ಕೊಟ್ಟಂತಾಗಿದೆ ಎಂಬ ಇಂಗಿತ ಮಾಧ್ಯಮಗಳ ವರದಿಗಳಲ್ಲಿ ಕಾಣ ಬಂದಿದೆ. ಶ್ರೀಯುತ ಅಡ್ವಾಣಿಯವರು ಈ ಭಾಗಗಳನ್ನು ಏಕೆ ಓದದೇ ಇದ್ದರು ಎಂಬ ಬಗ್ಗೆ ಬಿಜೆಪಿಯಿಂದ ಅಧಿಕೃತ ವಿವರಣೆಯಂತೂ ಬಂದಿಲ್ಲ.

ಏಕೆ ಓದದೆ ಬಿಟ್ಟರು?
ಈಗಲೂ, ಪ್ರಜಾಸತ್ತಾತ್ಮಕ ಭಾರತೀಯ ಗಣತಂತ್ರವನ್ನು ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿಯ ‘ಹಿಂದೂ ರಾಷ್ಟ್ರ’ವಾಗಿ ಪರಿವತರ್ಿಸುವ ಆರೆಸ್ಸೆಸ್ ಕಣ್ಣೋಟದ ಆಧಾರದಲ್ಲಿಯೇ ಬಿಜೆಪಿ ಸುತ್ತ ಅಣಿನೆರೆಯುವ ಕಟ್ಟಾ ಬೆಂಬಲದ ನೆಲೆ ತಪ್ಪಿಹೋಗಬಹುದು ಎಂಬ ಭಯದಿಂದಲೇ ಅವರು ಈ ಪ್ಯಾರಾಗಳನ್ನು ಓದದೇ ಬಿಟ್ಟರು ಎಂಬುದಂತೂ ಸ್ಪಷ್ಟ.

ಲಿಖಿತ ಭಾಷಣದ ಓದದೇ ಇದ್ದ ಭಾಗಗಳು ಬಿಜೆಪಿ “ಜಾತ್ಯಾತೀತತೆಗೆ ನಮ್ಮ ಬದ್ಧತೆಯನ್ನು ಕಲ್ಪನಾಶೀಲವಾಗಿ ಪುನರ್ರೂಪಿಸಿಕೊಳ್ಳಬೇಕು” ಎಂದು ಕರೆ ನೀಡಿವೆ. ಈ ಆಧಾರದಲ್ಲಿ ತಮ್ಮ ಮಿತ್ರರಾಗಬಹುದಾದವರು “ಬಿಜೆಪಿಯೊಂದಿಗೆ ಪಾಲುದಾರರಾಗಲು ಭಯಪಡಬೇಕಾದ್ದು ಏನೂ ಇಲ್ಲ” ಎಂದು ಮನವಿ ಮಾಡಲಾಗಿದೆ. ಇಂತಹ ಮನವಿಗಳು, ಕೇಂದ್ರದಲ್ಲಿ ಒಂದು ಸರಕಾರ ರಚಿಸಲು ಅಗತ್ಯವಾದ ಸಂಖ್ಯೆಯನ್ನು ಗಳಿಸುವ ಕಣ್ಕಟ್ಟುಗಳಷ್ಟೇ ಎಂಬುದು ಕೂಡ ಬೇಗನೇ ಸ್ಪಷ್ಟವಾಗಿದೆ-” ಈ ಸನ್ನಿವೇಶದಲ್ಲಿ ನೀತಿಗಳಲ್ಲಿ ದೃಢತೆಯೊಂದಿಗೆ ಕಾರ್ಯತಂತ್ರದಲ್ಲಿ ಒಂದು ರೀತಿಯ ಮೆದುತನ ಬೇಕಾಗುತ್ತದೆ” ಎಂಬ ಅವರ ಪದಗಳಲ್ಲೇ. ಕಾರ್ಯತಂತ್ರಗಳು ಮಿತ್ರಪಕ್ಷಗಳನ್ನು ಮತ್ತು ಜನತೆಯನ್ನು ದಾರಿ ತಪ್ಪಿಸಲು, ಹಾಗೂ ನೀತಿಗಳು ಎಂದರೆ ಆರೆಸ್ಸೆಸ್ನ ‘ಹಿಂದೂ ರಾಷ್ಟ್ರ’ ಅಜೆಂಡಾದ ಬೀಜಸೂತ್ರ.

‘ರಥಯಾತ್ರಿಕ’ನ ಬಾಯಿಂದಲೇ…?
ಅಲ್ಪಸಂಖ್ಯಾತರ ತುಷ್ಟೀಕರಣದ ಒಂದು ರೀತಿಯ ಉಲ್ಟಾ ಮಾದರಿಯಲ್ಲಿ ಶ್ರೀಯುತ ಅಡ್ವಾಣಿ ಜಗತ್ತಿನ ವಿವಿಧ ಭಾಗಗಳಲ್ಲಿ ಹಿಂಸಾಚಾರಗಳನ್ನು ಉದ್ರೇಕಿಸಿದ ಇಸ್ಲಾಮ್-ವಿರೋಧಿ ಚಲಚ್ಚಿತ್ರವನ್ನು ಖಂಡಿಸಿದರು. ಭಾರತದ ನಿದರ್ಿಷ್ಟ ಸಂದರ್ಭದ ಬಗ್ಗೆ ಹೇಳುತ್ತಾ ಅವರು “ಈ ಮತದ ಸದಸ್ಯರು ಆರಾಧಿಸುವ ಯಾರ ಬಗ್ಗೆಯಾಗಲೀ ಅಗೌರವ ಹರಡಿಸುವುದು ತಪ್ಪು. ನಾವು, ನಮ್ಮ ವೈವಿಧ್ಯತೆಯ ಸಮಾಜದಲ್ಲಿ ವಿವಿಧ ವಿಭಾಗಗಳೊಡನೆ ವ್ಯವಹರಿಸುವಾಗ ಯಾವುದೇ ಪಕ್ಷಪಾತ ಅಥವ ಅನ್ಯಾಯಕ್ಕೆ ಆಸ್ಪದ ಕೊಡುವುದಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯಗಳ ಸೋದರರಿಗೆ ಸಂಪೂರ್ಣ ದೃಢಭಾವದಿಂದ ಭರವಸೆ ಕೊಡುತ್ತೇವೆ” ಎಂದಿದ್ದಾರೆ. ಬಾಬ್ರಿ ಮಸೀದಿ ಇದ್ದ ಜಾಗದಲ್ಲೇ ರಾಮ ದೇವಸ್ಥಾನ ಕಟ್ಟುತ್ತೇವೆ ಎಂಬ ವಿಷಯದ ಆಧಾರದಲ್ಲಿಯೇ ರಥಯಾತ್ರೆಗೆ ನೇತೃತ್ವ ನೀಡಿದಾತನ ಬಾಯಿಂದಲೇ ಎಂತಹ ಮಾತುಗಳು! ‘ಬಾಬರ್ ಕೀ ಔಲಾದ್'(ಬಾಬರನ ಸಂತಾನ) ಎಂಬಿತ್ಯಾದಿ ಆಗಿನ ಉನ್ಮತ್ತ ಘೋಷಣೆಗಳನ್ನೂ ನೆನಪಿಸಿಕೊಳ್ಳಿ!

ಇವೆಲ್ಲಾ, ಹೇಗಾದರೂ ಮಾಡಿ ಜನತೆ ಮತ್ತು ಪ್ರಾದೇಶಿಕ ಪಕ್ಷಗಳಲ್ಲಿ ತಮ್ಮ ಮಿತ್ರರಾಗಬಹುದಾದವರನ್ನು ದಾರಿ ತಪ್ಪಿಸಿ, ಮುಂಬರುವ ಸಾರ್ವತ್ರಿಕ ಚುನಾವಣೆಗಳ ನಂತರದ ಲೋಕಸಭೆಯಲ್ಲಿ ಒಂದು ಬಹುಮತಕ್ಕೆ ಬೆಂಬಲ ಗಿಟ್ಟಿಸುವ ಪ್ರಯತ್ನಗಳೆಂಬುದು ಸುಸ್ಪಷ್ಟ. ಇಂತಹ ನಿರೀಕ್ಷೆಗಳು ವಿಫಲವಾಗಿಯೇ ಆಗುತ್ತವೆ ಎಂಬುದು ಆ ಸಭೆಯಲ್ಲಿಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸ್ಥಾನಮಾನದಿಂದ ಕಂಡುಬಂತು. ಏನೇ ಹೇಳಿ ಕೊಂಡರೂ, ಈಗ ಗುಜರಾತಿನ ವಿಧಾನಸಭಾ ಚುನಾವಣೆಗಳ ಪ್ರಕಟಣೆಯಾಗಿದ್ದು, ಡಿಸೆಂಬರಿನಲ್ಲಿ ಅದರ ಫಲಿತಾಂಶಗಳೇ ಬಹುಮಟ್ಟಿಗೆ ಬಿಜೆಪಿ/ಆರೆಸ್ಸೆಸ್ನ ಆಯ್ಕೆಯ ಮೇಲೆ ಪ್ರಭಾವ ಬೀರುತ್ತವೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಮತ್ತಷ್ಟು ಪ್ರತ್ಯೇಕಗೊಳ್ಳುವ ಒಂದು ಸನ್ನಿವೇಶ ಬರಬಹುದೆಂಬ ಸಂದೇಹ ದಿಂದಲೇ, ನಂತರ ಒಂದು ಸಂದರ್ಭದಲ್ಲಿ ಶ್ರೀಯುತ ಅಡ್ವಾಣಿಯವರು ಬಿಜೆಪಿ ಎದುರಿಸುತ್ತಿರುವ ಒಂದು ರೀತಿಯ ರಾಜಕೀಯ ಅಸ್ಪೃಶ್ಯತೆಯನ್ನು ಕ್ರಿಮಿನಲ್ ಅಪರಾಧವಾಗಿ ಮಾಡಬೇಕು ಎಂದಿದ್ದಾರೆ!

ದಾರಿ ತಪ್ಪಿಸುವ ಕುಯುಕ್ತಿ
ಬಿಜೆಪಿ ಈ ರೀತಿಯಲ್ಲಿ ಎಲ್ಲರಿಂದ ಪ್ರತ್ಯೇಕಗೊಳ್ಳುತ್ತಿದ್ದರೆ ಅದಕ್ಕೆ ಕಾರಣ, ಅದು ಆಧುನಿಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಭಾರತೀಯ ಗಣತಂತ್ರಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಒಂದು ಅಜೆಂಡಾವಿರುವ ಆರೆಸ್ಸೆಸ್ನ ರಾಜಕೀಯ ಅಂಗವಾಗಿರುವುದು. ಈಗಿನ ಈ ಪ್ರಯತ್ನ ಬಿಜೆಪಿಯ ಸೈದ್ಧಾಂತಿಕ ನಿಲುವುಗಳಲ್ಲಾಗಲೀ, ಆರೆಸ್ಸೆಸ್ನ ಯೋಜನೆಯಲ್ಲಾಗಲೀ ಸ್ಪಷ್ಟತೆಯ ಅಭಾವವನ್ನೇನೂ ಬಿಂಬಿಸುತ್ತಿಲ್ಲ. ಬದಲಿಗೆ ಇದು ಜನತೆಯನ್ನು ಮತ್ತು ತನ್ನ ರಾಜಕೀಯ ಮಿತ್ರರಾಗಬಹುದಾದವರನ್ನು ದಾರಿ ತಪ್ಪಿಸುವ ಅದರ ಕುಯುಕ್ತಿಯ ಪ್ರಯತ್ನವಷ್ಟೇ.

ಬಿಜೆಪಿಯನ್ನು ಈ ಚಾಣಕ್ಯ ಕಸರತ್ತುಗಳಷ್ಟೇ ಅಲ್ಲ, ಹಿಂದಿನ ದಿನಗಳಲ್ಲಿ ಕಂಡು ಬರದಿದ್ದ ಸಂಘಟನಾ ಸಮಸ್ಯೆಗಳೂ ಬಾಧಿಸುತ್ತಿವೆ. ಕನರ್ಾಟಕ ಬಿಜೆಪಿಯ ಬಲಿಷ್ಟ ವ್ಯಕ್ತಿ ಮತ್ತು ರಾಜ್ಯದ ಮಾಜೀ ಮುಖ್ಯಮಂತ್ರಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಹಾಜರಾಗದೆ, ಬಿಜೆಪಿ ಅಧ್ಯಕ್ಷರಿಗೆ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ಬಿಜೆಪಿ ಅಧ್ಯಕ್ಷರದ್ದು ತನ್ನಂತವರು ಜನತೆಗೆ ನೀಡಿದ ವಚನಗಳನ್ನು ಪಾಲಿಸಲಾರದ ನೇತೃತ್ವ ಎಂದು ಖಂಡಿಸಿದ್ದಾರೆ. ಆ ಪತ್ರವನ್ನು ಪತ್ರಿಕಾ ಸಮ್ಮೇಳನವೊಂದರಲ್ಲಿ ಬಿಡುಗಡೆ ಮಾಡುತ್ತಾ, “ಒಂದೆಡೆ ನೀವು ಉನ್ನತ ತತ್ವಗಳ ಮಾತಾಡುತ್ತೀರಿ. ಆದರೆ ನೀವು ನಡೆದು ಕೊಳ್ಳುತ್ತಿರುವ ಬಗೆಯಾದರೂ ಏನು?” ಎಂದು ಅವರು ಬಿಜೆಪಿ ಅಧ್ಯಕ್ಷರನ್ನು ಕೇಳಿದ್ದಾರೆ.

ಜಾತ್ಯಾತೀತತೆಯ ಸೋಗು ಹಾಕುವ ಬಿಜೆಪಿಯ ಇಂತಹ ಪ್ರಯತ್ನಗಳ ಉದ್ದೇಶ ಆರೆಸ್ಸೆಸ್ನ ಸೈದ್ಧಾಂತಿಕ ಯೋಜನೆಯನ್ನು ಮುಂದೊಯ್ಯಲು ಕೇಂದ್ರದಲ್ಲಿ ಅಧಿಕಾರ ವಹಿಸಿ ಕೊಳ್ಳಲಿಕ್ಕಾಗಿಯೇ. ಭಾರತೀಯ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿ ಯನ್ನು ಕಾಪಾಡಿಕೊಂಡು, ಅದನ್ನು ಬಲಪಡಿಸಬೇಕಾದರೆ ಇಂತಹ ಪ್ರಯತ್ನಗಳನ್ನು ಬಯಲಿಗೆಳೆಯಬೇಕು ಮತ್ತು ಸೋಲಿಸಲೂ ಬೇಕು.
0

Donate Janashakthi Media

Leave a Reply

Your email address will not be published. Required fields are marked *