ಬಿಜೆಪಿಗೆ ಮೈಯೆಲ್ಲಾ ಉರಿ: ಬಿಕೆ ಹರಿಪ್ರಸಾದ್ ತಿರುಗೇಟು

ಬಗಲ್ ಮೆ ಚೂರಿ ಅಲ್ಲ, ಬಿಜೆಪಿಯಲ್ಲಿ ಮೈಯಲ್ಲಾ ಚೂರಿ ಇದೆ. ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ಹಾಕೊಂಡಿರೋದು ಯಾರಂತೆ? ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಹಾವೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲೇ ಸಿದ್ದರಾಮಯ್ಯಗೆ ಬಗಲ್ ಮೇ ಚೂರಿ ಹಾಕೋರಿದ್ದಾರೆ ಎಂಬ ಅಶೋಕ್ ಹೇಳಿಕೆ ಹಾಸ್ಯಸ್ಪದ. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಆರ್.ಅಶೋಕ್ ಏನು ಉತ್ತರ ಕೊಡ್ತಾರೆ ಮೊದಲು ಕೇಳಿ. ಸಿಟಿ ರವಿಯವರ ಹೇಳಿಕೆಗೆ ಮೊದಲು ಉತ್ತರ ಕೊಡಲಿ. ಅಶೋಕ್ ಮೊದಲು ಹಿಂದಿ ಚೆನ್ನಾಗಿ ಮಾತನಾಡೋದನ್ನು ಕಲಿಯಲಿ. ಬಗಲ್ ಮೆ ಚೂರಿ ಅಲ್ಲ ಬಿಜೆಪಿಯಲ್ಲಿ ಮೈಯಲ್ಲಾ ಚೂರಿ ಇದೆ. ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ಹಾಕೊಂಡಿರೋದು ಯಾರಂತೆ? ಎಂದರು.

ರಾಜ್ಯಪಾಲರನ್ನು ನಾವು ಅವಮಾನಿಸಿಲ್ಲ. ಆದರೆ ಸಂವಿಧಾನಕ್ಕೆ ಅವಮಾನ ಆಗುವ ರೀತಿ ನಡೆದುಕೊಂಡರೆ ಸಂವಿಧಾನದ ಚೌಕಟ್ಟಿನಲ್ಲಿ ಅವರ ವಿರುದ್ಧ ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಸಂವಿಧಾನದ ಮುಖ್ಯಸ್ಥರಾಗಿ ರಾಜ್ಯಪಾಲರು ಬಿಜೆಪಿಯವರ ನಿರ್ದೇಶನದಂತೆ ನಡೆದುಕೊಳ್ಳುವುದು ಸರಿಯಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕೆಲ ನಮ್ಮ ಮುಖಂಡ ಭಾಷೆಗಳಲ್ಲಿ ವ್ಯತ್ಯಾಸ ಆಗಿದೆ. ಬೇರೆ ರೀತಿಯ ಪ್ರತಿಭಟನೆಗೆ ನನ್ನ ಸಮ್ಮತಿ ಇಲ್ಲ. ರಾಜ್ಯಪಾಲರು ದಲಿತರು ಅವರನ್ನು ಅವಮಾನ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬಿಜೆಪಿಯವರು ದಲಿತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಆದಾಗ ಕಣ್ಣು ಮುಚ್ಚಿಕೊಂಡು ಕೂತಿದ್ದರು ಎಂದು ಅವರು ಲೇವಡಿ ಮಾಡಿದರು.

ಐವಾನ್ ಡಿಸೋಜಾ ತಪ್ಪು ಮಾಡಿದರೆ ಕಾನೂನು ಕ್ರಮ ಜರುಗಿಸಲಿ. ಆದರೆ ಅವರ ಮನೆ ಮೇಲೆ ಕಲ್ಲು ಹೊಡೆಯೋದು ಹೇಡಿತನ. ದಕ್ಷಿಣ ಕನ್ನಡ ಜಿಲ್ಲೆಯ ಸಂಘ ಪರಿವಾರದ ಕಿಡಿಗೇಡಿಗಳು ಮಾಡಿದ ಕೆಲಸ ಅದು. ಮುಡಾ ಪ್ರಕರಣದಲ್ಲಿ ದೇಸಾಯಿ ಆಯೋಗ ನೇಮಕ ಆಗಿದೆ. ಆಯೋಗ ವರದಿ ಕೊಟ್ಟ ನಂತರ ವೈಟ್ನರ್ ಹಾಕಿದಾರಾ? ಇಂಕ್ ಹಾಕಿದಾರಾ?  ಬ್ಲಾಕ್ ಇಂಕ್ ಹಾಕಿದಾರಾ? ಗೊತ್ತಾಗುತ್ತೆ. ಕುಲಂಕುಶ ತನಿಖೆ ನಡೆದ ಬಳಿಕ ಗೊತ್ತಾಗುತ್ತೆ. ತನಿಖೆ ಆಗುವವರೆಗೂ ಕಾಯಬೇಕು ಎಂದು ಹರಿಪ್ರಸಾದ್ ಹೇಳಿದರು.

ನೂರು ಸಿಎಂ ಬಂದರೂ ನನ್ನನ್ನು ಅರೆಸ್ಟ್ ಮಾಡಲು ಆಗಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಾರನ್ನೂ ಅರೆಸ್ಟ್ ಮಾಡಲ್ಲ. ಅರೆಸ್ಟ್ ಮಾಡೋದು ಪೊಲೀಸರು. ಕುಮಾರಸ್ವಾಮಿ ಕೇಂದ್ರ ಸಚಿವರು. ಅವರ ಅಂತಸ್ತಿಗೆ ತಕ್ಕಂತೆ ಯಾರಾದರೂ ಐಪಿಎಸ್ ಅಧಿಕಾರಿ ಹೋಗಿ ಪ್ರಶ್ನೆ ಮಾಡ್ತಾರೆ. ಕಾನ್ಸಟೇಬಲ್ ಹೋಗಿ ಮಾಡೋಕೆ ಆಗಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಯಾರನ್ನು ಹೆದರಿಸಲು ಆಗಲ್ಲ ಎಂದರು.

Donate Janashakthi Media

Leave a Reply

Your email address will not be published. Required fields are marked *