ಗಂಗಾವತಿ: ‘ಜನರಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ದೇಶದಲ್ಲಿನ ಕೆಲ ರಾಜಕೀಯ ಪಕ್ಷಗಳ ಮತ್ತು ಬಂಡವಾಳ ಶಾಹಿಗಳ ಆಡಳಿತದಿಂದ ಬಡ ಜನರ ಬದುಕು ದುಸ್ತರವಾಗಿದೆ. ಜನರು ಎಚ್ಚೆತ್ತು ರಾಜಕೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಬೇಕಿದೆ’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.
ನಗರದ ಡಾ.ಬಾಬು ಜನಜೀವನರಾಮ್ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಜಾಥಾ ಅಂಗವಾಗಿ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ : ಹುಬ್ಬಳ್ಳಿ | ಪರ್ಯಾಯ ರಾಜಕಾರಣಕ್ಕಾಗಿ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ‘ಜನದನಿ ರ‍್ಯಾಲಿ’ ಆಯೋಜನೆ – ಕೆ. ಮಹಾಂತೇಶ
‘ಬ್ರಿಟಿಷರ ನಂತರ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಈವರೆಗೆ ದೇಶದ ಬಡಜನತೆಗೆ ಸ್ವಾತಂತ್ರ್ಯ ದೊರೆತಿಲ್ಲ. ದೇಶದ ಕೆಲ ರಾಜಕೀಯ ಪಕ್ಷಗಳಿಗೆ, ಬಂಡವಾಳಶಾಹಿಗಳಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಬಡವರ್ಗದವರು, ಕೂಲಿಕಾರರು ಈವರೆಗೆ ಜಾತಿಯತೆ, ಮೇಲುಕೀಳು, ಮತ-ಧರ್ಮಗಳ ಸಂಘರ್ಷದಲ್ಲಿ ಸಿಲುಕಿಕೊಂಡು ಕಷ್ಟ ಜೀವನ ನಡೆಸುತ್ತಿದ್ದಾರೆ’ ಎಂದರು.
‘ದುಡಿಯುವ ವರ್ಗದ ಪರ, ಜಮೀನ್ದಾರಿ, ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಲು ಹುಟ್ಟಿಕೊಂಡಿದ್ದು ಭಾರತ ಕಮ್ಯುನಿಸ್ಟ್ ಪಕ್ಷ. ಬ್ರಿಟಿಷ್, ಪೋರ್ಚುಗೀಸ್, ಫ್ರೆಂಚ್ ಸಾಮ್ರಾಜ್ಯ ಶಾಹಿಗಳ ಜೊತೆಗೆ ಕೈ ಜೋಡಿಸದೆ ಅವರ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ. ಪಕ್ಷದ ಸಾವಿರಾರು ನಾಯಕರು ದೇಶಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ’ ಎಂದರು.
‘ಸದ್ಯ ಕಮ್ಯುನಿಸ್ಟ್ ಪಕ್ಷ 100 ವರ್ಷಗಳು ಪೂರೈಸಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿನ ಕೋಮುವಾದಿ ಪಕ್ಷಗಳು, ಬಂಡವಾಳಶಾಹಿಗಳು ಜನರ ಸ್ವಾತಂತ್ರ್ಯ ನಾಶ ಮಾಡಿವೆ. ದೇಶದಲ್ಲಿ ಬಡತನ, ನಿರುದ್ಯೋಗ, ಅತ್ಯಾಚಾರ, ರೈತರ ಆತ್ಮಹತ್ಯೆ, ಕಾರ್ಮಿಕ ಹಕ್ಕುಗಳ ನಾಶ, ವಿದ್ಯಾರ್ಥಿನಿಯರ ಕೊಲೆ, ಸಾರ್ವಜನಿಕರ ಸಂಪತ್ತು ಲೂಟಿ ಇವೆಲ್ಲವೂ ಹೆಚ್ಚಳವಾಗಿ ಜನರು ಭಯದ ವಾತಾವರಣದಲ್ಲಿ ಜೀವನ ನಡೆಯುತ್ತಿದ್ದಾರೆ’ ಎಂದರು.
ಪಕ್ಷದ ಪ್ರಮುಖ ಕೆ.ಎಸ್.ಜನಾರ್ಧನ್, ಷಣ್ಮುಖ, ಪ್ರಸನ್ನಕುಮಾರ, ಎ.ಹುಲಗಪ್ಪ, ಎ.ಎಲ್.ತಿಮ್ಮಣ್ಣ, ಲಕ್ಷ್ಮಣ, ಸುನೀತಾ, ನೀಲಮ್ಮ, ಗಂಗಮ್ಮ, ಬಸಮ್ಮ, ಹಂಪಸದುರ್ಗ ಅವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಚುನಾವಣಾ ಆಯೋಗ RSSನ ಶಾಖೆಯೆ? ಕ್ಲಿಪ್ಟನ್ ಡಿ ರೊಜಾರಿಯೋ Janashakthi Media
