- ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದ ಕಾಂಗ್ರೆಸ್
ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಫೇಸ್ ಬುಕ್ ಸಂಬಂಧದ ಕುರಿತು ಅಮೆರಿಕಾದ ವರದಿ ಬಳಿಕ ಫೇಸ್ ಬುಕ್ ಇಂಡಿಯಾ ಮೇಲೆ ಬಿಜೆಪಿ-ಫೇಸ್ ಬುಕ್ ನಡುವಿನ ಸಂಬಂಧಗಳ ತನಿಖೆಗೆ ಒತ್ತಾಯ ಹೆಚ್ಚುತ್ತಿದೆ.
ಬಿಜೆಪಿ ಮತ್ತು ಫೇಸ್ ಬುಕ್ ನಡುವಿನ ಸಂಬಂಧಗಳ ಬಗ್ಗೆ ಜಂಟಿ ಸದನ ಸಮಿತಿ ರಚನೆ ಮಾಡುವಂತೆ ಸಿಪಿಎಂ ಒತ್ತಾಯಿಸಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಫೇಸ್‌ಬುಕ್ ಇಂಡಿಯಾ ನಾಯಕತ್ವ ತಂಡದ ನಡವಳಿಕೆ ಮತ್ತು ಕಾರ್ಯಾಚರಣೆಗಳ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ಒತ್ತಾಯಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶದ ಚುನಾವಣಾ ವಿಷಯದಲ್ಲಿ ಫೇಸ್‌ಬುಕ್ ಇಂಡಿಯಾ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ಈ ಸಂಬಂಧ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಮಂಗಳವಾರ ಪತ್ರ ಬರೆದಿದೆ.
ಭಾರತದ ವಿಷಯಗಳನ್ನು ನಿರ್ವಹಣೆ ಮಾಡುತ್ತಿರುವ ಫೇಸ್‌ಬುಕ್ ಇಂಡಿಯಾ ತಂಡದ ನಾಯಕತ್ವದ ಕಾರ್ಯನಿರ್ವಹಣೆ ಕುರಿತು ಫೇಸ್‌ಬುಕ್ ಕೇಂದ್ರ ಕಚೇರಿ ಹಂತದಲ್ಲಿ ಉನ್ನತಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕು. ಒಂದೆರಡು ತಿಂಗಳಲ್ಲಿ ವರದಿ ನೀಡಬೇಕು. ಆ ವರದಿಯನ್ನು ಸಾರ್ವಜನಿಕಗೊಳಿಸಬೇಕು.
– ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ
ತನಿಖೆಯ ಮೇಲೆ ಪ್ರಭಾವಬೀರದಂತೆ ತಡೆಯುವುದಕ್ಕಾಗಿ ಫೇಸ್‌ಬುಕ್ ಇಂಡಿಯಾ ಕಾರ್ಯಾಚರಣೆ ಮುನ್ನಡೆಸಲು ಹೊಸ ತಂಡವನ್ನು ಪರಿಗಣಿಸಬೇಕು’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಒತ್ತಾಯಿಸಿದ್ದಾರೆ.
ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ’ಬಿಜೆಪಿ ನಾಯಕರ ದ್ವೇಷದ ಮಾತುಗಳಿಗೆ ಫೇಸ್‌ಬುಕ್‌ನ ನಿಯಮಗಳು ಅನ್ವಯವಾಗುವುದಿಲ್ಲ’ ಎಂಬ ವರದಿಯನ್ನು ಆಧರಿಸಿ ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷಗಳು ಫೇಸ್‌ಬುಕ್ ವಿರುದ್ಧ ಹರಿಹಾಯ್ದಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ಫೇಸ್‌ಬುಕ್ ಸಂಸ್ಥೆ ’ಕಂಪನಿ ಸಾಮಾಜಿಕ ಮಾಧ್ಯಮ ವೇದಿಕೆಯು ದ್ವೇಷದ ಮಾತು ಮತ್ತು ಹಿಂಸೆಯನ್ನು ಪ್ರಚೋದಿಸುವ ವಿಷಯವನ್ನು ನಿಷೇಧಿಸುತ್ತದೆ’ ಎಂದು ಹೇಳಿತ್ತು. ಈ ವಿಷಯದಲ್ಲಿ ರಾಜಕೀಯ ನೀತಿಗಳನ್ನು ಪರಿಗಣಿಸದೆ ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸಲಾಗಿದೆ’ ಎಂದು ಹೇಳಿತ್ತು.