- ಹಗೆತನ ಉತ್ತೇಜನೆಯ ವಿರುದ್ಧ ತನ್ನದೇ ನೀತಿಯನ್ನು ಭಾರತದಲ್ಲಿ ಅನುಸರಿಸದ ಫೇಸ್ಬುಕ್
ದೆಹಲಿ: ಅಮೆರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಜಗತ್ತಿನ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿನ ದೈತ್ಯ ಕಂಪನಿ ‘ಫೇಸ್ಬುಕ್’ನ ಪಾತ್ರವನ್ನು, ನಿರ್ದಿಷ್ಟವಾಗಿ ಅದರ ಭಾರತದಲ್ಲಿನ ಧೋರಣೆ ಕುರಿತ ವಿಭಾಗದ ಪಾತ್ರವನ್ನು ಬಯಲಿಗೆಳೆದಿದೆ. ಭಾರತದಲ್ಲಿ ಅದು ಕೋಮುವಾದಿ ಹಗೆತನದಿಂದ ಕೂಡಿದ ವಿಷಯಗಳ ಬಗ್ಗೆ ತಾನೇ ಹಾಕಿಕೊಂಡ ನೀತಿಯನ್ನು ಕೂಡ ಅನುಸರಿಸುತ್ತಿಲ್ಲ ಎಂಬುದು ಈ ಮೂಲಕ ಬಯಲಾಗಿದೆ. ‘ಫೇಸ್ಬುಕ್’ನ ಈ ವರ್ತನೆಯನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಇದು ಫೇಸ್ಬುಕ್ ಮತ್ತು ಅದರ ಇತರ ವೇದಿಕೆಗಳಾದ ವಾಟ್ಸ್ ಆಪ್ ಮತ್ತು ಇನ್ಸ್ಟಗ್ರಾಮ್ ನ ಚಟುವಟಿಕೆಗಳ ಬಗ್ಗೆ ಇರುವ ಒಟ್ಟಾರೆ ಸಂದೇಹಗಳನ್ನು ದೃಢ ಪಡಿಸುತ್ತದೆ. 2018ರಲ್ಲಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಒಂದು ಲೇಖನ ಅದರ ಪ್ರಶ್ನಾರ್ಹ ಆಚರಣೆಗಳನ್ನು ಕಟುವಾಗಿ ಬಯಲಿಗೆ ತಂದಿತ್ತು. ಈಗ ಬಯಲಾಗಿರುವ ಸಂಗತಿ ಬಿಜೆಪಿಯ ಅಗಾಧ ಸಾಮಾಜಿಕ ಮಾಧ್ಯಮ ಹೂಡಿಕೆ ಮತ್ತು ಕಾರ್ಯಾಚರಣೆಗಳು ಹಾಗೂ ಸಮುದಾಯಗಳ ನಡುವೆ ಹಗೆತನವನವನ್ನು ಉತ್ತೇಜಿಸುವಲ್ಲಿ ಅದರ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಇತ್ತೀಚೆಗೆ ರಿಲಯಂಸ್ ನಲ್ಲಿ ಫೇಸ್ಬುಕ್ ಹಣಹೂಡಿಕೆ ಮಾಡಿರುವುದು ಗುತ್ತೇದಾರಿ ಹತೋಟಿಯ ಸಂದೇಹಗಳನ್ನು ಬಲಪಡಿಸುತ್ತದೆ. ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಕುರಿತಂತೆ ಒಂದು ಪರಿಣಾಮಕಾರೀ ನಿಯಂತ್ರಣದ ಮೇಲುಸ್ತುವಾರಿ ಇರದಿರುವಾಗ ಇದು ಇನ್ನಷ್ಟು ಗಂಭೀರ ಸಂಗತಿ.
ಬಿಜೆಪಿಯ ಕೈಗಳಲ್ಲಿರುವ ಅಗಾಧ ಹಣಕಾಸು ಸಂಪನ್ಮೂಲಗಳು, ಜತೆಗೆ ಅಪಾರದರ್ಶಕವಾದ ಚುನಾವಣಾ ಬಾಂಡ್ ಸ್ಕೀಮ್ ಸಾಮಾಜಿಕ ಮಾಧ್ಯಮಗಳ ಮೇಲೆ ಅದರ ಹತೋಟಿಯನ್ನು ಖಾತ್ರಿಗೊಳಿಸಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಫೇಸ್ಬುಕ್-ವಾಟ್ಸ್ ಆಪ್-ಇನ್ಸ್ಟಗ್ರಾಮ್ ಹಾಗೂ ಬಿಜೆಪಿ ನಡುವಿನ ನಂಟಿನ ಕುರಿತು ಒಂದು ತುರ್ತು ಮತ್ತು ಆಮೂಲಾಗ್ರ ತನಿಖೆ ನಡೆಸಬೇಕು, ಹೊಣೆಗಾರಿಕೆಯನ್ನು ನಿಗದಿಗೊಳಿಸಬೇಕು ಹಾಗೂ ಈ ವೇದಿಕೆಗಳು ಕೋಮು ದ್ವೇಷವನ್ನು ಉತ್ತೇಜಿಸದಂತೆ ನಿಷೇಧಿಸಲು ಪರಿಣಾಮಕಾರಿ ಕ್ರಮಗಳನ್ನು ಶಿಫಾರಸು ಮಾಡಬೇಕು ಎಂದು ಕರೆ ನೀಡಿದೆ.
ಈ ನಂಟಿನ ಬಗ್ಗೆ ತನಿಖೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ತಕ್ಷಣವೇ ರಚಿಸಬೇಕು. ಜೆಪಿಸಿ ಯ ವರದಿ ಬರುವ ವರೆಗೆ ಫೇಸ್ಬುಕ್ ಭಾರತದ ಚುನಾವಣಾ ಆಯೋಗ ಮುಂತಾದ ಸಂವಿಧಾನಿಕ ಸಂಸ್ಥೆಗಳು ಮತ್ತು ಯಾವುದೇ ಸರಕಾರೀ ಇಲಾಖೆಯಿಂದ ಕಾರ್ಯಾಚರಣೆ ನಡೆಸದಂತೆ ನಿಷೇಧಿಸಬೇಕು ಎಂದೂ ಸಿಪಿಐ(ಎಂ) ಆಗ್ರಹಿಸಿದೆ.