ದೆಹಲಿ : ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆ ಕರಾಳ ಕೃಷಿ ಕಾನೂನುಗಳ ರದ್ಧತಿ ಮತ್ತು ವಿದ್ಯುತ್ ಮಸೂದೆಯ ವಾಪಸಾತಿಯನ್ನು ಆಗ್ರಹಿಸಿ ರೈತರು ನಡೆಸುತ್ತಿರುವ ಐಕ್ಯ ಹೋರಾಟಕ್ಕೆ ದೇಶದ ಕಾರ್ಮಿಕರ ಸೌಹಾರ್ದವನ್ನು ಪುನರುಚ್ಛರಿಸುತ್ತ, ಫೆಬ್ರುವರಿ 27ರ ‘ಮಜ್ದೂರ್ ಕಿಸಾನ್ ಏಕತಾ’ ದಿನಾಚರಣೆಯಲ್ಲಿ ದೇಶಾದ್ಯಂತ ಕಾರ್ಮಿಕರು ಮತ್ತು ನೌಕರರು ಭಾಗವಹಿಸಬೇಕು ಎಂದು ಕರೆ ನೀಡಿದೆ. ಸಂಯುಕ್ತ ಕಿಸಾನ್ ಮೋರ್ಚಾ ಚಂದ್ರಶೇಖರ ಆಝಾದ್ ಹುತಾತ್ಮರಾದ ಮತ್ತು ಗುರು ರವಿದಾಸ ಜಯಂತಿಯ ಸಂದರ್ಭದಲ್ಲಿ ಈ ದಿನಾಚರಣೆಗೆ ಕರೆ ನೀಡಿತ್ತು.
ಭಾರತದ ಕಾರ್ಪೊರೇಟ್-ಪರ ಸರಕಾರ ರೈತರ ಬೇಡಿಕೆಗಳ ಬಗ್ಗೆ ಸಂಪೂರ್ಣ ನಕಾರಾತ್ಮಕ ನಿಲುವು ತಳೆದಿದೆ ಎಂದು ಈ ಜಂಟಿ ವೇದಿಕೆ ಖಂಡಿಸಿದೆ. ಈ ಸರಕಾರ ಕಾರ್ಮಿಕರು ಮತ್ತು ಇತರ ದುಡಿಯುವ ಜನ ವಿಭಾಗಗಳತ್ತವೂ ಇದೇ ನಿಲುವನ್ನು ತಳೆದಿದೆ. ಆಡಳಿತದ ಅತ್ಯುನ್ನತ ಸ್ಥಾನದಿಂದಲೇ ರೈತರ ಹೋರಾಟದ ವಿರುದ್ಧ ಒಂದು ದುರುದ್ದೇಶಪೂರ್ಣ ಪ್ರಚಾರವನ್ನು ಹರಿಯ ಬಿಡಲಾಗಿದೆ ಎಂದೂ ಈ ವೇದಿಕೆ ಖಂಡಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಹೋರಾಟದ ಭಾಗವಾಗಿ ಪ್ರಕಟಿಸಿರುವ ಇತರ ಕಾರ್ಯಕ್ರಮಗಳನ್ನು ಕೂಡ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆ ಸಂಪೂರ್ಣವಾಗಿ ಬೆಂಬಲಿಸಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರುವರಿ 24ನ್ನು ‘ದಮನ–ವಿರೋಧಿ ದಿನ’ವಾಗಿ ಮತ್ತು ಫೆಬ್ರುವರಿ 26ನ್ನು ಯುವ ಕಿಸಾನ್ ದಿನ’ವಾಗಿ ಆಚರಿಸಲು ಕೂಡ ಕರೆ ನೀಡಿದ್ದು ಇವೆಲ್ಲ ಕಾರ್ಯಕ್ರಮಗಳಿಗೂ ಬೆಂಬಲ ವ್ಯಕ್ತಪಡಿಸಿರುವ ಜಂಟಿ ವೇದಿಕೆ ದೇಶಾದ್ಯಂತ ಫೆಬ್ರುವರಿ 27ರಂದು ಕೆಲಸದ ಸ್ಥಳಗಳಲ್ಲಿ, ಬ್ಲಾಕ್/ಜಿಲ್ಲಾ ಮಟ್ಟಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರ್ಯಾಲಿ ಮುಂತಾದವುಗಳನ್ನು ನಡೆಸಬೇಕು ಎಂದು ಇಡೀ ಕಾರ್ಮಿಕ ಆಂದೋಲನಕ್ಕೆ ಮತ್ತು ದುಡಯುವ ಜನಸಮೂಹಗಳಿಗೆ ಕರೆ ನೀಡಿದೆ.