ದೆಹಲಿ : ಮಾರ್ಚ್ 12 ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‍ಎಸ್.ಒ.) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಬಳಕೆದಾರರ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ದರ ಫೆಬ್ರುವರಿಯಲ್ಲಿ 5.03ಶೇ. ಕ್ಕೆ ಏರಿದೆ. ಜನವರಿಯಲ್ಲಿ ಇದು 4.06ಶೇ. ಇತ್ತು.
ಮಾರ್ಚ್ 15 ರಂದು ಪ್ರಕಟವಾಗಿರುವ ಸಗಟು ಹಣದುಬ್ಬರವೂ ಈ ವರ್ಷ ಸತತ ಎರಡನೇ ತಿಂಗಳೂ ಏರಿ ಕಳೆದ 27 ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಏರಿದೆ. ಫಬ್ರುವರಿ ತಿಂಗಳಲ್ಲಿ ಇದು 4.17ಶೇ. ಅಗಿದೆ ಎಂದು ಪಿಟಿಐ ವರದಿ ಮಾಡಿದೆ.ಹಿಂದಿನ ತಿಂಗಳು ಜನವರಿಯಲ್ಲಿ ಇದು 2.03ಶೇ. ಇತ್ತು. ಕಳೆದ ವರ್ಷ ಫೆಬ್ರುವರಿಯಲ್ಲಿ ಇದು 2.26ಶೇ. ಇತ್ತು.
ಈ ತೀವ್ರಹಣದುಬ್ಬರ ಆಹಾರ, ಇಂಧನ ಮತ್ತು ವಿದ್ಯುತ್ ಬೆಲೆಯೇರಿಕೆಗಳಿಂದಾಗಿ ಆಗಿದೆ. ಇದು ಅನಿರೀಕ್ಷಿತವೇನಲ್ಲ. ದ್ವಿದಳ ಧಾನ್ಯಗಳ ಬೆಲೆಯೇರಿಕೆ 10.25ಶೇ. ವಾದರೆ, ಹಣ್ಣು-ಹಂಪಲುಗಳ ಬೆಲೆಯೇರಿಎಕ ಪ್ರಮಾಣ 9.48ಶೇ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಂತೂ ಈಗ ಪ್ರತಿದಿನ ಕಾಣುತ್ತಿರುವಂತೆ ‘ಚಾರಿತ್ರಿಕ ಎತ್ತರ’ ಗಳನ್ನು ದಾಖಲಿಸುತ್ತಿವೆ.
ಮುಂದಿನ ಮೂರು ತಿಂಗಳಲ್ಲಿ ಸಗಟು ಹಣದುಬ್ಬರ ದರ ಇನ್ನೂ ಏರುವ ವ ಸಂಭವ ಇದೆ ಎಂದು ಐ.ಸಿ.ಆರ್.ಎ. ತಜ್ಞರು ಹೇಳಿರುವುದಾಗಿ ವರದಿಯಾಗಿದೆ.
ಅತ್ತ ಕೈಗಾರಿಕಾ ಉತ್ಪಾದನಾ ರಂಗದಲ್ಲೂ ನಿರಾಶಾದಾಯಕ ಸುದ್ದಿಯೇ. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಜನವರಿ ತಿಂಗಳಲ್ಲಿ 1,6ಶೇ.ದಷ್ಟು ಸಂಕುಚನಗೊಂಡಿದೆ. ಅದರಲ್ಲೂ ತಯಾರಿಕಾ ವಲಯದಲ್ಲಿ ಈ ಸಂಕುಚನ 2ಶೇ.ದಷ್ಟು.
ಗಣಿಗಾರಿಕೆಯಲ್ಲಿ 3.7ಶೇ., ವಿದ್ಯುತ್ ಉತ್ಪಾದನೆಯಲ್ಲಿ 5.5ಶೇ. ಇಳಿಕೆಯಾಗಿದೆ. ಕಳೆದ ವರ್ಷ, ಅಂದರೆ ಜನವರಿ 2020ರಲ್ಲಿ ಐಐಪಿ 22ಶೇ. ಏರಿಕೆ ಕಂಡಿತ್ತು.
ಇದರ ಜೊತೆಗೇ, ಪ್ರಧಾನಿಗಳ ಅತ್ಯಂತ ಆಪ್ತ ಉದ್ಯಮಿ ಗೌತಮ ಅದಾನಿ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುವಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯೆನಿಸಿಕೊಂಡಿರುವ ಇನ್ನೊಬ್ಬ ಆಪ್ತರಾದ ಮುಕೇಶ್ ಅಂಬಾನಿಯವರನ್ನು ಮಾತ್ರವಲ್ಲ, ಜಗತ್ತಿನ ಇಬ್ಬರು ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಜೆಫ್ ಬೆಝೊಸ್ ಮತ್ತು ಎಲನ್ ಮಸ್ಕ್ ಅವರುಗಳನ್ನೂ ಹಿಂದಕ್ಕೆ ಹಾಕಿದ್ದಾರೆ ಎಂದು ವರದಿಯಾಗಿದೆ. 2021ರಲ್ಲಿ ಅಂಬಾನಿಯ ಸಂಪತ್ತಿನಲ್ಲಿ 8.1ಬಿಲಿಯನ್ ಡಾಲರ್ ಗಳಷ್ಟು ಏರಿಕೆಯಾಗಿದ್ದರೆ, ಅದಾನಿಯ ಸಂಪತ್ತಿನಲ್ಲಿ 16.2 ಬಿಲಿಯ ಡಾಲರ್ ಗಳ ಹೆಚ್ಚಳವಾಗಿದೆ! (ಇಕನಾಮಿಕ್ ಟೈಮ್ಸ್, ಮಾರ್ಚ್ 12).