ಪ್ರವಾಹ ಪರಿಹಾರ ನೀಡಲು ಸರ್ಕಾರ ವಿಫಲ: ಈಶ್ವರ ಖಂಡ್ರೆ ಆರೋಪ

  • ಸತತ ಎರಡನೇ ವರ್ಷವೂ ಅತಿವೃಷ್ಟಿ ನಿರ್ವಹಣೆಯಲ್ಲಿ ವಿಫಲ
  • 10 ಸಾವಿರ ಕೋಟಿ ನಷ್ಟವಾಗಿದ್ದರೂ ಕೇವಲ 450 ಕೋಟಿಗೆ ಮಾತ್ರ ಪರಿಹಾರ ಕೋರಿಕೆ

ಬೆಂಗಳೂರು: ಕಳೆದ ವರ್ಷ ಪ್ರವಾಹ ಪರಿಸ್ಥಿತಿಯಿಂದ ಅನೇಕ ಸಂಕಷ್ಟಗಳು ಉಂಟಾಗಿದೆ. ಈ ವರ್ಷ ಪ್ರವಾಹ ಪುನರಾವರ್ತನೆಯಾ ಗುತ್ತಿದ್ದರೂ  ರಾಜ್ಯ ಸರ್ಕಾರ ಮತ್ತು ಕೆಂದ್ರ ಸರ್ಕಾರ ಸಂಕಷ್ಟಗಳನ್ನು ನಿವಾರಿಸುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ಪ್ರದೇಶ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ರಾಜ್ಯದ ಪ್ರವಾಹ ಪರಿಸ್ಥಿತಿ ಸೇರಿದಂತೆ ಇನ್ನಿತರ  ವಿಷಯಗಳ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ರಾಜ್ಯದ 56 ತಾಲ್ಲೂಕು, 1000ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಬಿಸಿ ತಟ್ಟಿದೆ. 3000 ಮನೆ ಕುಸಿತ, 80 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. 3500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 365 ಕಟ್ಟಡ 250 ಸೇತುವೆ ಪ್ರವಾಹದಿಂದ ಕುಸಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಖೇದವನ್ನು ವ್ಯಕ್ತಪಡಿಸಿದ್ದಾರೆ.

ಹೋದ ವರ್ಷ ಬಂದ ನೆರೆಗೂ ಜನ ತತ್ತರಿಸಿ ಹೋಗಿದ್ದರು. ಆ ಸಂದರ್ಭದಲ್ಲಿ ಸಹ ಜನರ ರಕ್ಷಣೆಗೆ ಬರುವಲ್ಲಿ ರಾಜ್ಯ ಬಿಜೆಪಿ  ಸರ್ಕಾರ ವಿಫಲವಾಗಿತ್ತು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಹ ಜನರ ರಕ್ಷಣೆಗೆ ಬಂದಿರಲಿಲ್ಲ. ಚುನಾವಣೆ ಸಮಯದಲ್ಲಿ ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ರು. ಆದ್ರೆ  ಕೇಂದ್ರ ಸರ್ಕಾರ ಜನರ ಸಂಕಷ್ಟಗಳಿಗೆ ಮಾತ್ರ  ಸ್ಪಂದಿಸುತ್ತಿಲ್ಲ. ಕಳೆದ ಬಾರಿ ಸೌಜನ್ಯಕ್ಕೂ ರಾಜ್ಯದ ನೆರೆ ಅಧ್ಯಯನಕ್ಕೆ ಪಿಎಂ ಮೋದಿ ಬರಲಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಎಷ್ಟು ಮನೆ ಕಟ್ಟಿ ಕೊಟ್ಟಿದೆ? ಯಾವ ರೀತಿ ಅವರಿಗೆ ಸಹಾಯ ಆಗಿದೆ ಎನ್ನುವುದರ ಬಗ್ಗೆ  ಶ್ವೇತಪತ್ರ ಹೊರಡಿಸಲಿ. ಪ್ರವಾಹದಿಂದ 10 ಸಾವಿರ ಕೋಟಿ ನಷ್ಟವಾಗಿದೆ. ಆದರೆ 450 ಕೋಟಿ ಮಾತ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಪ್ರಧಾನಿಯವರಿಗೆ ಇವರು ಹೆದರುತ್ತಿದ್ದಾರೆ. 25 ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಇಲ್ಲಿಯವರೆಗೆ ಪ್ರಧಾನಿಯವರ ಮೇಲೆ ಒತ್ತಡ ತರ್ತಿಲ್ಲ. ಅಂಜುಬುರುಕ ಸಂಸದರನ್ನ ರಾಜ್ಯದ ಜನ ಆರಿಸಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಸಿಎಂ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರು ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ನೆರವು ಘೋಷಣೆ ಮಾಡಿಲ್ಲ. 14 ಸಾವಿರ ಮಂದಿಗೆ ಪರಿಹಾರವೇ ಸಿಕ್ಕಿಲ್ಲ.ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಕೂಡಲೇ ಸರ್ಕಾರ ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು  ಅನ್ನುವುದು ನಮ್ಮ ಆಗ್ರಹ. ತಕ್ಷಣಕ್ಕೆ ಕೇಂದ್ರ ಸರ್ಕಾರ 5000 ಕೋಟಿ ಪರಿಹಾರ ಬಿಡುಗಡೆ ಮಾಡಲಿ. ಕೇಂದ್ರದ ವಿತ್ತ ಸಚಿವರು ನಮ್ಮ ರಾಜ್ಯದ ಪ್ರತಿನಿಧಿ. ಇವರು ರಾಜ್ಯಕ್ಕೆ ಯಾವುದೇ ನೆರವು ಘೋಷಿಸ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *