ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೂಕುಸಿತದಿಂದ ತತ್ತರಿಸಿದ ವಯನಾಡು ಪ್ರವಾಹ ಪೀಡಿತ ಪ್ರದೇಶಗಳನ್ನು ವೈಮಾನಿಕ ವೀಕ್ಷಣೆ ನಡೆಸಿದರು.
ಶನಿವಾರ ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕೇರಳಕ್ಕೆ ಆಗಮಿಸಿದ ಪ್ರಧಾನಿ ನಂತರ ಸಿಎಂ ವಿಜಯನ್ ಪಿಣರಾಯ್ ಜೊತೆಯಲ್ಲಿ ವಯನಾಡು ದುರಂತ ಸ್ಥಳಗಳನ್ನು ವೀಕ್ಷಿಸಿದರು.
ವಾಯುಪಡೆಯ ವಿಶೇಷ ಹೆಲಿಕಾಫ್ಟರ್ ನಲ್ಲಿ ಬೆಳಿಗ್ಗೆ 11.30ಕ್ಕೆ ಕಣ್ಣೂರಿಗೆ ಆಗಮಿಸಿದ ಪ್ರಧಾನಿ ನಂತರ ಭೂಕುಸಿತದಿಂದ ಅತೀ ಹೆಚ್ಚು ಹಾನಿಗೊಳಗಾದ ಚೂರಲಮಲೈ, ಮುಂಡಕೈ ಮತ್ತು ಪುಂಚಿರಿಮಟ್ಟನ್ ಪ್ರದೇಶಗಳನ್ನು ವೀಕ್ಷಿಸಿದರು.
ವೈಮಾನಿಕ ಸಮೀಕ್ಷೆ ನಂತರ ಪ್ರಧಾನಿ ಕಾಲಪೆಟ್ಟಾದಲ್ಲಿ ಇಳಿದು ರಸ್ತೆ ಮಾರ್ಗವಾಗಿ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ವೈಮಾನಿಕ ಸಮೀಕ್ಷೆ ವೇಳೆ ಕೇರಳ ಸರ್ಕಾರ ವಯನಾಡು ದುರಂತ ಸ್ಥಳಗಳ ಪುನರಾಭಿವೃದ್ಧಿಗೆ 2000 ಕೋಟಿ ರೂ. ನೆರವು ಕೇಳಿದೆ.
ಇದೇ ವೇಳೆ ಪ್ರಧಾನಿ ವಯನಾಡು ದುರಂತ ಸ್ಥಳ ವೀಕ್ಷಣೆಗೆ ತೆರಳಿದ್ದಾಗಿ ಪ್ರತಿಪಕ್ಷ ನಾಯಕ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ಧನ್ಯವಾದ ಹೇಳಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಜೊತೆ ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್, ಕೇಂದ್ರ ಸಚಿವ ಹಾಗೂ ನಟ ಸುರೇಶ್ ಗೋಪಿ ಮುಂತಾದವರು ಉಪಸ್ಥಿತರಿದ್ದರು.