– ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಮಾಜಿ ರಾಷ್ಟ್ರಪತಿ
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರ ಸ್ಥಿತಿಯಲ್ಲೇ ಮುಂದುವರಿದಿದೆ. ಈಗ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ (ವೆಂಟಿಲೇಟರ್ ಸಪೋರ್ಟ್) ಇಡಲಾಗಿದೆ ಎಂದು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳು ಹೇಳಿದ್ಧಾರೆ. ಪ್ರಣಬ್ ಮುಖರ್ಜಿ ಅವರಿಗೆ ನಿನ್ನೆ ತುರ್ತಾಗಿ ಮಿದುಳು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ನಿನ್ನೆ ಮಧ್ಯಾಹ್ನ 84 ವರ್ಷದ ಪ್ರಣಬ್ ಮುಖರ್ಜಿ ಅವರನ್ನು ಭಾರತೀಯ ಸೇನೆಯ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ (Blood clot) ಸಮಸ್ಯೆ ಉದ್ಭವವಾಗಿತ್ತು. ತುರ್ತಾಗಿ ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಅದಾದ ಬಳಿಕ ಬ್ರೇನ್ ಸರ್ಜರಿ ಮಾಡಲಾಯಿತು. ಆದರೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ ಎಂದು ಹೇಳಲಾಗಿದೆ.
“ದೆಹಲಿ ಕಂಟೋನ್ಮೆಮಟ್ನಲ್ಲಿರುವ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ನಿವಾರಿಸಲು ತುರ್ತಾಗಿ ಮಿದುಳು ಶಸ್ತ್ರ ಚಿಕಿತ್ಸೆ ನಡೆಸಿದ ನಂತರವೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿದೆ. ಅವರನ್ನು ವೆಂಟಿಲೇಟರಿ ಸಪೋರ್ಟ್ನಲ್ಲೀ ಇಡಲಾಗಿದೆ” ಎಂದು ಆರ್ ಅಂಡ್ ಆರ್ ಆಸ್ಪತ್ರೆ ಹೊರಡಿಸಿದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ವಿವಿಧ ಪರಿಣಿತ ವೈದ್ಯರ ತಂಡ ಮಾಜಿ ರಾಷ್ಟ್ರಪತಿಗಳ ಆರೋಗ್ಯದ ಬಗ್ಗೆ ನಿಗಾ ಇರಿಸಿದೆ.
ಬಂಗಾಳದಲ್ಲಿ 1935, ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಗಳಾಗುವ ಮುನ್ನ ಅವರು ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಅವರು ರಾಷ್ಟ್ರಪತಿ ಅಧಿಕಾರ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ.