ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರೋಡ್ ಶೋ ಹಾಗೂ ಪ್ರಚಾರಗಳಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು, ಕಾರ್ಯಕರ್ತರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಹೆಲ್ಮೆಟ್ ಧರಿಸದೆ ಹಾಗೂ ಇತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸುತ್ತಾಡಿದವರಿಗೆ ಟ್ರಾಫಿಕ್ ಪೊಲೀಸರು ಭಾರಿ ದಂಡ ವಿಧಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಪ್ರಚಾರಕ್ಕಾಗಿ ನಡೆಸಿದ ರ್ಯಾಲಿಗಳಲ್ಲಿ ಬಳಸಿದ ವಾಹನಗಳಿಂದ ಸಾಲು ಸಾಲು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗಿದ್ದು ಬೆಂಗಳೂರು ನಗರದಲ್ಲಿ 25 ದಿನಗಳಲ್ಲಿ 4.12 ಲಕ್ಷ ಪ್ರಕರಣಗಳು ದಾಖಲಾಗಿವೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದವರಿಂದ ಸಂಚಾರ ನಿಯಮಗಳ ಉಲ್ಲಂಘನೆ ಆಗುತ್ತಿದ್ದು ಪೊಲೀಸರು ಇದನ್ನು ಕಂಡೂ ಕಾಣದಂತೆ ಸುಮ್ಮನಿದ್ದಾರೆ ಎಂಬ ವರದಿಯನ್ನು “ಜನಶಕ್ತಿ ಮೀಡಿಯಾ” ಪ್ರಸಾರ ಮಾಡಿತ್ತು.