ಗಾಯದ ನಡುವೆಯೂ ಹೋರಾಟ ನಡೆಸಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವೀರೋಚಿತ ಸೋಲುಂಡಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೊನೆಯ ಘಟ್ಟದಲ್ಲಿ ಮತ್ತೊಂದು ಪದಕ ಕೈ ತಪ್ಪಿದಂತಾಗಿದೆ.
ಸೋಮವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಲಕ್ಷ್ಯ ಸೇನ್ 21-13, 16-21, 11-20 ಸೆಟ್ ಗಳಿಂದ ಮಲೇಷ್ಯಾದ 7ನೇ ಶ್ರೇಯಾಂಕಿತ ಜೀ ಜಿಯಾ ಲೀ ವಿರುದ್ಧ ಸೋಲುಂಡರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಸ್ಪರ್ಧಿ ಎಂಬ ಸಾಧನೆ ಮಾಡಿದ್ದ ಲಕ್ಷ್ಯ ಸೇನ್ ಮೊದಲ ಸೆಟ್ ಸುಲಭವಾಗಿ ಗೆದ್ದು ಶುಭಾರಂಭ ಮಾಡಿದರು. ಆದರೆ ಮಲೇಷ್ಯಾ ಆಟಗಾರ ಎರಡನೇ ಸೆಟ್ ಗೆದ್ದು ತಿರುಗೇಟು ನೀಡಿದರು.
ಎರಡೂ ಸೆಟ್ ಗಳು ಸಮಬಲದಲ್ಲಿ ಅಂತ್ಯಗೊಂಡಿದ್ದರಿಂದ ನಿರ್ಣಾಯಕವಾದ ಮೂರನೇ ಸೆಟ್ ತಲುಪಿತು. ಈ ಹಂತದಲ್ಲಿ ಲಕ್ಷ್ಯ ಸೇನ್ ಗಾಯಗೊಂಡರೂ ಹೋರಾಟ ನಡೆಸಿದರೂ ಇದರ ಪೂರ್ಣ ಲಾಭ ಪಡೆದ ಮಲೇಷ್ಯಾ ಆಟಗಾರ ಸುಲಭವಾಗಿ ಮೂರನೇ ಸೆಟ್ ಗೆದ್ದು ಕಂಚಿನ ಪದಕ ವಶಪಡಿಸಿಕೊಂಡರು.