ಕುಸ್ತಿಪಟು ವಿನೇಶ್ ಪೊಗಟ್ ಪದಕದ ಕುರಿತು ತೀರ್ಪು ನಿರೀಕ್ಷೆ ನಡುವೆ ಭಾರತ 6 ಪದಕದೊಂದಿಗೆ ಪದಕ ಪಟ್ಟಿಯಲ್ಲಿ 70ನೇ ಸ್ಥಾನಿಯಾಗಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಭಿಯಾನ ಅಂತ್ಯಗೊಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಗೆ ಭಾರೀ ನಿರೀಕ್ಷೆಯೊಂದಿಗೆ ತೆರಳಿದ್ದ ಭಾರತದ 117 ಕ್ರೀಡಾಪಟುಗಳ ತಂಡ 1 ಬೆಳ್ಳಿ, 5 ಕಂಚು ಸೇರಿದಂತೆ 6 ಪದಕದೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಈ ಬಾರಿ ಭಾರತದ ಒಬ್ಬ ಸ್ಪರ್ಧಿಯೂ ಚಿನ್ನದ ಪದಕ ಗೆಲ್ಲದೇ ನಿರಾಸೆ ಮೂಡಿಸಿದರು.
2 ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಶೂಟರ್ ಮನು ಭಾಕರ್ ಮತ್ತು ಭಾರತ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸುವ ಗೌರವ ಪಡೆದಿದ್ದಾರೆ.
ಭಾರತ ತಂಡ ಈ ಕೆಲವು ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದರೆ, ಕೆಲವು ವಿಭಾಗಗಳಲ್ಲಿ ನಿರಾಸೆ ಮೂಡಿಸಿತು. ಅಲ್ಲದೇ ಈ ಬಾರಿ ಕ್ರೀಡಾಪಟುಗಳ ತೂಕದ ವಿಷಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿಕೊಂಡಿತು. ಇದೆಲ್ಲದರ ನಡುವೆ ಟೊಕಿಯೊ ಒಲಿಂಪಿಕ್ಸ್ ನಲ್ಲಿ ಗರಿಷ್ಠ ಪದಕ ಗೆದ್ದ ಸಾಧನೆಯ ನಂತರ ಮೂಡಿಸಿದ್ದ ಭರವಸೆ ಹುಸಿಯಾಯಿತು.
ಟೊಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಸೇರಿದಂತೆ 10 ಪದಕ ಗೆದ್ದು 4ನೇ ಸ್ಥಾನ ಪಡೆದಿದ್ದ ಭಾರತ ತಂಡ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 70ನೇ ಸ್ಥಾನಕ್ಕೆ ಕುಸಿಯಿತು. ಈ ಬಾರಿ ಕೇವಲ 1 ಬೆಳ್ಳಿ ಸೇರಿದಂತೆ 6 ಪದಕಕ್ಕೆ ಸೀಮಿತವಾಯಿತು. ಹಲವಾರು ಕ್ರೀಡಾಪಟುಗಳು 4ನೇ ಸ್ಥಾನ ಪಡೆದು ಕೂದಲೆಳೆ ಅಂತರದಿಂದ ಪದಕ ವಂಚಿತರಾದರು.
ಮನು ಭಾಕರ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 2 ಕಂಚಿನ ಪದಕ ಗೆದ್ದು ಎರಡು ಪದಕ ಗೆದ್ದ ಮೊದಲ ಮಹಿಳೆ ಹಾಗೂ ಶೂಟಿಂಗ್ ನಲ್ಲಿ ಪದಕ ಗೆದ್ದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ಆದರೆ 25 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 4ನೇ ಸ್ಥಾನಕ್ಕೆ ಕುಸಿಯುವ ಮೂಲಕ ಹ್ಯಾಟ್ರಿಕ್ ಪದಕದ ಸಾಧನೆಯ ಹೊಸ್ತಿಲಲ್ಲಿ ಎಡವಿದರು. 50 ಮೀ. ರೈಫಲ್ ತ್ರಿ ಪೊಜಿಷನ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದು ಶೂಟಿಂಗ್ ನಲ್ಲಿ ಇದೇ ಮೊದಲ ಬಾರಿ 3 ಪದಕ ಗೆದ್ದ ಸಾಧನೆಗೆ ಕಾರಣರಾದರು.
ಹಾಕಿಯಲ್ಲಿ ಭಾರತ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡರೂ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಕಂಚಿನದ ಗೆದ್ದು 52 ವರ್ಷಗಳ ನಂತರ ಸತತ 2 ಪದಕದ ಸಾಧನೆ ಮಾಡಿ ಸಮಾಧಾನಕ್ಕೆ ಒಳಗಾದರು.
ಟೊಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತರಾದರು. ವಿನೇಶ್ ಪೊಗಟ್ ಫೈನಲ್ ತಲುಪಿ ಚಿನ್ನದ ಪದಕದ ಭರವಸೆ ಮೂಡಿಸಿದರೂ 100 ಗ್ರಾಂ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅನರ್ಹಗೊಂಡು ಕನಿಷ್ಠ ಬೆಳ್ಳಿಯನ್ನೂ ಪಡೆಯಲು ಆಗದೇ ಆಘಾತಕ್ಕೆ ಒಳಗಾದರು. ಅಮನ್ ಶೆರಾವತ್ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಕುಸ್ತಿಯಲ್ಲಿ ಏಕೈಕ ಪದಕ ತಂದುಕೊಟ್ಟರು.
ಆರ್ಚರಿ, ವೇಟ್ ಲಿಫ್ಟಿಂಗ್ ಮತ್ತು ಬಾಕ್ಸಿಂಗ್ ನಲ್ಲಿ ಬಹುತೇಕ ಸ್ಪರ್ಧಿಗಳು ಕ್ವಾರ್ಟರ್ ಫೈನಲ್ ಹಂತದಲ್ಲಿ ಮುಗ್ಗರಿಸಿ ಒಂದೂ ಪದಕ ಗೆಲ್ಲದೇ ನಿರಾಸೆ ಮೂಡಿಸಿದರು. ಟೊಕಿಯೊದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚಾರು ಬಾಯ್ ಕೇವಲ 1 ಕೆಜಿಯಿಂದ ಕಂಚಿನ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.