ಪಿ.ಡಿ. ಸಂಪಾದಕೀಯ – ಪ್ರಕಾಶ ಕಾರಟ್ ಸಂಪುಟ 9 ಸಂಚಿಕೆ 48, 29 ನವೆಂಬರ್ 2015
ಜಗತ್ತು ಒಂದು ದೊಡ್ಡ ಭಯೋತ್ಪಾದಕ ಬೆದರಿಕೆಯನ್ನು ಎದುರಿಸುತ್ತಿದೆ, ಈ ಪಿಡುಗನ್ನು ಎದುರಿಸಿ ನಿಲ್ಲಬೇಕು, ಅದನ್ನು ನಿರ್ಮೂಲ ಮಾಡಬೇಕು ಎಂಬುದು ಪ್ರಶ್ನಾತೀತ. ಆದರೆ ನಿಜವಾದ ಸಂಗತಿಯೆಂದರೆ ಈ ಭಯೋತ್ಪಾದನೆಯ ಮೂಲಗಳನ್ನು ಗುರುತಿಸುವುದು ಮತ್ತು ಅದನ್ನು ಎದುರಿಸಲು ನೆರವಾಗಬಹುದಾದ ಧೋರಣೆಗಳನ್ನು ಮತ್ತು ವಿಧಾನಗಳನ್ನು ಅಂಗೀಕರಿಸುವುದು. ಸಮಸ್ಯೆ ಇರುವುದು ಇಲ್ಲಿ.
ಮತ್ತೊಂದು ಹೀನ ಭಯೋತ್ಪಾದಕ ಕೃತ್ಯ-ಈ ಬಾರಿ ಪ್ಯಾರಿಸಿನಲ್ಲಿ. ನವಂಬರ್ 13 ರಂದು, ಶುಕ್ರವಾರ ರಾತ್ರಿ, ಸೊಂಟಕ್ಕೆ ಸ್ಫೋಟಕಗಳನ್ನು ಕಟ್ಟಿಕೊಂಡಿದ್ದ ಬಂದೂಕುಧಾರಿಗಳು ಆ ನಗರದ ಆರು ಸ್ಥಳಗಳಲ್ಲಿ 129 ಮಂದಿಯನ್ನು ಹೊಸಕಿ ಹಾಕಿದ್ದಾರೆ, ಇನ್ನೂ 200 ಮಂದಿಯನ್ನು ಗಾಯಗೊಳಿಸಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಬಹು ಮಂದಿ ಯುವಜನರು, ಸಂಗೀತ ಕಾರ್ಯಕ್ರಮ ನೋಡಲು ಹೋದವರು, ಅಥವ ಹೊಟೇಲುಗಳಿಗ್ಲೆ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಲೆಂದು ಹೋದವರು ಎಂಬ ಸಂಗತಿ ಈ ಸಾವುಗಳನ್ನು ಇನ್ನಷ್ಟು ಹೃದಯವೇಧಕಗೊಳಿಸುವಂತದ್ದು. ಯುರೋಪಿಯನ್ ಸಂಸ್ಕತಿ ಮತ್ತು ನಾಗರಿಕತೆಯ ಕೇಂದ್ರವಾದ ಫ್ರಾನ್ಸಿನ ರಾಜಧಾನಿಯಲ್ಲಿ ಇದು ಘಟಿಸಿರುವುದು ಇದನ್ನೊಂದು ಬರ್ಬರ ಅಪರಾಧವಾಗಿ ಮಾಡಿದೆ.
ಅದೇ ವಾರದಲ್ಲಿ ಇತರ ಭಯೋತ್ಪಾದಕ ದಾಳಿಗಳೂ ನಡೆದವು. ಬೈರೂತ್‍ನಲ್ಲಿ ಬಾಂಬ್ ಸ್ಫೋಟಗಳಲ್ಲಿ 43 ಮಂದಿ ಮತ್ತು ಬಾಗ್ದಾದ್‍ನಲ್ಲಿ 26 ಮಂದಿ ಸತ್ತಿದ್ದಾರೆ. ಈಜಿಪ್ಟಿನ ಶರಮೆಲ್-ಶೈಕ್ ವಿಮಾನ ನಿಲ್ದಾಣದಿಂದ ರಶ್ಯಾದ ಸೈಂಟ್ ಪಿಟರ್ಸ್‍ಬರ್ಗ್‍ಗೆ ಹೋಗುತ್ತಿದ್ದ ರಶ್ಯನ್ ವಿಮಾನದಲ್ಲಿದ್ದ ಎಲ್ಲ 224 ಮಂದಿಯನ್ನು ಬಲಿ ತೆಗೆದುಕೊಂಡದ್ದು ಕೂಡ ಒಂದು ಬಾಂಬ್ ಎಂಬುದು ದೃಢಪಟ್ಟಿದೆ. ಈ ಎಲ್ಲ ದಾಳಿಗಳನ್ನು ತಾನು ನಡೆಸಿರುವುದಾಗಿ ಐಎಸ್‍ಐಎಸ್ ಅಥವ ಅರೇಬಿಕ್ ಭಾಷೆಯಲ್ಲಿ ‘ದಯೆಷ್’ ಎಂದು ಕರೆಯಲ್ಪಡುವ ಸಂಘಟನೆ ಹೇಳಿಕೊಂಡಿದೆ.
ಜಗತ್ತು ಒಂದು ದೊಡ್ಡ ಭಯೋತ್ಪಾದಕ ಬೆದರಿಕೆಯನ್ನು ಎದುರಿಸುತ್ತಿದೆ, ಈ ಪಿಡುಗನ್ನು ಎದುರಿಸಿ ನಿಲ್ಲಬೇಕು, ಅದನ್ನು ನಿರ್ಮೂಲ ಮಾಡಬೇಕು ಎಂಬುದು ಪ್ರಶ್ನಾತೀತ. ಆದರೆ ನಿಜವಾದ ಸಂಗತಿಯೆಂದರೆ ಈ ಭಯೋತ್ಪಾದನೆಯ ಮೂಲಗಳನ್ನು ಗುರುತಿಸುವುದು ಮತ್ತು ಅದನ್ನು ಎದುರಿಸಲು ನೆರವಾಗಬಹುದಾದ ಧೋರಣೆಗಳನ್ನು ಮತ್ತು ವಿಧಾನಗಳನ್ನು ಅಂಗೀಕರಿಸುವುದು. ಸಮಸ್ಯೆ ಇರುವುದು ಇಲ್ಲಿ. ಪಾಶ್ಚಿಮಾತ್ಯ ಶಕ್ತಿಗಳಿಗೆ ಕೆಲವು ಸಂಗತಿಗಳು ಮತ್ತು ಸತ್ಯಗಳತ್ತ ಯಾರಾದರೂ ಬೊಟ್ಟು ಮಾಡಿ ತೋರಿಸುವ ಪ್ರಯತ್ನ ನಡೆಸಿದರೇ ಬಿರುಸಿನ ದೂಷಣೆಗಳು ಎದುರಾಗುತ್ತವೆ.
ಯುದ್ಧ ಯಾರ ವಿರುದ್ಧ
ಈ ದಾಳಿಗಳ ನಂತರ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೋಯಿ ಹೊಲ್ಲಾಂದ್ ತಮ್ಮ ದೇಶ ಯುದ್ಧದಲ್ಲಿದೆ ಎಂದಿದ್ದಾರೆ. ಆದರೆ ಪ್ರಶ್ನೆ ಈ ಯುದ್ಧ ಯಾರ ವಿರುದ್ಧ ನಿರ್ದೇಶಿತವಾಗಿದೆ ಎಂಬುದು. ಇರಾಕ್ ಮತ್ತು ಸಿರಿಯಾದ ಭಾಗಗಳಲ್ಲಿ ನೆಲೆಗೊಂಡಿರುವ ದಯೆಷ್ ಮತ್ತು ಇಸ್ಲಾಮಿಕ್ ಸ್ಟೇಟ್ ಎಂಬುದೇ ಇದಕ್ಕೆ ಉತ್ತರ ಎಂದು ನಿರೀಕ್ಷಿಸಬಹುದು. ಆದರೆ ಸಂಭವಿಸುತ್ತಿರುವುದು ಅದಲ್ಲ. ಪ್ಯಾರಿಸನ್ನು ಅಪ್ಪಳಿಸಿದ ದುರಂತದ ಮೂಲಗಳು ಸಿರಿಯ ಮತ್ತು ಇರಾಕಿನ ಸಾವಿನ ಕೂಪಗಳಲ್ಲಿವೆ. ಇಸ್ಲಾಮೀ ಉಗ್ರವಾದ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳು ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕಾ ನೇತರತ್ವದ ಪಾಶ್ಚಿಮಾತ್ಯ ದೇಶಗಳು ಅನುಸರಿಸಿರುವ ಮಿಲಿಟರಿ ಹಸ್ತಕ್ಷೇಪಗಳು ಮತ್ತು ಧೋರಣೆಗಳಿಂದ ಉತ್ಪನ್ನಗೊಂಡಿವೆ.
ಅಮೆರಿಕಾ ಸಂಯುಕ್ತ ಸಂಸ್ಥಾನ ಇರಾಕ್ ಮೇಲೆ ದಾಳಿ ಮಾಡಿ, ಸದ್ದಾಂ ಹುಸೆನ್ ಆಳ್ವಿಕೆಯನ್ನು ಉರುಳಿಸಿ ಅದನ್ನು ಆಕ್ರಮಿಸಿಕೊಂಡಿತು. ಅಧ್ಯಕ್ಷ ಬುಷ್ ಸದ್ದಾಂ ಹುಸೆನ್ ಅಲ್‍ಖೈದಾಕ್ಕೆ ಸಹಾಯ ಮಾಡುತ್ತಿದ್ದಾನೆಂದು ಸುಳ್ಳು ಆಪಾದನೆ ಹಾಕಿದರು. ಆದರೆ ವಾಸ್ತವವಾಗಿ ಇರಾಕಿನಲ್ಲಿ ಅಲ್ ಖೈದಾ ಎದ್ದು ಬಂದದ್ದು ಅಮೆರಿಕನ್ ಅತಿಕ್ರಮಣ ಮತ್ತು ಅಲ್ಲಿನ ಜಾತ್ಯಾತೀತ ಸರಕಾರವನ್ನು ನಾಶಪಡಿಸಿದ ನಂತರವೇ. ಆ ಅಲ್ ಖೈದಾ ಈಗ ಐಸಿಸ್ ಆಗಿ ರೂಪಾಂತರಗೊಂಡಿದೆ.
ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್‍ರ ಜಾತ್ಯಾತೀತ ಆಲ್ವಿಕೆಯನ್ನು ಕಿತ್ತೆಸೆಯಲು ಕೆಲಸ ಮಾಡುವಲ್ಲಿ ಅಮೆರಿಕಾದ ನಾಟೋ ಮಿತ್ರಲ್ಲಿ ಫ್ರಾನ್ಸ್ ದೇಶವೇ ಮುಂಚೂಣಿಯಲ್ಲಿದೆ. 2011-12ರಿಂದ ಫ್ರಾನ್ಸ್ ಹಿಂದೆ ತನ್ನ ವಸಾಹತುವಾಗಿದ್ದ ದೆಸದಲ್ಲಿ ಅಸ್ಸಾದ-ವಿರೋಧಿಗಳನ್ನು ಬೆಂಬಲಿಸುತ್ತಿದೆ. ಹಾಗೆ ಮಾಡುವಾಗ ಅದು ಸೌದಿ ಅರೇಬಿಯ ಮತ್ತು ಅದರ ಕೊಲ್ಲಿಪ್ರದೇಶದ ಮಿತ್ರರ ಬೆಂಬಲವಿರುವ ಇಸ್ಲಾಮೀ ಉಗ್ರಗಾಮಿಗಳಿಗೆ ನಿಧಿಗಳನ್ನು ಒದಗಿಸಿದೆ ಮತ್ತು ಅವರನ್ನು ಸಜ್ಜುಗೊಳಿಸಿದೆ. ಅದು ಇನ್ನೊಂದು ನಾಟೋ ದೇಶವಾದ ಟರ್ಕಿ ತನ್ನ ಗಡಿಗಳ ಮೂಲಕ ಸಾವಿರಾರು ಇಸ್ಲಾಮೀ ಉಗ್ರರನ್ನು ಹಿಂಡುಹಿಂಡಾಗಿ ಸಿರಿಯಾದೊಳಕ್ಕೆ ನುಗ್ಗಿ ಅಸ್ಸಾದ್ ಸರಕಾರದ ವಿರುದ್ದ ‘ಜಿಹಾದ್’(ಧಮ್ಯುದ್ಧ) ನಡೆಸಲು ಸೌಕರ್ಯ ಕಲ್ಪಿಸಿ ಕೊಡುವಲ್ಲಿ ಶಾಮೀಲಾಗಿದೆ.
ತೀವ್ರಗಾಮಿಗಳಾಗಿ ಪರಿವರ್ತನೆಗೊಂಡ ಮುಸ್ಲಿಂ ಫ್ರೆಂಚ್ ನಾಗರಿಕರು ಸಿರಿಯಾಕ್ಕೆ ಹೋಗಿ ಅಲ್ಲಿ ಅಸ್ಸಾದ್ ಸರಕಾರದ ವಿರುದ್ಧ ಸೆಣಸುತ್ತಿರುವ ವರೆಗೆ ಫ್ರೆಂಚ್ ಸರಕಾರಕ್ಕೆ ಏನೇನೂ ಆತಂಕವಿರಲಿಲ್ಲ. ಏಕೆಂದರೆ ಅಮೆರಿಕಾ ನೇತೃತ್ವದ ಕೂಟದಂತೆ ಫ್ರಾನ್ಸಿಗೂ ಅಸ್ಸಾದನ್ನು ಉರುಳಿಸುವುದು ಮತ್ತು ಆಳ್ವಿಕೆಯಲ್ಲಿ ಬದಲಾವಣೆ ತರುವುದೇ ಆದ್ಯತೆಯ ಕೆಲಸವಾಗಿತ್ತು, ಇದರಲ್ಲಿ ಮೂಲಭೂತವಾದಿಗಳು ಮತ್ತು ಉಗ್ರಗಾಮಿಗಳು ಹೊಡೆತ ತಿನ್ನುತ್ತಿದ್ದರೆ ತಿನ್ನಲಿ ಬಿಡಿ ಎಂಬ ಧೋರಣೆ ಹೊಂದಿತ್ತು.
ದಯೆಷ್‍ನ ಉದಯಕ್ಕೆ ಕಾರಣ
ಈ ವಿನಾಶಕಾರಿ ಅಂತರ್ಯುದ್ಧ ಮತ್ತು ಸಿರಿಯಾ ಸರಕಾರ ದುರ್ಬಲಗೊಂಡದ್ದು ದಯೆಷ್‍ನ ಉದಯಕ್ಕೆ ಮತ್ತು ಉತ್ತರ ಇರಾಕ್‍ನ ಬಹುಪಾಲು ಪ್ರದೇಶ ಮತ್ತು ಸಿರಿಯಾದ ಭಾಗಗಳಲ್ಲಿ ಇಸ್ಲಾಮೀ ಪ್ರಣುತ್ವ ಸ್ಥಾಪಿಸಲು ಬೇಕಾದ ಪರಿಸ್ಥಿತಿಗಳನ್ನು ನಿರ್ಮಿಸಿತು. ಅಮೆರಿಕಾ-ಫ್ರೆಂಚ್-ನಾಟೋ ಹಸ್ತಕ್ಷೇಪ ಹುಟ್ಟುಹಾಕಿದ ಈ ದೈತ್ಯಪ್ರಾಣಿಯೇ ಈಗ ಇಂತಹ ಗಂಭೀರವಾದ ಬೆದರಿಕೆಯನ್ನು ಒಡ್ಡಿದೆ.
ಮೊದಲಾಗಿ, ಸೌದಿ ಅರೇಬಿಯ ಮತ್ತು ಅದರ ಕೊಲ್ಲಿ ಪ್ರದೇಶದ ಮಿತ್ರರು ಹಣಕಾಸು ಒದಗಿಸಿ ಸಜ್ಜುಗೊಳಿಸಿದ ಜಭಾತ್ ಅಲ್-ನುಸ್ರ ಮತ್ತಿತರ ಇಸ್ಲಾಮೀ ಉಗ್ರಗಾಮಿ ಶಕ್ತಿಗಳಿಗೆ ನೆರವು ಒದಗಿಸಿ ತಾವೇ ಸೃಷ್ಟಿಸಿದ ಪಿಡುಗನ್ನೇ ಅಡಗಿಸಲು ಈಗ ಅಮೆರಿಕಾ-ಫ್ರೆಂಚ್ ಬಾಂಬುದಾಳಿಗಳು ಪ್ರಯತ್ನ ನಡೆಸಿವೆ.
ಪಾಶ್ಚಿಮಾತ್ಯ ಶಕ್ತಿಗಳು, ಸಿರಿಯಾ ಸಂಪೂರ್ಣ ಅರಾಜಕತೆಗೆ ಇಳಿದು ಕ್ರೂರ ಉಗ್ರವಾದದ ನೆಲೆಯಾಗದಂತೆ ತಡದಿಟ್ಟಿರುವುದು ಅಸ್ಸಾದ್ ಸರಕಾರದ ಅಸ್ತಿತ್ವ ಮತ್ತು ಅದರ ಸೇನೆ ದಯೆಷ್ ಮತ್ತಿತರ ಇಸ್ಲಾಮೀ ಉಗ್ರಗಾಮಿಗಳ ವಿರುದ್ಧ ನಡೆಸಿದ ಹೋರಾಟದಿಂದಲೇ ಎಂಬುದನ್ನು ಕಾಣಲು ನಿರಾಕರಿಸುತ್ತ ಬಂದಿವೆ,
ಸನ್ನಿವೇಶ ಬದಲಾಗಲಾರಂಭಿಸಿದೆ
ಇದೀಗ ಇತ್ತೀಚಿನ ಬೆಳವಣಿಗೆಗಳಿಂದಾಗಿ ಬದಲಾಗಲಾರಂಭಿಸಿದೆ. ಮೊದಲನೆಯದಾಗಿ, ಕಳೆದ ಕೆಲವು ತಿಂಗಳುಗಳಲ್ಲಿ ಸಿರಿಯ ಮತ್ತು ಇರಾಕಿನಿಂದ ನಿರಾಶ್ರಿತರ ಬೃಹತ್ ಪ್ರವಾಹ ಯುರೋಪಿಗೆ ಹೋಗುತ್ತಿರುವುದು ಕಾಣ ಬರುತ್ತಿದೆ. ಹೀಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳು ಯುದ್ಧದ ಭೀಕರತೆ ಮತ್ತು ಉಗ್ರಗಾಮಿ ಕೊಲೆಗಳಿಂದ ತಪ್ಪಿಸಿಕೊಳ್ಳಲು ಹತಾಶರಾಗಿ ಓಡುತ್ತಿರುವುದು ಮಧ್ಯಪೂರ್ವದ ಬಿಕ್ಕಟ್ಟನ್ನು ಯುರೋಪಿನ ಹೃದಯ ಭಾಗಕ್ಕೇ ತಂದು ನಿಲ್ಲಿಸಿದೆ. ಯುರೋಪಿಯನ್ ಒಕ್ಕೂಟ ಈಗ ಸಿರಿಯಾದಲ್ಲಿ ಯುದ್ಧವನ್ನು ಕೊನೆಗೊಳಿಸುವುದೇ ಈ ಮಾನವ ದುರಂತವನ್ನು ನಿಲ್ಲಿಸುವ ಏಕೈಕ ಮಾರ್ಗ ಎಂದು ಒಪ್ಪಿಕೊಳ್ಳಲೇ ಬೇಕಾಗಿ ಬಂದಿದೆ. ಇದಕ್ಕೆ ಅವರು ಅಸ್ಸಾದ್ ಸರಕಾರವನ್ನು ಎಸೆದು ಬಿಡುವ ತಮ್ಮ ಪ್ರಾಥಮಿಕ ಗುರಿಗೆ ಅಂಟಿಕೊಂಡಿರಲು ಸಾಧ್ಯವಿಲ್ಲ.
ಎರಡನೇ ಪ್ರಮುಖ ಬೆಳವಣಿಗೆಯೆಂದರೆ ಸಿರಿಯಾದ ಸರಕಾರ ಮತ್ತು ಸೇನೆಯ ಪರವಾಗಿ ಮಿಲಿಟರಿ ಮಧ್ಯಪ್ರವೇಶ ನಡೆಸುವ ಅಧ್ಯಕ್ಷ ಪುಟಿನ್ ಮತ್ತು ರಶ್ಯಾದ ನಿರ್ಧಾರ. ರಶ್ಯಾದ ವಿಮಾನ ಪಡೆ ದಯೆಷ್ ಮತ್ತು ಇತರ ಉಗ್ರಗಾಮಿ ಶಕ್ತಿಗಳ ಮೇಲೆ ಪ್ರಹಾರ ಮಾಡಲು ಆರಂಭಿಸಿತು. ರಶ್ಯಾದ ಮಧ್ಯಪ್ರವೇಶ ಸನ್ನಿವೇಶದಲ್ಲಿ ಒಂದು ಗುಣಾತ್ಮಕ ಬದಲಾವಣೆಯನ್ನು ತಂದಿತು-ಬಂಡುಕೋರರ ವಿರುದ್ಧ ಸೆಣಸುತ್ತಿರುವ ಸಿರಿಯಾ ಸರಕಾರ ಮತ್ತು ಸೇನೆಯ ಸಾಮಥ್ರ್ಯಕ್ಕೆ ಬಲ ಒದಗಿಸಿತು. ಆಳ್ವಿಕೆ ಬದಲಾವಣೆ ಈಗ ಆದ್ಯತೆಯ ಪ್ರಶ್ನೆಯಾಗಿರಲು ಸಾಧ್ಯವಿಲ್ಲ ಎಂದು ಪಾಶ್ಚಿಮಾತ್ಯ ಶಕ್ತಿಗಳು ಒಪ್ಪಿಕೊಳ್ಳಲೇ ಬೇಕಾಗಿ ಬಂದಿದೆ. ‘ಅಂತರ್ರಾಷ್ಟ್ರೀಯ ಸಿರಿಯಾ ಬೆಂಬಲ ಗುಂಪು’ ನಡೆಸುತ್ತಿರುವ ವಿಯನ್ನಾ ಮಾತುಕತೆಗಳಿಗೆ ಹೊಸ ಜೀವ ಬಂದಂತಾಗಿದೆ. ಮೊದಲ ಬಾರಿಗೆ, ಪಾಶ್ಚಿಮಾತ್ಯ ಶಕ್ತಿಗಳ ಇನ್ನೊಂದು ಗುರಿ ಮತ್ತು ಅಸ್ಸಾದ್ ಸರಕಾರದ ಒಂದು ಬಲಿಷ್ಟ ಬೆಂಬಲಿಗ ದೇಶವಾದ ಇರಾನಿಗೆ ಈ ಮಾತುಕತೆಗಳಲ್ಲಿ ಸೇರಿಕೊಳ್ಳಲು ಆಹ್ವಾನ ನೀಡಲಾಗಿದೆ. ಈ ಮಾತುಕತೆಗಳು ಜಗಳವನ್ನು ಕೊನೆಗೊಳಿಸುವುದು ಹೇಗೆ ಮತ್ತು ಒಂದು ರಾಜಕೀಯ ಇತ್ಯರ್ಥಕ್ಕೆ ಬರುವ ಬಗ್ಗೆ ಚರ್ಚೆಗಳನ್ನು ಆರಂಭಿಸಿವೆ.
ಮೂರನೇ ಅಂಶವೆಂದರೆ, ಈಜಿಪ್ಟಿನಿಂದ ಹೊರಟ ರಶ್ಯನ್ ವಿಮಾನವನ್ನು ಕೆಳಗುರುಳಿಸಿರುವುದು ಮತ್ತು ಪ್ಯಾರಿಸ್ ದಾಳಿಗಳು. ಇವು ಸಿರಿಯಾದ ತಿಕ್ಕಾಟಕ್ಕೆ ಒಂದು ರಾಜಕೀಯ ಇತ್ಯರ್ಥ ವನ್ನು ಇನ್ನಷ್ಟು ತುರ್ತಾಗಿ ತರ ಬೇಕಾದ ಅಗತ್ಯವನ್ನು ಹೆಚ್ಚಿಸಿವೆ.
ಐಸಿಸ್ ವಿರುದ್ಧ ಐಕ್ಯ ರಣನೀತಿ
ರಶ್ಯನ್, ಪ್ರೇಂಚ್ ಮತ್ತು ಅಮೆರಿಕನ್ ಪಡೆಗಳು ಸಿರಿಯಾದಲ್ಲಿ ಐಸಿಸ್ ಗುರಿಗಳ ಮೇಲೆ ವೈಮಾನಿಕ ಬಾಂಬು ದಾಳಿಗಳನ್ನು ಹೆಚ್ಚಿಸಿವೆ. ಆದರೆ ಕೇವಲ ಇದರಿಂದಲೇ ಐಸಿಸ್‍ನ್ನು ಸೋಲಿಸಲು ಸಾಧ್ಯವಾಗದು. ಇದಕ್ಕೆ ಅಮೆರಿಕ ಮತ್ತು ಫ್ರಾನ್ಸ್‍ನಂತಹ ಅದರ ಮಿತ್ರರು ದಾರಿ ಬದಲಿಸಬೇಕಾಗಿದೆ. ದಶಕಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಅದರ ನಾಟೋ ಮಿತ್ರರು ಈ ಪ್ರದೇಶದಲ್ಲೆಲ್ಲ ಉಗ್ರವಾದಕ್ಕೆ ನಿಧಿಗಳನ್ನು ಒದಗಿಸುತ್ತಿರುವ ಸೌದಿ ಅರೇಬಿಯದಂತಹ ಒಂದು ಪ್ರತಿಗಾಮಿ ಶಕ್ತಿಯನ್ನು ಬೆಂಬಲಿಸಿವೆ. ಅವರು ತೈಲ ಸಂಪನ್ಮೂಲಗಳನ್ನು ಬಾಚಿಕೊಳ್ಳಲು ಮತ್ತು ಹತೋಟಿ ಪಡೆಯಲು ಅರಬ್ ದೇಶಗಳ ಜಾತ್ಯಾತೀತ ಆಡಳಿತಗಳ ಮೇಲೆ ಗುರಿಯಿಟ್ಟಿವೆ ಮತ್ತು ದಾಳಿ ಮಾಡುತ್ತಿವೆ. ಅವರ ಮಧ್ಯಪ್ರವೇಶ ಅಫಘಾನಿಸ್ತಾನದಲ್ಲಿ ತಾಲಿಬಾನ್ ಉದಯಕ್ಕೆ, ಇರಾಕ್ ಮತ್ತು ಸಿರಿಯಾದಲ್ಲಿ ಅಲ್ ಖೈದ ಮತ್ತು ಐಸಿಸ್ ಉದಯಕ್ಕೆ ದಾರಿ ಮಾಡಿಕೊಟ್ಟಿತು.
ಮೊದಲನೆಯ ಹೆಜ್ಜೆಯಾಗಿ ಅವರು ಆಳ್ವಿಕೆ ಬದಲಾವಣೆ ತರಲು ಅಸ್ಸಾದ್ ಸರಕಾರದ ಮೇಲೆ ಗುರಿಯಿಡುವುದನ್ನು ನಿಲ್ಲಿಸಬೇಕು. ಫ್ರಾನ್ಸ್ ತನ್ನ ನಿಲುವನ್ನು ಬದಲಿಸುವ ಸಂಕೇತಗಳಿವೆ. ಅಧ್ಯಕ್ಷ ಹೊಲ್ಲಾಂದ್ ಫ್ರೆಂಚ್ ಸಂಸತ್ತನ್ನು ಉದ್ದೇಶಿಸಿ ಮಾತಾಡುತ್ತ ಸಮಸ್ಯೆ ಅಸ್ಸಾದ್ ಆಳ್ವಿಕೆಯಲ್ಲ, ಐಸಿಸ್ ಮುಖ್ಯ ಶತ್ರು ಎಂದಿದ್ದಾರೆ. ಇದರ ಅರ್ಥ ಸಿರಿಯಾದಲ್ಲಿ ಬಂಡುಕೋರರಿಗೆ ಹಣ ಒದಗಿಸುವುದು ಮತ್ತು ಅವರನ್ನು ಸಜ್ಜುಗೊಳಿಸುವುದಕ್ಕೆ ಕೊನೆ ಹಾಡಬೇಕು.
ಐಸಿಸ್‍ನ್ನು ಏಕಾಂಗಿಯಾಗಿಸಿ ಸೋಲಿಸಲು ಒಂದು ಐಕ್ಯ ರಣನೀತಿ ಇರಬೇಕಾಗುತ್ತದೆ. ಇದು ಆಗಬೇಕಾದರೆ ಸೌದಿ ಅರೇಬಿಯ, ಕತಾರ್ ಮತ್ತು ಟರ್ಕಿ ಕೂಡ ಸಿರಿಯಾದಲ್ಲಿ ತಮ್ಮ ಹಸ್ತಕರು ಸಶಸ್ತ್ರ ಚಟುವಟಿಕೆಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ನಾಟೊ ವ್ಯವಸ್ಥೆ ಮಾಡಬೇಕಾಗಿದೆ. ಅವರು ಐಸಿಸ್ ವಿರುದ್ಧ ಹೋರಾಡಲು, ಸಿರಿಯಾದಲ್ಲಿ ಶಾಂತಿ ಮತ್ತೆ ನೆಲೆಸುವಂತೆ ಮಾಡಲು ರಶ್ಯ ಮತ್ತು ಇರಾನ್‍ನೊಂದಿಗೆ ಕೈಜೋಡಿಸಲೇ ಬೇಕಾಗಿದೆ. ವಿಶ್ವ ಸಂಸ್ಥೆಯ ಆಶ್ರಯದಲ್ಲಿ ಒಂದು ರಾಜಕೀಯ ಇತ್ಯರ್ಥವಾಗಬೇಕಾಗಿದೆ, ಅದರ ಪ್ರಕಾರ ಉಗ್ರಗಾಮಿಗಳನ್ನು ಬಿಟ್ಟು ಸಿರಿಯಾದ ಜನತೆ ತಮ್ಮ ದೇಶದ ಭವಿಷ್ಯದ ರಚನೆಯನ್ನು ನಿರ್ಧರಿಸುವಂತಾಗಬೇಕು.