ಪೆಗಾಸಸ್ ಬೇಹುಗಾರಿಕೆ ಆರೋಪದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಮತಾ ಸರ್ಕಾರ ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮದನ್‌ ಬಿ ಲೋಕೂರ್ ಅಧ್ಯಕ್ಷತೆಯಲ್ಲಿ 2 ಸದಸ್ಯರ ಆಯೋಗವನ್ನು ರಚಿಸಿತ್ತು. ಮದನ್ ಬಿ ಲೋಕೂರ್ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸರ್ಕಾರವು ಅದಕ್ಕೆ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ವಿವರಿಸಿದೆ. ನ್ಯಾಯಮೂರ್ತಿ ಲೋಕೂರ್ ಆಯೋಗದ ವಿಚಾರಣೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರಿಂದ ಪಶ್ಚಿಮ ಬಂಗಾಳ ಸರ್ಕಾರವು ಸ್ಥಾಪಿಸಿದ ನ್ಯಾಯಮೂರ್ತಿ ಲೋಕೂರ್ ಆಯೋಗವು ಪೆಗಾಸಸ್ ಪ್ರಕರಣವನ್ನು ನಡೆಸುವುದಿಲ್ಲ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ಸ್ವತಂತ್ರ ಸಮಿತಿಯನ್ನು ರಚಿಸಿರುವಾಗ ಆಯೋಗವು ವಿಚಾರಣೆ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣವನ್ನು ಕೈಗೆತ್ತಿಕೊಂಡಾಗ ಅರ್ಜಿದಾರ ಎನ್‌ಜಿಒ ಗ್ಲೋಬಲ್ ವಿಲೇಜ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಪಶ್ಚಿಮ ಬಂಗಾಳ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ವಾದಿಸಿದರು.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಪಶ್ಚಿಮ ಬಂಗಾಳ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯ ಸರ್ಕಾರವು ಈ ವಿಷಯವನ್ನು ಮುಂದುವರಿಸುವುದಿಲ್ಲ ಎಂದು ಅವರು ನೀಡಿದ ಮೌಖಿಕ ಭರವಸೆ ಏನಾಯಿತು ಎಂದು ಕೇಳಿದರು. ಸಿಂಘ್ವಿ ಅವರೇ ಏನು ಇದು? ಕಳೆದ ಬಾರಿ ನೀವು ಭರವಸೆ ನೀಡಿದ್ದೀರಿ.  ನಾವು ದಾಖಲಿಸಲು ಬಯಸಿದಾಗ ನೀವು ದಾಖಲಿಸದಿರಿ ಎಂದು ಹೇಳಿದಿರಿ, ಮತ್ತೆ ನೀವು ವಿಚಾರಣೆ ಆರಂಭಿಸಿದ್ದೀರಾ? ಎಂದು ಪ್ರಶ್ನಿಸಿದರು.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ ಅದರ ವಿಚಾರಣೆಗೆ ತಡೆ ನೀಡಿದೆ. ಪ್ರಕರಣದಲ್ಲಿ ಆಯೋಗದ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಪೀಠವು ಅರ್ಜಿದಾರರಿಗೆ ಅನುಮತಿ ನೀಡಿತು.

ಅಕ್ಟೋಬರ್ 27 ರಂದು ಪೆಗಾಸಸ್ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್, ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯನ್ನು ಕೋರ್ಟ್ ರಚಿಸಿತ್ತು. ಕೇಂದ್ರ ಸರ್ಕಾರವು ಎತ್ತಿರುವ ರಾಷ್ಟ್ರೀಯ ಭದ್ರತೆಯ ಮನವಿಯನ್ನು ತಿರಸ್ಕರಿಸಿದ ಪೀಠವು ಅರ್ಜಿದಾರರು ಪ್ರೈಮಾಫೇಸಿ ಪ್ರಕರಣ ಮಾಡಿದ್ದಾರೆ ಎಂದು ಗಮನಿಸಿದರು.

ಭಾರತ ಸೇರಿದಂತೆ ವಿವಿಧ ಸರ್ಕಾರಗಳಿಗೆ ಎನ್ಎಸ್ಒ ಕಂಪನಿ ನೀಡಿದ ಸ್ಪೈವೇರ್ ಸೇವೆಯ ಸಂಭಾವ್ಯ ಗುರಿಯಾಗಿರುವ ಮೊಬೈಲ್ ಸಂಖ್ಯೆಗಳ ಕುರಿತು ದಿ ವೈರ್ ಮತ್ತು ಹಲವಾರು ಇತರ ಅಂತಾರಾಷ್ಟ್ರೀಯ ಪ್ರಕಟಣೆಗಳು ವರದಿಗಳನ್ನು ಪ್ರಕಟಿಸಿದ ನಂತರ ಪೆಗಾಸಸ್ ವಿವಾದವು ಜುಲೈ 18 ರಂದು ಸ್ಫೋಟಗೊಂಡಿತು. 40 ಭಾರತೀಯ ಪತ್ರಕರ್ತರು, ರಾಜಕೀಯ ನಾಯಕರು ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಮಾಜಿ ಇಸಿಐ ಸದಸ್ಯ ಅಶೋಕ್ ಲವಾಸ್ಸಾ ಮುಂತಾದವರು ಗುರಿಗಳ ಪಟ್ಟಿಯಲ್ಲಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *