ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮದ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಶಿರಸಿ ಮೂಲದ ಗಣಪತಿ ಭಟ್ (62) ಎಂಬುವರನ್ನ ಮಂಗಳವಾರ ವಶಕ್ಕೆ ಪಡೆದುಕೊಂಡಿದೆ. ಆದರೆ ಗಣಪತಿ ಭಟ್ ಗೃಹ ಸಚಿವರ ಕಾರ್ಯಾಲಯದ ಸಿಬ್ಬಂದಿಯಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಚೇರಿ ಸ್ಪಷ್ಟನೆ ನೀಡಿದೆ.
ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವ ಗಣಪತಿ ಭಟ್ ಗೂ ಗೃಹ ಇಲಾಖೆಗೂ ಯಾವುದೇ ಸಂಬಂಧ ಇಲ್ಲ, ಬಂಧಿತ ವ್ಯಕ್ತಿ ಗೃಹ ಸಚಿವರ ಕಾರ್ಯಾಲಯದ ಸಿಬ್ಬಂದಿಯಲ್ಲ. ಬಂಧಿತನ ಹೆಸರಿನ ವಿಚಾರವಾಗಿ ಗೊಂದಲ ಉಂಟಾಗಿತ್ತು. ನನ್ನ ಕಚೇರಿಯಲ್ಲೂ ಗಣಪತಿ ಭಟ್ ಎಂಬುವವರಿದ್ದಾರೆ. ಹೀಗಾಗಿ ಗೊಂದಲ ಆಗಿದೆ. ಆರೋಪಿಯನ್ನು ಸಿಐಡಿ ಅಧಿಕಾರಿಗಳೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಇನ್ನು ಬಂಧಿತ ವ್ಯಕ್ತಿ ಗಣಪತಿ ಭಟ್ ಅವರ ವಿರುದ್ಧ ತುಂಬಾ ವರ್ಗಾವಣೆ ಮಾಡುತ್ತಿದ್ದರು ಎಂಬ ಆರೋಪ ಇದೆ. ಅವರಿಗೆ ಲಿಂಕ್ ಇದೆ ಎಂದು ಸಿಐಡಿ ಅಧಿಕಾರಿಗಳು ಭಾವಿಸಿದ್ದಾರೆ. ಆದರ ಅವರ ಹಿನ್ನಲೆ ಏನು ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಸದ್ಯ ಶಿರಸಿಯಲ್ಲಿ ಗಣಪತಿ ಭಟ್ ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.