ಬೆಂಗಳೂರು : ಪಾದಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಪಾದಯಾತ್ರೆ ಆರಂಭಕ್ಕೂ ಶನಿವಾರ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಯಶಸ್ವಿಯಾಗಬೇಕು. ಈ ಭ್ರಷ್ಟ- ಹಗರಣಗಳ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟದ ಯಶಸ್ಸಿಗಾಗಿ ನಮ್ಮೆಲ್ಲ ಕಾರ್ಯಕರ್ತರು ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಜನಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ವಾಲ್ಮೀಕಿ ಹಗರಣ ನಡೆದಿದೆ. ಮುಡಾದಲ್ಲಿ ಅಕ್ರಮ ನಡೆದಿದೆ. ಆದರೂ ಯಾವುದಕ್ಕೂ ಸ್ಪಂದಿಸದ ಸರ್ಕಾರ ಭ್ರಷ್ಟಾಚಾರವನ್ನು ಮುಂದುವರಿಸುವ ಮೂಲಕ ಭಂಡತನ ತೋರುತ್ತಿದೆ. ಇದಕ್ಕೆ ರಾಜ್ಯದ ಜನರೇ ಬುದ್ದಿ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ, ಜಿಲ್ಲಾಧ್ಯಕ್ಷರಾದ ಎಲ್. ನಾಗೇಂದ್ರ, ಎಲ್.ಆರ್.ಮಹದೇವಸ್ವಾಮಿ, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.