ಬೆಂಗಳೂರು: ಹಲವು ನದಿಗಳ ಮೂಲ ಮತ್ತು ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟ ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು ಹೊಸ ನಿಯಮಾವಳಿ ರೂಪಿಸುವವರೆಗೆ ಎಲ್ಲ ಭೂ ಪರಿವರ್ತನೆ ಪ್ರಸ್ತಾವನೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಅವರು, ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅಧಿಸೂಚನೆ ಮಾಡಿರುವ ಕಸ್ತೂರಿ ರಂಗನ್ ವರದಿಯ ಕುರಿತಂತೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲು ಉದ್ದೇಶಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಕರ್ನಾಟಕ, ಕೇರಳ ಸೇರಿದಂತೆ ಪಶ್ಚಿಮಘಟ್ಟದ ಹಲವೆಡೆ, ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಕೊಡಗಿನ ಭೂಕುಸಿತ ಪ್ರಕರಣಗಳ ಅಧ್ಯಯನದಲ್ಲಿ ಅರಣ್ಯ ಒತ್ತುವರಿ ಮತ್ತು ಮಾನವ ಅಭಿವೃದ್ಧಿ ಚಟುವಟಿಕೆಗಳೇ ಪ್ರಾಥಮಿಕ ಕಾರಣ ಎನ್ನಲಾಗಿದ್ದು, ಪಶ್ಚಿಮಘಟ್ಟದಲ್ಲಿ ಸಂಭಾವ್ಯ ಅವಗಢ ತಡೆಯಲು ಮುಂಜಾಗರೂಕತಾ ಕ್ರಮವಾಗಿ ಈ ಪ್ರದೇಶದ ಒತ್ತುವರಿ ತೆರವಿಗೆ ಕ್ರಮವಹಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಹಿಮಾಲಯದ ಕಣಿವೆ ರಾಜ್ಯ ಹಿಮಾಚಲ ಪ್ರದೇಶದ ಘಟ್ಟ ಪ್ರದೇಶಗಳಲ್ಲಿ ಭೂಪರಿವರ್ತನೆ ಮತ್ತು ಕಟ್ಟಡ ನಿರ್ಮಾಣಕ್ಕೆ ನಿರ್ದಿಷ್ಟವಾದ ಹಾಗೂ ಪ್ರತ್ಯೇಕವಾದ ನಿಯಮಗಳನ್ನು ರೂಪಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾರ್ವಜನಿಕ ಮಹತ್ವದ ಯೋಜನೆಗೆ ಮಾತ್ರ ಸಮ್ಮತಿ:
ಅತೀ ಜರೂರಾದ, ಸಾರ್ವಜನಿಕ ಮಹತ್ವದ ಪ್ರಕರಣಗಳಲ್ಲಿ ಮಾತ್ರ ಯೋಜನೆಗೆ ಪರಿಸರ ಸಮ್ಮತಿ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಸಮಿತಿಯ ಉನ್ನತಾಧಿಕಾರ ಸಮಿತಿ ಸಭೆಯ ಅನುಮೋದನೆ ನಂತರವಷ್ಟೇ ನೀಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಭೂ ಉಪಯೋಗ ಕುರಿತಂತೆ ಹೊಸ ನಿಯಮಾವಳಿ ರೂಪಿಸಲು ಪ್ರಸ್ತಾವನೆಯನ್ನು ಕಡತದಲ್ಲಿ ಮಂಡಿಸುವಂತೆಯೂ ಅವರು ಅಪರ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ್ದಾರೆ.