ವಿಧಾನಪರಿಷತ್ತಿನಲ್ಲಿ ಅಂಗೀಕಾರಕ್ಕೆ ಬಾಕಿಯಿರುವ ವಿವಾದಿತ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ’ವನ್ನು ಸುಗ್ರೀವಾಜ್ಞೆಯ ಮೂಲಕ ರಾಜ್ಯ ಸರಕಾರ ಜಾರಿಗೊಳಿಸಿದೆ. ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಈಗ ಅದು ಕಾಯ್ದೆಯಾಗಿ ಮಾರ್ಪಾಡುಗೊಂಡಿದೆ. ಪರ ವಿರೋಧದ ನಡವೆ ಗೋಹತ್ಯಾ ನಿಷೇದ ಕಾನೂನು ಜಾರಿಯಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಗೋಹತ್ಯೆ ನಿಷೇಧಿಸುವ ಮಸೂದೆಯನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ವಿಧಾನಸಭೆಯಲ್ಲಿ ಮಸೂದೆಗೆ ಒಪ್ಪಿಗೆ ದೊರಕಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ಮಸೂದೆ ಮಂಡನೆಗೂ ಅವಕಾಶ ಸಿಕ್ಕಿರಲಿಲ್ಲ. ಸಂಪುಟ ಸಭೆಯ ನಿರ್ಣಯದಂತೆ ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ ನೀಡಿದ್ದು ಈಗ ಕಾಯ್ದೆ ಜಾರಿಯಾಗಿದೆ.
ಬಿಜೆಪಿ ಸರಕಾರವು ಸುಗ್ರೀವಾಜ್ಞೆ ಮೂಲಕ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇದು ಆಹಾರ ಹಕ್ಕಿನ ಮೇಲಿನ ದಾಳಿ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆರೋಪವನ್ನು ಮಾಡುತ್ತಿದ್ದಾರೆ. ಹಿಂದುತ್ವದ ಅಜೆಂಡವನ್ನು ಜಾರಿ ಮಾಡುವುದಕ್ಕಾಗಿ ಬಿಜೆಪಿ ಮುಂದಾಗಿದೆ. ಈ ಮಸೂದೆ, ಕಾಯ್ದೆ ಜನರ ಮುಂದೆ ನಡೆಯೋದಿಲ್ಲ. ಜನಾಭಿಪ್ರಾಯದ ಮುಂದೆ ಬಿಜೆಪಿ ಈ ಕಾಯ್ದೆ ಸೋಲುವುದು ಗ್ಯಾರಂಟಿ ಎಂದು ದಸಂಸ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಪ್ರತಿಕ್ರಿಯಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯ ಮೂಲಕ ಬಿಜೆಪಿ ತನ್ನ ಹಿಂದುತ್ವದ ಅಜೆಂಡವನ್ನು ಜಾರಿ ಮಾಡುತ್ತದೆ, ಭಾವನಾತ್ಮಕ ವಿಚಾರಗಳನ್ನು ಮುಂದೆ ತಂದು ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸಕ್ಕೆ ಮುಂದಾಗಿದೆ ಎಂದು ಅಲ್ಪಸಂಖ್ಯಾತರ ಹಕ್ಕುಗಳ ಸಮಿತಿಯ ಸಹ ಸಂಚಾಲಕರಾದ ಶೇಕ್ಷಖಾದ್ರಿ ಯವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರಕಾರ ಸಂಘಪರಿವಾರದ ಅಜೆಂಡವನ್ನು ಜಾರಿ ಮಾಡುವುದಕ್ಕಾಗಿ ಗೋಹತ್ಯೆ ನಿಷೇದ ಕಾಯ್ದೆ ಜಾರಿ ಮಾಡಿದೆ. ಇಲ್ಲಿಯವರೆಗೆ ಗೋವುಗಳನ್ನು ರಕ್ಷಣೆ ಮಾಡಿಕೊಂಡು ಬಂದಿರುವುದು ರೈತರ ಹೊರತು, ಬಿಜೆಪಿಯವರಲ್ಲ. ರಾಜ್ಯ ಸರಕಾರ ತಂದಿರುವ ಈ ಕಾಯ್ದೆ ಹೈನುಗಾರಿಕೆ ಮಾರಕವಾಗಲಿದೆ, ರೈತರ ಆದಾಯಕ್ಕೆ ಈ ಕಾಯ್ದೆ ಕೊಡಲಿಪೆಟ್ಟು ಹಾಕಿದೆ ಎಂದು ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ ಬಯ್ಯಾರೆಡ್ಡಿ ಆರೋಪಿಸಿದ್ದಾರೆ.
ರಾಜ್ಯ ಸರಕಾರ ಜಾರಿ ಮಾಡಿರುವ ಕಾಯ್ದೆಯ ವಿರುದ್ದ ಹೋರಾಟವನ್ನು ರೂಪಿಸಲು ಪ್ರಗತಿಪರ ಸಂಘಟನೆಗಳು ಸಿದ್ಧತೆಯನ್ನು ಮಾಡಿಕೊಂಡಿವೆ. ರೈತರು, ಅಲ್ಪಸಂಖ್ಯಾತರು ಹಾಗೂ ದಲಿತರ ಹಕ್ಕುಗಳನ್ನು ರಕ್ಷಣೆ ಮಾಡಲು ತಾಲ್ಲೂಕ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸುವುದಾಗಿ ಸಂಘಟನೆಗಳು ಎಚ್ಚರಿಕೆಯನ್ನು ನೀಡಿವೆ.