ಪಂಚಭೂತಗಳಲ್ಲಿ ಲೀನವಾದ ಪ್ರಣಬ್ ಮುಖರ್ಜಿ

 

– ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದ ಮುಖರ್ಜಿ

 

ನವದೆಹಲಿ: ಅಸೌಖ್ಯದಿಂದ ಸೋಮವಾರ ಸಂಜೆ ಮೃತಪಟ್ಟಿದ್ದ ರಾಷ್ಟ್ರಪತಿ ಹಾಗೂ ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ದೆಹಲಿಯ ಲೋಧಿ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅಭಿಜಿತ್ ಮುಖರ್ಜಿ ತಮ್ಮ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದರು. ಈ ವೇಳೆ ಸರ್ಕಾರಿ ಮತ್ತು ಮಿಲಿಟರಿ ಗೌರವಗಳನ್ನು ಅರ್ಪಿಸಲಾಯಿತು.

ಇದಕ್ಕೂ ಮುನ್ನ ರಾಜಾಜಿ ಮಾರ್ಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 9ರಿಂದ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಎಲ್ಲಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕೋವಿಡ್ ನಿಯಮಗಳಂತೆ ಪಿಪಿಇ ಕಿಟ್ ಧರಿಸಿ ಅಂತಿಮ ದರ್ಶನ ಪಡೆದರು.

ಇದೇ ವೇಳೆ, ಕೇಂದ್ರ ಸರ್ಕಾರ 84 ವರ್ಷದ ಪ್ರಣಬ್ ಮುಖರ್ಜಿ ಅವರ ಸಾವಿಗೆ ಗೌರವ ಸೂಚಕವಾಗಿ ಏಳು ದಿನಗಳ ಶೋಕಾಚರಣೆ ಘೋಷಿಸಿದೆ. ಸೆಪ್ಟೆಂಬರ್ 6ರವರೆಗೆ ದೇಶಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಹಾರಾಡುತ್ತದೆ. ಸರ್ಕಾರದಿಂದ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ.

ಹಿರಿಯ ಕಾಂಗ್ರೆಸ್ ಮುಖಂಡರಾಗಿ, ಬಳಿಕ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದ ಪ್ರಣಬ್ ಮುಖರ್ಜಿ ಅವರು ವಿವಿಧ ಅನಾರೋಗ್ಯಗಳ ಕಾರಣದಿಂದ ಆಗಸ್ಟ್ 10ರಂದು ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರಲ್ ಆಸ್ಪತ್ರೆಗೆ ದಾಖಲಅಗಿದ್ದರು. ಅವರ ಮಿದುಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರ ಅವರು ಕೋಮಾಗೆ ಜಾರಿದರು. ಕೋವಿಡ್-19 ಸೋಂಕು ಕೂಡ ತಗುಲಿ ಅವರ ಅನಾರೋಗ್ಯ ಇನ್ನಷ್ಟು ಬಿಗಡಾಯಿಸಿತು. ಶ್ವಾಸಕೋಶದ ಸೋಂಕಿನಿಂದ ಸೆಪ್ಟಿಕ್ ಶಾಕ್ ಆಗಿ ಅವರು ಸೋಮವಾರ ಸಂಜೆ 4:30ಕ್ಕೆ ಕೊನೆಯುಸಿರೆಳೆದರು.

ರಾಷ್ಟ್ರಪತಿಗಳಾಗುವ ಮುನ್ನ ಏಳು ಬಾರಿ ಸಂಸದರಾಗಿದ್ದ ಪ್ರಣಬ್ ಮುಖರ್ಜಿ ಅವರು ಹಲವು ಪ್ರಮುಖ ಖಾತೆಗಳನ್ನ ನಿಭಾಯಿಸಿದ್ದಾರೆ. ಹಣಕಾಸು ಖಾತೆ, ವಿದೇಶಾಂಗ ವ್ಯವಹಾರಗಳ ಖಾತೆ, ರಕ್ಷಣಾ ಖಾತೆಗಳನ್ನ ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅನೇಕ ಬಾರಿ ಅವರು ಪ್ರಧಾನಿ ಸ್ಥಾನಕ್ಕೂ ಪರಿಗಣಿತರಾಗಿದ್ದವರು.

Donate Janashakthi Media

Leave a Reply

Your email address will not be published. Required fields are marked *